ಬುಧವಾರ, ಫೆಬ್ರವರಿ 24, 2021
23 °C
ಸಿದ್ದರಾಮಯ್ಯ ಅವರಿಗೆ ಶಾಸಕರನ್ನು ಮರಳಿ ಕರೆತರುವ ಹೊಣೆ

ತಡರಾತ್ರಿವರೆಗೂ ಸಭೆ l ಮೈತ್ರಿ ನಾಯಕರಿಂದಲೂ ‘ಆಪರೇಷನ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ನಡೆಸಿರುವ ‘ಆಪರೇಷನ್ ಕಮಲ’ಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್– ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

ಬಿಜೆಪಿಯವರು ಕಾಂಗ್ರೆಸ್– ಜೆಡಿಎಸ್ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿದ್ದು, ಅದೇ ಮಾದರಿಯಲ್ಲಿ ಬಿಜೆಪಿ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವುದು. 5ರಿಂದ 10 ಶಾಸಕರನ್ನು ಕರೆತರುವ ಹೊಣೆಯನ್ನು ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಭಾನುವಾರ ತಡರಾತ್ರಿಯವರೆಗೂ ಚರ್ಚೆಯಲ್ಲಿ ತೊಡಗಿದ್ದರು. ಬಿಜೆಪಿ ಏನೆಲ್ಲ ಮಾಡುತ್ತಿದೆ, ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿದರು.

ಅಮೆರಿಕ ಪ್ರವಾಸದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡವು. ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಜೆಡಿಎಸ್ ಶಾಸಕಾಂಗ ಸಭೆ ನಿಗದಿಯಾಗಿದ್ದ ತಾಜ್ ವೆಸ್ಟ್ಎಂಡ್ ಹೋಟೆಲ್‌ಗೆ ಕರೆದೊಯ್ಯಲಾಯಿತು. ಇದೇ ವೇಳೆಗೆ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ‘ನಾವು ರಾಜೀನಾಮೆ ನೀಡಿದ ನಂತರ ಒಟ್ಟಾಗಿ ತಂಗಿದ್ದೇವೆ.

ಬೆಂಗಳೂರಿಗೆ ಬಂದು, ರಾಜೀನಾಮೆ ವಾಪಸ್ ಪಡೆಯುತ್ತೇವೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ’ ಎಂದು ಸ್ಪಷ್ಟಪಡಿಸಿದರು. ಅತೃಪ್ತರ ಈ ಹೇಳಿಕೆ ನಂತರ ರಾಜಕೀಯ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಂಡವು. ಬೆಳಿಗ್ಗೆಯಿಂದ ಮುಖಂಡರ ಸರಣಿ ಸಭೆಗಳನ್ನು ನಡೆಸಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖಂಡರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಇತರ ನಾಯಕರು ಜೆಡಿಎಸ್ ಸಭೆ ನಡೆಯುತ್ತಿದ್ದ ಹೋಟೆಲ್‌ಗೆ ಬಂದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರ ಮುಖಂಡರ ಜತೆಗೆ ಚರ್ಚಿಸಿದರು.

ರಾಜೀನಾಮೆ ನೀಡಿರುವ ಶಾಸಕ ಆರ್.ರಾಮಲಿಂಗಾರೆಡ್ಡಿ, ಮುನಿರತ್ನ ಸೇರಿದಂತೆ ಅತೃಪ್ತ ಶಾಸಕರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಸೋಮವಾರ ಸಂಜೆವರೆಗೂ ಮುಂದುವರಿಸುವುದು. ಅದು ಸಾಧ್ಯವಾಗದಿದ್ದರೆ ಬಿಜೆಪಿ ಶಾಸಕರನ್ನು ಕರೆತಂದು ರಾಜೀನಾಮೆ ಕೊಡಿಸುವ ಬಗ್ಗೆ ಚರ್ಚಿಸಲಾಗಿದೆ. ಈ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ಇಬ್ಬರು ಶಾಸಕರು ಗೈರು
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಗೈರು ಹಾಜರಾಗಿದ್ದರು. ಎಚ್.ಡಿ.ದೇವೇಗೌಡ ಅವರೇ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎನ್ನಲಾಗಿದೆ.

ಇಡೀ ದಿನ ಶಿವಕುಮಾರ್ ಕಾರ್ಯಾಚರಣೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಹಾಗೂ ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್ ತೊಡಗಿಸಿಕೊಂಡಿದ್ದಾರೆ.

ಭಾನುವಾರ ಇಡೀ ದಿನ ನಡೆದ ವಿವಿಧ ಸಭೆಗಳಲ್ಲಿ ಸಚಿವರು ಪಾಲ್ಗೊಂಡು, ಶಾಸಕರ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದರು. ಪಕ್ಷ ಹಾಗೂ ನಾಯಕರು ಸಂಕಷ್ಟಕ್ಕೆ ಸಿಲುಕಿದ ಹಲವು ಸಂದರ್ಭಗಳಲ್ಲಿ ನೆರವಿಗೆ ಬಂದಿದ್ದಾರೆ. ಪಕ್ಷದ ಮುಖಂಡರೂ ಸಹ ಇಂತಹ ಜವಾಬ್ದಾರಿಯನ್ನು ಶಿವಕುಮಾರ್‌ ಅವರಿಗೆ ನೀಡುತ್ತಾ ಬಂದಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ರಾಜೀನಾಮೆ ನೀಡಿದ ಶಾಸಕರ ಮನವೊಲಿಸಿ, ಕರೆತರುವ ಹೊಣೆಯನ್ನು ಅವರಿಗೆ ನೀಡಲಾಗಿತ್ತು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇತರ ಮುಖಂಡರ ಜತೆಗಿನ ಮಾತುಕತೆಯ ನಂತರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಮಾಡಿ ಚರ್ಚಿಸಿದರು.

ಸಂಜೆ ವೇಳೆಗೆ ಮುಖಂಡರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಅಲ್ಲಿಂದ ಸಂಸದ ಡಿ.ಕೆ.ಸುರೇಶ್ ಜತೆ ತೆರಳಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿ ಚರ್ಚಿಸಿದರು. ದಿನದ ರಾಜಕೀಯ ಬೆಳವಣಿಗೆ, ಅತೃಪ್ತರ ಸೆಳೆಯಲು ರಚಿಸಿರುವ ತಂತ್ರಗಳ ಬಗ್ಗೆ ವಿವರಿಸಿದರು. ಅಗತ್ಯ ಬಿದ್ದರೆ ತಾವೇ ಮುಖ್ಯಮಂತ್ರಿ ಆಗುವಂತೆ ಸಲಹೆ ಮಾಡಿದರು ಎನ್ನಲಾಗಿದೆ.

ಶಾಸಕರ ಭೇಟಿ: ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಅವರು ಪಕ್ಷ ತೊರೆಯದಂತೆ ಮನ ವೊಲಿಸಿದರು. ಶಾಸಕರ ಕಾರಿನಲ್ಲೇ ಕುಳಿತು ಸ್ವಲ್ಪ ದೂರ ತೆರಳಿ ಪಕ್ಷ ಬಿಡದಂತೆ ಸಲಹೆ ಮಾಡಿದರು. ನಂತರ, ರಾಜೀನಾಮೆ ನೀಡಿರುವ ಶಾಸಕ ಮುನಿರತ್ನ ನಿರ್ಮಿಸಿರುವ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ಆ ಸಮಯದಲ್ಲಿ ಮುನಿರತ್ನ ಅವರ ಮನವೊಲಿಕೆಯ ಪ್ರಯತ್ನ ನಡೆಸಿದರು. ಅವರನ್ನು ತಮ್ಮ ಮುಖಂಡರ ಬಳಿಗೆ ಕರೆತರುವ ಪ್ರಯತ್ನ ಫಲ ನೀಡಲಿಲ್ಲ. ಆನಂತರವೂ ಡಿ.ಕೆ.ಶಿವಕುಮಾರ್ ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದು, ರಾತ್ರಿ ಕೂಡ ಅತೃಪ್ತರ ಮನವೊಲಿಕೆಯಲ್ಲಿ ತೊಡಗಿದ್ದರು.

ಭಾನುವಾರ ರಾಜಕೀಯ ಬೆಳವಣಿಗೆ
* ಬೆಳಿಗ್ಗೆ 10 ಮುಂಬೈನ ಸೋಫಿಟಲ್‌ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವುದಾಗಿ ಬಿ.ಸಿ.ಪಾಟೀಲ ಹೇಳಿಕೆ
* 10 ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ನಲ್ಲಿ ರಾಮಲಿಂಗಾರೆಡ್ಡಿ ಜತೆ ಕೆ.ಸಿ.ವೇಣುಗೋಪಾಲ್‌ ಚರ್ಚೆ
* 10.30  ಕಾವೇರಿಯಲ್ಲಿ ಸಿದ್ದರಾಮಯ್ಯ ಜತೆ ವೇಣುಗೋಪಾಲ್‌ ಮಾತುಕತೆ
* 10.30 ಅತೃಪ್ತ ಶಾಸಕ ಮುನಿರತ್ನ ಸಂಪರ್ಕಿಸಲು ಡಿ.ಕೆ.ಶಿವಕುಮಾರ್‌ ಯತ್ನ
* 10.30 ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಶಾಸಕರ ಸಭೆ
* 10.20 ತುಮಕೂರು ಜಿಲ್ಲೆಯಲ್ಲಿ ಟೆಂಪಲ್‌ ರನ್‌ ನಡೆಸಿದ ಬಿ.ಎಸ್‌.ಯಡಿಯೂರಪ್ಪ 
* 10.45 ಮುಂಬೈನಲ್ಲಿ ಎಚ್‌.ವಿಶ್ವನಾಥ್‌ ಅವರಿಂದ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ
* 11.00 ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ
* 11.30 ರಾಜೀನಾಮೆ ಕೊಟ್ಟ ಶಾಸಕರ ಮನವೊಲಿಸಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕ ಪ್ರಯತ್ನ
* 11.45 ಎಚ್‌.ಡಿ.ದೇವೇಗೌಡ ಅವರ ಜತೆ ಡಿ.ಕೆ.ಶಿವಕುಮಾರ್‌, ಎಚ್.ಡಿ.ರೇವಣ್ಣ, ಎಚ್‌.ಕೆ.ಕುಮಾರಸ್ವಾಮಿ, ಕುಪೇಂದ್ರರೆಡ್ಡಿ ಸಮಾಲೋಚನೆ
* 1.30 ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ನಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಕರೆಸಿ ಅಭಿಪ್ರಾಯ ಪಡೆದ ಕೆ.ಸಿ.ವೇಣುಗೋಪಾಲ್
* 7.50 ಅಮೆರಿಕದಿಂದ ಹಿಂದಿರುಗಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
* 8.00 ಪರ್ಯಾಯ ಕಾರ್ಯತಂತ್ರಕ್ಕೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ, ಎಚ್‌.ಡಿ.ಕುಮಾರಸ್ವಾಮಿ ಜತೆ ಚರ್ಚಿಸಲು ನಿರ್ಧಾರ
* 8.30 ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮುಂಬೈನಲ್ಲಿರುವ ಶಾಸಕರ ಘೋಷಣೆ
* 9.00 ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಜೆಡಿಎಲ್‌ಪಿ ಸಭೆ
* 9.30 ಮುನಿರತ್ನ, ರಾಮಲಿಂಗಾರೆಡ್ಡಿ ಕರೆತರಲು ಆಡಿಯೊ ರಿಲೀಸ್‌ ಕಾರ್ಯಕ್ರಮಕ್ಕೆ ತೆರಳಿದ ಡಿ.ಕೆ.ಶಿವಕುಮಾರ್‌
* 10.00 ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಹಿರಿಯ ನಾಯಕರ ಸಭೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು