ಗುರುವಾರ , ಜೂಲೈ 2, 2020
23 °C
ಮನೆಯಲ್ಲಿ ಸೋಂಕು – ವಿದ್ಯಾರ್ಥಿಗಳ ಪರೀಕ್ಷೆಗೆ ವಿನಾಯಿತಿ

ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆ: ಶೇ 97.93 ಹಾಜರಾತಿ, ಮೂವರು ಡಿಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆ ಸೋಮವಾರ ನಡೆದಿದ್ದು, ಶೇ 97.93ರಷ್ಟು ಹಾಜರಾತಿ ದಾಖಲಾಗಿದೆ. ಪರೀಕ್ಷೆ ಅಕ್ರಮದಲ್ಲಿ ತೊಡಗಿದ್ದ ಮೂವರನ್ನು ಡಿಬಾರ್ ಮಾಡಲಾಗಿದೆ.

‘ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಪರೀಕ್ಷೆಗಳಿಗೆ ನೋಂದಾಯಿತ 7,91,102 ವಿದ್ಯಾರ್ಥಿಗಳ (ವಿಜ್ಞಾನ-7,90,681, ರಾಜ್ಯಶಾಸ್ತ್ರ-419, ಸಂಗೀತ- 02) ಪೈಕಿ 7,74,729 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ಶೇ 98.69 ಹಾಜರಾತಿ ಇತ್ತು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ಪರೀಕ್ಷೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘7,45,033 ರೆಗ್ಯುಲರ್ ವಿದ್ಯಾರ್ಥಿಗಳು ಹಾಗೂ 20,976 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಧಾರವಾಡದ ಇಬ್ಬರು ಹಾಗೂ ರಾಯಚೂರಿನ ಒಬ್ಬರು ಡಿಬಾರ್‌ ಆಗಿದ್ದಾರೆ’ ಎಂದರು.

‘ಹೋಂ ಕ್ವಾರಂಟೈನ್‌ನಲ್ಲಿ ಹಾಗೂ ಕೋವಿಡ್ ಪಾಸಿಟಿವ್‌ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯಿತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

‘ಹಾಸನ ಜಿಲ್ಲೆಯ ಅರಸೀಕೆರೆಯ ಸೇಂಟ್ ಮೆರಿಸ್ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಪೋಷಕರು ಭಾನುವಾರ  ಕೋವಿಡ್ ಸೋಂಕಿಗೆ ಒಳಗಾದ ಕಾರಣ ಅವರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ಈ ಹಿಂದಿನ ಪರೀಕ್ಷೆಗಳಲ್ಲಿ ಅವರ ಜತೆಯಲ್ಲಿ ಪರೀಕ್ಷೆ ಬರೆದಿದ್ದ ಇತರ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವಾತಾವರಣ ಕಲ್ಪಿಸಲಾಗಿದೆ. ಬಾಗಲಕೋಟೆ ನವನಗರದ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯಾಗಿದ್ದ ಶಿಕ್ಷಕಿಯೊಬ್ಬರಿಗೆ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಶಿಕ್ಷಕಿ ಸೇರಿದಂತೆ ಪರೀಕ್ಷೆಗೆ ನಿಯುಕ್ತರಾಗಿದ್ದ ಎಲ್ಲ ಪರೀಕ್ಷಾ ಸಿಬ್ಬಂದಿಯನ್ನು ಪರೀಕ್ಷಾ ಕೆಲಸದಿಂದ ವಿಮುಕ್ತಿಗೊಳಿಸಿ ಇಡೀ ಕೇಂದ್ರಕ್ಕೆ ಬೇರೆ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಸಚಿವರು ವಿವರಿಸಿದರು.

‘ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವಾತಾವರಣವನ್ನು ಕಲ್ಪಿಸಿದ್ದು, ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು’ ಎಂದು ಕೋರಿಕೊಂಡರು.

ಜಿಲ್ಲಾಡಳಿತಗಳ ಬಗ್ಗೆ ಮೆಚ್ಚುಗೆ
‘ಪರೀಕ್ಷೆ ಸಿದ್ಧತೆ ಕುರಿತಂತೆ ನಾನು ಎಲ್ಲ ಜಿಲ್ಲಾಡಳಿತಗಳೊಂದಿಗೆ ಈ ಸಂಬಂಧದಲ್ಲಿ ಸಂಪರ್ಕದಲ್ಲಿದ್ದೇನೆ. ಹಲವಾರು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇನೆ. ಕೊರೊನಾ ಮೊದಲು ಮತ್ತು ನಂತರದ ಸಾಮಾಜಿಕ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಕುರಿತಂತೆ ಜಿಲ್ಲಾಡಳಿತಗಳು ಕೈಗೊಂಡ ಕ್ರಮಗಳು, ವಿದ್ಯಾರ್ಥಿಗಳ ಪ್ರತಿಸ್ಪಂದನೆ ಇಡೀ ದೇಶಕ್ಕೇ ಮಾದರಿಯಾಗಿದೆ’ ಎಂದು ಸಚಿವರು ತಿಳಿಸಿದರು.

ಪೋಷಕರ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು
* ಶಿರಸಿ ತಾಲ್ಲೂಕಿನ ದೇವನಹಳ್ಳಿಯಲ್ಲಿ ವಿದ್ಯಾರ್ಥಿಯೊಬ್ಬನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆತ ಶಿರಸಿಯ ಮಾರಿಕಾಂಬ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ.

* ಕಾರವಾರ ನಗರದ ಹಿಂದೂ ಪ್ರೌಢಶಾಲೆ ವಿದ್ಯಾರ್ಥಿ ನಿತಿನ್ ಕಾರವಾರ ತಂದೆ ಇತ್ತೀಚಿಗೆ ನಿಧನರಾಗಿದ್ದು, ಸೋಮವಾರ ತಂದೆಯವರ ಉತ್ತರಕ್ರಿಯೆ ಇತ್ತು. ಅದನ್ನು ಬೇಗ ಮುಗಿಸಿ ಪರೀಕ್ಷೆ ಬರೆದ ವಿದ್ಯಾರ್ಥಿ.

* ಶಿರಸಿ ತಾಲ್ಲೂಕಿನ ದನಗನಹಳ್ಳಿಯ ವಿದ್ಯಾರ್ಥಿನಿಯ ಪೋಷಕರು ಕೋವಿಡ್  ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಪರೀಕ್ಷೆಗೆ ಕಳುಹಿಸಲು ಹಿಂದೇಟು ಹಾಕಿದ್ದರು. ‍ಮನವೊಲಿಸಿ ವಿಜ್ಞಾನ ಪರೀಕ್ಷೆ ಬರೆಸಿದ್ದು, ಎರಡು ಪರೀಕ್ಷೆಗಳು ತಪ್ಪಿ ಹೋದುದಕ್ಕೆ ಈಗ ಪಶ್ಚಾತ್ತಾಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು