ಜಯಂತ್ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಗೆ ಡಿಎಸ್‌ಸಿ ಪ್ರಶಸ್ತಿ

ಬೆಂಗಳೂರು: ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿಯು ಕನ್ನಡದ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಗೆ ಲಭಿಸಿದೆ.
ಭಾರತದ ನೀಲ್ ಮುಖರ್ಜಿ, ಸುಜಿತ್ ಶರಾಫ್, ಮನು ಜೋಸೆಫ್, ಪಾಕಿಸ್ತಾನ ಮೂಲದ ಕಮಿಲಾ ಶಮ್‌ಶಿ, ಮೊಹ್ಸೀನ್ ಹಮೀದ್ ಅವರ ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
‘ನೋ ಪ್ರೆಸೆಂಟ್ಸ್ ಪ್ಲೀಸ್’ ಕಥಾ ಸಂಕಲನವನ್ನು ಮುಂಬೈ ಕುರಿತ ಕಥೆಗಳನ್ನು ಹೊಂದಿದೆ. ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಬಹುಮಾನ ಮೊತ್ತ ₹ 18 ಲಕ್ಷ ಆಗಿದ್ದು, ಡಿಎಸ್‌ಸಿ ಪ್ರಶಸ್ತಿಯ ಎಂಟು ವರ್ಷಗಳ ಇತಿಹಾಸದಲ್ಲಿ ಅನುವಾದಿತ ಕೃತಿಯೊಂದು ಪ್ರಶಸ್ತಿ ಗಳಿಸಿರುವುದು ಇದೇ ಮೊದಲು.
ಕಾಯ್ಕಿಣಿ ಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯ ತೀರ್ಪುಗಾರ ರುದ್ರಾಂಗ್ಸು ಮುಖರ್ಜಿ, ಅನುವಾದಕಿ ತೇಜಸ್ವಿನಿ ನಿರಂಜನ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
‘...ಪ್ಲೀಸ್’ ಕೃತಿಯು ಮುಂಬೈನ ಜನಸಾಮಾನ್ಯರ ಕಥೆಗಳನ್ನು ಹೇಳುತ್ತದೆ. ಇದು ಕೇವಲ ಮುಂಬೈ ಅಂದರೆ ಏನು ಎಂಬುದನ್ನು ಹೇಳುವುದಿಲ್ಲ. ಮುಂಬೈನಲ್ಲಿ ಏನೇನಿದೆ ಎಂಬುದನ್ನು ಹೇಳುತ್ತದೆ. ಸಂಕಲನದಲ್ಲಿರುವ 16 ಕಥೆಗಳು ಮುಂಬೈ ಬದುಕಿನ ತಲ್ಲಣಗಳನ್ನು, ಹೊಸ ಸಾಧ್ಯತೆಗಳನ್ನು ತೆರೆದಿಡುತ್ತವೆ’ ಎಂದು ಹಾರ್ಪರ್ ಕೊಲಿನ್ಸ್ ಪ್ರಕಾಶನ ತಿಳಿಸಿದೆ.
ಡಿಎಸ್‌ಸಿ ಪ್ರಶಸ್ತಿ ಪ್ರಕಟವಾಗುವುದಕ್ಕೂ ಮೊದಲು ‘ಪ್ರಜಾವಾಣಿ’ ಜತೆ ಮಾತನಾಡಿದ್ದ ಜಯಂತ್ ಕಾಯ್ಕಿಣಿ, ‘ಈ ಕೃತಿ ವರ್ಷದ ಆರಂಭದಲ್ಲಿ ಸದ್ದುಗದ್ದಲವಿಲ್ಲದೆ ಮಾರುಕಟ್ಟೆಗೆ ಬಿಡುಗಡೆ ಆಯಿತು. ಇದು ವಿಮರ್ಶಾ ಸ್ಪಂದನವನ್ನೂ ಓದುಗರ ಮನ್ನಣೆಯನ್ನೂ ಪಡೆದಿದೆ. ಹಾರ್ಪರ್ ಕೊಲಿನ್ಸ್ ಪ್ರಕಾಶನ ಇದರ ಹೊಸ ಆವೃತ್ತಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಈಗಲೇ ಏನೂ ಹೇಳಲು ಆಗದು’ ಎಂದು ಹೇಳಿದ್ದರು
ಬರಹ ಇಷ್ಟವಾಯಿತೆ?
19
0
1
0
0
0 comments
View All