ಮಂಗಳವಾರ, ಜೂಲೈ 7, 2020
27 °C
ಅನುಭವ ಮಂಟಪ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ | ಎಚ್ಚರ, ಕುದುರೆಗಳೂ ಹೊಲಕ್ಕಿಳಿದಿವೆ!

ಪ್ರಸಾದ್ ರಕ್ಷಿದಿ Updated:

ಅಕ್ಷರ ಗಾತ್ರ : | |

Prajavani

ಎಪಿಎಂಸಿ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಅನ್ನದಾತರ ಪಾಲಿಗೆ ವರವೋ–ಮರಣ ಶಾಸನವೋ ಎಂಬ ಚರ್ಚೆ ಬಿರುಸು ಪಡೆದಿದೆ. ಪರ ಹಾಗೂ ವಿರೋಧ ಇರುವವರು ತಮ್ಮದೇ ನೆಲೆಯಲ್ಲಿ ವಾದ ಮುಂದಿಡುತ್ತಿದ್ದಾರೆ. ಏತನ್ಮಧ್ಯೆ, ಕಾಯ್ದೆ ಜಾರಿಗೆ ಬಂದಿದೆ. ಹವಾಮಾನ, ಬೆಳೆಗೆ ತಗಲುವ ರೋಗ, ಮಾರುಕಟ್ಟೆ, ಮಧ್ಯವರ್ತಿ ಹಾವಳಿ, ಆರ್ಥಿಕ ಏರುಪೇರುಗಳೆಂಬ ಸವಾಲುಗಳನ್ನೇ ಎದುರು ಹಾಕಿಕೊಂಡು ಕೃಷಿಯಲ್ಲೇ ಖುಷಿಯನ್ನು ಕಾಣುತ್ತಾ ಬಂದಿರುವ ರೈತರು ಈಗ ಈಸಬೇಕು–ಇದ್ದು ಜೈಸಬೇಕು ಎಂಬ ನಿಶ್ಚಯದಲ್ಲೇ ಹೊಲ,ಗದ್ದೆಗಳಿಗೆ ಇಳಿಯಬೇಕಾಗಿದೆ. ಕಾಯ್ದೆ ತಿದ್ದುಪಡಿಯಿಂದಾಗುವ ಪರಿಣಾಮ–ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲುವ ಯತ್ನ ಇಲ್ಲಿದೆ. ರಾಜಕೀಯ ಪಕ್ಷಗಳ ನೇತಾರರು, ವಿಷಯ ತಜ್ಞರು, ರೈತರು ತಮ್ಮ ಅಭಿಪ್ರಾಯವನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಲಿದ್ದು, ಆರೋಗ್ಯಕರ ಚರ್ಚೆ ನಡೆಯಲಿದೆ. ಇದೇ ಸರಿ ಎಂದು ದಿಕ್ಕು ತೋರಿಸುವ ಕೈಮರ ಇದಲ್ಲ; ಸತ್ಯದ ಹುಡುಕಾಟಕ್ಕೆ ಬೆಳಕಿನ ವೇದಿಕೆ; ಇದು ನಿಮ್ಮ ‘ಪ್ರಜಾವಾಣಿ’ ಆರಂಭಿಸುತ್ತಿರುವ ‘ಅನುಭವ ಮಂಟಪ’

***

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ಈಗ ತಿದ್ದುಪಡಿಯನ್ನು ತರಲಾಗಿದೆ. ಸರ್ಕಾರದ ಪರಿಭಾಷೆಯಲ್ಲಿ ಹೇಳುವುದಾದರೆ ಸುಧಾರಣೆಯನ್ನು ತರಲಾಗಿದೆ. ನಿಯಂತ್ರಿತ ಮಾರುಕಟ್ಟೆಯ ಮೂಲಕ ರೈತನ ಬೆಳೆಗೆ ಸೂಕ್ತ ಬೆಲೆಯನ್ನು ದೊರಕಿಸಿ ಕೊಡುವುದು, ರೈತನನ್ನು ದಲ್ಲಾಳಿಗಳಿಂದ ರಕ್ಷಿಸುವುದು, ಸರ್ಕಾರಕ್ಕೆ ಬರಬೇಕಾದ ತೆರಿಗೆ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಎಪಿಎಂಸಿ ಹೊಣೆ. ಮಾರುಕಟ್ಟೆಗಳ ಅಭಿವೃದ್ಧಿ, ರೈತಭವನಗಳ ನಿರ್ಮಾಣ, ಮಾರುಕಟ್ಟೆಗಳ ಸಂಪರ್ಕ ಸಾಧಿಸುವ ರಸ್ತೆಗಳ ನಿರ್ಮಾಣ ಹೀಗೆ ಕೃಷಿವಲಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಗಳು ಎಪಿಎಂಸಿಯ ಕಾರ್ಯವ್ಯಾಪ್ತಿಯಲ್ಲಿವೆ.

ಎಪಿಎಂಸಿ ಕಾಯ್ದೆ ಜಾರಿಯಾಗಿ ದೇಶದ ಎಲ್ಲ ಕಡೆಗಳಲ್ಲಿ ಮಾರುಕಟ್ಟೆಗಳ ನಿರ್ಮಾಣವಾದವು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಂದು ಹೆಚ್ಚಿನ ತಾಲ್ಲೂಕುಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳಿವೆ. ಕಾಲ ಕಾಲಕ್ಕೆ ಚುನಾವಣೆಗಳು ನಡೆಯುತ್ತವೆ. ಮಾರುಕಟ್ಟೆ ಸಮಿತಿಗಳಿವೆ. ಕಾಯ್ದೆಯ ಪ್ರಕಾರ ರೈತರು, ವ್ಯಾಪಾರಿಗಳು ಯಾರೂ ಈ ಮಾರುಕಟ್ಟೆಗಳ ಹೊರಗೆ ವ್ಯಾಪಾರ ಮಾಡುವುದಕ್ಕೆ  ಅವಕಾಶವಿಲ್ಲ. ಇಂತಹ ವ್ಯವಸ್ಥೆ ಜಾರಿಗೆ ಬಂದು ದಶಕಗಳು ಕಳೆದ ಬಳಿಕ ಮತ್ತೆ ರೈತನಿಗೆ ಉತ್ತಮ ಬೆಲೆ ದೊರಕಿಸಿಕೊಡುವ  ಉದ್ದೇಶದಿಂದ ಆತನಿಗೆ ತನ್ನ ಕೃಷಿ ಉತ್ಪನ್ನಗಳನ್ನು ಕೃಷಿ ಮಾರುಕಟ್ಟೆಗಳ ಹೊರಗೂ ಮಾರುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ರೈತ ತನ್ನ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯಲು ಚೌಕಾಸಿಯ ಬಲ ಹೆಚ್ಚುವುದೆಂದು ಹೇಳಲಾಗಿದೆ.

ಇವೆಲ್ಲದರಿಂದ ಒಂದು ವಿಚಾರ ಸ್ಪಷ್ಟ. ಇಷ್ಟು ವರ್ಷಗಳ ಕಾಲ ನಡೆಸಿದ ನಿಯಂತ್ರಿತ ಮಾರುಕಟ್ಟೆಯ ಪ್ರಯೋಗ ರೈತನಿಗೆ ಯೋಗ್ಯ ಬೆಲೆ ಕೊಡಿಸಲು ಸಾಧ್ಯವಾಗಿಲ್ಲ. ಮತ್ತು ಇತರ ಉದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರಿಲ್ಲ. ವ್ಯಾಪಾರಿಗಳು ಎಪಿಎಂಸಿಯ ಕಣ್ಣು ತಪ್ಪಿಸುವ ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ರೈತರು ದಲ್ಲಾಳಿಗಳ ಹಿಡಿತದಲ್ಲಿ ನರಳಿದ್ದಾರೆ.

ಕೆಲವು ಕಡೆಗಳ ಎಪಿಎಂಸಿ ಸಮಿತಿಗಳಲ್ಲಿ ದಕ್ಷರೂ ಸೇವಾ ಮನೋಭಾವದವರೂ  ಇದ್ದಲ್ಲಿ ಮಾತ್ರ ರೈತರಿಗೆ ಕೆಲವು ಅನುಕೂಲಗಳಾದವು. ಒಂದು ವ್ಯವಸ್ಥೆಯಾಗಿ  ಈ ಸಮಿತಿಗಳು ರೈತರಲ್ಲಿ ಒಳ್ಳೆಯ ಭಾವನೆಯನ್ನೇನೂ ಮೂಡಿಸಲಿಲ್ಲ. ಆದ್ದರಿಂದ ಎಷ್ಟೋ ಕಡೆಗಳಲ್ಲಿ ರೈತರೂ ಎಪಿಎಂಸಿಯ ಹೊರಗೇ ವ್ಯವಹಾರ ನಡೆಸುತ್ತಾರೆ. ವಾಣಿಜ್ಯ ಬೆಳೆಗಳಲ್ಲಿ ಇದು ಎದ್ದು ಕಾಣುವಂತಿದೆ.

ಸರ್ಕಾರ ಈ ಸಮಿತಿಗಳನ್ನೇನೂ ಈಗ ರದ್ದು ಮಾಡುತ್ತಿಲ್ಲ. ಬದಲಿಗೆ ವಹಿವಾಟನ್ನು ರೈತನ ಆಯ್ಕೆಗೆ ಬಿಟ್ಟಿದೆ. ಆ ದೃಷ್ಟಿಯಿಂದ ರೈತ ಸ್ವತಂತ್ರ. ಆದರೆ ಇದು ಅರ್ಧ ಸತ್ಯ. ವ್ಯಾಪಾರಿಯೂ ದಲ್ಲಾಳಿಯೂ ಆ ಮಟ್ಟಿಗೆ ಸ್ವತಂತ್ರರೇ ಆಗಿದ್ದಾರೆ. ಅವರಿಗೂ ಎಪಿಎಂಸಿಯ ನಿಯಂತ್ರಣ ಮುಕ್ತಾಯಗೊಂಡಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಸಾಧ್ಯತೆಗಳನ್ನು ನಾವು ಗಮನಿಸಬೇಕು. ಮುಕ್ತ ವ್ಯಾಪಾರ ಎಂದರೇನು ಎನ್ನುವುದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯ ಜೊತೆಗೆ ಸರ್ಕಾರ ಕೃಷಿ ಭೂಮಿಯ ಖರೀದಿಗಿದ್ದ ನಿರ್ಬಂಧಗಳನ್ನೂ ತೆಗೆದುಹಾಕಿದೆ. ಇದರ ಮುಂದಿನ ಹೆಜ್ಜೆಯೇ ದೊಡ್ಡ ಪ್ರಮಾಣದ ಕಾರ್ಪೋರೇಟ್ ಕೃಷಿ. ಮತ್ತು ಈಗ ಎಪಿಎಂಸಿಯ ನಿರ್ಬಂಧವಿಲ್ಲದ ಕಾರ್ಪೋರೇಟ್ ವ್ಯಾಪಾರ. ಇದು ಆರಂಭದ ದಿನಗಳಲ್ಲಿ ಖಂಡಿತ ರೈತನಿಗೆ ಲಾಭದಾಯಕವಾಗಿ ಕಾಣಿಸುತ್ತದೆ. ನಿಯಂತ್ರಿತ ಮಾರುಕಟ್ಟೆಯೇ ರೈತನ ಶತ್ರು ಎಂಬ ಭಾವನೆ ಬರುವಂತೆ ಒಳ್ಳೆಯ ಬೆಲೆ ಬರುವ ಸಾಧ್ಯತೆ ಇದೆ. ಇದಕ್ಕೆ ಬಹಳ ಉತ್ತಮ ಉದಾಹರಣೆಯೆಂದರೆ ಕಾಫಿ ಬೆಳೆ. ಅಲ್ಲಿ ಭೂಮಿತಿ ಮೊದಲೇ ಇರಲಿಲ್ಲ. ಎಲ್ಲ ಕಡೆಗೂ ಮಾದರಿ ಎನ್ನಿಸುವಂತಹ ಉತ್ತಮ ನಿಯಂತ್ರಿತ ಮಾರುಕಟ್ಟೆ ಇತ್ತು. ಆದರೆ ನಿಯಂತ್ರಣ ಸಂಪೂರ್ಣ ತೆಗೆದ ನಂತರ ಕಾಫಿ ಮಂಡಳಿಯು ಕಾಫಿ ವಹಿವಾಟನ್ನೇ ಸಂಪೂರ್ಣವಾಗಿ ಬಿಟ್ಟುಕೊಡಬೇಕಾಯಿತು. ಮುಂದಿನ ದಿನಗಳಲ್ಲಿ ಎಪಿಎಂಸಿ ಕೂಡ ಅಪ್ರಸ್ತುತವೆನಿಸಿ ಅಂತ್ಯಕಾಣಲಿದೆ.

ಈಗ ದೊರೆತಿರುವ ಸ್ವಾತಂತ್ರ್ಯ ರೈತನಿಗೆ ಗುತ್ತಿಗೆ ಕೃಷಿಯೂ ಸೇರಿದಂತೆ ಹಲವು ಸಾಧ್ಯತೆಗಳನ್ನು ತೆರೆದಿಡುತ್ತದೆ. ಈಗಾಗಲೇ ಶುಂಠಿಯಂತಹ ಕೆಲವು ವಾಣಿಜ್ಯ ಬೆಳೆಗಳಲ್ಲಿ ಅದನ್ನು ಕಂಡಿದ್ದೇವೆ. ಜೊತೆಗೆ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿದೆ. ಇದು ಮೊದಲೂ ಇತ್ತು. ಸರ್ಕಾರ ಹೇಳುವ ಇನ್ನೊಂದು ವಿಷಯವೆಂದರೆ ಕೃಷಿ ಉತ್ಪನ್ನಗಳ ಬ್ರಾಂಡಿಂಗ್. ಇದು ಸಣ್ಣ ರೈತರ ಮಟ್ಟಿಗೆ ಕಷ್ಟದ ಕೆಲಸ.

ಈಗ ನಾವು ಏನೇ ಹೇಳಲಿ ಸರ್ಕಾರ ಹೆಜ್ಜೆ ಇಟ್ಟಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಜೊತೆ ಸ್ಪರ್ಧಿಸುವ ‘ಅವಕಾಶ’ವನ್ನು ರೈತರಿಗೆ ನೀಡಲಾಗಿದೆ. ಈಗ ರೈತರಿಗೆ ಆಯ್ಕೆಯೂ ಬೇರೆ ಇಲ್ಲ. ನಮಗಿರುವ ಹಲವು ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ರೈತರೂ ಇಂದು ವಿದ್ಯಾವಂತರಾಗಿದ್ದಾರೆ. ಆಧುನಿಕ ತಂತ್ರಜ್ಞಾನದ ಅರಿವೂ ಸಾಕಷ್ಟಿದೆ. ಅದನ್ನು ಉಪಯೋಗಿಸಲು ಕಲಿಯಬೇಕು.

ಕುದುರೆಗಳನ್ನು ಎತ್ತುಗಳ ಜೊತೆಯಲ್ಲಿ ಹೊಲಕ್ಕಿಳಿಸಲಾಗಿದೆ. ಈಗ ಜೊತೆಯಲ್ಲಿ ಬೇಸಾಯ ಮಾಡುವ ಸವಾಲು ನಮ್ಮದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು