ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಮಂಗಳೂರಿಗೆ ಬಂದಿದ್ದ ಕಾಶ್ಮೀರಿ ವ್ಯಕ್ತಿ ಸೇರಿ ಇಬ್ಬರು ಶಂಕಿತರು ಪೊಲೀಸರ ವಶಕ್ಕೆ

ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಸೋಗಿನಲ್ಲಿ ನಗರ ಪ್ರವೇಶಿಸಿದ್ದರು
Last Updated 24 ಆಗಸ್ಟ್ 2019, 16:53 IST
ಅಕ್ಷರ ಗಾತ್ರ

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಒ) ನಿರ್ದೇಶಕರ ಸೋಗಿನಲ್ಲಿ ನಗರ ಪ್ರವೇಶಿಸಿದ್ದ ಕಾಶ್ಮೀರಿ ವ್ಯಕ್ತಿ ಸೇರಿದಂತೆ ಇಬ್ಬರು ಶಂಕಿತರನ್ನು ಇಲ್ಲಿನ ಬರ್ಕೆ ಠಾಣೆ ಪೊಲೀಸರು ಆಗಸ್ಟ್‌ 17ರಂದು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ಡಬ್ಲ್ಯುಎಚ್‌ಒ ಮತ್ತು ಭಾರತ ಸರ್ಕಾರದ ನಾಮಫಲಕ ಅಳವಡಿಸಿಕೊಂಡಿರುವ ಕಾರೊಂದರಲ್ಲಿ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳು ನಗರದಲ್ಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಶಂಕಿತರ ಪತ್ತೆಗೆ ಆ.17ರಂದು ನಗರದಾದ್ಯಂತ ಶೋಧ ಆರಂಭಿಸಲಾಗಿತ್ತು. ಆ ದಿನ ಸಂಜೆ ಬಳ್ಳಾಲ್‌ಭಾಗ್‌ ಬಳಿ ಕಾರನ್ನು ಪತ್ತೆಮಾಡಿದ ಬರ್ಕೆ ಠಾಣೆ ಪೊಲೀಸರು ಇಬ್ಬರನ್ನೂ ಸರೆ ಹಿಡಿದಿದ್ದಾರೆ’ ಎಂದರು.

ಪ್ರಮುಖ ಆರೋಪಿಯು ಡಾ.ಬಸಿತ್‌ ಷಾ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದ. ಆದರೆ, ಆತ ಕಾಶ್ಮೀರದ ಗಂದರ್ಬಾಲ್‌ ಜಿಲ್ಲೆಯ ವಕುರ ತಾಲ್ಲೂಕಿನ ಬಟ್ವಿನ್‌–ಎ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜೀಪುರ ನಿವಾಸಿ ಶೌಕತ್‌ ಅಹಮ್ಮದ್ ಲೋನ್‌ ಎಂಬುದು ವಿಚಾರಣೆ ಬಳಿಕ ಖಳಚಿತವಾಗಿದೆ. ಆತನ ಜೊತೆಗಿದ್ದ ಚಾಲಕ ಪಂಜಾಬ್‌ ರಾಜ್ಯದ ಮೊಹಾಲಿಯ ಎಸ್‌ಎಎಸ್‌ ನಗರದ ನಿವಾಸಿ ಬಲ್ಜೀಂದರ್‌ ಸಿಂಗ್‌ ಎಂಬ ಮಾಹಿತಿ ಲಭ್ಯವಾಗಿದೆ ಎಂದು ವಿವರ ನೀಡಿದರು.

ವಂಚನೆಯ ಜಾಲ?: ಪ್ರಮುಖ ಆರೋಪಿ ಶೌಕತ್‌ ಅಹಮ್ಮದ್ ಲೋನ್‌ ತಾನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಎಂಬುದಾಗಿ ಪರಿಚಯಿಸಿಕೊಂಡು ಯುವಕ, ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಹಲವರಿಗೆ ₹ 5 ಲಕ್ಷದಿಂದ ₹ 20 ಲಕ್ಷದವರೆಗೂ ಈತ ವಂಚಿಸಿದ್ದಾನೆ ಎಂದರು.

ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ವಿವಿಧ ಹೆಸರುಗಳಲ್ಲಿ ಖಾತೆ ಹೊಂದಿರುವ ಈತ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ವಂಚಿಸಿ, ಹಲವರನ್ನು ಶೋಷಿಸಿದ್ದಾನೆ. ಈ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಪಂಜಾಬ್‌, ತೆಲಂಗಾಣ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಗೋವಾ ಮತ್ತು ಕರ್ನಾಟಕದಲ್ಲಿ ಮಹಿಳೆಯರಿಗೆ ವಂಚಿಸಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದರು.

ಸೂಕ್ಷ್ಮ ಸ್ಥಳಗಳಲ್ಲಿ ಓಡಾಟ:

ಆರೋಪಿಗಳು ದೇಶದ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಸುತ್ತಾಡಿದ್ದಾರೆ. ಹಲವು ಕಡೆಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವುದು ಮತ್ತು ಓಡಾಟ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಆ.16ರಂದು ಮಂಗಳೂರಿಗೆ ಬಂದಿದ್ದ ಇಬ್ಬರು, ಇಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲೂ ಓಡಾಡಿದ್ದರು. ಈ ಕುರಿತು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ ಎಂದರು.

ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಮಾಹಿತಿ

ಕೆಲವು ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಇಬ್ಬರನ್ನು ಬಂಧಿಸಿರುವ ಕುರಿತು ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ತನಿಖೆಗೆ ಪೂರಕವಾದ ನೆರವನ್ನು ಆ ಸಂಸ್ಥೆಗಳಿಂದಲೂ ಪಡೆಯಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಹರ್ಷ ತಿಳಿಸಿದರು.

ಆರೋಪಿಗಳು ಯಾವುದಾದರೂ ಸಂಘಟನೆಗಳ ಜೊತೆ ನಂಟು ಹೊಂದಿದ್ದಾರೆಯೇ? ಯಾವ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಬಂದಿದ್ದರು? ಸೂಕ್ಷ್ಮ ಪ್ರದೇಶಗಳಲ್ಲಿ ಏಕೆ ಓಡಾಡಿದ್ದರು? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಲು ತನಿಖೆ ಮುಂದುವರಿದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT