ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು–ತುಂಡು, ಮೋಜು–ಮಸ್ತಿ: ಅಕ್ರಮವಾಸಿಗಳ ‘ಕತ್ತಲೆ’ ಪ್ರಪಂಚಕ್ಕೆ ಬೆಚ್ಚಿದ ಜನ

ಶೈಕ್ಷಣಿಕ ಸಂಸ್ಥೆಗಳು, ಏಜೆಂಟರೇ ರಕ್ಷಕರು
Last Updated 1 ಡಿಸೆಂಬರ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯ ಮುಳುಗುವುದೇ ತಡ. ರಾಜಧಾನಿಯಲ್ಲಿ ‘ಅಕ್ರಮ ವಾಸಿ’ಗಳ ’ಕತ್ತಲೆ’ ಪ್ರಪಂಚ ತೆರೆದುಕೊಳ್ಳುತ್ತದೆ. ಗುಂಡು, ತುಂಡು, ಡ್ರಗ್ಸ್‌, ಮೋಜು–ಮಸ್ತಿಯ ಅಮಲಿನಲ್ಲಿ ಮದವೇರಿದ ಆನೆಯಂತೆ ಸಿಕ್ಕ ಸಿಕ್ಕಲ್ಲಿ ನುಗ್ಗುವ ಆ ದೈತ್ಯ ಮನುಷ್ಯರ ಎದುರು ನಿವಾಸಿಗಳು ಹಾಗೂ ಪೊಲೀಸರೇ ಮೌನವಾಗಿ ಬಿಡುತ್ತಾರೆ. ಪ್ರಶ್ನಿಸಿದವರ ಮೇಲೆಯೇ ಎರಗಿ ಪರಚುವ ‘ಅಕ್ರಮ ವಾಸಿ’ಗಳನ್ನು ಕಂಡು ಬೆಚ್ಚಿ ಬೀಳುತ್ತಾರೆ.

ಇದು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ವಿದೇಶಿಗರ ಮಿತಿಮೀರಿದ ವರ್ತನೆಯ ನೈಜ ಮುಖ. ‘ವಿದ್ಯಾರ್ಥಿ’, ‘ಪ್ರವಾಸ’ ಹಾಗೂ ‘ವಾಣಿಜ್ಯ’ ವೀಸಾದಡಿ ರಾಜ್ಯಕ್ಕೆ ಲಗ್ಗೆ ಇಡುತ್ತಿರುವ ವಿದೇಶಿಗರ ಪೈಕಿ ಬಹುಪಾಲು ಮಂದಿ, ಮಹಾನಗರವನ್ನೇ ತಮ್ಮ ವಾಸಸ್ಥಳವನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ. ಐಷಾರಾಮಿ ಪ್ರದೇಶಗಳಲ್ಲಿರುವ ರಸ್ತೆಗೊಂದು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳನ್ನು ಒಳಗೊಂಡ ವೈಭವೋಪೇತ ಜೀವನಕ್ಕೆ ಅವರೆಲ್ಲ ಮಾರು ಹೋಗುತ್ತಿದ್ದಾರೆ.

ಬೆಂಗಳೂರಿನ ಬಾಣಸವಾಡಿ, ಕಮ್ಮನಹಳ್ಳಿ, ಸೋಲದೇವನಹಳ್ಳಿ, ಕೊತ್ತನೂರು, ಬಾಗಲೂರು, ಹೆಣ್ಣೂರು, ಸಂಪಿಗೆಹಳ್ಳಿ, ಬಾಗಲಗುಂಟೆ ಭಾಗದಲ್ಲೇ ನಮಗೆ ಹೆಚ್ಚು ವಿದೇಶಿಗರು ಕಾಣಸಿಗುತ್ತಾರೆ. ಅವರಲ್ಲಿ ಎಷ್ಟು ಮಂದಿ, ಅಕ್ರಮ ವಾಸಿಗಳು ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವೇ? ಹೊಸಬರು ಮಾತನಾಡಿಸಿದರೂ ಅವರ‍್ಯಾರೂ ಮಾತನಾಡುವುದಿಲ್ಲ. ಪೊಲೀಸರು ಸಹ ರಸ್ತೆಯಲ್ಲಿ ವಿದೇಶಿಗರನ್ನು ಅಡ್ಡಗಟ್ಟಿ, ‘ನಿಮ್ಮ ವೀಸಾ ತೋರಿಸಿ’ ಎಂದು ಕೇಳುವುದೂ ಇಲ್ಲ.

ಕೇಳಿದಷ್ಟು ಬಾಡಿಗೆ, ಮಾಲೀಕರು ಬುಟ್ಟಿಗೆ: ವಿದೇಶಿಗರು ವಾಸವಿರುವ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ, ಇತರೆ ಪ್ರದೇಶಗಳಿಗಿಂತ ದುಪ್ಪಟ್ಟು. ಅಪಾರ್ಟ್‌ಮೆಂಟ್‌ ಸಮುಚ್ಚಯ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಗುಂಪಾಗಿ ವಾಸವಿರಲು ಬಯಸುವ ವಿದೇಶಿಗರು, ಕೇಳಿದ ಬಾಡಿಗೆಗಿಂದ ತುಸು ಜಾಸ್ತಿಯೇ ಕೊಟ್ಟು ಮಾಲೀಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳಿವೆ.

ಬಾಡಿಗೆ ಆಸೆಗಾಗಿ ವಿದೇಶಿಗರ ಮೂಲವನ್ನೂ ತಿಳಿದುಕೊಳ್ಳದೇ ಮಾಲೀಕರು, ಮನೆ ಕೊಡುತ್ತಿದ್ದಾರೆ. ಒಬ್ಬ ತನ್ನ ಮನೆ ಬಾಡಿಗೆ ಕೊಟ್ಟ ಎಂಬ ಕಾರಣಕ್ಕೆ, ಪಕ್ಕದ ಮನೆಯವನೂ ಅದನ್ನೇ ಪಾಲಿಸುತ್ತಿದ್ದಾನೆ. ಇದರಿಂದಾಗಿ ವಿದೇಶಿಗರೆಲ್ಲರೂ ಒಂದೆಡೆ ಜಮಾವಣೆಗೊಂಡು ಅಕ್ರಮ ಕೂಟ ಕಟ್ಟಿಕೊಳ್ಳುತ್ತಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಕ್ರಮ ವಾಸಿಗಳಿಗೆ ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲು ಆರಂಭಿಸಿದ್ದ ಪೊಲೀಸರು, ವೈಟ್‌ಫೀಲ್ಡ್‌ ಬಳಿಯ ಬೃಂದಾವನ ಲೇಔಟ್‌ನ ಅಮೀರ್ (38) ಹಾಗೂ ಪ್ರಿಯಾಂಕನಗರದ ನೀಲಮ್ಮ (35) ಎಂಬುವರನ್ನು ಬಂಧಿಸಿ ಖಡಕ್‌ ಎಚ್ಚರಿಕೆ ನೀಡಿದ್ದರು.

ವಿದೇಶಿಗರಿಗೆ ಮನೆ ಕೊಡುವ ಮೊದಲು ಅವರಿಂದ ವೀಸಾ, ಪಾಸ್‌ಪೋರ್ಟ್‌, ವಾಸದ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಪಡೆಯ ಬೇಕು. ಆ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಸಲ್ಲಿಸಿ ಅನುಮತಿ ಪತ್ರ ಪಡೆಯಬೇಕು ಎಂಬ ನಿಯಮಗಳಿವೆ. ಆ ಬಗ್ಗೆ ಮಾಲೀಕರು ಅಸಡ್ಡೆ ತೋರುತ್ತಿರುವುದು, ಅಕ್ರಮ ವಾಸಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ.

ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ಕೊಲಂಬಿಯಾದ ಐವರು ಪ್ರಜೆಗಳು ವಾಕಿಟಾಕಿ, ಆಧುನಿಕ ತಂತ್ರಜ್ಞಾನ ಬಳಸಿ ಜಯನಗರ, ತಿಲಕ್‌ ನಗರ, ಬಾಣಸವಾಡಿಗಳ ವಿವಿಧ ಮನೆಗಳಲ್ಲಿ ಕಳವು ಮಾಡಿದ್ದರು.

ಶಿಕ್ಷಣ ಸಂಸ್ಥೆಗಳ ಏಜೆಂಟರೇ ರಕ್ಷಕರು: ತಮ್ಮ ಕಾಲೇಜಿನಲ್ಲಿರುವ ಖಾಲಿ ಸೀಟುಗಳ ಭರ್ತಿಗಾಗಿ ವಿದೇಶಿಗರನ್ನು ಕರೆತರಲೆಂದೇ ಕೆಲವು ಶಿಕ್ಷಣ ಸಂಸ್ಥೆಗಳು ಏಜೆಂಟರನ್ನು ನೇಮಿಸಿಕೊಂಡಿವೆ. ಇವರು ಹೊರದೇಶಗಳಲ್ಲಿ ಸಂಚರಿಸಿ ವಿದೇಶಿಗರನ್ನು ಕರೆತರುತ್ತಿದ್ದಾರೆ. ಅವರೇ ಅಕ್ರಮ ವಾಸಿಗಳ ರಕ್ಷಣೆಗೂ ನಿಲ್ಲುತ್ತಿದ್ದಾರೆ ಎಂಬುದು ಪೊಲೀಸರ ವಾದ.

ಸ್ಥಳೀಯರಿಗೆ ವೈದ್ಯಕೀಯ, ವಾಣಿಜ್ಯ ಕೋರ್ಸ್‌ಗಳಿಗೆ ಸೀಟು ನೀಡದ ಸಂಸ್ಥೆಗಳಿಗೆ ‘ಡಾಲರ್‌’ನಲ್ಲಿ ಶುಲ್ಕ ಭರಿಸುವ ವಿದೇಶಿಗರೇ ಬೇಕು. ಇದೊಂದು ದಂಧೆಯೇ ಆಗಿ ಮಾರ್ಪಟ್ಟಿದ್ದು, ಅದಕ್ಕೆ ‘ಕಾಣದ’ ಕೈಗಳ ಕೃಪಾಕಟಾಕ್ಷವೂ ಇದೆ ಎನ್ನುತ್ತಾರೆ ಪೊಲೀಸರು.

ಒಗ್ಗಟ್ಟೇ ಇವರ ‘ಅಸ್ತ್ರ’: ಅಕ್ರಮ ವಾಸಿಗಳು, ಒಬ್ಬಂಟಿಯಾಗಿ ಎಲ್ಲಿಯೂ ಸುತ್ತಾಡುವುದಿಲ್ಲ. ತೊಂದರೆಯಾದರೆ, ಒಗ್ಗಟ್ಟಾಗಿಯೇ ಎದುರಾಳಿಯನ್ನು ಮಣಿಸಿ ಜಾಗ ಖಾಲಿ ಮಾಡುತ್ತಾರೆ ಎನ್ನುತ್ತಾರೆ ಪೊಲೀಸರು.

’ಒಬ್ಬ ಆಫ್ರಿಕಾ ಪ್ರಜೆಯನ್ನು ಬಗ್ಗಿಸಲು 10 ಮಂದಿ ಪೊಲೀಸರಿದ್ದರೂ ಸಾಲದು. ಗುಂಪಾಗಿ ಬಂದರಂತೂ ಮುಗಿದೇ ಹೋಯಿತು. ಎಷ್ಟೇ ಮಹಿಳಾ ಕಾನ್‌ಸ್ಟೆಬಲ್‌ಗಳಿದ್ದರೂ ಆಫ್ರಿಕಾದ ಒಬ್ಬ ಮಹಿಳೆಯನ್ನು ಹಿಡಿಯಲು ಆಗದು. ಅಪರಾಧ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿ, ಒಬ್ಬನೇ ಸಿಕ್ಕಾಗಲೇ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಗುಂಪಿನಲ್ಲಿದ್ದಾಗ ಬಂಧಿಸಲು ಹೋಗಿ ವಾಪಸ್‌ ಬಂದ ಉದಾಹರಣೆಗಳೂ ಸಾಕಷ್ಟಿವೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ ಹೇಳುತ್ತಾರೆ.

‘ವಿದೇಶಿಗರು ಎಲ್ಲರೂ ಒಂದೇ ರೀತಿಯಾ ಗಿರುತ್ತಾರೆ. ಅವರನ್ನು ಗುರುತು ಹಿಡಿಯುವುದೇ ತಲೆನೋವು. ಯಾರನ್ನಾದರೂ ಬಂಧಿಸಿ ಠಾಣೆಗೆ ಕರೆ ತಂದರೆ, ‘ನಾನವನಲ್ಲ’ ಎಂದೇ ಆತ ವಾದಿಸುತ್ತಾರೆ’ ಎಂದು ತಿಳಿಸುತ್ತಾರೆ.

ಬಟ್ಟೆ ಬಿಚ್ತಾರೆ,ಮೈ ಮೇಲೆ ಮೂತ್ರ ವಿಸರ್ಜಿಸುತ್ತಾರೆ: ನಸುಕಿನಲ್ಲಿ ಹೆಚ್ಚು ಓಡಾಡದ ಅಕ್ರಮ ವಾಸಿಗಳ ದಿನಚರಿ, ಕತ್ತಲಾಗುತ್ತಿದ್ದಂತೆ ಜೋರಾಗುತ್ತದೆ. ಪಬ್, ಬಾರ್, ರೆಸ್ಟೋರೆಂಟ್‌, ಹೋಟೆಲ್, ಮಾಲ್‌ಗಳೂ ಅವರ ದಿನಚರಿಗೇ ಹೊಂದಿಕೊಂಡಿವೆ. ಬಾಣಸವಾಡಿ, ಕಮ್ಮನಹಳ್ಳಿ, ಹೆಣ್ಣೂರು ಭಾಗದಲ್ಲಿ ಸುತ್ತಾಡಿದರೆ ಇದೆಲ್ಲವೂ ಕಣ್ಣಿಗೆ ಗೋಚರಿಸುತ್ತದೆ.

ಮಾದಕ ವಸ್ತು ಹಾಗೂ ಮದ್ಯದ ಅಮಲಿನಲ್ಲಿ, ಪಬ್‌ ಮತ್ತು ಬಾರ್‌ನಲ್ಲಿ ಅಕ್ರಮ ವಾಸಿಗಳ ಪುಂಡಾಟ ಸಾಮಾನ್ಯವಾಗಿ ಬಿಟ್ಟಿದೆ. ರಸ್ತೆಗೆ ಬಂದ ನಂತರವಂತೂ ಸಿಕ್ಕ ಸಿಕ್ಕವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡುತ್ತಾರೆ. ಬಾಣಸವಾಡಿಯ ‘ಟ್ವಿನ್ಸ್’ ಪಬ್‌ ಬಳಿ ರಾತ್ರಿ ಓಡಾಡಿದವರಿಗೆ ಇದರ ಅನುಭವ ಆಗಿರುತ್ತದೆ. ‘ರಾತ್ರಿ ಏಕೆ ಆಗುತ್ತದೆ’ ಎಂದು ಅಲ್ಲಿಯ ನಿವಾಸಿಗಳು ನಿತ್ಯವೂ ಗೊಣಗುತ್ತಾರೆ.

ಗಸ್ತಿನಲ್ಲಿದ್ದ ಪೊಲೀಸರು, ಬಂಧಿಸಲು ಹೋದರೆ ಅವರ ಎದುರೇ ಬಟ್ಟೆ ಬಿಚ್ಚಿ ನಗ್ನವಾಗಿ ನಿಲ್ಲುವ ಅಕ್ರಮ ವಾಸಿಗಳು, ಮೈ ಮೇಲೆ ಮೂತ್ರ ವಿಸರ್ಜನೆ ಮಾಡಲೂ ಹಿಂಜರಿಯುವುದಿಲ್ಲ. ಮಾದಕ ವಸ್ತು ಮಾರಾಟ ಹಾಗೂ ಸೇವನೆಯಲ್ಲೂ ಅಕ್ರಮ ವಾಸಿಗಳೇ ಮುಂದಿದ್ದಾರೆ. ಅಷ್ಟಾದರೂ ಅವರ ಅನಾಗರಿಕ ವರ್ತನೆಯಿಂದಾಗಿ ಪೊಲೀಸರು, ಅವರ ಸಹವಾಸಕ್ಕೆ ಹೋಗುತ್ತಿಲ್ಲ. ಹೋದರೂ, ‘ಜನಾಂಗೀಯ ನಿಂದನೆ’ ಆರೋಪ ಮೈ ಮೇಲೆ ಬರುತ್ತಿದೆ.

ವಾಪಸ್‌ ಕಳುಹಿಸಲು ಬೇಕು ತಲಾ ₹50 ಸಾವಿರ

ಅಕ್ರಮ ವಾಸಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾದಾಗ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಅಲ್ಲಿಂದ ಬಿಡುಗಡೆಯಾದ ನಂತರ, ಅವರನ್ನು ಎಲ್ಲಿಗೆ ಕಳುಹಿಸಬೇಕು ಎಂಬ ಬಗ್ಗೆ ಪೊಲೀಸರಿಗೆ ಗೊಂದಲಗಳಿವೆ. ಜೈಲಿನಿಂದ ಹೊರಬಂದವನನ್ನು ದೇಶದಲ್ಲಿ ಪುನಃ ಇಟ್ಟುಕೊಳ್ಳುವುದು ಅಪರಾಧ. ಮೂಲ ದೇಶಕ್ಕೆ ಆತನನ್ನು ಕಳುಹಿಸಬೇಕಾದರೆ ಹಣ ಬೇಕು. ಆ ಹಣವನ್ನು ಎಲ್ಲಿಂದ ತರಬೇಕು ಎಂದು ಪೊಲೀಸರು ಪ್ರಶ್ನಿಸುತ್ತಾರೆ. ಇತ್ತೀಚೆಗೆ ಅಕ್ರಮವಾಸಿಯನ್ನು ವಾಪಸ್‌ ಕಳುಹಿಸಲು ₹75 ಸಾವಿರ ವೆಚ್ಚವಾಗಿತ್ತು. ಉಳಿದಿರುವ ಅಕ್ರಮ ವಾಸಿಗಳನ್ನು ಕಳುಹಿಸಲು, ಒಬ್ಬರಿಗೆ ಕನಿಷ್ಠ ₹50 ಸಾವಿರ ಬೇಕು ಎನ್ನುತ್ತಾರೆ.

ಬಾಂಗ್ಲಾದವರದ್ದು ಬೇರೆಯದ್ದೇ ಕಥೆ

ಆಫ್ರಿಕ್, ಇರಾನ್‌ ಪ್ರಜೆಗಳ ಜೀವನ ಶೈಲಿಗೂ ಬಾಂಗ್ಲಾ ಪ್ರಜೆಗಳಿಗೂ ತುಂಬಾ ವ್ಯತ್ಯಾಸವಿದೆ.

ವೈಟ್‌ಫೀಲ್ಡ್, ಎಚ್‌ಎಸ್‌ಆರ್‌ ಲೇಔಟ್‌, ಮಹದೇವಪುರ ಭಾಗದಲ್ಲಿ ಬಾಂಗ್ಲಾದವರು ಇದ್ದಾರೆ. ಅವರೆಲ್ಲರೂ ಸ್ಥಳೀಯ ವಿಳಾಸದ ಗುರುತಿನ ಚೀಟಿ ಹೊಂದಿದ್ದಾರೆ. ಐಷಾರಾಮಿ ಜೀವನಕ್ಕಿಂತ ನಿತ್ಯವೂ ದುಡಿಮೆ ಸಿಕ್ಕು ಹೊಟ್ಟೆ ತುಂಬಿದ್ದರೆ ಸಾಕು ಎನ್ನುವ ಮನೋಸ್ಥಿತಿ ಅವರದ್ದಾಗಿದೆ. ಅವರು ವಾಸವಿರುವ ಪ್ರದೇಶಗಳಲ್ಲಿ ಒಮ್ಮೆ ಸುತ್ತಾಡಿ ಬಂದರೆ, ನೈಜ ಸ್ಥಿತಿ ತಿಳಿಯುತ್ತದೆ.

ಕಟ್ಟಡ ನಿರ್ಮಾಣ ಸ್ಥಳದಲ್ಲೇ ಅವರು ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ರಮವಾಗಿ ಭಾರತಕ್ಕೆ ನುಸುಳುವ ಅವರು, ಏಜೆಂಟರ ಮೂಲಕ ದೇಶದ ನಾನಾ ರಾಜ್ಯಗಳಿಗೆ ಸೇರುತ್ತಿದ್ದಾರೆ.

ತಲೆ ಮಾಂಸ, ಕಾಲು ಪ್ರಿಯರು

ಕೊತ್ತನೂರಿನಲ್ಲಿ ದನದ ಮಾಂಸದ ಅಂಗಡಿ ಇದೆ. ಆಫ್ರಿಕಾ ಪ್ರಜೆಗಳೇ ಅಲ್ಲಿಯ ಕಾಯಂ ಗಿರಾಕಿಗಳು. ತಲೆ ಮಾಂಸ ಹಾಗೂ ಕಾಲುಗಳನ್ನೇ ಹೆಚ್ಚು ಖರೀದಿಸುತ್ತಾರೆ. ನಿತ್ಯವೂ ಸುಮಾರು 25 ಮಂದಿಯಾದರೂ ಅಂಗಡಿಗೆ ಬಂದು ಹೋಗುತ್ತಾರೆ. ಸಣ್ಣದಾಗಿದ್ದ ಅಂಗಡಿ, ಅವರಿಂದಾಗಿ ದೊಡ್ಡದಾಗಿದೆ. ವ್ಯಾಪಾರ ಚೆನ್ನಾಗಿದೆ ಎನ್ನುತ್ತಾರೆ ಅಂಗಡಿ ಸಿಬ್ಬಂದಿ.

‘ಆಫ್ರಿಕಾ ಪ್ರಜೆಗಳು ಬಲಶಾಲಿಯಾಗಲು ಕಾರಣವೇನು’ ಎಂದು ಪ್ರಶ್ನಿಸಿದಾಗ, ‘ಕೊತ್ತನೂರು ಅಂಗಡಿ ಪ್ರಭಾವ’ ಎನ್ನುತ್ತಾರೆ ಪೊಲೀಸರು.

ಆನ್‌ಲೈನ್‌ ಮೂಲಕವೂ ಮಾಂಸ ಖಾದ್ಯಗಳನ್ನೇ ಹೆಚ್ಚಾಗಿ ಖರೀದಿ ಮಾಡುತ್ತಾರೆ. ‘ಬಾಣಸವಾಡಿ, ಕಮ್ಮನಹಳ್ಳಿ, ಹೆಣ್ಣೂರು ಭಾಗದ ಗ್ರಾಹಕರ ಪೈಕಿ ಶೇ 50ರಷ್ಟು ಮಂದಿ ವಿದೇಶಿಗರೇ ಇರುತ್ತಾರೆ. ಕೆಲವು ಬಾರಿ ಆಹಾರ ಸರಿ ಇಲ್ಲವೆಂದು ಗಲಾಟೆ ಮಾಡುತ್ತಾರೆ’ ಎಂದು ಆಹಾರ ಸರಬರಾಜು ಆ್ಯಪ್‌ನ ಯುವಕ ರಾಜು ಹೇಳುತ್ತಾರೆ.

ಒಳ್ಳೆಯವರಿಗೂ ಕೆಟ್ಟ ಹೆಸರು

ವಿದೇಶಿಗರಲ್ಲಿ ಹಲವರು ಒಳ್ಳೆಯವರಿದ್ದಾರೆ. ದುಶ್ಚಟಗಳಿಗೆ ದಾಸರಾದ, ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಕೆಲವರಿಂದಾಗಿ ಅವರೆಲ್ಲರಿಗೆ ಕೆಟ್ಟ ಹೆಸರು ಬರುತ್ತಿದೆ. ಆಫ್ರಿಕಾ ದೇಶದಲ್ಲಿ ಕಡುಬಡತನವಿದ್ದು, ತಿನ್ನಲೂ ಆಹಾರವಿಲ್ಲದಂಥ ಸ್ಥಿತಿ ಇದೆ. ಅಲ್ಲಿಂದ ಬರುವ ಶೇ 5ರಷ್ಟು ಮಂದಿ, ವಿದ್ಯಾಭ್ಯಾಸ ಮಾಡಿಕೊಂಡು ವಾಪಸ್‌ ತಮ್ಮ ದೇಶಕ್ಕೆ ಹೋಗುತ್ತಾರೆ. ಇಲ್ಲಿ ಫಾರ್ಮಸಿ ಮಾಡಿದವನಿಗೆ, ಅವರ ದೇಶದಲ್ಲಿ ‘ತಜ್ಞ’ನಂತೆ ಕಾಣಲಾಗುತ್ತದೆ.

ಇಲ್ಲಿ ಬಂದ ಬಳಿಕ ಮಾದಕ ದ್ರವ್ಯ ಸೇವನೆ, ಹಣ ಮಾಡುವ ದಂಧೆಯಲ್ಲಿ ಪಳಗಿದವರು, ಅಂತಹ ಗುಂಪಿನ ಸಹವಾಸಕ್ಕೆ ಬಿದ್ದವರು ವಾಪಸ್‌ ಹೋಗದೇ ಇಲ್ಲಿ ಉಳಿದುಕೊಂಡು ಉಪಟಳ ನೀಡುತ್ತಿದ್ದಾರೆ.

ಸೌಹಾರ್ದ, ಸಂಸ್ಕೃತಿ ಅಧ್ಯಯನ ನಿರತ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಗೆ ನಿತ್ಯ ನೂರಾರು ವಿದೇಶಿ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಅಕ್ರಮವಾಗಿ ಯಾರು ಕೂಡ ಇಲ್ಲಿಯೇ ನೆಲೆಸಿಲ್ಲ.

ಹಿಂದೂ ಧರ್ಮದ ಸಂಪ್ರದಾಯ, ಅಧ್ಯಾತ್ಮಕ್ಕೆ ಮಾರು ಹೋಗಿ ಕೆಲವು ವಿದೇಶಿಯರು ಸ್ಥಳೀಯರೊಂದಿಗೆ ಮದುವೆ ಆಗಿದ್ದಾರೆ. ಭಾರತೀಯ ಪೌರತ್ವ ಪಡೆದು ಅವರ ಮಕ್ಕಳೊಂದಿಗೆ 35– 40 ವರ್ಷಗಳಿಂದ ಹಂಪಿ, ಕಡ್ಡಿರಾಂಪುರ ಹಾಗೂ ಆನೆಗುಂದಿಯ ಕೆಲವು ಕಡೆಗಳಲ್ಲಿ ನೆಲೆಸಿದ್ದಾರೆ. ದಶಕದ ಹಿಂದೆ ಗಾಂಜಾ ಸೇವನೆಗೆಂದೇ ಕೆಲವು ವಿದೇಶಿಗರು ಹಂಪಿಗೆ ಬರುತ್ತಿದ್ದರು. ಈ ಕುರಿತು ಸಾರ್ವಜನಿಕ
ರಿಂದ ದೂರುಗಳು ಬಂದ ಮೇಲೆ ಪೊಲೀಸರು ಅದಕ್ಕೆ ಕಡಿವಾಣ ಹಾಕಿದ್ದಾರೆ. ಕುರುಚಲು ಬೆಟ್ಟಗುಡ್ಡ, ತುಂಗಭದ್ರಾ ನದಿಯ ಒಡಲಿನಲ್ಲಿ ಹರಿದು ಹಂಚಿ ಹೋಗಿರುವ ಹಂಪಿಯ ಶ್ರೀಮಂತ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಅಧ್ಯಯನಕ್ಕಾಗಿ, ಛಾಯಾಗ್ರಹಣಕ್ಕಾಗಿ ಕೆಲವರು, ನಾಲ್ಕೈದು ತಿಂಗಳು ಹಂಪಿಯಲ್ಲಿ ನೆಲೆಸುತ್ತಾರೆ.

ಗೋಕರ್ಣದಲ್ಲಿ ಬಿಸಿಲ ಸ್ನಾನ

ಕಾರವಾರ: ಜಿಲ್ಲೆಯಲ್ಲಿ ಗೋಕರ್ಣಕ್ಕೆ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮನಮೋಹಕ ಕಡಲತೀರಗಳಲ್ಲಿ ಕಾಲು ಚಾಚಿ ಬಿಸಿಲಿಗೆ ಮೈಯೊಡ್ಡುತ್ತಾರೆ. ಈ ವರ್ಷ ನ.30ರವರೆಗೆ 878 ವಿದೇಶಿಯರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಸುಮಾರು 8 ಸಾವಿರ ವಿದೇಶಿಯರು ಗೋಕರ್ಣಕ್ಕೆ ಬಂದಿದ್ದರು. 10 ವರ್ಷಗಳ ಅವಧಿಯಲ್ಲಿ ವಿದೇಶಿಯರ ಮೇಲೆ ಹಾಗೂ ವಿದೇಶಿಯರಿಂದ ಸ್ಥಳೀಯರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸುಮಾರು ಆರು ತಿಂಗಳು ಇಲ್ಲಿದ್ದು, ಯೋಗ, ಸಮುದ್ರಸ್ನಾನ, ಒಂದಷ್ಟು ಭಾರತೀಯ ಸಂಪ್ರದಾಯಗಳನ್ನು ಕಲಿಯುವುದು ವಿದೇಶಿಯರ ಹವ್ಯಾಸ.

ಗೋಕರ್ಣದ ಕಡಲ ಕಿನಾರೆಯಲ್ಲಿ ವಿದೇಶಿಯರು ಸೂರ್ಯ ಸ್ನಾನದಲ್ಲಿ ತೊಡಗಿರುವುದು
ಗೋಕರ್ಣದ ಕಡಲ ಕಿನಾರೆಯಲ್ಲಿ ವಿದೇಶಿಯರು ಸೂರ್ಯ ಸ್ನಾನದಲ್ಲಿ ತೊಡಗಿರುವುದು

ಗೋಕರ್ಣ ಬೀಚ್‌ನಲ್ಲಿ ಕೆಲವು ವಿದೇಶಿಯರು ಬೆತ್ತಲೆ ತಿರುಗುತ್ತಾರೆ, ವಿಪರೀತ ಮದ್ಯ ಸೇವನೆ ಮಾಡುತ್ತಾರೆ ಎಂಬ ಆರೋಪಗಳೂ ಇವೆ. ಬೆತ್ತಲೆ ತಿರುಗುವುದನ್ನು ನಿರ್ಬಂಧಿಸುವಂತೆ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಇತ್ತೀಚೆಗೆ ಪತ್ರವನ್ನೂ ಬರೆದಿತ್ತು. ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರಿಯಾ, ಇಸ್ರೇಲ್ ಮತ್ತು ರಷ್ಯಾದವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಎಂಎಚ್‌ಆರ್‌ಡಿ ಅಧ್ಯಯನ

2017–18ನೇ ಸಾಲಿನಲ್ಲಿ ದೇಶದ ವಿವಿಧೆಡೆ ಪದವಿ, ವೃತ್ತಿಪರ, ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಸಂಶೋಧನಾ ನಿರತವಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು (ಎಂಎಚ್ಆರ್‌ಡಿ) ಅಖಿಲ ಭಾರತೀಯ ಉನ್ನತ ಶಿಕ್ಷಣ ಸಮೀಕ್ಷಾ ವರದಿ ಸಿದ್ಧಪಡಿಸಿದೆ.

ವರದಿ ಪ್ರಕಾರ 46,144 ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ವ್ಯಾಸಂಗ ಕಲಿಯುತ್ತಿದ್ದಾರೆ. ಆ ಪೈಕಿ ನೇಪಾಳದವರೇ (ಶೇ 24.9) ಹೆಚ್ಚಿದ್ದಾರೆ. ನಂತರ ಸ್ಥಾನದಲ್ಲಿದಲ್ಲಿ ಅಫ್ಗಾನಿಸ್ತಾನ (ಶೇ 9.5) ಸುಡಾನ್ (ಶೇ 4.8), ಭೂತಾನ್ (ಶೇ 4.3) ಹಾಗೂ ನೈಜೀರಿಯಾದ (ಶೇ 4.05) ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ.

ನ್ಯಾಯಾಲಯದ ಷರತ್ತೇ ವರದಾನ!

‘ವಿದೇಶಿ ಪ್ರಜೆಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೆ, ‘ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶ ಬಿಟ್ಟು ಹೋಗುವಂತಿಲ್ಲ’ ಎಂಬ ಷರತ್ತನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆ. ಆ ಆದೇಶವನ್ನೇ ಅವರು ವರದಾನ ಮಾಡಿಕೊಳ್ಳುತ್ತಿದ್ದಾರೆ’ ಎಂಬುದು ಪೊಲೀಸರ ಅಳಲು.

‘ಬಂಧಿತರನ್ನು ಗಡಿಪಾರು ಮಾಡಲು ಮುಂದಾದಾಗ ನ್ಯಾಯಾಲಯದ ಆದೇಶದ ಪ್ರತಿಯನ್ನು ತೋರಿಸುವ ಆರೋಪಿಗಳು, ‘ನಾವು ಇಲ್ಲಿನ ಕಾನೂನನ್ನು ಗೌರವಿಸುತ್ತೇವೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶ ಬಿಟ್ಟು ಹೋಗುವುದಿಲ್ಲ’ ಎನ್ನುತ್ತಾರೆ. ಅಲ್ಲದೆ, ಆ ಆದೇಶ ಪ್ರತಿಯನ್ನೇ ತೋರಿಸಿ ವೀಸಾ/ಪಾಸ್‌ಪೋರ್ಟ್ ಅವಧಿ ವಿಸ್ತರಿಸಿಕೊಂಡಿರುವ ನಿದರ್ಶನಗಳೂ ಇವೆ’ ಎನ್ನುತ್ತಾರೆ ಅವರು.

**

ಗುಪ್ತಚರ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಿದೇಶಿಗರ ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿರುತ್ತಾರೆ. ಅಕ್ರಮವಾಸಿಗಳ ಗಡಿಪಾರಿಗೆ ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ
-ಎಂ.ಎ.ಸಲೀಂ,ಎಡಿಜಿಪಿ, ಅಪರಾಧ

**

ಅಕ್ರಮವಾಸಿಗಳು ತಮ್ಮ ದೇಶದ ಬಗ್ಗೆ ಸರಿಯಾದ ಮಾಹಿತಿ, ದಾಖಲೆ ನೀಡುವುದಿಲ್ಲ. ನಾವೇ ಮಾಹಿತಿ ಕಲೆ ಹಾಕಬೇಕಾದ ಕಾರಣ ಗಡಿಪಾರು ವಿಳಂಬವಾಗುತ್ತಿದೆ.

-ಲಾಬೂರಾಮ್, ಎಫ್‌ಆರ್‌ಆರ್‌ಒ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT