ಭಾನುವಾರ, ಮೇ 9, 2021
25 °C

ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ‘ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ನಾನು ಮತ್ತು ನನ್ನ ಪಕ್ಷದವರು ಬಹಳ ನೊಂದಿದ್ದೇವೆ. ಸಮ್ಮಿಶ್ರ ಸರ್ಕಾರ ಹೇಗೆ ಬಿದ್ದಿತು ಎನ್ನುವುದು ಗೊತ್ತಿದೆ. ಹೀಗಾಗಿ, ಉಪ ಚುನಾವಣೆ ನಂತರ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಊಹೆ ಮಾಡಿಕೊಳ್ಳುವುದನ್ನೆಲ್ಲಾ ಬಿಟ್ಟು ಬಿಡಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಪಕ್ಷ ಸಂಘಟಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಬಿಜೆಪಿಯವರ ಬಳಿ 105 ಸೀಟುಗಳಿವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಸೇರಿ ಅವಿಶ್ವಾಸ ಮಂಡಿಸಿದರೆ ಸರ್ಕಾರ ಹೋಗಬಹುದು. ಆದರೆ, ನಾವು ಯಾರಿಗೂ ಬೆಂಬಲ ಕೊಡುವುದಿಲ್ಲ. ನಮ್ಮ ಪಕ್ಷ ಕಟ್ಟಿಕೊಳ್ಳುತ್ತವೆ ಎಂದರೆ ಬಿಜೆಪಿ ಸರ್ಕಾರ ಹೋಗುತ್ತದೆಯೇ?’ ಎಂದು ಕೇಳಿದರು.

‘ಕಾಂಗ್ರೆಸ್‌ನವರು ಹಾಗೂ ನಾವು ಒಟ್ಟಾಗದೇ ಇದ್ದರೆ ಸರ್ಕಾರ ಹೇಗೆ ರಚನೆಯಾಗುತ್ತದೆ? ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನನಗೂ ಸಾಕಾಗಿ ಹೋಗಿದೆ’ ಎಂದರು.

‘ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡು ಹೊಸ ಪ್ರಯೋಗ ಮಾಡಿದ್ದಾರೆ. ಕೆಲವು ವರ್ಷಗಳವರೆಗೆ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದರೆ ಮಾತ್ರ ಈ ಪ್ರಯೋಗ ಯಶಸ್ವಿಯಾಗುತ್ತದೆ ಎನಿಸುತ್ತದೆ’ ಎಂದು ಹೇಳಿದರು.

‘ನೆರೆ ಬಾಧಿತ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಚೆಗೆ ಪತ್ರ ಬರೆದಿದ್ದೇನೆ. ಪ್ರವಾಹದಿಂದಾಗಿ ದೇಶದ 16 ರಾಜ್ಯಗಳಲ್ಲಿ ಹಾನಿಯಾಗಿದೆ. ಪ್ರಧಾನಿ ಹಾಗೂ ಗೃಹಸಚಿವರು ವೈಮಾನಿಕ ಸಮೀಕ್ಷೆಯನ್ನೂ ಮಾಡದಿರುವುದು ದುರಂತ. ಆ ಬಗ್ಗೆ ಹೆಚ್ಚು ಟೀಕಿಸುವುದಿಲ್ಲ. ಕರ್ನಾಟಕದ ಬಗ್ಗೆ ಅವರ ಅಭಿಪ್ರಾಯಗಳೇನಿವೆಯೋ ಗೊತ್ತಿಲ್ಲ. ಚುನಾವಣೆ ಮುಗಿದ ನಂತರ ಪ್ರಧಾನಿ ಭೇಟಿಗೆ ಸಮಯ ಕೇಳುತ್ತೇನೆ. ರೈತರ ನಿಯೋಗದಿಂದಿಗೆ ಹೋಗಿ ಜಂತರ್‌ ಮಂತರ್‌ ಬಳಿ ಧರಣಿ ನಡೆಸಬೇಕಾಗುತ್ತದೆ. ನನ್ನಿಂದ ಅಷ್ಟೇ ಸಾಧ್ಯವಾಗುವುದು. ಏಕೆಂದರೆ ನಾನು ಸಂಸತ್ತಿನಲ್ಲಿ ಮಾತನಾಡಲು ಆಗುವುದಿಲ್ಲ’ ಎಂದು ಹೇಳಿದರು.

‘ಈರುಳ್ಳಿ ಬೆಲೆ ಗಗನಕ್ಕೇರಿದೆ. ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಗಮನಸೆಳೆಯಲಾಗುವುದು. ನಾನು ಬೆಂಗಳೂರಿನಲ್ಲಿ ಧರಣಿ ನಡೆಸಿದರೆ ಪ್ರಯೋಜನವಾಗುವುದಿಲ್ಲ. ದೆಹಲಿಗೇ ಹೋಗಿ ಪ್ರತಿಭಟನೆ ನಡೆಸುತ್ತೇನೆ. ಬೇರೆ ಬೇರೆ ಪಕ್ಷದ ಸಂಸದರ ಮೂಲಕ ಹೋರಾಡುತ್ತೇನೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಅವರು, ಬೆಂಗಳೂರಿಗೆ ತೆರಳುತ್ತಿದ್ದ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಗೋಕಾಕ ಕ್ಷೇತ್ರದ ಉಪ ಚುನಾವಣೆ ಕುರಿತು ಕೆಲ ಕಾಲ ಚರ್ಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು