ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಗ್ರಾಮಕ್ಕೆ ಮಹಾರಾಷ್ಟ್ರ ದೋಣಿಯೇ ಗತಿ!

ಜುಗುಳ, ಮಂಗಾವತಿ, ಶಹಾಪುರ ಸ್ಥಳಾಂತರಕ್ಕೆ ಆಗ್ರಹ
Last Updated 8 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೃಷ್ಣಾ ನದಿಯ ಕೋಪಕ್ಕೆ ಮೊದಲು ಬಲಿಯಾಗುವ ಕಾಗವಾಡ ತಾಲ್ಲೂಕಿನ ಜುಗುಳ, ಮಂಗವಾತಿ ಹಾಗೂ ಶಹಾಪೂರ ಗ್ರಾಮಗಳ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸಿ, ಪುನರ್ಸವತಿ ಕಲ್ಪಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ, ಅಲ್ಲಿನ ಜನರಿಗೆ ಪ್ರತಿ ಮಳೆಗಾಲದಲ್ಲಿ ತೊಂದರೆ ಆಗುವುದು ತಪ್ಪಿಲ್ಲ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ರಾಜಾಪುರ ಜಲಾಶಯ (‌ಬ್ಯಾರೇಜ್‌) ಈ ಗ್ರಾಮಗಳಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಈ ಜಲಾಶಯದಿಂದಲೇ ಕೃಷ್ಣೆ ಕರ್ನಾಟಕವನ್ನು ಪ್ರವೇಶಿಸುತ್ತಾಳೆ.

2005ರಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ಈ ಗ್ರಾಮಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದವು. ಮೊದಲು ಈ ಮೂರು ಗ್ರಾಮಗಳನ್ನು ಸ್ಥಳಾಂತರಿಸಿ, ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗಿತ್ತು. ಈ ಕುರಿತು ಬಹಳಷ್ಟು ಆಗ್ರಹಗಳೂ ಕೇಳಿಬಂದಿದ್ದವು. ಆದರೆ, ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ. ಮುಳವಾಡ ಮತ್ತು ಕುಸನಾಳ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಲಾಯಿತು.

ಮತ್ತೆ ಮುನ್ನಲೆಗೆ: ಇದೀಗ, ಕೃಷ್ಣಾ ನದಿ ನೀರಿನಿಂದಾಗಿ ಈ ಮೂರೂ ಗ್ರಾಮಗಳು ಜಲಾವೃತವಾಗಿವೆ. ಜಮೀನುಗಳು ಮುಳುಗಿವೆ. ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಾಂತರ ಹಾಗೂ ಪುನರ್ವಸತಿ ಮಾಡಬೇಕು ಎನ್ನುವ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ.

ಜುಗುಳದಿಂದ ಒಂದು ಕಿ.ಮೀ. ನದಿ ದಾಟಿ ಆ ಕಡೆಯ ಕಿದ್ರಾಪುರ ಗ್ರಾಮಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಒಂದು ಮಷಿನ್‌ ಬೋಟ್‌ ಕೂಡ ಒದಗಿಸಿಲ್ಲ. ಕೊಲ್ಹಾಪುರ ಜಿಲ್ಲಾ ಪರಿಷತ್ತು ಒಂದು ದೋಣಿಯನ್ನು ನೀಡಿದೆ! ಅದರಲ್ಲಿಯೇ ಗ್ರಾಮಸ್ಥರು ಹೋಗಬೇಕಾದ ಸ್ಥಿತಿ. ಜನರಿಗೆ ಲೈಫ್‌ ಜಾಕೆಟ್‌ ಮೊದಲಾದ ಸುರಕ್ಷಾ ಸಾಮಗ್ರಿಗಳನ್ನೂ ತಾಲ್ಲೂಕು ಆಡಳಿತದಿಂದ ಒದಗಿಸಿಲ್ಲ. ನದಿ ನೀರು ದಾಟಲು ಅವರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಇದೆ.

ಸರ್ಕಾರ ಏನು ಮಾಡಿಲ್ಲ:

‘2005ರಲ್ಲಿ ಸಂಭವಿಸಿದ ನೆರೆ ಹಾವಳಿಯ ಅನುಭವದ ನಂತರ ಮಹಾರಾಷ್ಟ್ರವು ತನ್ನ ಗಡಿ ಗ್ರಾಮಗಳಲ್ಲಿ ಸೇತುವೆ ನಿರ್ಮಿಸಿದೆ. ರಸ್ತೆಗಳ ಎತ್ತರವನ್ನು ಹೆಚ್ಚಿಸಿದೆ. ಆದರೆ ಕರ್ನಾಟಕ ಸರ್ಕಾರ ಏನು ಮಾಡಿದೆ?’ ಎಂದು ಗ್ರಾಮಸ್ಥರು ಕೇಳುತ್ತಾರೆ. ‘ಇಲ್ಲಿಗೆ ಒಂದು ಯಾಂತ್ರಿಕ ದೋಣಿಯನ್ನೂ ಕೊಟ್ಟಿಲ್ಲ. 14 ವರ್ಷಗಳ ಹಿಂದೆ ಆಗಿನ ಜಿಲ್ಲಾಧಿಕಾರಿ ಶಾಲಿನಿ ರಜನೀಶ್‌ ಅವರು ಸ್ವತಃ ಇಲ್ಲಿ ಓಡಾಡಿದ್ದರು. ಅವರು ದೋಣಿ ಒದಗಿಸಿದ್ದರು. ಆ ದೋಣಿ ಹಾಳಾಗಿದೆ. ನಮ್ಮ ಸರ್ಕಾರವೇ ನೆರವಾಗಿಲ್ಲ. ಮಹಾರಾಷ್ಟ್ರದ ದೋಣಿಯಲ್ಲಿ ಓಡಾಡಬೇಕಾಗಿದೆ’ ಎನ್ನುತ್ತಾರೆ ಸ್ಥಳೀಯರು.

‘ಇದು ಗಂಭೀರ ಸಮಸ್ಯೆ. ಜಲಾಶಯದ ಪಕ್ಕದಲ್ಲೇ ಇದ್ದು, ತೀವ್ರ ಸಂಕಷ್ಟಕ್ಕೆ ಒಳಗಾಗುವ ಈ ಗ್ರಾಮಗಳ ಸ್ಥಳಾಂತರ ಹಾಗೂ ಪುನರ್ವಸತಿ, ಜನರ ರಕ್ಷಣೆ ಸರ್ಕಾರದ ಆದ್ಯತೆ ಆಗಬೇಕಿತ್ತು. ಆದರೆ, ಕಡೆಗಣಿಸಲಾಗಿದೆ. ಕಾಗವಾಡ ಶಾಸಕ ಶೀಮಂತ ಪಾಟೀಲ ಅನರ್ಹಗೊಂಡಿದ್ದಾರೆ. ಅಲ್ಲಿನ ಜನರ ಗೋಳು ಕೇಳುವವರು ಇಲ್ಲವಾಗಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

‘ಈ ಮೂರು ಗ್ರಾಮಗಳ ಸ್ಥಳಾಂತರ ಮತ್ತು ಪುನರ್ವಸತಿ ಬಗ್ಗೆ ಸಮಿತಿಯಿಂದ ವಿವರವಾದ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿದೆ. ಪ್ರಧಾನಿ, ರಾಜ್ಯಪಾಲರಿಗೂ ಕಳುಹಿಸಲಾಗುವುದು. ಹಿರಿಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT