ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸೇರಲು ಹೆಚ್ಚಿದ ಲಾಬಿ: ಸೋತವರಿಂದಲೂ ಬೇಡಿಕೆ

6ರಂದು ಸಚಿವ ಸಂಪುಟ ವಿಸ್ತರಣೆ
Last Updated 2 ಫೆಬ್ರುವರಿ 2020, 19:07 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ.ಇದೇ 6ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಇದರ ಬೆನ್ನಿಗೇ, ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗತೊಡಗಿದೆ. ‘ಅರ್ಹ’ 10 ಶಾಸಕರಿಗೆ ಅಧಿಕಾರ ಸಿಗುವುದು ಖಾತ್ರಿಯಾಗಿದೆ. ಸೋತಿರುವ ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಹಾಗೂ ಸ್ಪರ್ಧೆ ಮಾಡದ ಶಂಕರ್‌ ಕೂಡ ಸಚಿವ ಸ್ಥಾನಕ್ಕೆ ಹಟ ಹಿಡಿದಿದ್ದಾರೆ.

ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಒತ್ತಿ ಹೇಳುತ್ತಿರುವುದು ಯಡಿಯೂರಪ್ಪ ಅವರ ತಲೆಬಿಸಿ ಹೆಚ್ಚಿಸಿದೆ.

‘ಅರ್ಹ 11 ಶಾಸಕರಲ್ಲಿ 10 ಮಂದಿಗೆ ಹಾಗೂ ಮೂಲ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡ
ಲಾಗುವುದು. ಸೋತವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆಯೇ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತಳಮಳ ಆರಂಭವಾಗಿದೆ. ವಲಸೆ ಬಂದವರಲ್ಲಿ ಮಹೇಶ್ ಕುಮಠಳ್ಳಿ ಬಿಟ್ಟು ಉಳಿದವರು ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲ ಬಿಜೆಪಿ ಶಾಸಕರಲ್ಲಿ ಉಮೇಶ್ ಕತ್ತಿ, ಸಿ.ಪಿ.ಯೋಗೇಶ್ವರ, ಅರವಿಂದ ಲಿಂಬಾವಳಿ ಅಥವಾ ಹಾಲಪ್ಪ ಆಚಾರ್ ಹೆಸರು ಜೋರಾಗಿ ಕೇಳಿಬರುತ್ತಿದೆ.

ಮೂಲ ಬಿಜೆಪಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ಕೆಲವರು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ, ಆ ಮೂಲಕವೂ ಒತ್ತಡ ತರುತ್ತಿದ್ದಾರೆ. ಶಾಸಕರಲ್ಲದ ಸಿ.ಪಿ.ಯೋಗೇಶ್ವರ ಹೆಸರು ಕೇಳಿ ಬಂದಿರುವುದು ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಗೆ ಅವಕಾಶ ನೀಡಿದ್ದು, ಮತ್ತೊಮ್ಮೆ ಆ ರೀತಿ ಮಾಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

‘ಶಾಸಕರಲ್ಲದವರಿಗೆ ಸಚಿವ ಸ್ಥಾನ ನೀಡುವ ಪ್ರಯತ್ನಕ್ಕೆ ಬಿಜೆಪಿಯೊಳಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸಕರಲ್ಲದವರಿಗೆ ಸಚಿವ ಸ್ಥಾನ ಕೊಟ್ಟರೆ ಅದನ್ನು ವಿರೋಧಿಸುವವರ ಅತೃಪ್ತಿ ತೀವ್ರಗೊಳ್ಳಬಹುದು. ಈ ಸಂಬಂಧ ಕೆಲವರು ಒಂದೆಡೆ ಸೇರಿ ಚರ್ಚೆ ನಡೆಸಿದ್ದಾರೆ. ಭಿನ್ನಮತಕ್ಕೆ ಅವಕಾಶ ಕೊಡದೆ ಸಚಿವ ಸ್ಥಾನ ನೀಡಬೇಕು’ ಎಂದು ಅವರು ಕೇಳಿರುವುದಾಗಿ ಮೂಲಗಳು ತಿಳಿಸಿವೆ.

ಬಸನಗೌಡ ಪಾಟೀಲ ಯತ್ನಾಳ, ಎಸ್.ಎ.ರಾಮದಾಸ್, ಕೆ.ಶಿವನಗೌಡ ನಾಯಕ, ರಾಜುಗೌಡ, ಜಿ.ಎಚ್.ತಿಪ್ಪಾರೆಡ್ಡಿ, ನೆಹರೂ ಓಲೇಕಾರ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಕರಾವಳಿ, ಮಲೆನಾಡು ಭಾಗದ ಶಾಸಕರು ತಮ್ಮ ಭಾಗಕ್ಕೆ ಅವಕಾಶ ನೀಡುವಂತೆ ಸತತವಾಗಿ ಒತ್ತಡ ಹಾಕುತ್ತಲೇ ಬಂದಿದ್ದು, ವಿ.ಸುನೀಲ್‌ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಅಂಗಾರ, ಆರಗ ಜ್ಞಾನೇಂದ್ರ ಹೆಸರು ಕೇಳಿಬಂದಿವೆ.

ಭೇಟಿ– ಒತ್ತಡ:‘ಮಹೇಶ್ ಕುಮಠಳ್ಳಿಗೆ ಸಚಿವ ಸ್ಥಾನ ನೀಡಬೇಕು, ಯಾವುದೇ ಕಾರಣಕ್ಕೂ ಕೈಬಿಡಬಾರದು’ ಎಂದು ಶಾಸಕ ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಭೇಟಿಮಾಡಿ ಒತ್ತಾಯಿಸಿದ್ದಾರೆ. ಜತೆಗೆ ತಮ್ಮನ್ನು ಉಪಮುಖ್ಯಮಂತ್ರಿ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ರಮೇಶ್ ಸಹೋದರ ಬಾಲಚಂದ್ರ ಮೂಲಕ ರಮೇಶ್ ಹಾಗೂ ಮಹೇಶ್ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ನಿರತರಾಗಿದ್ದಾರೆ.

ಸೋತವರ ಬೇಡಿಕೆ: ಚುನಾವಣೆಯಲ್ಲಿ ಸೋತಿರುವ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ‘ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಗೆದ್ದವರು ಮಾತ್ರವಲ್ಲ ಸೋತವರಿಗೂ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನೇ ಸಚಿವರನ್ನಾಗಿ ಮಾಡಿ, ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈಗ ವಿಧಾನ ಪರಿಷತ್ ಸದಸ್ಯರನ್ನಾಗಿಸಿ, ಆ ಸ್ಥಾನದಲ್ಲೇ ಉಳಿಸಿಕೊಳ್ಳಲಾಗುತ್ತಿದೆ. ಸೋತವರಿಗೆ ಅಧಿಕಾರ ನೀಡಿದ ಉದಾಹರಣೆ ನಮ್ಮ ಕಣ್ಣು ಮುಂದೆ ಇರುವಾಗ, ನಾವು ಸೋತಿದ್ದೇವೆ, ಅಧಿಕಾರ ನೀಡುವುದಿಲ್ಲ ಎಂದು ಹೇಳುವುದು ಯಾವ ನ್ಯಾಯ’ ಎಂದು ಮೈಸೂರಿನಲ್ಲಿ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎಂಟಿಬಿ ನಾಗರಾಜ್, ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ‘ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಗೆದ್ದವರಷ್ಟೇ ಪ್ರಾಮುಖ್ಯತೆಯನ್ನು ಸೋತವರಿಗೂ ನೀಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ’ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸದ ಆರ್.ಶಂಕರ್, ‘ಈಗಲೇ ಸಚಿವರನ್ನಾಗಿ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಸೋತವರಿಗೆ ಸ್ಥಾನವಿಲ್ಲ: ಯಡಿಯೂರಪ್ಪ

ಫೆ.6ರಂದು 13 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ತಿಳಿಸಿದರು.

‘ಅಂದು ಬೆಳಿಗ್ಗೆ 10.30 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಮಾಡಬೇಕೊ ಅಥವಾ ಪುನರ್ ರಚನೆ ಮಾಡಬೇಕೊ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದರು.

‘ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸೋತವರನ್ನು ಸಚಿವರನ್ನಾಗಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಆರ್.ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡಲಾಗುವುದು. ಅಲ್ಲಿಯವರೆಗೆ ಅವರೂ ಕಾಯಬೇಕಾಗುತ್ತದೆ’ ಎಂದರು. ‘ಬೆಳಗಾವಿಗೆ ಹೆಚ್ಚು ಅವಕಾಶ ನೀಡುವುದು ಅನಿವಾರ್ಯ’ ಎಂದರು.

***

ನಮಗೆ ಜೀವಾವಧಿ ಶಿಕ್ಷೆ ವಿಧಿಸಿಲ್ಲ. ಚುನಾವಣೆಗೆ ನಿಂತು ಬನ್ನಿ ಎಂದು ಕೋರ್ಟ್ ಹೇಳಿದೆ. ಅಪವಿತ್ರವಾಗಿದ್ದವರು ನಾಮಪತ್ರ ಸಲ್ಲಿಸುತ್ತಿದ್ದಂತೆ ಪವಿತ್ರವಾಗಿದ್ದೇವೆ

– ಎಚ್.ವಿಶ್ವನಾಥ್, ಮಾಜಿ ಶಾಸಕ

ಪಕ್ಷಕ್ಕೆ ಬಂದ 17 ಮಂದಿಯನ್ನೂ ಕೊಟ್ಟ ಮಾತಿನಂತೆ ಸಚಿವರನ್ನಾಗಿ ಮಾಡಬೇಕು. ಕಡ್ಡಿ ತುಂಡಾಗುವಂತೆ ನಿರ್ಧಾರ ಕೈಗೊಳ್ಳುವುದು ನಮಗೂ ಗೊತ್ತಿದೆ

– ಎಂಟಿಬಿ ನಾಗರಾಜ್, ಮಾಜಿ ಶಾಸಕ

ಮಂತ್ರಿ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಕೊಡಲು ಸಾಧ್ಯವಿದೆಯೇ, ಇಲ್ಲವೇ ಎಂಬುದನ್ನು ಮೊದಲೇ ನಿರ್ಧರಿಸಬೇಕಿತ್ತು

– ಮಹೇಶ್ ಕುಮಠಳ್ಳಿ, ಅಥಣಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT