ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ– ಇಂಗ್ಲಿಷ್‌ ಯಾವುದು ಹಿತ?

Last Updated 23 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ರಾಜ್ಯದ ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆಯುವ ಸರ್ಕಾರದ ನಿರ್ಧಾರವನ್ನು ಕೆಲ ಸಾಹಿತಿಗಳು ವಿರೋಧಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ರಾಜಧಾನಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದರೆ, ಇನ್ನೂ ಕೆಲವರು ಮಾತೃ ಭಾಷಾ ಶಿಕ್ಷಣದ ಜತೆಗೆ ಇಂಗ್ಲಿಷ್‌ ಅನ್ನು ಚೆನ್ನಾಗಿ ಕಲಿಸುವ ಸರ್ಕಾರಿ ಶಾಲೆಗಳು ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳಿಗೆ ಕಲಿಕೆಯ ವಯಸ್ಸದು. ಯಾವ ಭಾಷೆಯಲ್ಲಿ ಕಲಿತರೂ ಗ್ರಹಿಸುವ ಶಕ್ತಿ ಅವರಿಗಿರುತ್ತದೆ ಎನ್ನುವ ವಾದ ಒಂದೆಡೆ ಇದೆ. ಇನ್ನೊಂದೆಡೆ ಮಾತೃಭಾಷೆಯಲ್ಲಿ ಕಲಿತರೆ ಕಲಿಕೆಯ ಒತ್ತಡವಿರದು ಎಂಬ ವಾದವಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯೂ ಆಗುತ್ತಿದೆ. ಈ ಸಂಬಂಧ ನಗರದ ಕೆಲ ಪೋಷಕರು, ಸಾರ್ವಜನಿಕರು, ಶಿಕ್ಷಕರು ‘ಮೆಟ್ರೊ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‌ಏಳಿಗೆಗೆ ದಿಟ್ಟ ಹೆಜ್ಜೆ

ಇದು ನಮ್ಮ ರಾಜ್ಯದ ಏಳಿಗೆಗೆ ಒಂದು ದಿಟ್ಟ ಹೆಜ್ಜೆ. ಖಂಡಿತಾ ಜಾರಿಗೆ ಬರಬೇಕು. ಆಗಲೇ ಸಮಾಜದಲ್ಲಿ ಎಲ್ಲಾ ಮಕ್ಕಳಿಗೂ ಸಮಾನವಾದ ವಿದ್ಯೆ ಲಭಿಸುತ್ತದೆ. ಎಲ್ಲಾ ಮಕ್ಕಳೂ ಪ್ರತಿ ವಿಭಾಗದಲ್ಲೂ ಸಮಾನತೆಯನ್ನು ಕಾಣುತ್ತಾರೆ. ಇದರಿಂದ ಅವರ ಮನೋಸ್ಥೈರ್ಯ ಹೆಚ್ಚುತ್ತದೆ. ಅವರೂ ಎಲ್ಲರೊಡನೆ ಸಮಾನವಾಗಿ ಬೆರೆಯಲು ಸಹಾಯವಾಗುತ್ತದೆ. ರಾಜ್ಯದ ಮತ್ತು ದೇಶದ ಏಳಿಗೆಗೆ ಇದು ಪೂರಕ.

-ಪ್ರೇಮಾ, ಪರಿಸರತಜ್ಞೆ, ಅಮೃತಹಳ್ಳಿ

ರಿಯಾದ ಕ್ರಮವಲ್ಲ

ಕನ್ನಡ ಭಾಷೆಯನ್ನು ಸಂರಕ್ಷಿಸಲು ಕೈಗೊಂಡಿರುವ ಪ್ರಯತ್ನಗಳೆಲ್ಲ ಸರ್ಕಾರದ ಈ ಕ್ರಮದಿಂದ ನಿಷ್ಪಲವಾಗುವ ಸಂಭವವಿದೆ. ಕನ್ನಡದಲ್ಲಿನ ಬಹಳಷ್ಟು ಪದಗಳು, ವೈಜ್ಞಾನಿಕ ಪದಗಳು, ಈಗಾಗಲೇ ಆಡು ಭಾಷೆಯಿಂದ ಕಣ್ಮರೆಯಾಗಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಬಹಳ ಮಂದಿ ಪ್ರಾದೇಶಿಕ ಅಥವಾ ಮಾತೃಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲಿಷ್‌ ಭಾಷಾ ಮಾಧ್ಯಮ ಅನುಸರಿಸಲೇಬೇಕಾದ ಪರಿಸ್ಥಿತಿ ಇದ್ದಲ್ಲಿ ಸರ್ಕಾರ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಬೇಕು.

-ಯಶಸ್ವಿನಿ ಶರ್ಮ, ಪ್ರಾಧ್ಯಾಪಕರು, ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು

ಜಾಗತಿಕ ಸ್ಪರ್ಧೆಗೆ ಇಂಗ್ಲಿಷ್‌ ಅವಶ್ಯ

ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುವ ಉದ್ದೇಶದಿಂದ ಎಂದು ಹೇಳಲಾಗದಿದ್ದರೂ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ತಮ್ಮ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ಇಂಗ್ಲಿಷ್ ಮಾಧ್ಯಮ ಅವಶ್ಯಕವಾಗಿದೆ.

-ಜಿ. ಚಂದ್ರಶೇಖರ್‌, ಪೋಷಕ, ರಾಜರಾಜೇಶ್ವರಿ ನಗರ

ಬಡವರಿಗೆ ಅನುಕೂಲ

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಪೋಷಕರಿಂದ ದುಬಾರಿ ಶುಲ್ಕ ಪಡೆಯುವ ಖಾಸಗಿ ಶಾಲೆಗಳಿಗೆ ಕಡಿವಾಣ ಬೀಳುತ್ತದೆ. ಅಲ್ಲದೆ ಖಾಸಗಿ ಶಾಲೆಗಳಿಗೂ ಅಳಿವು, ಉಳಿವಿನ ಪ್ರಶ್ನೆ ಎದುರಾಗಿ ಅವರೂ, ಶಾಲಾ ಪ್ರವೇಶ ಶುಲ್ಕವನ್ನು ಕಡಿಮೆ ಮಾಡುತ್ತಾರೆ. ಇದರಿಂದ ಪೋಷಕರಿಗೆ ಅನುಕೂಲವಾಗುತ್ತದೆ.

-ಭರತ್‌, ಶಿಕ್ಷಕ, ಹೊಸಕೋಟೆ

ಮಾತೃಭಾಷಾ ಶಿಕ್ಷಣವೇ ಬೇಕು

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯ ಮೂಲಕ ಆಗಬೇಕು. ಇದರಿಂದ ಮಕ್ಕಳ ಗ್ರಹಿಕಾ ಮತ್ತು ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇಲ್ಲದಿದ್ದರೆ ಮಕ್ಕಳ ಪರಿಸ್ಥಿತಿ ‘ನೀರಿಳಿಯದ ಬಾಯಲ್ಲಿ ಕಡುಬು ತುರುಕಿದಂತಾಗುತ್ತದೆ’.

- ಬಳಕೂರ್‌ ವಿ.ಎಸ್‌.ನಾಯಕ್‌,ಅಧ್ಯಾಪಕ, ಚಿತ್ರಕಲಾ ಪರಿಷತ್ತು

ಮಕ್ಕಳ ಭವಿಷ್ಯಕ್ಕೆ ಪೂರಕ

ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಈಗ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆಗಳು ದುಬಾರಿ ಶುಲ್ಕ ‍ಪಡೆಯುತ್ತಿವೆ. ಇದು ಬಹುತೇಕ ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಇಂದು ಅತ್ಯಗತ್ಯವಾಗಿರುವ ಕಾರಣ ಸರ್ಕಾರ ಈ ನಿಟ್ಟಿನಲ್ಲಿ ದೃಢ ಹೆಜ್ಜೆಯಿಡಲೇ ಬೇಕು. ಇದು ಒಂದೆಡೆ ಮಕ್ಕಳ ಭವಿಷ್ಯ ಕಟ್ಟಿದರೆ, ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

- ರಾಜೇಶ್ವರಿ ಚಂದ್ರಶೇಖರ್‌, ಪೋಷಕರು, ಬ್ಯಾಡರಹಳ್ಳಿ

ಅಸಮಾನತೆ ತಗ್ಗುತ್ತದೆ

ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ನಗರ ಮತ್ತು ಗ್ರಾಮೀಣ ಭಾಗದ ಅಸಮಾನತೆ ಮತ್ತು ಸ್ಪರ್ಧಾತ್ಮಕತೆಯಲ್ಲಿನ ಅಂತರ ತಗ್ಗಿಸಲು ಇದು ದಿಟ್ಟ ನಿರ್ಧಾರ. ಇಂದಿನ ಐಟಿ–ಬಿಟಿ ಯುಗದಲ್ಲಿ ಕನ್ನಡವನ್ನು ಉಳಿಸಿಕೊಂಡು ಇಂಗ್ಲಿಷ್ ಕಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

- ಎನ್‌. ಮುನಿರಾಜ್‌, ಕಾರ್ಯದರ್ಶಿ, ದಂಡು ಪ್ರದೇಶದ ಕನ್ನಡ- ಸಂಘಟನೆಗಳ ಒಕ್ಕೂಟ

ಸರ್ಕಾರಿ ಶಾಲೆಯಲ್ಲಿ ಎರಡೂ ಮಾಧ್ಯಮವಿರಲಿ

ಮಕ್ಕಳನ್ನು ಯಾವ ಭಾಷಾ ಮಾಧ್ಯಮದಲ್ಲಿ ಕಲಿಸಬೇಕು ಎಂಬುದು ಪೋಷಕರಿಗೆ ಬಿಟ್ಟ ವಿಷಯ. ಅದಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲಿಯೇ ಪೋಷಕರಿಗೆ ಆಯ್ಕೆಗಳಿರಬೇಕು. ಅಂದರೆ ಪ್ರತಿ ಸರ್ಕಾರಿ ಶಾಲೆಯಲ್ಲೂ ಪ್ರಾದೇಶಿಕ ಭಾಷಾ ಮಾಧ್ಯಮದ ಜತೆಗೆ ಇಂಗ್ಲಿಷ್‌ ಮಾಧ್ಯಮದ ತರಗತಿಗಳೂ ಇರಬೇಕು. ಪೋಷಕರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸಬೇಕು. ಪ್ರತಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌.ಕೆ.ಜೆ, ಯು.ಕೆ.ಜಿ ಆರಂಭಿಸಬೇಕು.

- ಬಸವರಾಜ ಗುರಿಕಾರ, ಹಿರಿಯ ಉಪಾಧ್ಯಕ್ಷ,ಅಖಿಲ ಭಾರತ ಪ್ರಾಥಮಿಕ ಶಾಲೆಗಳ ಸಂಘಟನೆ

ವಿರೋಧ ಸರಿಯಲ್ಲ

ನಾನು ಸರ್ಕಾರದ ನಿರ್ಧಾರದ ಪರವಾಗಿದ್ದೇನೆ. ನಮ್ಮ ಕನ್ನಡಪ್ರೇಮ ಹೀಗೆ ಏಕಮುಖವಾಗಿದ್ದು, ಕ್ರೌರ್ಯ ಮೆರೆಯಬಾರದು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ರದ್ದುಪಡಿಸುವ ಹೋರಾಟವನ್ನು ಸಾಹಿತಿಗಳು, ಸಂಘಟನೆಗಳು ಮಾಡಿದರೆ ದನಿಗೂಡಿಸಬಹುದು. ಅದು ಬಿಟ್ಟು ಸರ್ಕಾರಿ ಶಾಲೆಗಳಿಗೆ ಚೈತನ್ಯ ಒದಗಿಸುವ, ಬಡ ಮಕ್ಕಳ ಶೈಕ್ಷಣಿಕ ಕಾಳಜಿ ಹೊಂದಿರುವ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವುದು ಕ್ರೌರ್ಯವೇ ಸರಿ.

- ಡಾ.ಹುಲಿಕುಂಟೆ ಮೂರ್ತಿ, ಕವಿ, ನೆಲಮಂಗಲ

ಪೂರ್ವ ಸಿದ್ಧತೆ ಅಗತ್ಯ

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದು ಸ್ವಾಗತಾರ್ಹ. ಈ ಮೂಲಕ ಸರ್ಕಾರ ಪೋಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಇದಕ್ಕೆ ತಕ್ಕ ಸಿದ್ಧತೆಯನ್ನೂ ಸರ್ಕಾರ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಗೆಪಾಟಲಿಗೀಡಗಬಹುದು. ಈ ಹಿಂದೆ (2007ರಲ್ಲಿ) ಸರ್ಕಾರ 1ನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್‌ ಅನ್ನು ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಿತು. ಆದರೆ ಇಲ್ಲಿಯವರೆಗೂ ಅದಕ್ಕೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಿಲ್ಲ. ಒಂದು ಭಾಷೆಗೆ ಸಂಬಂಧಿಸಿದ ಶಿಕ್ಷಕರಿಗೇ ಅರ್ಹ ತರಬೇತಿ ಕೊಡಿಸಲು ಇಲ್ಲಿಯವರೆಗೆ ಸರ್ಕಾರಕ್ಕೆ ಆಗಿಲ್ಲ. ಹೀಗಿರುವಾಗ ಇಡೀ ಬೋಧನಾ ಮಾಧ್ಯಮವನ್ನೇ ಇಂಗ್ಲಿಷ್‌ಗೆ ಪರಿವರ್ತಿಸಿದರೆ ಅರ್ಹ ಶಿಕ್ಷಕರ ಕೊರತೆ ಎದುರಾಗುತ್ತದೆ.

-ಡಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT