ಗುರುವಾರ , ಜುಲೈ 16, 2020
22 °C

ಸಂಸದೀಯ ಮಂಡಳಿಗೆ ಪಟ್ಟಿ: ಶೆಟ್ಟಿ, ಕತ್ತಿ, ಕೋರೆ ಸೇರಿ ಐವರ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಉದ್ಯಮಿ ಪ್ರಕಾಶ್‌ ಶೆಟ್ಟಿ, ಪ್ರಭಾಕರ ಕೋರೆ, ರಮೇಶ‌ ಕತ್ತಿ, ನಿರ್ಮಲ್ ಕುಮಾರ್ ಸುರಾನ ಹಾಗೂ ಪ್ರೊ. ಎಂ. ನಾಗರಾಜ್  ಅವರ ಹೆಸರುಗಳನ್ನು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲು ಶನಿವಾರ ಇಲ್ಲಿ ನಡೆದ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿಯ ಸಭೆ ತೀರ್ಮಾನಿಸಿದೆ.

‘ಸುಧಾಮೂರ್ತಿ, ಕೆ.ವಿ.ಕಾಮತ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವುದಕ್ಕಿಂತ ಮೇಲ್ಮಟ್ಟದಲ್ಲಿ ಇರುವವರು. ಅವರ ಸೇವೆ ಅಗತ್ಯ ಇದ್ದಾಗ ನೇರವಾಗಿ ನೇಮಕ ಮಾಡಲು ವರಿಷ್ಠರಿಗೆ ಸಾಧ್ಯವಿದೆ. ಹೀಗಾಗಿ ಅವರ ಹೆಸರನ್ನು ಶಿಫಾರಸು ಮಾಡದೆ ಇರಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಧಾನಸಭೆ ಸದಸ್ಯರಿಂದ  ರಾಜ್ಯಸಭೆಗೆ ಆಯ್ಕೆ ಮಾಡಬೇಕಾದ ಈ ಚುನಾವಣೆಯಲ್ಲಿ ಬಿಜೆಪಿಯ ಸದಸ್ಯ ಬಲದ ಆಧಾರದಲ್ಲಿ ಎರಡು ಸ್ಥಾನಗಳು ಆ ಪಕ್ಷಕ್ಕೆ ಸಿಗಲಿವೆ. ಪ್ರಕಾಶ್ ಶೆಟ್ಟಿ ಸರ್ವ ಸಮ್ಮತ ಅಭ್ಯರ್ಥಿಯಾಗಿದ್ದು, ಕತ್ತಿ ಹಾಗೂ ಕೋರೆ ಹೆಸರುಗಳು ಆದ್ಯತಾ ಪಟ್ಟಿಯಲ್ಲಿವೆ. ನಾಲ್ಕನೇ ಹಾಗೂ ಐದನೇ ಆಯ್ಕೆಯಾಗಿ ನಾಗರಾಜ್ ಹಾಗೂ ಸುರಾನ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ತಮಗೆ ಸಚಿವ ಸ್ಥಾನ ಕೊಡದೇ ಇದ್ದರೂ ಪರವಾಗಿಲ್ಲ. ತಮ್ಮನಿಗೆ ರಾಜ್ಯಸಭೆ ಟಿಕೆಟ್ ಕೊಡಿ ಎಂದು ಹಿರಿಯ ಶಾಸಕ ಉಮೇಶ ಕತ್ತಿ ಪಟ್ಟು ಹಿಡಿದಿದ್ದಾರೆ.  ರಾಜ್ಯಸಭೆಯ ಹಾಲಿ ಸದಸ್ಯ ಪ್ರಭಾಕರ ಕೋರೆ ಅವರು ಮತ್ತೊಂದು ಅವಧಿಗೆ ಮುಂದುವರಿಯಲು ಅಪೇಕ್ಷೆ ಹೊಂದಿದ್ದಾರೆ. ಇವರಿಬ್ಬರ ಪೈಕಿ ಒಬ್ಬರನ್ನು ವರಿಷ್ಠರು ಆಯ್ಕೆ ಮಾಡಬಹುದು ಅಥವಾ ಬೇರೊಬ್ಬರ‌ನ್ನು ಕಣಕ್ಕೆ ಇಳಿಸುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ದೇವೇಗೌಡರ ಸ್ಪರ್ಧೆ ಖಚಿತ:  ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಆ ಪಕ್ಷದ ಮೂಲಗಳು ಹೇಳಿವೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಣಯ ಕೈಗೊಂಡಿದೆ.  ಹೇಳಿದ ತಕ್ಷಣವೇ ಒಪ್ಪಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಗೌಡರು ಇನ್ನೂ ತಮ್ಮ ನಡೆಯನ್ನು ಬಹಿರಂಗವಾಗಿ ಹೇಳಿಲ್ಲ ಎನ್ನಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು