ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಎರಡು ಮನೆ ಜಲಾವೃತ

Last Updated 11 ಜೂನ್ 2019, 18:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರಿನ ಲಕ್ಷಣ ಕಾಣಿಸಿಕೊಂಡಿದ್ದು, ಅಲ್ಲಲ್ಲಿ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣ ಹಾಗೂ ಸುತ್ತಮುತ್ತ ಮಂಗಳವಾರ ಉತ್ತಮ ಮಳೆಯಾಯಿತು. ತಾಲ್ಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಹೆದ್ದಾರಿಗಾಗಿ ಗುಡ್ಡ ಕಡಿದಿದ್ದು, ಅಲ್ಲಿಂದ ಸಂಗ್ರಹವಾದ ನೀರು ರಭಸದಿಂದ ನುಗ್ಗಿ, ಮನೆಗಳು ಜಲಾವೃತವಾಗಿವೆ. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ಆರು ಗಂಟೆಯ ನಂತರ ಒಂದು ತಾಸಿಗೂ ಹೆಚ್ಚು ಹೊತ್ತು ಮಿಂಚು, ಗುಡುಗಿನೊಂದಿಗೆ ಬಿರುಸಾದ ಮಳೆ ಸುರಿಯಿತು. ಉಳಿದಂತೆ,ಕರಾವಳಿ ಭಾಗದ ವಿವಿಧೆಡೆ ದಿನವಿಡೀ ಆಗಾಗ ಸಾಧಾರಣ ಮಳೆಯಾಯಿತು. ರಭಸದ ಗಾಳಿಯೂ ಜೊತೆಯಾಗಿತ್ತು.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಾಮಾನ್ಯವಾಗಿ ಸಣ್ಣ ಅಲೆಗಳೊಂದಿಗೆಶಾಂತವಾಗಿರುತ್ತಿದ್ದ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ, ದೊಡ್ಡಗಾತ್ರದ ಅಲೆಗಳು ಕಂಡುಬರುತ್ತಿವೆ. ಗಂಟೆಗೆ ಸುಮಾರು 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಹಾಗೂ ಭಾರಿ ಮಳೆಯಾಗಬಹುದುಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಬೆಳಗಾವಿ ನಗರ ಹಾಗೂ ಹಿರೇಬಾಗೇವಾಡಿಯಲ್ಲಿ ಮೋಡಕವಿದ ವಾತಾವರಣವಿತ್ತು. ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಸ್ವಲ್ಪಹೊತ್ತು ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣವಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ತುಂತುರು ಮಳೆಯಾಗಿದ್ದು, ಸರಾಸರಿ 18.9 ಮಿ.ಮೀ. ಸುರಿದಿದೆ.ಸಮುದ್ರದಲ್ಲಿ ಅಲೆಗಳ ಅಬ್ಬರ ಪರಿಣಾಮಸೋಮೇಶ್ವರ ಕಡಲ ತೀರದ ನಾಲ್ಕು ಮನೆಗಳು ಅಪಾಯದಲ್ಲಿವೆ. ಇಲ್ಲಿಗೆ ಉಪ ವಿಭಾಗಾಧಿಕಾರಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ಅಧಿಕಾರಿಗಳು ಭೇಟಿ ನೀಡಿದ್ದು, ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

‘ವಾಯು’ ಚಂಡಮಾರುತದ ಪರಿಣಾಮ ಸದ್ಯ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಹೀಗಾಗಿ, ಮುಂಗಾರು ಪ್ರವೇಶವನ್ನು ಸದ್ಯ ಅಂದಾಜಿಸಲು ಸಾಧ್ಯವಿಲ್ಲ. ಇನ್ನೆರಡು ದಿನ ನಿರಂತರ ಮಳೆ, ಸ್ಥಿರತೆ ಹಾಗೂ ಗಾಳಿಯ ಪರಿಣಾಮವಿದ್ದರೆ, ಮುಂಗಾರು ಪ್ರವೇಶವನ್ನು ನಿರ್ಧರಿಸಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ತುಂತುರು ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ತಾಲ್ಲೂಕುಗಳ ವಿವಿಧೆಡೆ ಮಂಗಳವಾರ ತುಂತುರು ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆಗೆ ನಿರಾಸೆ ಉಂಟಾಯಿತು. ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ರಿಪ್ಪನ್‌ಪೇಟೆ ಭಾಗದಲ್ಲಿ ತುಂತುರು ಮಳೆ ಬಿದ್ದರೆ, ಉಳಿದೆಡೆ ಮಳೆಯಾಗಿಲ್ಲ.

ವಿದ್ಯುತ್‌ ಸ್ಪರ್ಶ: ತಂದೆ–ಮಗಳು ಸಾವು

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಮಂಗಳವಾರ ಬಾರೆಕ್ಕಿನಡೆಯ ತೋಟದ ಬಳಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಅಪ್ಪ–ಮಗಳು ಮೃತಪಟ್ಟಿದ್ದಾರೆ. ಕೃಷಿಕ ಗೋಪಾಲಕೃಷ್ಣ ಶೆಟ್ಟಿ (65) ಹಾಗೂ ಪುತ್ರಿ ದಿವ್ಯಾ ಶೆಟ್ಟಿ (29) ಸತ್ತವರು.

ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಗಾಳಿ ಜೊತೆ ತುಂತುರು ಮಳೆಯಾಗುತ್ತಿದೆ. ವಿದ್ಯುತ್ ತಂತಿಯು ಗಾಳಿಗೆ ಕಡಿದು ಬಿದ್ದಿತ್ತು.

ಸುಬ್ರಹ್ಮಣ್ಯ ವರದಿ: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿಯ ಖಾಸಗಿ ವಾಹನಗಳ ಪಾರ್ಕಿಂಗ್‌ನಲ್ಲಿ ಮಂಗಳವಾರ ಸಂಜೆ ಅಶ್ವಥ ಮರದ ಕೊಂಬೆ ಮುರಿದು ಬಿದ್ದು ಬಿಳಿನೆಲೆಯಹರಿಶ್ಚಂದ್ರ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ, ಬೊಲೆರೊ ವಾಹನವೊಂದಕ್ಕೂ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT