ಶುಕ್ರವಾರ, ಫೆಬ್ರವರಿ 21, 2020
18 °C
ಗ್ರಾಮೀಣ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನಗರದ ಸೌಕರ್ಯ ನಿರ್ಮಿಸುವ ಗುತ್ತಿಗೆ

ಒಳನೋಟ| ನೈಪುಣ್ಯ ಇಲ್ಲ; ಪಾರದರ್ಶಕತೆ ಲೆಕ್ಕಕ್ಕಿಲ್ಲ!

‍ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ), ಕೆಆರ್‌ಐಡಿಎಲ್‌ ಮೇಲೆ ವಿಪರೀತ ವ್ಯಾಮೋಹ. ಇದು ಎಷ್ಟರ ಮಟ್ಟಿ ಗೆಂದರೆ, ತನ್ನ ಎಂಜಿನಿಯರ್‌ಗಳ ‘ಗಜಪಡೆ’ಯನ್ನೇ ಪಕ್ಕಕ್ಕಿಟ್ಟು, ‘ಪಾರದರ್ಶಕತೆ’ಯನ್ನೇ ಒತ್ತೆಗಿಟ್ಟು ಕಾಮಗಾರಿಗಳನ್ನು ಈ ಸಂಸ್ಥೆಗೆ ಗುತ್ತಿಗೆ ನೀಡುವಷ್ಟು.

ಗ್ರಾಮಾಂತರ ಭಾಗದಲ್ಲಿ ಕಾಮಗಾರಿ ನಡೆಸಲು ಹುಟ್ಟುಹಾಕಲಾದ ಸಂಸ್ಥೆ ಕೆಆರ್‌ಐಡಿಎಲ್‌. ಅದಕ್ಕೆ ನಗರದ ಮೂಲಸೌಕರ್ಯ ಕಾಮಗಾರಿಯನ್ನು ಸ್ವತಃ ನಿರ್ವಹಿಸುವಷ್ಟು ತಾಂತ್ರಿಕ ನೈಪುಣ್ಯ ಇಲ್ಲ. ಈ ಅಂಶದ ಬಗ್ಗೆ ಜಾಣ ಮರೆವು ಪ್ರದರ್ಶಿಸುವ ಬಿಬಿಎಂಪಿ, ಪ್ರತಿವರ್ಷ ₹1 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ‘ಕಣ್ಣುಮುಚ್ಚಿ’ ಆ ಸಂಸ್ಥೆಗೆ ವಹಿಸುತ್ತಲೇ ಬಂದಿದೆ. ಕೆಆರ್‌ಐಡಿಎಲ್‌ ಬಳಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಷ್ಟು ಮಾನವ ಸಂಪನ್ಮೂಲ ಇದೆಯೋ ಇಲ್ಲವೋ ಎಂಬ ಅಂಶದ ಬಗ್ಗೆ ಪಾಲಿಕೆ ತಲೆ ಕೆಡಿಸಿಕೊಂಡೇ ಇಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ 14ನೇ ಹಣಕಾಸು ಆಯೋಗ ಹಾಗೂ ರಾಜ್ಯ ಹಣಕಾಸು ಆಯೋಗಗಳ ಅನುದಾನ, ಪಾಲಿಕೆ ಸದಸ್ಯರ ಅನುದಾನ, ಮೇಯರ್‌ ಹಾಗೂ ಉಪ ಮೇಯರ್‌ ಅವರ ವಿಶೇಷ ಅನುದಾನಗಳ ಹೆಚ್ಚಿನ ಕಾಮಗಾರಿಗಳು ನಡೆಯುವುದು ಕೆಆರ್‌ಐಡಿಎಲ್‌ ಮೂಲಕವೇ. 110 ಹಳ್ಳಿಗಳ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಆ ಸಂಸ್ಥೆಯ ಪಾಲಾಗಿವೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಂತಹ ಕಾಮಗಾರಿಗಳನ್ನೂ ಟೆಂಡರ್‌ ಕರೆದು ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ಬದಲು ಕಾರಣವಿಲ್ಲದೆಯೇ ಕೆಆರ್‌ಡಿಎಲ್‌ಗೆ ವಹಿಸಿದ ಉದಾಹರಣೆಗಳಿವೆ.

ನಾನಾ ನಾಟಕ: ಪಾರದರ್ಶಕತೆಯಿಂದ ನುಣುಚಿಕೊಳ್ಳಲು ಪಾಲಿಕೆಯಲ್ಲಿ ನಾನಾ ನಾಟಕಗಳು ನಡೆಯುತ್ತವೆ. ಪಾಲಿಕೆ ಬಜೆಟ್‌ ಫೆಬ್ರುವರಿ ತಿಂಗ ಳಲ್ಲೇ ಮಂಡನೆಯಾದರೂ ಅದಕ್ಕೆ ಸರ್ಕಾರದ ಅನುಮೋದನೆ ಸಿಗು ವಾಗ ಜೂನ್‌ ತಿಂಗಳಾಗುತ್ತದೆ. ಮತ್ತೆ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸಲು ಮೂರು– ನಾಲ್ಕು ತಿಂಗಳು ವ್ಯಯ ಮಾಡಲಾಗುತ್ತದೆ. ನಂತರ, ‘ಟೆಂಡರ್‌ ಕರೆದು ಕಾಮ ಗಾರಿ ಅನುಷ್ಠಾನಗೊಳಿಸಲು ಸಮ ಯಾವಕಾಶ ಇಲ್ಲ. ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಅನುಷ್ಠಾನ ಗೊಳಿಸದೆ ಹೋದರೆ ಅನುದಾನ ಹಿಂದಕ್ಕೆ ಹೋಗುತ್ತದೆ’ ಎಂಬ ನೆಪ ಹೇಳಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ಬಗ್ಗೆ ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇದು ಅನೂಚಾನವಾಗಿ ನಡೆದು ಕೊಂಡು ಬಂದಿದೆ.

ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ, ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿದ ಬಳಿಕ ಅದರ ನಿಲುವು ಸಂಪೂರ್ಣ ಬದಲಾಗಿದೆ. ಈಚೆಗೆ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ 14ನೇ ಹಣಕಾಸು ಆಯೋಗದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ನಿರ್ವಹಿಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.

ಪಾರದರ್ಶಕವಲ್ಲದ ಈ ನಡೆಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶ ದಿಂದ ಸರ್ಕಾರ ₹2 ಕೋಟಿ ಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ಅನುಷ್ಠಾನಗೊಳಿಸಬಾರದು ಎಂದು 2019ರ ಸೆಪ್ಟೆಂಬರ್‌ನಲ್ಲಿ ಒಂದು ಆದೇಶ ಮಾಡಿತು. ಸರ್ಕಾರ ಚಾಪೆ ಕೆಳಗೆ ತೂರಿದರೆ, ಬಿಬಿಎಂಪಿಯ ಮಹಾನುಭಾವರು ರಂಗೋಲಿ ಕೆಳಗೆ ತೂರುತ್ತಾರೆ. ಕಾಮಗಾರಿಗಳ ಅಂದಾಜು ಮೊತ್ತ ₹2 ಕೋಟಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ₹2 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಒಂದಕ್ಕಿಂತ ಹೆಚ್ಚು ಕಾಮಗಾರಿಗಳನ್ನಾಗಿ ವಿಭಜಿಸಲಾಗುತ್ತದೆ. ಉದಾಹರಣೆ ಒಂದು ಸಮುದಾಯಭವನ ನಿರ್ಮಿಸುವುದಾದರೆ, ಅದರ ಕಟ್ಟಡ ನಿರ್ಮಾಣ, ಪ್ರಾಂಗಣದ ಅಭಿವೃದ್ಧಿ, ಪ್ರವೇಶದ್ವಾರ ನಿರ್ಮಾಣ ಮತ್ತು ವಾಹನ ನಿಲುಗಡೆ ತಾಣದ ಅಭಿವೃದ್ಧಿಗೆ ಪ್ರತ್ಯೇಕವಾಗಿ ಅಂದಾಜು ಪಟ್ಟಿ ರಚಿಸಿ, ಅವೆಲ್ಲ ಬೇರೆ ಬೇರೆ ಕಾಮಗಾರಿಗಳು ಎಂದು ಬಿಂಬಿಸಿದರಾಯಿತು. ₹2 ಕೋಟಿಯ ಮಿತಿ ಬಿದ್ದು ಹೋಗುತ್ತದೆ.

ಕಾಮಗಾರಿ ವಿಭಜಿಸುವುದು ಒಂದು ತಂತ್ರವಾದರೆ, ಟೆಂಡರ್‌ನಲ್ಲಿ ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ಬಿಂಬಿಸಿ ಅದನ್ನು ಕೆಆರ್‌ಐಡಿಎಲ್ ಮೂಲಕ ನಿರ್ವಹಿಸುವುದು ಇನ್ನೊಂದು ತಂತ್ರ.

2018–19ರಲ್ಲಿ ಪಾಲಿಕೆ ₹1,670 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಯನ್ನು ನಿಗಮಕ್ಕೆ ವಹಿಸಿದೆ. ಇದಕ್ಕೆ ಶೇ 3ರಷ್ಟು ಸೇವಾ ಶುಲ್ಕ ಎಂದರೂ ₹50 ಕೋಟಿಗೂ ಹೆಚ್ಚು ಹಣ ಅನಾಮತ್ತಾಗಿ ಕೆಆರ್‌ಐಡಿಎಲ್ ತೆಕ್ಕೆಗೆ ಜಾರುತ್ತದೆ.

ಸ್ವತಃ ಕೆಆರ್‌ಐಡಿಎಲ್‌ ಕಾಮಗಾರಿ ಕೈಗೊಳ್ಳುವುದಿಲ್ಲ. ಉಪಗುತ್ತಿಗೆ ನೀಡುವ ಮೂಲಕವೇ ಅದು ಕಾಮಗಾರಿ ಮಾಡಿಸುತ್ತದೆ. ಬೇರೆಯವರಿಂದ ಕೆಲಸ ಮಾಡಿಸುವ ಬದಲು ಆ ಕೆಲಸವನ್ನು 15 ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ 400 ಕ್ಕೂ ಅಧಿಕ ಎಂಜಿನಿಯರ್‌ಗಳನ್ನು ಹೊಂದಿರುವ ಪಾಲಿಕೆಗೆ ನೇರವಾಗಿ ಅನುಷ್ಠಾನಗೊಳಿಸುವುದಕ್ಕೆ ಏನು ಅಡ್ಡಿ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

‘ಯಾವ ಗುತ್ತಿಗೆದಾರರೂ ಪಾಲ್ಗೊ ಳ್ಳಲು ಸಾಧ್ಯವಾಗದಂತೆ ಟೆಂಡರ್‌ ಷರತ್ತುಗಳನ್ನು ವಿಧಿಸಲಾಗುತ್ತದೆ. ಎರಡು ಬಾರಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಭಾಗವಹಿಸಿಲ್ಲ ಎಂಬ ಕಾರಣ ತೋರಿಸಿ ಆ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗುತ್ತದೆ’ ಎಂದು ಗುತ್ತಿಗೆದಾರರೊಬ್ಬರು ಮಾಹಿತಿ ನೀಡುತ್ತಾರೆ.

ಗುಣಮಟ್ಟ ಖಾತರಿ ಇಲ್ಲ

ಟೆಂಡರ್‌ ಕರೆದು ಗುತ್ತಿಗೆ ನೀಡಿದಾಗ ಕಾಮಗಾರಿ ಮುಗಿದ ಮೇಲೂ ಎರಡು ವರ್ಷ ನಿರ್ವಹಣೆ ಮಾಡುವ ಹೊಣೆ ಗುತ್ತಿಗೆದಾರರ ಮೇಲಿರುತ್ತದೆ. ಕೆಆರ್‌ಐಡಿಎಲ್‌ ಮೂಲಕ ಕಾರ್ಯ ನಿರ್ವಹಿಸುವ ಗುತ್ತಿಗೆದಾರರಿಗೆ ಈ ನಿಯಮವೂ ಅನ್ವಯಿಸದು. ಕೆಆರ್‌ಐಡಿಎಲ್‌ ಸರ್ಕಾರಿ ಸಂಸ್ಥೆ ಆಗಿರುವುದರಿಂದ ಕಾಮಗಾರಿಗಳು ಕಳಪೆ ಎಂಬ ದೂರುಗಳು ಬಂದರೂ ಆಯುಕ್ತರ ವಿಶೇಷ ತಾಂತ್ರಿಕ ಕೋಶದಿಂದ (ಟಿವಿಸಿಸಿ) ತನಿಖೆ ಎದುರಿಸಬೇಕಿಲ್ಲ. ಹಾಗಾಗಿ ಗುಣಮಟ್ಟದ ಬಗ್ಗೆ ಇಲ್ಲಿ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

‘ಕೆಆರ್‌ಐಡಿಎಲ್‌ನಲ್ಲಿ ಬಿಬಿಎಂಪಿ ಕಾಮಗಾರಿಗಳ ಮೇಲೆ ನಿಗಾ ಇಡಲು ಅಗತ್ಯವಿರುವಷ್ಟು ಎಂಜಿನಿಯರ್‌ಗಳು ಇಲ್ಲ. ಅವರು ಯಾರೂ ಕಾಮಗಾರಿ ವೇಳೆ ಪರಿಶೀಲನೆ ನಡೆಸುವುದೇ ಇಲ್ಲ. ಅವರು ಬರುವುದು ಹಣ ಬಿಡುಗಡೆ ಮಾಡುವಾಗ ತಮ್ಮ ಪಾಲನ್ನು ಪಡೆಯಲು ಮಾತ್ರ’ ಎಂದು ಪಾಲಿಕೆ ಸದಸ್ಯರೊಬ್ಬರು ದೂರುತ್ತಾರೆ. ಈ ಕುರಿತು ಪ್ರತಿಕ್ರಿಯಿಸುವ ಕೆಆರ್‌ಐಡಿಎಲ್‌ ಅಧಿಕಾರಿಯೊಬ್ಬರು, ‘ನಮ್ಮಲ್ಲಿ ಎಂಜಿನಿಯರ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ ನಿಜ. ಆದರೆ, ಕಾಮಗಾರಿ ನಿರ್ವಹಣೆಗೆ ನಾವು ಬಿಬಿಎಂಪಿ ನೆರವು ಪಡೆಯುತ್ತೇವೆ’ ಎಂದು ಹೇಳುತ್ತಾರೆ. ‘ಕಾಮಗಾರಿಗಳನ್ನು ಟೆಂಡರ್‌ ಕರೆದು ಗುತ್ತಿಗೆ ನೀಡಿದರೆ, ಅದರ ಗುಣಮಟ್ಟ ಹೆಚ್ಚು. ಅವುಗಳ ಗುಣಮಟ್ಟ ಕಳಪೆಯಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಅವಕಾಶ ಇರುತ್ತದೆ. ಆದರೆ, ಕೆಆರ್‌ಐಡಿಎಲ್‌ ಮೂಲಕ ಗುತ್ತಿಗೆ ಪಡೆಯುವಾಗ ಆ ಭಯ ಅವರಲ್ಲಿ ಇರುವುದಿಲ್ಲ’ ಎಂದು ಎಂಜಿನಿಯರ್‌ ಒಬ್ಬರು ವಿವರಿಸುತ್ತಾರೆ.

ಅಂಕಿ ಅಂಶ

2013–14

2,892 – ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಯಿತು

₹649.49 ಕೋಟಿ – ಬಿಬಿಎಂಪಿ ವಹಿಸಿದ್ದ ಕಾಮಗಾರಿಗಳ ಅಂದಾಜು ಮೊತ್ತ

499.72 ಕೋಟಿ – ಕೆಆರ್‌ಐಡಿಎಲ್ ಪೂರ್ಣಗೊಳಿಸಿದ ಕಾಮಗಾರಿಗಳ ಮೊತ್ತ

2014–15

3098 – ಪಾಲಿಕೆ ಕೆಆರ್‌ಐಡಿಎಲ್‌ಗೆ ವಹಿಸಿದ ಕಾಮಗಾರಿಗಳು

₹1208.47 ಕೋಟಿ – ಈ ಕಾಮಗಾರಿಗಳ ಅಂದಾಜು ಮೊತ್ತ

2,634 – ಪೂರ್ಣಗೊಂಡ ಕಾಮಗಾರಿಗಳು

₹920.28 ಕೋಟಿ – ಕೆಆರ್‌ಐಡಿಎಲ್ ಪೂರ್ಣಗೊಳಿಸಿದ ಕಾಮಗಾರಿಗಳ ಮೊತ್ತ

2015–16


2,107 – ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಯಿತು

₹737.04 ಕೋಟಿ – ಬಿಬಿಎಂಪಿ ವಹಿಸಿದ್ದ ಕಾಮಗಾರಿಗಳ ಅಂದಾಜು ಮೊತ್ತ

1,623 – ಪೂರ್ಣಗೊಂಡ ಕಾಮಗಾರಿಗಳು

₹790.01 ಕೋಟಿ– ಕೆಆರ್‌ಐಡಿಎಲ್ ಪೂರ್ಣಗೊಳಿಸಿದ ಕಾಮಗಾರಿಗಳ ಮೊತ್ತ

2016–17


1,642– ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಯಿತು

₹1,064.50 ಕೋಟಿ – ಬಿಬಿಎಂಪಿ ವಹಿಸಿದ್ದ ಕಾಮಗಾರಿಗಳ ಅಂದಾಜು ಮೊತ್ತ

1,550 – ಪೂರ್ಣಗೊಂಡ ಕಾಮಗಾರಿಗಳು

₹913.44 ಕೋಟಿ – ಕೆಆರ್‌ಐಡಿಎಲ್ ಪೂರ್ಣಗೊಳಿಸಿದ ಕಾಮಗಾರಿಗಳ ಮೊತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು