ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್‌ ಕಟ್ಟುಕತೆ’ ಸಿ.ಡಿ. ಬಿಡುಗಡೆ ಮಾಡಿದ ಕುಮಾರಸ್ವಾಮಿ

Last Updated 10 ಜನವರಿ 2020, 16:23 IST
ಅಕ್ಷರ ಗಾತ್ರ

ಬೆಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿ. 19ರಂದು ನಡೆದಿದ್ದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ ಪೊಲೀಸರ ಕಟ್ಟುಕತೆ ಎಂದು ಆರೋಪಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಇದಕ್ಕೆ ಸಂಬಂಧಿಸಿದಂತೆ ಸಿ.ಡಿ.ಬಿಡುಗಡೆ ಮಾಡಿದ್ದಾರೆ.

‘ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರಿಂದ ಜನತಾ ನ್ಯಾಯಾಲಯ ನಡೆಸಲು ಅವಕಾಶ ನೀಡ ಲಾಗಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕೆಂದು ಸಂಗ್ರಹಿಸಿ ಇಟ್ಟಿದ್ದ ಮಂಗಳೂರು ಗಲಭೆ ಕುರಿತ ಸಿ.ಡಿ ಯನ್ನು ಇದೀಗ ತುರ್ತಾಗಿ ಬಿಡುಗಡೆ ಮಾಡುತ್ತಿದ್ದೇನೆ. ಇಡೀ ಗಲಭೆಯ ಕುರಿತು ತನಿಖೆಗೆ ಸದನ ಸಮಿತಿ ರಚಿಸಬೇಕು’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿ.ಡಿ.ಯಲ್ಲಿ ಏನಿದೆ?:ಸುಮಾರು 51 ನಿಮಿಷಗಳ ಸಿ.ಡಿ.ಯಲ್ಲಿ ಸುಮಾರು 36 ಗಲಭೆಯ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಬೇರೆ ಬೇರೆ ಮಂದಿ ಮಾಡಿದ ವಿಡಿಯೊ ತುಣುಕುಗಳು, ಕೆಲವು ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಒಗ್ಗೂಡಿಸಿಕೊಡಲಾಗಿದೆ. ಗಾಯಾಳುಗಳಿಗೆ ಸಂಬಂಧಿಸಿದಂತೆ 24 ಫೋಟೊಗಳನ್ನು ಬಿಡುಗಡೆಗೊಳಿಸ ಲಾಗಿದೆ.

ಡಿ. 19ರಂದು ಮಧ್ಯಾಹ್ನ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಮೊದಲು ಲಾಠಿಪ್ರಹಾರ ನಡೆಸಿದ್ದು, ಕೆಲವರ ತಲೆಗೂ ಪೆಟ್ಟಾಗಿ ರಕ್ತ ಸೋರಿದೆ. ಅಂಗಡಿಗಳ ಒಳಗೆಯೇ ನುಗ್ಗಿ ಲಾಠಿ ಬೀಸಿದ್ದ ದೃಶ್ಯ ಇದೆ. ಎರಡನೇ ಹಂತದಲ್ಲಿ ಪ್ರತಿಭಟನಕಾರರುಕಲ್ಲು ತೂರಾಟ ನಡೆಯುವುದನ್ನು ಅಸ್ಪಷ್ಟವಾಗಿತೋರಿಸಲಾಗಿದ್ದು, ಪೊಲೀಸರು ಪ್ರತಿಯಾಗಿ ಪ್ರತಿಭಟನಕಾರರ ಮೇಲೆ ಕಲ್ಲು ತೂರುವುದು, ಒಂದು ಮಸೀದಿಯ ಮೇಲೆ ಕಲ್ಲು ತೂರುವುದನ್ನು ತೋರಿಸಲಾಗಿದೆ.

ಎದೆಮಟ್ಟದಲ್ಲೇ ಪೊಲೀಸರು ನಾಲ್ಕಾರು ಬಾರಿಗುಂಡು ಹಾರಿಸುವುದು, ‘ಗುಂಡಿಗೆ ಒಬ್ಬನೂ ಬಿದ್ದಿಲ್ಲವಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬ ಹೇಳುವ ಮಾತು ಕೇಳಿಸುತ್ತದೆ. ‘ಗುಪ್ತಾಂಗ ಜಾಗಕ್ಕೆ ಗುಂಡು ಬೀಳಬೇಕಿತ್ತು’ ಎಂಬ ಮಾತೂ ಕೇಳಿಸುತ್ತದೆ.

ಗೂಡ್ಸ್‌ ಆಟೊ ಚಾಲಕನನ್ನು ಮಾತನಾಡಿಸಿ, ಆತ ಕಟ್ಟಡ ತ್ಯಾಜ್ಯ ಸಾಗಿಸುತ್ತಿದ್ದ ಸಿ.ಸಿ ಕ್ಯಾಮೆರಾ ದೃಶ್ಯಾವಳಿಯನ್ನು ತೋರಿಸಲಾಗಿದೆ. ನಾಲ್ಕನೇ ಟ್ರಿಪ್‌ನಲ್ಲಿ ಗಲಭೆ ಹೆಚ್ಚಾದ ಕಾರಣ ತಾನು ಆಟೊವನ್ನು ರಸ್ತೆ ಬದಿಯೇ ಬಿಟ್ಟು ಹೋಗಿದ್ದಾಗಿ ಆತ ಹೇಳುತ್ತಾನೆ. ಖಾಸಗಿ ಬಂದೂಕು ಅಂಗಡಿಯ ಮಾಲೀಕರು ಮಾತನಾಡಿಸಿದ್ದನ್ನು, ಪೊಲೀಸ್‌ ಕಮಿಷನರ್‌ ಹೇಳಿಕೆಯನ್ನು ತೋರಿಸಲಾಗಿದೆ.

ಗಾಯಾಳುವಿಗೆ ₹ 26 ಲಕ್ಷ ವೆಚ್ಚ

‘ಮಂಗಳೂರು ಗಲಭೆಯಲ್ಲಿ ಎಂಬಿಎ ಪದವೀಧರನೊಬ್ಬನಿಗೆ ಗಂಭೀರ ಗಾಯವಾಗಿದ್ದು, ಈಗಾಗಲೇ ಆತನ ವೈದ್ಯಕೀಯ ವೆಚ್ಚ ₹ 26 ಲಕ್ಷ ಮೀರಿದೆ. ಸರ್ಕಾರದಿಂದ ನಯಾ ಪೈಸೆ ಸಿಕ್ಕಿಲ್ಲ. ಗೋಲಿಬಾರ್‌ನಲ್ಲಿ ಮೃತಪಟ್ಟವರು ಗಲಭೆ ಕೋರರು ಎಂದು ಸರ್ಕಾರವೇ ತೀರ್ಮಾನಿಸಿಬಿಟ್ಟಿದೆ, ಹೀಗಾಗಿ ಪರಿಹಾರ ಸಿಗುವುದೂ ಕಷ್ಟ.ಗಲಭೆಯಲ್ಲಿ ಹಲವು ಪೊಲೀಸರಿಗೆ ಗಾಯವಾಗಿದೆ ಎಂದು ಹೇಳುತ್ತಿದ್ದಾರೆ, ಆದರೆ ಅಂತಹ ಒಬ್ಬನೇ ಒಬ್ಬನನ್ನು ನಾನು ಆಸ್ಪತ್ರೆಯಲ್ಲಿ ನೋಡಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ದಾಖಲೆಗಳಿದ್ದರೆ ತನಿಖಾ ತಂಡಕ್ಕೆ ಕೊಡಲಿ: ಬೊಮ್ಮಾಯಿ

‘ಎಚ್‌ಡಿಕೆ ಬೇಜವಾಬ್ದಾರಿ ನಡವಳಿಕೆ ತೋರಿದ್ದಾರೆ.ಪೊಲೀಸರುಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ’ ಎಂದು ಗೃಹ ಸಚಿವಬಸವರಾಜಬೊಮ್ಮಾಯಿಸಮರ್ಥಿಸಿಕೊಂಡಿದ್ದಾರೆ.

‘ಘಟನೆಯನ್ನು ತಿರುಚಿ ಹೇಳಲು ಅವರು ಮುಂದಾಗಿದ್ದಾರೆ. ಶಾಂತವಾಗಿದ್ದ ರಾಜ್ಯವನ್ನು ಕೆಣಕುವ ಕೆಲಸ ಮಾಡಿದ್ದಾರೆ.ವಿಡಿಯೊ, ದಾಖಲೆಗಳು ಇದ್ದರೆ ಈಗಾಗಲೇ ನೇಮಕಗೊಂಡಿರುವ ತನಿಖಾ ತಂಡಕ್ಕೆ ಕೊಡಲಿ. ವಿಡಿಯೊದಲ್ಲಿವಿಶೇಷವಿಲ್ಲ. ಹಿಂದಿನವಿಡಿಯೊಗಳನ್ನುಹಿಂದೆ, ಮುಂದೆ ಮಾಡಿ ತೋರಿಸಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

***

ಸುಳ್ಳು ಕತೆಗಳನ್ನು ಕಟ್ಟುತ್ತಿರುವ ಸರ್ಕಾರದ ಬಣ್ಣ ಬಯಲಾಗಬೇಕು ಎಂಬ ಕಾರಣಕ್ಕೇ ಈ ಸಿ.ಡಿ. ಬಿಡುಗಡೆ ಮಾಡಿದ್ದೇನೆ, ಸದನದಲ್ಲೂ ವಿಷಯ ಪ್ರಸ್ತಾಪಿಸುತ್ತೇನೆ
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT