ಗುರುವಾರ , ಫೆಬ್ರವರಿ 20, 2020
28 °C
ಸೂಕ್ತ ಆಹ್ವಾನ ನೀಡದ ಕಸಾಪ ನಡೆಗೆ ಮುನಿಸಿಕೊಂಡ ಸರ್ಕಾರಿ ನೌಕರರ ಸಂಘ

ಒಂದು ದಿನದ ವೇತನ ಕೊಡಲು ಹಿಂದೇಟು!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಕಾರ್ಯಗಳಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮುನಿಸಿಕೊಂಡಿರುವ ಸಂಘವು ಜಿಲ್ಲೆಯ ನೌಕರರ ಒಂದು ದಿನದ ವೇತನವನ್ನು ನೀಡಲು ಹಿಂದೇಟು ಹಾಕುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಸಮ್ಮೇಳನದ ಕೋಶಾಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅವರಿಗೆ ಜ.24ರಂದು ₹3 ಕೋಟಿ ಮೊತ್ತದ ಚೆಕ್‌ ವಿತರಿಸಬೇಕಿತ್ತು. ಆದರೆ, ‘ಯಾರು ಬಂದರೂ ನಡೆಯುತ್ತದೆ, ಬರದಿದ್ದರೂ ನಡೆಯುತ್ತದೆ’ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಡೆಗೆ ಸಾಂಕೇತಿಕ ಪ್ರತಿರೋಧ ತೋರಿಸುವ ಸಲುವಾಗಿ ಚೆಕ್‌ ಹಸ್ತಾಂತರ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ರದ್ದಾಯಿತು ಎನ್ನಲಾಗಿದೆ.

ಸಮ್ಮೇಳನ ನಡೆಸಲು ₹14 ಕೋಟಿ ವೆಚ್ಚವಾಗಬಹುದು ಎಂದು ಕಸಾಪ ಕೇಂದ್ರ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇಲಾಖೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ, ಇತ್ತೀಚೆಗೆ ಸಮ್ಮೇಳನದ ಪೂರ್ವಸಿದ್ಧತಾ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ‘ಸಮ್ಮೇಳನಕ್ಕೆ ಸರ್ಕಾರ ತನ್ನ ಪಾಲಿನ ಹಣ ನೀಡಲಿದೆ. ಜೊತೆಗೆ ಜಿಲ್ಲೆಯ ದಾನಿಗಳಿಂದಲೂ ಹಣ ಸಂಗ್ರಹಿಸಿ’ ಎಂದು ಸೂಚನೆ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ಶರತ್ ಬಿ. ಈ ಸಂಬಂಧ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆ, ಸಿಮೆಂಟ್‌ ಕಾರ್ಖಾನೆಗಳ ಮುಖ್ಯಸ್ಥರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದು ನೆರವು ಕೇಳಿದ್ದಾರೆ. ಆದರೆ, ನಿರೀಕ್ಷಿತ ಮಟ್ಟಿಗೆ ನಿಧಿ ಸಂಗ್ರಹವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮ್ಮೇಳನದ ಸಂಘಟಕರಿಗೆ ಸರ್ಕಾರದ ಅನುದಾನ ಹೊರತುಪಡಿಸಿ ಮತ್ತೊಂದು ಪ್ರಮುಖ ಹಣಕಾಸಿನ ಮೂಲವೆಂದರೆ ಸರ್ಕಾರಿ ನೌಕರರು ನೀಡುವ ಒಂದು ದಿನದ ವೇತನ. ಆದರೆ, ವಿವಿಧ ಸಮಿತಿಗಳಲ್ಲಿ ಸೇರಿಸಿಕೊಂಡಿಲ್ಲ. ಸಭೆಗಳಿಗೂ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ (ರಾಜು) ಲೇಂಗಟಿ ಅವರನ್ನು ಆಹ್ವಾನಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು, ‘ಜಿಲ್ಲೆಯ ನೌಕರರ ಸಂಘದಲ್ಲಿ ಎರಡು ಬಣಗಳಿದ್ದು, ಒಬ್ಬರನ್ನು ಕರೆದರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ. ಆದಾಗ್ಯೂ, ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ಸಭೆಗಳಿಗೆ ಆಹ್ವಾನಿಸಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು