ಶುಕ್ರವಾರ, ಜನವರಿ 24, 2020
17 °C

ಅಳಿದುಳಿದ ಜೆಡಿಎಸ್ ಶಾಸಕರು ಶೀಘ್ರ ಬಿಜೆಪಿಗೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹತ್ತು ಜನ್ಮವೆತ್ತಿ ಬಂದರೂ ಮತ್ತೆ ಮುಖ್ಯಮಂತ್ರಿ  ಆಗುವುದಿಲ್ಲ. ಅಳಿದುಳಿದ ಜೆಡಿಎಸ್ ಶಾಸಕರೂ ಶೀಘ್ರ ಬಿಜೆಪಿಗೆ ಬರುತ್ತಾರೆ ಎಂದು ಗ್ರಾಮಾಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಂಗಳೂರು ಘಟನೆಯ ಎಷ್ಟು ವೀಡಿಯೊ ಬಿಡುಗಡೆ ಮಾಡಿದರೂ ಸತ್ಯ ಬದಲಾಗುವುದಿಲ್ಲ. ಅನವಶ್ಯಕವಾಗಿ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಗಲಭೆಯ ದಿನ ಗೂಂಡಾಗಳು ಮೂಟೆಗಟ್ಟಲೆ ಕಲ್ಲುಗಳನ್ನು ವ್ಯಾನ್, ಲಗೇಜ್ ಆಟೊಗಳಲ್ಲಿ ತುಂಬಿಕೊಂಡು ಬಂದು ಗಲಭೆ ನಡೆಸಿದ್ದಾರೆ ಎಂಬ ವಾಸ್ತವ ಎಲ್ಲ ವಾಹಿನಿಗಳು, ಪತ್ರಿಕೆಗಳಲ್ಲಿ ಪ್ರಸಾರವಾಗಿದೆ. ಸತ್ಯ ಕುಮಾರಸ್ವಾಮಿಗೆ ಬೇಕಿಲ್ಲ. ಈ ರಾಜ್ಯದ ಜನರಿಗೆ ನಂಬಿಕೆ ಇದ್ದರೆ ಸಾಕು’ ಎಂದು ತಿರುಗೇಟು ನೀಡಿದರು.

‘ತಮ್ಮ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ರಾಜಕೀಯದಲ್ಲಿ ಕಳೆದುಹೋಗಿದ್ದಾರೆ. ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ವೀಡಿಯೊ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದಂತೆಯೇ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ವರದಿ ಬಂದ ನಂತರ ಹಿಂಸಾಚಾರ, ಗೂಂಡಾಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುತಂತ್ರ ರಾಜಕಾರಣಕ್ಕೆ ಬಿಜೆಪಿ ಬಗ್ಗುವುದಿಲ್ಲ. ರಾಜ್ಯದ ಜನ ಈಗಾಗಲೇ ಕಾಂಗ್ರೆಸ್‌ ಮೂಲೆ ಗುಂಪು ಮಾಡಿದ್ದಾರೆ, ಜೆಡಿಎಸ್ ಎಲ್ಲಿದೆ ಎಂದು ಹುಡುಕುವ ಸ್ಥಿತಿ ಇದೆ. ಇನ್ನಾದರೂ ಬುದ್ಧಿಕಲಿಯಬೇಕು’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು