ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿಗಳ ಹಾವಳಿ: ರಾಜ್ಯ ಸರ್ಕಾರದಿಂದ ಕಠಿಣ ಕ್ರಮ

Last Updated 10 ಏಪ್ರಿಲ್ 2020, 3:18 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ ಜಿಲ್ಲೆಯ ಅಂಕನಹಳ್ಳಿಗ್ರಾಮ ಪಂಚಾಯತ್ ಮುಸ್ಲಿಮರ ಪ್ರವೇಶ ನಿಷೇಧಿಸಿದೆ. ಯಾರಾದರೂ ಅವರೊಂದಿಗೆ ಬೆರೆತರೆ ₹500ರಿಂದ ₹1,000 ವರೆಗೆ ದಂಡ ವಿಧಿಸಲಾಗುವುದು ಎಂದು ವ್ಯಕ್ತಿಯೊಬ್ಬರು ತಮಟೆ ಬಾರಿಸಿ ಘೋಷಿಸುತ್ತಿರುವ ವಿಡಿಯೊವೊಂದು ಗುರುವಾರ ವೈರಲ್ ಆಗಿತ್ತು.ಆದಾಗ್ಯೂ, ಕೋವಿಡ್ -19 ಪಿಡುಗುಜತೆಗೆ ಆನ್‌ಲೈನ್‌ನಲ್ಲಿ ಹರಿದಾಡುವ ತಪ್ಪು ಮಾಹಿತಿ, ಸುಳ್ಳುಸುದ್ದಿಗಳ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರೂಪಿಸಿದ್ದು, ಈಸಮಿತಿ ವೈರಲ್ವಿಡಿಯೊಗಳಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಿದೆ.

ಗುರುವಾರ ವೈರಲ್ ಆಗಿದ್ದ ವಿಡಿಯೊ ಗ್ರಾಮ ಪಂಚಾಯತ್ ಸದಸ್ಯ ಮತ್ತು ಇತರ ಇಬ್ಬರು ವ್ಯಕ್ತಿಗಳು ಮಾಡಿದ ತುಂಟಾಟ ಆಗಿತ್ತು.ಅದರಲ್ಲಿ ಗ್ರಾಮ ಪಂಚಾಯತ್‌ನ ಪಾತ್ರವೇನಿಲ್ಲ ಎಂದು ತಪ್ಪು ಮಾಹಿತಿಗಳ ವಿರುದ್ಧ ಹೋರಾಡುವ ಸರ್ಕಾರದ ಸಮಿತಿಯ ಮುಖ್ಯಸ್ಥ, ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅಥೀಖ್ಟ್ವೀಟಿಸಿದ್ದಾರೆ.

ಇದು ಒಂದು ಉದಾಹರಣೆಯಷ್ಟೇ. ಕೋವಿಡ್ ಪಿಡುಗಿನ ಜತೆಗೆ ಜನರು ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದು ಸಮಿತಿ ಜನರಲ್ಲಿ ಮನವಿ ಮಾಡಿದೆ. ಈ ಸಮಿತಿಯು ಮಾರ್ಚ್ 21ರಿಂದ ಇಲ್ಲಿಯವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 33 ಸುಳ್ಳು ಸುದ್ದಿ ಅಥವಾ ತಪ್ಪಾದ ಮಾಹಿತಿಯ ಸತ್ಯಾಸತ್ಯತೆ ಏನು ಎಂಬುದನ್ನು ಬಹಿರಂಗಪಡಿಸಿದೆ. ಕೋವಿಡ್- 19 ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಬಾರದು, ಮೇ.20ರ ವರಗೆ ಕಾಲೇಜುಗಳು ಮುಚ್ಚಲಿವೆ ಮೊದಲಾದ ವೈರಲ್ ಸಂದೇಶ ಸುಳ್ಳು ಎಂಬುದನ್ನು ಸಮಿತಿ ದೃಢೀಕರಿಸಿತ್ತು .

ಆರ್‌ಡಿಪಿಆರ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಅಥೀಖ್ ಎಲ್ಲ ಮಾಹಿತಿಗಳ ಮೇಲ್ವಿಚಾರಣೆ ಹೊಣೆ ಹೊತ್ತಿದ್ದಾರೆ. ಇವರ ನೇತೃತ್ವದ ಸಮಿತಿಯಲ್ಲಿ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ (ಕಾರ್ಯದರ್ಶಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ), ಸಿ.ಶಿಖಾ (ಬಿಎಂಟಿಸಿ, ವ್ಯವಸ್ಥಾಪಕ ನಿರ್ದೇಶಕರು) ಇದ್ದಾರೆ. ನಮ್ಮ ಇಲಾಖೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಒಟ್ಟು ಗೂಡಿಸಿ ಈ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು 'ಪ್ರಜಾವಾಣಿ' ಜತೆ ಮಾತನಾಡಿದ ಅಥೀಖ್ ಹೇಳಿದ್ದಾರೆ.

ಕೋವಿಡ್-19 ಬಗ್ಗೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಸುಳ್ಳುಸುದ್ದಿ ಬಗ್ಗೆ ಅರಿಯಲು ನಾವು ಪುಟವೊಂದನ್ನು ಮೀಸಲಿಟ್ಟಿದ್ದೇನೆ. ರಾಮನಗರದಲ್ಲಿನ ಸುದ್ದಿಯಂತೆ ಎಲ್ಲಿಂದಾದರೂ ನಮಗೆ ಸುಳ್ಳು ಸುದ್ದಿ ಸಿಕ್ಕಿದರೆ ತಕ್ಷಣವೇ ನಾವು ಪೊಲೀಸ್ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇವೆ ಎಂದು ಅಥೀಖ್ ಹೇಳಿದ್ದಾರೆ.

ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸುವ ಸಂದೇಶಗಳು ಜಾಸ್ತಿಯಾಗುತ್ತಿರುವುದರಿಂದ ಪ್ರತಿದಿನ ಸರ್ಕಾರ ನೀಡುವ ಕೋವಿಡ್ -19 ಬುಲೆಟಿನ್‌ನಿಂದ ತಬ್ಲೀಗಿ ಜಮಾತ್ ಉಲ್ಲೇಖವನ್ನು ಕೈಬಿಡಲು ಸಮಿತಿ ತೀರ್ಮಾನಿಸಿದೆ.ತಬ್ಲೀಗಿ ಜಮಾತ್‌ನಲ್ಲಿ ಪಾಲ್ಗೊಂಡವರು ಎಂದು ಹೇಳುವ ಬದಲು ದೆಹಲಿಗೆ ಹೋಗಿ ಬಂದವರಿಗೆ ಸೋಂಕು ತಗುಲಿದೆ ಎಂಬ ವಾಕ್ಯವನ್ನು ಬುಲೆಟಿನ್‌ನಲ್ಲಿ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈವರೆಗೆ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್, ಟ್ವಿಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಮತ್ತು ಫೇಸ್‌ಬುಕ್ ಮೂಲಕ ಈ ಸಮಿತಿ 49.17 ಲಕ್ಷ ಜನರನ್ನು ತಲುಪಿದೆ. ಟಿಕ್‌ಟಾಕ್ ಬಳಕೆ ತುಂಬಾ ಸಹಕಾರಿಯಾಗಿದೆ.ಡ್ಯಾನ್ಸ್ ವಿಡಿಯೊಗಳೇ ಜಾಸ್ತಿ ಇರುವ ಟಿಕ್‌ಟಾಕ್‌ನ್ನು ಸರ್ಕಾರ ಬಳಸಿದ್ದು ಇದೇ ಮೊದಲು. ನಾವು ಮುಖ್ಯಮಂತ್ರಿಯವರ ವಿಡಿಯೊವನ್ನು ಇಲ್ಲಿ ಅಪ್‌ಲೋಡ್ ಮಾಡುತ್ತಿದ್ದೇವೆ.

ಕೋವಿಡ್-19ಗೆ ಸಂಬಂಧಿಸಿ ಮಾಹಿತಿಗಳನ್ನು ಟೆಲಿಗ್ರಾಂನಲ್ಲಿ ಅಪ್‌ಲೋಡ್ ಮಾಡಿ ಜನ ಪ್ರಶ್ನೆಗಳಿಗೆ ಉತ್ತರ ನೀಡುವ ಕಾರ್ಯವನ್ನು ಮಣಿವಣ್ಣನ್ ಮಾಡುತ್ತಿದ್ದಾರೆ.ಸಾಮಾಜಿಕ ಅಂತರ, ಹೋಮ್ ಕ್ವಾರಂಟೈನ್ ಮತ್ತು ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯನ್ನೂ ನಾವು ನಿಯೋಜಿಸಿದ್ದೇವೆ ಎಂದು ಅಥೀಖ್ ಹೇಳಿದ್ದಾರೆ.

ಇದೆಲ್ಲದರ ಜತೆಗೆ ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಸುಳ್ಳು ಸುದ್ದಿಗಳ ಪತ್ತೆಗಾಗಿ ಫ್ಯಾಕ್ಟ್‌ಚೆಕ್ ವೆಬ್‌ ಪುಟ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT