ಭಾನುವಾರ, ಆಗಸ್ಟ್ 25, 2019
24 °C

ಮಹಾ ಮಳೆ: ವಾಯವ್ಯ, ಈಶಾನ್ಯ ರಸ್ತೆ ಸಾರಿಗೆಯ ಹಲವು ಬಸ್‌ಗಳ ಸಂಚಾರ ರದ್ದು

Published:
Updated:

ಹುಬ್ಬಳ್ಳಿ/ಕಲಬುರ್ಗಿ: ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ‌ ವ್ಯಾಪ್ತಿಯ ಹಲವು ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ‌ ವ್ಯಾಪ್ತಿಯ ಹುಬ್ಬಳ್ಳಿ- ಕಾರವಾರ, ಶಿರಸಿ- ಸಿದ್ದಾಪುರ, ಶಿರಸಿ- ಅಂಕೋಲಾ, ಬೆಳಗಾವಿ- ಗೋವಾ, ಬೆಳಗಾವಿ- ಕೊಲ್ಹಾಪುರ, ಬೆಳಗಾವಿ- ವಿಜಯಪುರ, ಜಮಖಂಡಿ- ವಿಜಯಪುರ ಹಾಗೂ ಜಮಖಂಡಿ- ಮೀರಜ್ ಮಾರ್ಗಗಳಲ್ಲಿ ವಾಹನಗಳು ಸಂಚರಿಸಿತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಹುಬ್ಬಳ್ಳಿ–ಧಾರವಾಡದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಆ ಭಾಗಕ್ಕೆ ತೆರಳಬೇಕಿದ್ದ ಬಸ್ಸುಗಳು ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ, ಮಿರಜ್‌, ರಾಜ್ಯದ ಬೆಳಗಾವಿ, ನಿಪ್ಪಾಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮಾರ್ಗಗಳಲ್ಲಿ ತೆರಳಬೇಕಿದ್ದ ಬಸ್‌ಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗದಲ್ಲಿ ಒಟ್ಟು  85 ಅನುಸೂಚಿಗಳಲ್ಲಿನ ಸಂಚಾರವನ್ನು ರದ್ದು ಮಾಡಲಾಗಿದೆ. 

ಕಲಬುರ್ಗಿ–ದಾವಣಗೆರೆ ಮಧ್ಯೆ ಸಂಚರಿಸುವ ಒಂದು ಸ್ಲೀಪರ್‌ ಬಸ್‌ ಸಹ ಇದರಲ್ಲಿ ಸೇರಿದೆ. ನಿತ್ಯ ಈ ಅನುಸೂಚಿಗಳಲ್ಲಿ 51 ಸಾವಿರ ಕಿ.ಮೀ. ದೂರವನ್ನು ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿದ್ದವು. ನಾಲ್ಕೈದು ದಿನಗಳಿಂದ ಈ ಅನುಸೂಚಿಗಳನ್ನು ರದ್ದುಪಡಿಸಲಾಗಿದ್ದು, ಇದರಿಂದಾಗಿ ನಿತ್ಯ ₹ 13ರಿಂದ ₹ 14 ಲಕ್ಷ ನಷ್ಟ ಸಂಭವಿಸುತ್ತಿವೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸತತವಾಗಿ ಮಳೆ ಸುರಿಯುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಬೀದರ್‌ ವಿಭಾಗಗಳಿಂದ ಈ ನಗರಗಳತ್ತ ತೆರಳುವ ಬಸ್‌ಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಮಳೆ ಹಾಗೂ ಪ್ರವಾಹದ ನೀರು ಇಳಿದರೆ ಮತ್ತೆ ಆರಂಭಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

Post Comments (+)