ಬುಧವಾರ, ಏಪ್ರಿಲ್ 8, 2020
19 °C
‘ವಿವೇಕ’ ಫಲಪುಷ್ಪ ಪ್ರದರ್ಶನ ಸಂಪನ್ನ l ಕೊನೆ ದಿನ ಜನಸಾಗರ

15 ದಿನಗಳಲ್ಲಿ 2.3 ಲಕ್ಷ ಮಂದಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಭಾನುವಾರ ಸಂಪನ್ನಗೊಂಡಿತು. ಈ ಬಾರಿ 15 ದಿನಗಳಲ್ಲಿ ಒಟ್ಟು 2.30 ಲಕ್ಷ ಮಂದಿ ಈ ಹೂಗಳ ಸೊಬಗನ್ನು ಕಣ್ತುಂಬಿಕೊಂಡರು. 

ಜ.11ರಿಂದ ಆರಂಭವಾದ ಪ್ರದರ್ಶನಕ್ಕೆ ವೀಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿತು. ಪ್ರದರ್ಶನದ ಕೊನೆಯ ದಿನವಾದ ಭಾನುವಾರ ಅತಿ ಹೆಚ್ಚು (85,500) ಮಂದಿ ಭೇಟಿ ನೀಡಿದರು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರದರ್ಶನ ವೀಕ್ಷಿಸಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ 4.2 ಲಕ್ಷ ಮಂದಿ ಭೇಟಿ ನೀಡಿದ್ದರು. ಕೊನೆಯ ದಿನ ಒಟ್ಟು 78 ಸಾವಿರ ಮಂದಿ ಪ್ರದರ್ಶನಕ್ಕೆ ಬಂದಿದ್ದರು.

‘ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ನಿಖರ ಕಾರಣ ತಿಳಿಯುತ್ತಿಲ್ಲ. ಪ್ರಚಾರ ಕಡಿಮೆ
ಯಾಯಿತೋ, ಅಥವಾ ಜನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದರೆ, ಕೊನೆಯ ಎರಡು ದಿನ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚು ಇತ್ತು’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘ ಆಯೋಜಿಸಿದ್ದ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸ್ವಾಮಿ ವಿವೇಕಾನಂದರಿಗೆ ಅರ್ಪಿಸಲಾಯಿತು. ಲಾಲ್‌ಬಾಗ್‌ ಗಾಜಿನ ಮನೆಯ ಹೃದಯ ಭಾಗದಲ್ಲಿ ಸಿದ್ಧಪಡಿಸಲಾಗಿದ್ದ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕದ ಮಾದರಿ ಫಲಪುಷ್ಪ ಪ್ರದರ್ಶನದ ಕೇಂದ್ರಬಿಂದುವಾಗಿತ್ತು. 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ, 75 ಸಾವಿರ ಸೇವಂತಿಗೆ ಹಾಗೂ 3 ಸಾವಿರ ವಿವಿಧ ಎಲೆಗಳನ್ನು ಬಳಸಿ ನಿರ್ಮಿಸಲಾಗಿದ್ದ ಸ್ಮಾರಕವನ್ನು ಜನ ಕುತೂಹಲದಿಂದ ವೀಕ್ಷಿಸಿದರು. 

ವಿವೇಕಾನಂದರ ಷಿಕಾಗೊ ಭಾಷಣದ ಸಂದರ್ಭ
ವನ್ನು ಉದ್ಯಾನದ ಪ್ರವೇಶದ್ವಾರ ಬಲಭಾಗದಲ್ಲಿ ಹೂಗಳಲ್ಲಿ ನಿರ್ಮಿಸಲಾಗಿತ್ತು. ಇದು ಕೂಡಾ ಜನರನ್ನು ಆಕರ್ಷಿಸಿತ್ತು. ಗಾಜಿನ ಮನೆಯ ತುಂಬ ವಿವೇಕಾನಂದರ ಪ್ರತಿಮೆಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಭಾನುವಾರ ಗಾಜಿನ ಮನೆಯೊಳಗೆ ಕೊಂಚ ನೂಕುನುಗ್ಗಲು ಇತ್ತು.

ಸಂಜೆ 3 ಗಂಟೆ ನಂತರ ಉದ್ಯಾನದತ್ತ ಹೆಚ್ಚು ಜನ ಮುಖ ಮಾಡಿದರು. ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚು ಜನ ಬಂದ ಹಿನ್ನೆಲೆಯಲ್ಲಿ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಜನ ಸಾಲುಗಟ್ಟಿ ನಿಂತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು