ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್: ರಾಜ್ಯದಾದ್ಯಂತ ಇಂದು ಪರಿಸ್ಥಿತಿ ಹೇಗಿದೆ?

ಹುಬ್ಬಳ್ಳಿ, ಮಡಿಕೇರಿಯಲ್ಲಿ ಲಾಠಿಚಾರ್ಜ್‌
Last Updated 24 ಮಾರ್ಚ್ 2020, 6:51 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದು, ವಾಹನ ಸಂಚಾರ ವಿರಳವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಂಗಳವಾರ ಬೆಳಿಗ್ಗೆ ಜನ ಸಂಚಾರ ಕಡಿಮೆಯಾಗಿದೆ. ಕೆಲವೆಡೆ ಮಾತ್ರ ಜನರು ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಮಡಿಕೇರಿ–ಹುಬ್ಬಳ್ಳಿಯಲ್ಲಿ ಜನರು ಗುಂಪುಸೇರುವುದನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಹುಬ್ಬಳ್ಳಿ ನಗರದ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರು ತರಕಾರಿ ಖರೀದಿಸಲು ಮುಗಿಬಿದ್ದರು. ‘ಸಾರ್ವಜನಿಕರು ಗುಂಪುಗೂಡಿ ವ್ಯಾಪಾರ ನಡೆಸಬೇಡಿ, ವ್ಯಾಪಾರಸ್ಥರು ದೂರ ಕುಳಿತು ವ್ಯಾಪಾರ ಮಾಡಿ’ಎಂದು ಪೊಲೀಸ್ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಹೇಳುತ್ತಿದ್ದರೂ, ಅದನ್ನು ಲೆಕ್ಕಿಸದೆ ವ್ಯಾಪಾರದಲ್ಲಿ ತೊಡಗಿದ್ದರು.

ಬೆಂಗಳೂರಿನಲ್ಲಿ ನಾಳೆಯ ಯುಗಾದಿ ಹಬ್ಬಕ್ಕಾಗಿ ಬೇವು-ಬೆಲ್ಲ ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ಜನ ಮಾರುಕಟ್ಟೆಗೆ ಬಂದಿದ್ದಾರೆ‌. ಇಡೀ ನಗರದಲ್ಲಿ ಬಹುಪಾಲು ರಸ್ತೆಗಳಲ್ಲಿ ವಾಹನಗಳ ಓಡಾಟ ಬಂದ್ ಆಗಿದೆ. ಬಹುಪಾಲು ಜನ ಮನೆಯಲ್ಲೇ ಇದ್ದಾರೆ. ಯುಗಾದಿ ಹಬ್ಬ ಸರಳವಾಗಿ ಆಚರಣೆ ಮಾಡಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದರೂ ಕಲವು ಜನ ಮನೆಯಿಂದ ಹೊರಬಂದು ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

ದಿನಸಿ ಅಂಗಡಿಗಳು, ಹಣ್ಣು ಹಾಗೂ ತರಕಾರಿ ಅಂಗಡಿಗಳು ಸಣ್ಣ ಹೋಟೆಲ್‌ಗಳು ತೆರೆದಿವೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆ ಇದೆ.

ಶಿವಮೊಗ್ಗ, ರಾಮನಗರಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಬೆಳಿಗ್ಗೆ ತರಕಾರಿ ಖರೀದಿಸಲು ಜನ ಮುಗಿಬಿದ್ದಿರುವುದು ಕಂಡುಬಂತು.

ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಹೂವು ಖರೀದಿಸುವವರಿಲ್ಲದೆ ರಸ್ತೆ ಬದಿ ಸುರಿದು ಹೋದ ರೈತರು

ತುಮಕೂರಿನಲ್ಲಿ ತರಕಾರಿ ಸೇರಿದಂತೆ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಜನರು ಬೆಳಿಗ್ಗೆಯಿಂದಲೇ ಸೇರಿದ್ದಾರೆ. ಪೊಲೀಸರು ಹೆಚ್ಚು ಜನರು ಸೇರದಂತೆ ತಿಳಿವಳಿಕೆ ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಸ್ವಗ್ರಾಮಗಳತ್ತ ಬೈಕ್‌ಗಳಲ್ಲಿ ತೆರಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಮಂಗಳೂರಿನಲ್ಲಿ ಜನರನ್ನು ತಡೆದ ಪೊಲೀಸರು: ನಗರದಾದ್ಯಂತ ಬೆಳಿಗ್ಗೆಯಿಂದಲೇ ಜನರು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿದ್ದು, ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ವಾಹನಗಳಲ್ಲಿ ಮಾರ್ಕೆಟ್‌ನತ್ತ ಬರುತ್ತಿದ್ದ ಜನರನ್ನು ತಡೆದ ಪೊಲೀಸರು, ವಾಪಸ್ ಕಳುಹಿಸಿದರು. ಕೇವಲ ತರಕಾರಿ ಮಾತ್ರ ಸಿಗುತ್ತಿದ್ದು, ಹೂವು, ಇತರೆ ಸಾಮಗ್ರಿಗಳ ಅಂಗಡಿಗಳು ಬಂದ್ ಆಗಿವೆ. ಬೆಳಿಗ್ಗೆ ನಗರಕ್ಕೆ ಬಂದ ತರಕಾರಿ ಮಾರಾಟವಾದರೆ ಸಾಕು ಎನ್ನುವ ಧಾವಂತ ವ್ಯಾಪಾರಿಗಳದ್ದಾಗಿತ್ತು.

ಹುಬ್ಬಳ್ಳಿಯಲ್ಲಿ ಫಾಗಿಂಗ್: ಕೊರೊನಾ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಫಾಗಿಂಗ್ ವಿವಿಧ ಬಡಾವಣೆಗಳಲ್ಲಿ ಫಾಗಿಂಗ್ ಆರಂಭಿಸಿದೆ. ಕಮರಿಪೇಟೆ, ರಾಮಲಿಂಗೇಶ್ವರ ನಗರ, ಅಯೋಧ್ಯಾ ನಗರ, ಇಸ್ಲಾಂಪುರ, ರಜಾ ಟೌನ್ ಗುರುದೇವ ನಗರ್, ಜೋಶಿ ಫಾರ್ಮ್, ಮರಾಠ ಕಾಲೋನಿ, ಪಾಲಿಕೆಯ ಕೇಂದ್ರ ಕಚೇರಿ, ಮಂಜುನಾಥ ಕಾಲೊನಿ, ಮಿಚಿಗನ್ ಕಾಂಪೌಂಡ್, ಪವನ್ ನಗರ, ಗೋಪಾಳಪುರ, ಸದಾಶಿವ ನಗರ್, ಶ್ರೀರಾಮ್ ಕಾಲೊನಿ, ಶರಾವತಿ ನಗರ ಹಾಗೂ ಇತರೆಡೆಯಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ನಡೆಯುತ್ತಿದೆ.

ಹುಬ್ಬಳ್ಳಿ ಸರಾಫ್ ಗಟ್ಟಿಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು

ಕಲಬುರ್ಗಿಯಲ್ಲೂ ಫಾಗಿಂಗ್: ಕಲಬುರ್ಗಿಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್ ಮತ್ತು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಸುತ್ತಮುತ್ತ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಬೆಳಿಗ್ಗೆ ಡಿಸ್ ಇನ್ಫೆಕ್ಷನ್ ಔಷಧಿ ಸಿಂಪಡಣೆ ಕಾರ್ಯ ನಡೆಯಿತು.

ಅಡ್ಡಾಡುತ್ತಿದ್ದ ಇಬ್ಬರ ವಿರುದ್ಧ ಬಾಗಲಕೋಟೆಯಲ್ಲಿ ಪ್ರಕರಣ: ವಿದೇಶದಿಂದ ಬಂದು ಸ್ವಯಂ ನಿರ್ಬಂಧಕ್ಕೆ (ಹೋಂ ಕ್ವಾರಂಟೈನ್) ಒಳಪಡದೇ ಬಾಗಲಕೋಟೆ ನಗರದಲ್ಲಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಸೋಮವಾರ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಬ್ಬರ ಕೈ ಮೇಲೆ ಇದ್ದ ಮೊಹರು (ಸ್ಟಾಂಪಿಂಗ್) ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಲೆಕ್ಕಿಸದೇ ಅಡ್ಡಾಡುತ್ತಿದ್ದ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೇರೆಯವರಿಗೂ ಇದು ಎಚ್ಚರಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ಮೈಸೂರಿನ ರಸ್ತೆಯಲ್ಲಿ ಸಂಚರಿಸುವವರನ್ನು ವಿಚಾರಣೆಗೆ ಒಳಪಡಿಸಲಾಯಿತು

ಮೈಸೂರುನಗರದಲ್ಲಿ ದೇವರಾಜ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳು ತೆರೆದಿದ್ದು, ವ್ಯಾಪಾರ ವಹಿವಾಟು ನಡೆದಿವೆ. ದಿನಸಿ, ಹಾಲು ಮೊದಲಾದ ವ್ಯಾಪಾರ ನಡೆದಿದೆ‌. ಇದನ್ನು ಖರೀದಿಸಲು ಬೆಳಿಗ್ಗೆ ಜನರು ಮುಗಿಬಿದ್ದರು. ಇಲ್ಲೆಲ್ಲೂ ಅಂತರ ಕಾಯ್ದುಕೊಂಡಿಲ್ಲ. ಹತ್ತು ಗಂಟೆಯ ನಂತರ ಪೊಲೀಸರು ರಸ್ತೆಯಲ್ಲಿ ಸಂಚರಿಸುವವರ ಮೇಲೆ‌ ನಿಗಾ ಇಟ್ಟಿದ್ದು, ವಿಚಾರಣೆಗೆ ಒಳಪಡಿಸುತ್ತಿದ್ದಾರೆ.ಇಲ್ಲಿನ ಎಪಿಎಂಸಿಯಲ್ಲಿ ತರಕಾರಿಗಳ ಧಾರಣೆ ಮಂಗಳವಾರವೂ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT