ಭಾನುವಾರ, ಜನವರಿ 17, 2021
28 °C
ಜಿಕೆವಿಕೆಯಲ್ಲಿ 15ರಿಂದ ಕೃಷಿಹಬ್ಬ, ಹೊಸ ತಳಿಗಳ ಪರಿಚಯ, ಕೃಷಿ ವಸ್ತು ಪ್ರದರ್ಶನ, ತಜ್ಞರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ

ಹೊಸ ತಂತ್ರಜ್ಞಾನಗಳನ್ನು ಹೊತ್ತುತಂದಿದೆ ಕೃಷಿಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಸುಧಾರಿತ ಕೃಷಿ ಪದ್ಧತಿಗಳ ಪ್ರಾತ್ಯಕ್ಷಿಕೆ, ತಜ್ಞರೊಂದಿಗೆ ಚರ್ಚೆ, ಕೃಷಿ ಸಲಕರಣೆ ಮತ್ತು ಯಂತ್ರೋಪಕರಣಗಳ ಪ್ರದರ್ಶನವಿರುವ ಹಾಗೂ ವ್ಯವಸಾಯದ ಶಿಕ್ಷಣಾನುಭವ ಹಂಚಿಕೊಳ್ಳಲು ಬಯಲು ವೇದಿಕೆಯಾಗಿರುವ ‘ಕೃಷಿಮೇಳ’ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರದಿಂದ (ನ.15) ನಾಲ್ಕು ದಿನಗಳವರೆಗೆ ನಡೆಯಲಿದೆ. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮೇಳದ ಮಾಹಿತಿ ನೀಡಿದರು.

ಕೃಷಿ ವಿ.ವಿ ಆಯೋಜಿಸಿರುವ ಈ ಮೇಳಕ್ಕೆ ರಾಜ್ಯ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಾಥ್‌ ನೀಡಿವೆ. 

ಕೃಷಿ ವಸ್ತು ಪ್ರದರ್ಶನ: ಈ ಬಾರಿಯ ಮೇಳದಲ್ಲಿ ಸುಮಾರು 650 ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸ್ವ–ಸಹಾಯ ಸಂಘಗಳು, ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ರೈತ ಪರ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿ, ರೈತಾಪಿ ಬಂಧುಗಳಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. 

ಕೃಷಿ ಸಲಕರಣೆ ಮತ್ತು ಯಂತ್ರೋಪಕರಣಗಳನ್ನು ತಯಾರಿಸುವ ಕಂಪನಿಗಳ ಮಳಿಗೆಗಳು ಮೇಳದ ಕೃಷಿ ಎಂಜಿನಿಯರಿಂಗ್‌ ವಿಭಾಗದದಲ್ಲಿ ಇರಲಿವೆ. ಕೂರಿಗೆ, ಕಬ್ಬು ನಾಟಿ ಮಾಡುವ ಯಂತ್ರ, ಯಂತ್ರಚಾಲಿತ ಒಕ್ಕಣೆ, ಸೌರಶಕ್ತಿಯ ಪಂಪ್‌ಸೆಟ್‌, ಮರಗಳಲ್ಲಿನ ಕಾಯಿಗಳನ್ನು ಕೀಳುವ ಸಾಧನ, ಧಾನ್ಯ ಶೇಖರಣೆಗಳ ಸಾಧನಗಳ ಕುರಿತು ಇಲ್ಲಿ ತಿಳಿಯಬಹುದಾಗಿದೆ.

ಮೇಳದ ಪಶು ಸಂಗೋಪನಾ ವಿಭಾಗದಲ್ಲಿ ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲದ ವಿವಿಧ ತಳಿಗಳನ್ನು ಕಾಣಬಹುದಾಗಿದೆ. ಕುರಿಗಳಲ್ಲಿ ಸ್ಥಳೀಯ ತಳಿಗಳಾದ ಡೆಕ್ಕಣಿ, ಬಂಡೂರು, ಕೆಂಗುರಿ ಹಾಗೂ ವಿದೇಶಿ ತಳಿಗಳಾದ ರ‍್ಯಾಂಬುಲೆ, ಡಾರ್ಫರ್‌ ಮತ್ತು ಮೆರಿನೊ, ಮೇಕೆಗಳಲ್ಲಿನ ಬ್ಲಾಕ್‌ ಬೆಂಗಾಲ್‌, ಜಮ್ನಪಾರಿ, ಸ್ವರ್ಣಧಾರ ಹಾಗೂ ಖಡಕ್‌ನಾಥ್‌ ತಳಿಗಳು ಆಕರ್ಷಣೆಯ ಬಿಂದುವಾಗಿವೆ.

ರಾಜ್ಯಪಾಲ ವಜುಭಾಯಿ ವಾಲಾ ಅವರು ನ.15ರ ಬೆಳಿಗ್ಗೆ 11 ಗಂಟೆಗೆ ಕೃಷಿಮೇಳ ಉದ್ಘಾಟಿಸಲಿದ್ದಾರೆ. ನ.18ರ ಮಧ್ಯಾಹ್ನ 2.30ರಿಂದ ನಡೆಯುವ ಮೇಳದ ಸಮಾರೋಪದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. 

ನಾಲ್ಕು ಹೊಸ ತಳಿಗಳ ಅಭಿವೃದ್ಧಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಗಿ ಕೆಎಂಆರ್-630, ಸೂರ್ಯಕಾಂತಿ- ಕೆಬಿಎಸ್‍ಎಚ್-78, ಸೋಯಾ ಅವರೆ-ಕೆಬಿಎಸ್-23 ಮತ್ತು ಅಕ್ಕಿ ಅವರೆ-ಕೆಬಿಆರ್-1 ಹೊಸ ತಳಿಗಳನ್ನು ಈ ಬಾರಿಯ ಮೇಳದಲ್ಲಿ ಪರಿಚಯಿಸುತ್ತಿದೆ.

‘ಕಡಿಮೆ ಅವಧಿಯಲ್ಲಿ ಬೆಳೆಯುವ ಈ ತಳಿಗಳು ಹೆಚ್ಚು ಇಳುವರಿ, ಕೀಟಬಾಧೆಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೆಚ್ಚಿನ ರೋಗ ನಿರೋಧಕ ಶಕ್ತಿಯಿಂದ ಕೂಡಿವೆ. ರೈತರ ಆರ್ಥಿಕ ಸ್ವಾವಲಂಬನೆಗೂ ಹೆಚ್ಚು ಸಹಕಾರಿಯಾಗಲಿವೆ’ ಎಂದು ಕುಲಪತಿ ವಿವರಿಸುತ್ತಾರೆ.

ರಾಗಿ ಕೆಎಂಆರ್-630: ಇದನ್ನು 95 ರಿಂದ 100 ದಿನಗಳಲ್ಲಿ ಬೆಳೆಯಬಹುದು. ನೀರಾವರಿ ಭೂಮಿಯಲ್ಲಿ ಎಕರೆಗೆ 18 ರಿಂದ 20 ಕ್ವಿಂಟಲ್‌ ಫಸಲು ದೊರೆಯಲಿದೆ. 2 ಟನ್‌ನಿಂದ 2.50 ಟನ್‌ಗಳಷ್ಟು ಹೆಚ್ಚು ಮೇವು ಸಿಗಲಿದೆ.

ಸೂರ್ಯಕಾಂತಿ- ಕೆಬಿಎಸ್‍ಎಚ್-78: ಈ ತಳಿಯ ಸೂರ್ಯಕಾಂತಿಯನ್ನು 85 ದಿನಗಳಲ್ಲಿ ಬೆಳೆಯಬಹುದು. ಹಿಂದೆ ಅಭಿವೃದ್ಧಿಪಡಿಸಿದ ತಳಿಗಿಂತಲೂ 15ದಿನಗಳು ಮುಂಚಿತವಾಗಿ ಕಟಾವಿಗೆ ಬರಲಿದೆ. ಪ್ರತಿ ಎಕರೆಗೆ 10.14 ಕ್ವಿಂಟಲ್‌ ಹಾಗೂ 3.97 ಕ್ವಿಂಟಲ್‌ ಎಣ್ಣೆ ಇಳುವರಿ ಪಡೆಯಬಹುದು. 

ಸೋಯಾ ಅವರೆ-ಕೆಬಿಎಸ್-23: ಈ ತಳಿಯಿಂದ 95 ದಿನಗಳಲ್ಲಿ ಬೆಳೆ ಪಡೆಯಬಹುದು. ಪ್ರತಿ ಎಕರೆಗೆ 10 ಕ್ವಿಂಟಲ್‌ ಇಳುವರಿ ಸಿಗಲಿದೆ. ಎಲೆ ಸುರಂಗದ ಹುಳುವಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಮುಂಗಾರಿನಲ್ಲಿ ಖುಷ್ಕಿ ಹಾಗೂ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾದದ್ದು. 

ಅಕ್ಕಿ ಅವರೆ-ಕೆಬಿಆರ್-1: ಈ ತಳಿಯು 70 ರಿಂದ 75 ದಿನಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ 5 ಕ್ವಿಂಟಲ್‌ನಿಂದ 6 ಕ್ವಿಂಟಲ್‌ ಇಳುವರಿ ಪಡೆಯಬಹುದು. ಇದರ ಬೀಜವು ದಪ್ಪವಾಗಿದ್ದು, ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ. 

ಮೇಳದ ಆಕರ್ಷಣೆಗಳು

* ಹೊಸದಾಗಿ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ

* ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು

* ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆಗಳು

* ತೋಟಗಾರಿಕಾ ಬೆಳೆಗಳ ಮಾಹಿತಿ

* ಸಿರಿಧಾನ್ಯಗಳ ವಿರಾಟ್‌ ರೂಪದ ದರ್ಶನ

* ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು ಮಾಹಿತಿ

* ಮಣ್ಣು ಪರೀಕ್ಷೆಗೆ ಅನುಗುಣವಾಗಿ ಬೆಳೆಸ್ಪಂದನ ಪ್ರಾತ್ಯಕ್ಷಿಕೆ

* ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳ ಪರಿಚಯ

* ಮಳೆನೀರು ಸಂಗ್ರಹ, ಬೀಜಗಳ ಪರೀಕ್ಷೆ ಹಾಗೂ ಶೇಖರಣೆ ಮಾಹಿತಿ

* ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆಯಲ್ಲಿ ಆಗಿರುವ ಸುಧಾರಣೆಗಳ ವಿವರ

* ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಮತ್ತು ಚರ್ಚಾಗೋಷ್ಠಿ

* ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ

ರಾಜ್ಯ ಮಟ್ಟದ ರೈತ ಪ್ರಶಸ್ತಿ ಪ್ರಕಟ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೊಡಮಾಡುವ ರಾಜ್ಯ ಮಟ್ಟದ ರೈತ ಪ್ರಶಸ್ತಿಗಳಿಗೆ 7 ಪ್ರಗತಿಪರ ರೈತರು ಆಯ್ಕೆ ಆಗಿದ್ದಾರೆ. 

ಡಾ. ಆರ್‌.ದ್ವಾರಕಿನಾಥ್‌ ಕೃಷಿ ಪ್ರಶಸ್ತಿಗಳು ತಲಾ ₹ 10 ಸಾವಿರ ಹಾಗೂ ಉಳಿದ ಪ್ರಶಸ್ತಿಗಳು ತಲಾ ₹ 25 ಸಾವಿರ ಒಳಗೊಂಡಿವೆ. 

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನ.15ರಿಂದ 18ರವರೆಗೆ ಆಯೋಜಿಸಿರುವ ‘ಕೃಷಿಮೇಳ–2018’ರಲ್ಲಿ ಪ್ರಶಸ್ತಿಗಳನ್ನು
ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ;                                                        ಪುರಸ್ಕೃತರು;                            ಜಿಲ್ಲೆ

* ಎಚ್‌.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿ;      ಎನ್‌.ಆರ್‌.ಸುರೇಂದ್ರ;              ರಾಮನಗರ

* ಎಚ್‌.ಡಿ.ದೇವೇಗೌಡ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ; ಎಂ.ಎಸ್‌.ಶಿಲ್ಪಾ;               ಚಿಕ್ಕಬಳ್ಳಾಪುರ

* ಸಿ.ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿ;            ದುಂಡಪ್ಪ ಯಂಕಪ್ಪಹಳ್ಳಿ;            ಬಾಗಲಕೋಟೆ

* ಡಾ.ಎಂ.ಎಚ್‌.ಮರೀಗೌಡ ತೋಟಗಾರಿಕಾ ರೈತ ಪ್ರಶಸ್ತಿ; ಪ್ರಸಾದ ರಾಮ ಹೆಗಡೆ;      ಉತ್ತರ ಕನ್ನಡ

* ಡಾ.ಆರ್‌.ದ್ವಾರಕೀನಾಥ್‌ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ; ಡಾ.ಕೆ.ಆರ್‌.ಶ್ರೀನಿವಾಸ;    ತುಮಕೂರು

* ಡಾ.ಆರ್‌.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ;      ಜಿ.ರಮೇಶ;                      ರಾಮನಗರ

* ಕ್ಯಾನ್‌ ಬ್ಯಾಂಕ್‌ ರೈತ ಪ್ರಶಸ್ತಿ;                              ಎಂ.ಎನ್‌.ರವಿಶಂಕರ್‌;          ಕೋಲಾರ

* ಕ್ಯಾನ್‌ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ;       ಕೆ.ಹೇಮಾ ಅನಂತ್‌;              ಹಾಸನ

ಮುಖ್ಯಾಂಶಗಳು 

* ಜಿಕೆವಿಕೆ ಆವರಣದಲ್ಲಿ ಉಚಿತ ಸಾರಿಗೆ ವ್ಯವಸ್ಥೆ

* ರಿಯಾಯಿತಿ ದರದಲ್ಲಿ ಊಟದ ಸೌಲಭ್ಯ

* ಮೇಳದ ಎಲ್ಲ ವಿಭಾಗಗಳಿಗೆ ಉಚಿತ ಪ್ರವೇಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು