ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಖೆಡ್ಡಾಕ್ಕೆ ಕೆಡವಿತೇ ಬಿಜೆಪಿ?

Last Updated 6 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರನ್ನು ಸೆಳೆಯುವ ಬಗ್ಗೆ ಕೊನೆಯ ಹಂತದವರೆಗೂ ಗುಟ್ಟು ಬಿಟ್ಟುಕೊಡದ ಬಿಜೆಪಿ, ಮೈತ್ರಿ ಸರ್ಕಾರವನ್ನು ಸದ್ದಿಲ್ಲದೇ ಖೆಡ್ಡಾಕ್ಕೆ ಕೆಡಹುವ ಕಾರ್ಯತಂತ್ರ ರೂಪಿಸಿ ಮೊದಲ ಹಂತದ ಯಶ ಸಾಧಿಸಿದಂತೆ ಕಾಣುತ್ತಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ಒಂದು ವರ್ಷದಲ್ಲಿ ನಾಲ್ಕು ಬಾರಿ ಪ್ರಯತ್ನಿಸಿ ಕೈಸುಟ್ಟುಕೊಂಡಿದ್ದ ಬಿಜೆಪಿ ಐದನೇ ಪ್ರಯತ್ನದಲ್ಲಿ ಎಚ್ಚರಿಕೆಯ ನಡೆ ಇಟ್ಟಿತ್ತು. ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ ಹಾಗೂ ಶಾಸಕ ಸಿ.ಎನ್. ಅಶ್ವತ್ಥನಾರಾಯಣ್‌ ಅವರನ್ನು ಮುಂದೆ ಬಿಟ್ಟು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆಯಲು ಈ ಹಿಂದೆ ನಡೆಸಿದ್ದ ಯತ್ನ ಫಲ ನೀಡಿರಲಿಲ್ಲ. ಆರಂಭದಲ್ಲೇ ಮಾಹಿತಿ ಸೋರಿಕೆಯಾಗಿದ್ದರಿಂದ ಮೈತ್ರಿ ಸರ್ಕಾರವೂ ಪ್ರತಿತಂತ್ರ ರೂಪಿಸಿ ಅಧಿಕಾರ ಉಳಿಸಿಕೊಂಡಿತ್ತು.

ಆದರೆ, ಈ ಬಾರಿ ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರಿಗಷ್ಟೇ ಮಾಹಿತಿ ಇತ್ತು. ಕೇಂದ್ರ ಬಜೆಟ್‌ ಮಂಡನೆಯ ಆಗುವವರೆಗೆ ಕಾರ್ಯಾಚರಣೆ ಸುಳಿವು ಹೊರಗೆ ಹೋಗದಂತೆ ಕೇಂದ್ರ ನಾಯಕರು ನೋಡಿಕೊಂಡಿದ್ದರು.

10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವುದು ಖಚಿತವಾಗುವವರೆಗೆ ಮೈತ್ರಿ ಸರ್ಕಾರಕ್ಕಾಗಲೀ ಅಥವಾ ತಮ್ಮದೇ ಪಕ್ಷದ ಮುಖಂಡರಿಗಾಗಲೀ ಈ ಬಗ್ಗೆ ಖಚಿತ ಸುಳಿವು ಲಭ್ಯವಾಗದಂತೆ ಎಚ್ಚರ ವಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರು ನಗರದ ಯು.ಬಿ.ಸಿಟಿಯಲ್ಲಿ ಶುಕ್ರವಾರ ರಾತ್ರಿ ಗುಪ್ತ ಸಭೆ ನಡೆಸಿ, ಸರ್ಕಾರ ಉರುಳಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದರೂ ಮೈತ್ರಿ ಸರ್ಕಾರಕ್ಕೆ ಈ ಬಗ್ಗೆ ಸುಳಿವು ಸಿಗದಂತೆ ನೋಡಿಕೊಂಡಿದ್ದರು. ಈ ಸಭೆಯಲ್ಲೂ ಬಿಜೆಪಿಯ ಪ್ರಮುಖ ಮುಖಂಡರು ಯಾರೂ ಇರಲಿಲ್ಲ.

ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಕೇಂದ್ರ ನಾಯಕರು ಶನಿವಾರ ಬೆಳಿಗ್ಗೆಯಷ್ಟೇ ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದರು. ಬಳಿಕ ಯು.ಬಿ.ಸಿಟಿಗೆ ತಮ್ಮ ಆಪ್ತ ಕಾರ್ಯದರ್ಶಿ ಹಾಗೂ ಸಮೀಪದ ಬಂಧು ಎನ್‌.ಆರ್‌.ಸಂತೋಷ್‌ ಅವರನ್ನು ಯಡಿಯೂರಪ್ಪ ಕಳುಹಿಸಿದ್ದರು. ರಾಜೀನಾಮೆ ನೀಡಿರುವ ಶಾಸಕರು ಸಂತೋಷ್‌ ನೇತೃತ್ವದಲ್ಲೇ ಎಚ್‌.ಎ.ಎಲ್‌ ವಿಮಾನನಿಲ್ದಾಣದ ಮೂಲಕ ನಿಗೂಢ ಸ್ಥಳಕ್ಕೆ ಪ್ರಯಾಣ ಬೆಳೆಸಿದರು.

ಬಿಜೆಪಿ ಮುಂದಿನ ನಡೆ ಏನು?

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಬಿಜೆಪಿ ನಾಯಕರ ಮೊದಲ ಆದ್ಯತೆ. ಈ ದಿಸೆಯಲ್ಲಿ ತಮ್ಮ ಪ್ರಯತ್ನ ಮುಂದುವರಿಸಲಿದ್ದಾರೆ.

ಮೈತ್ರಿಪಕ್ಷಗಳ ಶಾಸಕರು ನೀಡಿರುವ ರಾಜೀನಾಮೆಯನ್ನುಸಭಾಧ್ಯಕ್ಷರು ಅಂಗೀಕರಿಸದೇ ಇದ್ದರೆ ಬಿಜೆಪಿ ರಾಜಭವನದ ಮೆಟ್ಟಿಲು ತುಳಿಯುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿ, ವಿಶ್ವಾಸ ಮತ ಸಾಬೀತುಪಡಿಸಲು ಮುಖ್ಯಮಂತ್ರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಬಹುದು. ಸರ್ಕಾರ ಹಟಕ್ಕೆ ಕುಳಿತರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಕಾರಣವೊಡ್ಡಿ ತತ್ಕಾಲಕ್ಕೆ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು. ನಂತರದ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ, ಮಧ್ಯಂತರ ಚುನಾವಣೆ ಅಥವಾ ಸರ್ಕಾರ ರಚನೆ ಮುಂದಾಗುವುದು ಬಿಜೆಪಿ ಲೆಕ್ಕಾಚಾರವಾಗಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT