ಶುಕ್ರವಾರ, ಜುಲೈ 30, 2021
23 °C
ಬೈಲಹೊಂಗಲದ ಎಸ್‌ಡಿಎ ಪ್ರಯತ್ನ

ಗೂಗಲ್‌ ಟಿಟಿಎಸ್‌ನಲ್ಲಿ ಕನ್ನಡ ಧ್ವನಿ ಸೇರ್ಪಡೆ: ಅಂಧನ ಅಭಿಯಾನ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಗೂಗಲ್‌ ಟೆಕ್ಸ್ಟ್‌ ಟು ಸ್ಪೀಚ್‌ ತಂತ್ರಾಂಶದಲ್ಲಿ ಕನ್ನಡ ಭಾಷೆಯ ಧ್ವನಿ ಸೇರಿಸಲು ನಾನು ಆನ್‌ಲೈನ್‌ನಲ್ಲಿ ನಡೆಸಿದ ಅಭಿಯಾನ ಯಶಸ್ವಿಯಾಗಿದೆ’ ಎಂದು ಬೈಲಹೊಂಗಲದ ದ್ವಿತೀಯ ದರ್ಜೆ ಲೆಕ್ಕಸಹಾಯಕ, ಅಂಧರಾದ ಸಿದ್ದಲಿಂಗೇಶ್ವರ ಇಂಗಳಗಿ ತಿಳಿಸಿದರು.

‘ಗೂಗಲ್ ಟಿಟಿಎಸ್ (Google text to speech– ಪಠ್ಯದಿಂದ ಮಾತಿಗೆ) ಎಂಬ ಆ್ಯಂಡ್ರಾಯ್ಡ್ ಕಿರುತಂತ್ರಾಂಶಕ್ಕೆ ಕನ್ನಡ ಭಾಷೆಯ ಧ್ವನಿಯನ್ನು ಈಚೆಗೆ ಸೇರಿಸಲಾಗಿದೆ. ಚೇಂಜ್ ಡಾಟ್‌ ಆರ್ಗ್ ವೆಬ್‌ತಾಣದಲ್ಲಿ ಪಿಟಿಷನ್‌ ಹಾಕಿದ್ದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘2017ರಲ್ಲಿ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದೆ. ಇಂಗ್ಲಿಷ್, ಹಿಂದಿ ಹಾಗೂ ವಿದೇಶಿ ಭಾಷೆಯ ಧ್ವನಿಗಳು ಮಾತ್ರ ಟಿಟಿಎಸ್‌ನಲ್ಲಿದ್ದವು. ಅಲ್ಲಿ ಕನ್ನಡವೂ ಇರಬೇಕೆಂದು ನಡೆಸಿದ ಅಭಿಯಾನದಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಿಂದ ಹಲವು ಮಂದಿ ಅಂಧರು ಪಾಲ್ಗೊಂಡು ಬೆಂಬಲಿಸಿದ್ದರು. ಅರ್ಜಿಗೆ 3,317 ಜನ ಸಹಿ ಹಾಕಿದ್ದರು. ಪರಿಣಾಮ ಕನ್ನಡದ ಜೊತೆ ಇತರ ಭಾರತೀಯ ಪ್ರಾದೇಶಿಕ ಭಾಷೆಗಳು ಕೂಡ ಸೇರಿವೆ. ಈಗ ನಾವು ಗೂಗಲ್ ಟಿಟಿಎಸ್‌ನ ಸಾರ್ವಜನಿಕ ಆವೃತ್ತಿಯಲ್ಲಿ ಕನ್ನಡ ಭಾಷೆಯ ಧ್ವನಿ ಪಡೆಯುತ್ತಿದ್ದೇವೆ’ ಎಂದು ತಿಳಿಸಿದರು.

ಗೂಗಲ್ ಟಿಟಿಎಸ್ ಎಂದರೇನು?:

‘ಸಂಪೂರ್ಣ ಅಂಧರಿಗೆ ಆ್ಯಂಡ್ರಾಯ್ಡ್ ಫೋನ್‌ ಪರದೆಯಲ್ಲಿ ಕಾಣುವ ಪಠ್ಯವನ್ನು ಇದು ಧ್ವನಿ ಮೂಲಕ ಓದಿ ಹೇಳುತ್ತದೆ. ಇದರಿಂದ ಅಂಧರು ಸಾಮಾನ್ಯರಂತೆ ಇತರರ ಸಹಾಯವಿಲ್ಲದೆ ಸ್ವತಂತ್ರವಾಗಿ ಆ್ಯಂಡ್ರಾಯ್ಡ್‌ ಫೋನ್‌ ಬಳಸಲು ನೆರವಾಗುತ್ತದೆ. ದೋಷಗಳನ್ನು ಗುರುತಿಸಿ ಇ–ಮೇಲ್ ಮೂಲಕ ಫೀಡ್‌ಬ್ಯಾಕ್‌ ಸಲ್ಲಿಸಿ ಸರಿಪಡಿಸುತ್ತಿದ್ದೇನೆ. ಗೂಗಲ್‌ನಿಂದ ಸ್ಪಂದನೆ ಸಿಗುತ್ತಿದೆ’ ಎಂದು ಹೇಳಿದರು.

ಬಳಕೆ ಹೇಗೆ?:

‘ಈ ತಂತ್ರಾಂಶ ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿದ ನಂತರ ಡಿವೈಸ್ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ language and input ವಿಭಾಗದಲ್ಲಿ text to speech output ಎಂಬ icon ತೆರೆಯಬೇಕು. ಅಲ್ಲಿ google TTs ಆಯ್ದುಕೊಳ್ಳಬೇಕು. ಅಲ್ಲಿರುವ ಧ್ವನಿಗಳ ಮೇಲೆ ಕ್ಲಿಕ್ ಮಾಡಿ‌ ಪಟ್ಟಿಯಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ಭಾಷಾ ಪ್ಯಾಕೇಜ್ ಡೌನ್‌ಲೋಡ್ ಮಾಡಬೇಕು. ಪುರುಷ ಅಥವಾ ಸ್ತ್ರೀ ಧ್ವನಿಯ ಆಯ್ಕೆಗೂ ಅವಕಾಶವಿದೆ. ಧ್ವನಿಯ ಗುಣಮಟ್ಟ ಉತ್ತಮವಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು