ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೇ ಉದ್ಯೋಗ

ಉದ್ಯಮಗಳಲ್ಲಿ ‘ಸಿ’, ‘ಡಿ’ ದರ್ಜೆ ಹುದ್ದೆ ನಿಯಮ ತಿದ್ದುಪಡಿಗೆ ಸಂಪುಟ ಒಪ್ಪಿಗೆ
Last Updated 31 ಅಕ್ಟೋಬರ್ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆ ಯಾಗುವ ಉದ್ಯಮಗಳಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ ಉದ್ಯೋಗಗಳನ್ನು ಕನ್ನಡಿಗರಿಗೇ ಆದ್ಯತೆ ಮೇಲೆ ನೀಡುವ ನಿಯಮ ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕ ರಾಜ್ಯೋತ್ಸವದ ಮುನ್ನಾದಿನವಾದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರತೆಗೆದುಕೊಳ್ಳಲಾಗಿದೆ. ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಲು ಕಾನೂನಿನ ತೊಡಕು ಉಂಟಾಗಬಹುದಾದ ಕಾರಣ ಆದ್ಯತೆ ಎಂದು ಔದ್ಯಮಿಕ ನಿಯಮಾವಳಿಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯ ಬಳಿಕಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈ ನಿರ್ಧಾರದಿಂದ ಕನ್ನಡಿಗರಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸಿಗುತ್ತದೆ. ಶೇ 5ರಷ್ಟು ಉದ್ಯೋಗವನ್ನು ಅಂಗವಿಕಲರಿಗೆ ಮೀಸಲಿಡಲು ಸೂಚಿಸಲಾಗಿದೆ ಎಂದರು.

‘ಸಿ’ ಮತ್ತು ‘ಡಿ’ ದರ್ಜೆಯೂ ಸೇರಿದಂತೆ ಯಾವುದೇ ಹುದ್ದೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ನಿಯಮಾವಳಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಆದ್ಯತೆ ಮೇಲೆ ನೀಡಿ ಎಂದು ತಿದ್ದುಪಡಿ ಮಾಡುವುದರಿಂದ ಸಮಸ್ಯೆ ಆಗುವುದಿಲ್ಲ. ರಾಜ್ಯ ಸರ್ಕಾರ ಭೂಮಿ, ನೀರು, ವಿದ್ಯುತ್‌ ನೀಡುವುದರಿಂದ ಉದ್ಯೋಗ ನೀಡಲು ನಾವೂ
ಆಗ್ರಹಿಸಬಹುದು ಎಂದು ಮಾಧುಸ್ವಾಮಿ ಹೇಳಿದರು.

‘ಈ ಸಂಬಂಧ 2016ರಲ್ಲಿ ಸಚಿವ ಸಂಪುಟದ ಮುಂದೆ ಪ್ರಸ್ತಾವ ಬಂದಿತ್ತು. ಆದರೆ, ಒಪ್ಪಿಗೆ ನೀಡಿರಲಿಲ್ಲ. ನಾವು ಇದಕ್ಕೆ ಒಪ್ಪಿಗೆ ನೀಡಿದ್ದೇವೆ’ ಎಂದೂ ಅವರು ತಿಳಿಸಿದರು.

ಕಡ್ಡಾಯ ಮರೆತ ಸರ್ಕಾರ?: ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು, ‘ಸಿ‘ ಮತ್ತು ‘ಡಿ‘ ದರ್ಜೆಯ ಉದ್ಯೋಗವಲ್ಲದೇ ‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ನೀಡುವಂತೆ ಕಡ್ಡಾಯಗೊಳಿಸುವುದಾಗಿ ಹಿಂದೆ ಹೇಳಿಕೆ ನೀಡಿದ್ದರು.

ಆದರೆ, ಸರ್ಕಾರ ಈಗ ಕಡ್ಡಾಯ ಎಂಬ ಪದ ಬಿಟ್ಟು,ಉದ್ಯೋಗದಲ್ಲಿ ಕನ್ನಡಿಗರಿಗೆ ‘ಆದ್ಯತೆ’ ಎಂಬ ಪದವನ್ನು ಬಳಕೆ ಮಾಡಿರುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

‘ಕಡ್ಡಾಯ’ ಎಂದು ಬದಲಾವಣೆ ತಂದರೆ ಉದ್ಯಮಿಗಳು ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ ಹಾಗೂ ವಾಸ್ತವದಲ್ಲಿ ಅದು ಪಾಲನೆಯಾಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ, ‘ಆದ್ಯತೆ’ಗೆ ಸೀಮಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

1242 ಸಹಾಯಕ ಪ್ರಾಧ್ಯಾಪಕರ ನೇಮಕ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ತುರ್ತಾಗಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ವಿಶೇಷ ನೇಮಕಾತಿ ನಿಯಮಾವಳಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಈಗ ಖಾಲಿ ಇರುವ 914 ಮತ್ತು ಹೊಸದಾಗಿ ಸೃಷ್ಟಿಸಿರುವ 328 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಶೇ 90ರಷ್ಟು ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಅವುಗಳನ್ನೂ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಾನೂನು ಕಾಲೇಜು ಬೋಧಕ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ಯುಜಿಸಿ ವೇತನ ನೀಡಲುತೀರ್ಮಾನಿಸಿದ್ದು, ಇದು ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾನೂನು
ಕಾಲೇಜುಗಳಿಗೆ ಅನ್ವಯವಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT