ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಗೋಲಿಬಾರ್ ಕದನ; ‘ದೇಶದ್ರೋಹಿ’ ಕವಿತೆಯ ವಾಚನ

Last Updated 20 ಫೆಬ್ರುವರಿ 2020, 1:33 IST
ಅಕ್ಷರ ಗಾತ್ರ
ADVERTISEMENT
""

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿರೋಧದ ಧ್ವನಿ ವಿಧಾನಮಂಡಲದ ಉಭಯ ಸದನಗಳಲ್ಲೂ ಮೊಳಗಿತು. ಕವಿತೆ ವಾಚಿಸಿದ್ದಕ್ಕೆ ‘ದೇಶದ್ರೋಹ’ದ ಆಪಾದನೆಗೆ ಗುರಿಯಾ ಗಿರುವ ಸಿರಾಜ್ ಬಿಸರಳ್ಳಿ ಕವಿತೆಯನ್ನು ಸದನ ಮತ್ತು ಬೀದಿ ಯಲ್ಲಿ ಓದಿದ ಕೆಲವರು ಪ್ರತಿಭಟನೆಯನ್ನೂ ಸೂಚಿಸಿದರು. ಮಂಗಳೂರು ಗೋಲಿಬಾರ್‌ ಪ್ರಕರಣವನ್ನು ಆಡಳಿತಾರೂಢ ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರೆ, ವಿರೋಧ ಪಕ್ಷದ ನಾಯಕರು ಕಟುವಾಗಿ ಟೀಕಿಸಿದರು.

ಬೆಂಗಳೂರು: ಮಂಗಳೂರು ಗೋಲಿಬಾರ್‌ ಹಾಗೂ ಪ್ರಭುತ್ವದ ವಿರುದ್ಧ ಪ್ರತಿರೋಧ ತೋರಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವುದು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಪ್ರತಿಧ್ವನಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಇರುವುದು ಪೊಲೀಸ್‌ ರಾಜ್ಯ. ರಾಜ್ಯ ಅರಾಜಕತೆಯತ್ತ ಸಾಗುತ್ತಿದೆ. ಮಂಗಳೂರು ಗೋಲಿಬಾರ್‌ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲೇಬೇಕು’ ಎಂದು ಪಟ್ಟು ಹಿಡಿದರು. ‘ನಿರಪರಾಧಿಗಳ ಮೇಲೆ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಹಾಗೂ ಶಾಸಕ ಸೋಮಶೇಖರ್‌ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಬೇಕಿತ್ತು’ ಎಂದು ಪ್ರತಿಪಾದಿಸಿದರು.

ಆಗ ಆಡಳಿತ ಪಕ್ಷದ ಸದಸ್ಯರು, ‘ಮಂಗಳೂರು ಗಲಭೆಗೆ ಶಾಸಕ ಯು.ಟಿ.ಖಾದರ್‌ ಮಾತೇ ಕಾರಣ’ ಎಂದು ಕೆಣಕಿದರು. ಈ ವೇಳೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಬಿಜೆಪಿ ಸದಸ್ಯರು, ಸಿದ್ದರಾಮಯ್ಯ ಮಾತಿಗೆ ಅಡಿಗಡಿಗೂ ಅಡ್ಡಿಪಡಿಸಿದರು.

ಮಂಗಳೂರು ಗೋಲಿಬಾರ್‌ಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಬಿಜೆಪಿ ಸದಸ್ಯರು ಪ್ರದರ್ಶಿಸಿದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿ, ‘ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ಮ್ಯಾಜಿಸ್ಟ್ರಿಯಲ್‌ ತನಿಖೆಗೆ ಒಪ್ಪಿಸಲಾಗಿದೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಕಲಾಪದಲ್ಲಿ ಕವಿತೆ ವಾಚಿಸಿದ ಕುಮಾರಸ್ವಾಮಿ
ಬೆಂಗಳೂರು: ಕವಿ ಸಿರಾಜ್‌ ಬಿಸರಳ್ಳಿ ಬರೆದಿರುವ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂಬ ಕವನವನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಾಚಿಸುವ ಮೂಲಕ ಸರ್ಕಾರಕ್ಕೆ ಸಡ್ಡುಹೊಡೆದರು.

ಆನೆಗೊಂದಿ ಉತ್ಸವದಲ್ಲಿ ಈ ಕವನ ವಾಚಿಸಿದ ಕಾರಣಕ್ಕೆ ಸಿರಾಜ್‌ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ಕೃತ್ಯ. ವಿರೋಧವನ್ನು ಸಹಿಸಿಕೊಳ್ಳದ ಮನಸ್ಥಿತಿಗೆ ಇದು ನಿದರ್ಶನ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಈ ಕವನ ವಾಚನಕ್ಕೆ ಬಿಜೆಪಿಯ ಯಾವುದೇ ಶಾಸಕರೂ ಪ್ರತಿರೋಧ ತೋರದೇ ಸುಮ್ಮನೆ ಆಲಿಸಿದರು.

ಪುರಭವನದ ಎದುರು ಸೇರಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರು ಸಿರಾಜ್‌ ಕವನ ವಾಚಿಸಿದರು.

’ಬಿಎಸ್‌ವೈ, ಖಾದರ್‌ಗೆ ಜೀವ ಬೆದರಿಕೆ‘
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌, ಬಿಜೆಪಿಯ ಹಲವು ಶಾಸಕರಿಗೆ ದುಬೈ, ಸೌದಿ ಅರೇಬಿಯಾದಿಂದ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರು ಗೋಲಿಬಾರ್‌ಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿ, ತಮಗೂ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದರು.

ಕೆಲವು ಸಂಘಟನೆಗಳ (ಪಿಎಫ್‌ಐ, ಎಸ್‌ಡಿಪಿಐ) ಬಗ್ಗೆ ಮೃದು ಧೋರಣೆ ಬೇಡ. ಈ ಸಂಘಟನೆಗಳಿಗೆ ಅಂತರರಾಷ್ಟ್ರೀಯ ಸಂಘಟನೆಗಳ ಜತೆ ನಂಟು ಇದೆ. ಇವರಿಗೆ ವಿದೇಶಗಳಿಂದ ಹಣ ಬರುತ್ತಿದೆ. ಇವರು ದೊಡ್ಡ ಮಟ್ಟದ ಪಿತೂರಿ ನಡೆಸಿದ್ದಾರೆ. ಈ ಸಂಘಟನೆಗಳ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಎಚ್ಚರಿಕೆ ನೀಡಿದ್ದಾರೆ ಎಂದು ವಿವರಿಸಿದರು.

‘ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರು ಸರಿಯಾದ ಕ್ರಮವನ್ನೇ ತೆಗೆದುಕೊಂಡಿದ್ದಾರೆ. ಗಲಭೆ ಪೂರ್ವನಿಯೋಜಿತವಾಗಿದ್ದು, ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ವಿರುದ್ಧ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಮೊಕದ್ದಮೆಗಳು ದಾಖಲಾಗಿವೆ. ಆದ್ದರಿಂದ ನ್ಯಾಯಾಂಗ ತನಿಖೆ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

‘ಪ್ರತಿಭಟನೆ ವೇಳೆ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಎಳೆದಾಡಿದ ಬಗ್ಗೆ ಅವರಿಗೆ ಕರೆ ಮಾಡಿ ಕ್ಷಮೆ ಕೇಳಿದ್ದೇನೆ’ ಎಂದು ಹೇಳಿದರು.

ಕವಿ ಸಿರಾಜ್‌, ರಾಜಭಕ್ಷಿಗೆ ಜಾಮೀನು
ಕೊಪ್ಪಳ: ಸಿಎಎವಿರೋಧಿಸಿಆನೆಗೊಂದಿ ಉತ್ಸವದಲ್ಲಿ ಕವನ ವಾಚನ ಮಾಡಿದ್ದ ಕವಿ ಸಿರಾಜ್‌ ಬಿಸರಳ್ಳಿ ಹಾಗೂ ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಕನ್ನಡ ನೆಟ್‌ ಡಾಟ್‌ ಕಾಂ ಸಂಪಾದಕ ಎಚ್‌.ವಿ.ರಾಜಭಕ್ಷಿಗೆ ಗಂಗಾವತಿ ಸಿವಿಲ್‌ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನುನೀಡಿದೆ.

ಕವನ ವಾಚನದ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈಚೆಗೆ ಪ್ರಕರಣ ದಾಖಲಾಗಿತ್ತು. ಇಬ್ಬರು ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದರು. ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರಿಕೆ ಸಲ್ಲಿಸಿದ್ದರಿಂದ 24ಗಂಟೆ ಪೊಲೀಸ್ ವಶಕ್ಕೆ ನೀಡಲಾಗಿತ್ತು.

‘ಶಾಹೀನ್‌ ಶಾಲೆ ಪ್ರಕರಣ: ಪೊಲೀಸರ ತಪ್ಪಿಲ್ಲ’
ಬೆಂಗಳೂರು:
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಬೀದರ್ ನಗರದ ಶಾಹೀನ್ ಶಾಲಾ ಮಕ್ಕಳನ್ನು ವಿಚಾರಣೆಗೊಳಪಡಿಸುವಾಗ ಪೊಲೀಸರಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ವಕೀಲರಾದ ನಯನ ಜ್ಯೋತಿ ಝಾವರ್, ಮಾನವ ಹಕ್ಕುಗಳ ಸಂಘಟನೆ ‘ಸಿಕ್ರೆಮ್’ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃ ತ್ವದ ವಿಭಾಗೀಯ ನ್ಯಾಯಪೀಠಕ್ಕೆ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ಕೆ.ನಾವದಗಿ ಮಾಹಿತಿ ನೀಡಿದರು.

‘ಶಾಲಾ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ವಿಶೇಷ ಮಕ್ಕಳ ಪೊಲೀಸ್ ಘಟಕದ ಸದಸ್ಯರ ಸಮ್ಮುಖದಲ್ಲಿ ಮಕ್ಕಳ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ತನಿಖಾಧಿಕಾರಿಗಳು ಸಮವಸ್ತ್ರ
ಧರಿಸಿರಲಿಲ್ಲ’ ಎಂದು ತಿಳಿಸಿದರು.

ಸರ್ಕಾರದ ಪ್ರಮಾಣಪತ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್‌ 9ಕ್ಕೆ ಮುಂದೂಡಿತು.

**

ನೀವು (ಯಡಿಯೂರಪ್ಪ) ಯಾವುದೇ ಸಂಘಟನೆ (ಸಂಘ) ಕೃಪೆಯಿಂದ ಇಲ್ಲಿ ಬಂದು ಕುಳಿತಿಲ್ಲ. ದುಡಿಮೆ, ಹೋರಾಟದಿಂದ ಮುಖ್ಯಮಂತ್ರಿ ಆಗಿದ್ದೀರಿ. ಸಂಘವನ್ನು ಮೆಚ್ಚಿಸುವ ಕೆಲಸ ಬೇಡ
–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

**
ಪಿತ್ತದಿಂದ ದೃಷ್ಟಿ ಮಬ್ಬಾದಾಗ ಸರಿಪಡಿಸಲು ರೆಪ್ಪೆಗಳಿಗೆ ಲಿಂಬೆ ಉಜ್ಜುತ್ತಾರೆ. ಆದ್ದರಿಂದಲೇ ಅಧಿ ಕಾರದ ಮದ ಇಳಿಯಲಿ ಎಂದು ಜನ ನಮ್ಮ ಕೈಗೆ ಲಿಂಬೆ ಹಣ್ಣು ಕೊಡುತ್ತಾರೆ
–ಕೆ.ಆರ್‌.ರಮೇಶ್‌ಕುಮಾರ್‌, ಕಾಂಗ್ರೆಸ್‌ ಶಾಸಕ

**
ಹುಬ್ಬಳ್ಳಿ ಜನರಿಗೆ ಮುಖ ತೋರಿ ಸಲು ಸಾಧ್ಯವಾಗುತ್ತಿಲ್ಲ. ಕವಿತೆ ಓದಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದು ನೋಡಿದರೆ ಸರ್ಕಾರಕ್ಕೆ ನಾಚಿಕೆ ಆಗಬೇಕು.
–ಎಸ್.ಆರ್.ಪಾಟೀಲ, ಪರಿಷತ್ ವಿರೋಧ ಪಕ್ಷದ ನಾಯಕ

**
ಹುಬ್ಬಳ್ಳಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳಿಗೆ ಪ್ರಧಾನಿ ಕಚೇರಿ ಯಿಂದ ಆರ್ಥಿಕ ನೆರವು ನೀಡುವ ಸಮಯದಲ್ಲಿ ದೇಶ ಪ್ರೇಮದ ಬಗ್ಗೆ ಎದೆಬಗೆದು ನೋಡಲು ಸಾಧ್ಯವೆ?
–ಎಂ.ಕೆ.ಪ್ರಾಣೇಶ್, ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT