ಸೋಮವಾರ, ಡಿಸೆಂಬರ್ 6, 2021
23 °C

ಈ ಹೊತ್ತಿಗೂ ಇವರೆಲ್ಲ ಶಾಪಗ್ರಸ್ತರು!: ಬೀದಿಗೆ ಬಿದ್ದ ಬದುಕು...

ವಿಶಾಖ ಎನ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಪಶ್ಚಿಮಘಟ್ಟದ ಶ್ರೇಣಿಯ ಒಳಗೆ ಚದುರಿ ಹೋಗಿರುವ ಅಸಂಖ್ಯ ಜೀವಗಳಲ್ಲಿ ಗತಕಾಲದ ಸುಖದ ನೆನಪು. ನೀರು, ಮೇವಿನ ಅನುಕೂಲ ಇರುವೆಡೆ ಬದುಕು ಕಟ್ಟಿಕೊಳ್ಳುತ್ತಿರುವ ಇವರೆಲ್ಲ ಒಂದು ಸಲ ಅಲ್ಲ; ಪದೇ ಪದೇ ಅಣೆಕಟ್ಟೆ ನಿರ್ಮಾಣದಿಂದಾಗಿ ಒಕ್ಕಲೆಬ್ಬಿಸಿಕೊಂಡವರು.

ಇನ್ನೊಂದು ಕಡೆ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಕುಟುಂಬಗಳು ಹಿಗ್ಗಿದ್ದು, ಕಾಗದಪತ್ರಗಳ ಮೇಲಿನ ಅವರ ಸಂಖ್ಯೆಗೂ ಈಗಿನದ್ದಕ್ಕೂ ಸಂಬಂಧವೇ ತಾಳೆಯಾಗುತ್ತಿಲ್ಲ. ಸೂಪಾ ಅಣೆಕಟ್ಟೆಯ ಸಂತ್ರಸ್ತರಿಗೆಂದೇ ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ನಿರ್ಮಿಸಿರುವ ಕಾಲೊನಿಯಲ್ಲಿ ಬಿಂದಿಗೆ ಹಿಡಿದು ನೀರಿಗಾಗಿ ಓಡುವ ಸ್ಥಿತಿ. ಹತ್ತು ಹದಿನೈದು ದಿನಗಳಿಗೊಮ್ಮೆಯಷ್ಟೇ ಅಲ್ಲಿನ ನಲ್ಲಿಗಳಲ್ಲಿ ನೀರಿನ ಸದ್ದು.

ಇನ್ನು ಹೇಮಾವತಿಯ ಒಡಲಿಗೆ ನೀರು ತುಂಬಿಸಲೆಂದು ಸ್ಥಳ ತೊರೆದು, ತಮ್ಮ ಬದುಕನ್ನು ಬೇರೆಡೆ ಕಟ್ಟಿಕೊಳ್ಳುತ್ತಿರುವ ಸಂತ್ರಸ್ತರು ಹಾಸನ ಜಿಲ್ಲೆಯಲ್ಲಿ ಸಮರ್ಪಕ ರಸ್ತೆ, ಒಳಚರಂಡಿ, ವಿದ್ಯುತ್, ಸ್ಮಶಾನ, ಸಮುದಾಯ ಭವನವಿಲ್ಲದೆ ಆಕಾಶದ ಕಡೆ ನೋಡುತ್ತಿದ್ದಾರೆ. ಅಲ್ಲಿಯೂ ಅಂತರ್ಜಲ ಬತ್ತಿದ ಗ್ರಾಮಗಳಿದ್ದು, ಟ್ಯಾಂಕರ್‌ ನೀರಿಗಾಗಿ ಚಾತಕ ಪಕ್ಷಿಗಳಾಗಬೇಕಾದ ವ್ಯಂಗ್ಯ. ಜಲಾಶಯಗಳ ನಿರ್ಮಾಣದ ವಿಷಯದಲ್ಲಿ ಪೆಟ್ಟುತಿಂದಿರುವ ಶಿವಮೊಗ್ಗ ಜಿಲ್ಲೆಯ ಜನರ ಬದುಕಿನ ಕಥೆಗಳನ್ನು ಕೆದಕಿದರೆ ದಾರುಣ ಸ್ಥಿತಿಯ ಪರಾಕಾಷ್ಠೆ ಕಣ್ಣಿಗೆ ಕಟ್ಟೀತು.

ಇದನ್ನೂ ಓದಿ: ಜಲರಾಶಿಯಲ್ಲಿ ಲೀನವಾದ ಬದುಕು

ಹೇಳಿಕೇಳಿ ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆ. ಇಲ್ಲಿನ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮೂಲ ನಿವಾಸಿಗಳು ಜಲಾಶಯಗಳಿಗಾಗಿ ಮೂಲನೆಲೆ ಕಳೆದುಕೊಳ್ಳುತ್ತಾ ಕಾಡುಗಳ ನಡುವೆ ಅಲೆದಾಡುವ ಸ್ಥಿತಿ ಈಗಲೂ ಮುಂದುವರಿದಿರುವುದು ಚೋದ್ಯ. ಒಂದೇ ಕಡೆ ಕೂಡು ಕುಟುಂಬದ ಸುಖ ಉಂಡ ಹಲವರಲ್ಲಿ ಬದುಕಿನ ಭದ್ರತೆಗಾಗಿ ಈಗಲೂ ಚಡಪಡಿಕೆ.

ಮಲೆನಾಡಿನ ಜೀವ ನದಿ ಶರಾವತಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64 ಅವಧಿಯಲ್ಲಿ ಜಲ ವಿದ್ಯುತ್‌ ಯೋಜನೆಗಳಿಗಾಗಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಲಾಯಿತು. ಅದರ ನಿರ್ಮಾಣವಾದ ಮೇಲೆ ಹಿರೇಭಾಸ್ಕರ ಲಿಂಗನಮಕ್ಕಿ ಜಲಾಶಯದ ಭಾಗಕ್ಕೆ ಲೀನವಾಯಿತು. ನಂತರ ಚಕ್ರ–ಸಾವೇಹಕ್ಲು ಅವಳಿ ಅಣೆಕಟ್ಟೆ, ಮಾಣಿ ನಿರ್ಮಾಣಗೊಂಡವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ 1960ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾ ನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು.

ಹಲವು ಅರಣ್ಯ ಯೋಜನೆಗಳ ಘೋಷಣೆ: ಸಾಗರ, ಹೊಸನಗರ ತೀರ್ಥಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಶರಾವತಿ, ಸೋಮೇಶ್ವರ, ಶೆಟ್ಟಿಹಳ್ಳಿ, ಮೂಕಾಂಬಿಕಾ, ಭದ್ರಾ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಹುಲಿ ಸಂರಕ್ಷಣಾ ಯೋಜನೆಗಳಿಗೂ ತಾಣ ಕಲ್ಪಿಸಲಾಗಿದೆ. 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಸೂಕ್ಷ್ಮವಲಯ, ಜೀವ ವೈವಿಧ್ಯ ತಾಣ ಮತ್ತಿತರ ಯೋಜನೆಗಳಿಂದಾಗಿ ಮತ್ತಷ್ಟು ಸಂಕಷ್ಟಗಳು ಎದುರಾಗಿವೆ.

ಅಡ್ಡಿಯಾದ ಒತ್ತುವರಿ ಸಮಸ್ಯೆ: 1980ರ ನಂತರ ಮಲೆನಾಡಿನ ಭಾಗದಲ್ಲಿ ಒತ್ತುವರಿ ಪ್ರಮಾಣ ಗಣನೀಯವಾಗಿ ಏರಿಕೆಯಾಗತೊಡಗಿದೆ. ಆ ಅವಧಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಭೂಮಿಯಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಹತ್ತಿ ಬೆಳೆಯಲು ಆರಂಭಿಸಿದರು. 1990ರ ನಂತರ ಮೆಕ್ಕೆಜೋಳ, ಶುಂಠಿ ಮಲೆನಾಡಿಗೆ ಲಗ್ಗೆಇಟ್ಟಿತು. ಜಿಲ್ಲೆಯ ಒಟ್ಟು ಕೃಷಿ ಭೂಮಿಯಲ್ಲಿ ಶೇ 70ರಷ್ಟು ಭಾಗ 1980–90ರ ಅವಧಿಯಲ್ಲಿ ಸಾಗುವಳಿಯಾಗಿದೆ. ಹೀಗೆ ಅವ್ಯಾಹತ ಸಾಗುವಳಿಯಿಂದಾಗಿ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ಇದೂ ಸಂತ್ರಸ್ತರಿಗೆ ಸಮಸ್ಯೆಯಾಗಿಯೇ ಪರಿಣಮಿಸಿತು.

1970ರ ದಶಕದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿದ ಜಮೀನಿನ ಭೂ ಒಡೆತನ ಪಡೆಯಲು ಆಯಾ ತಾಲ್ಲೂಕಿನ ಭೂ ನ್ಯಾಯ ಮಂಡಳಿ ಮುಂದೆ ದಾಖಲೆ ಸಲ್ಲಿಸಬೇಕಿತ್ತು. ಪರಿಶೀಲನೆ ನಡೆಸಿ, ನ್ಯಾಯ ಮಂಡಳಿ ಆದ್ಯತೆಯ ಮೇಲೆ ಭೂಮಿಯ ಹಕ್ಕು ನೀಡುತ್ತಿತ್ತು. 1990ರ ನಂತರ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಅಕ್ರಮ–ಸಕ್ರಮ ಸಮಿತಿಗಳು ರಚನೆಯಾದವು. 50–100 ಎಕರೆ ಅಡಿಕೆ ಇದ್ದವರೂ ಸಾಗುವಳಿ ಪ್ರದೇಶ ವಿಸ್ತರಿಸಿಕೊಂಡರು.

ಇದನ್ನೂ ಓದಿ: ಬಿಸಿಲು, ಮಳೆಗೆ ಬೆಚ್ಚಿ ಬೀಳುವರು!

ರಾಜ್ಯ ಸರ್ಕಾರ ಮೊದಲ ಬಾರಿಗೆ 1991–92ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು 94 (ಎ ) ಅಡಿ ನಮೂನೆ 50ರಲ್ಲಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಹೀಗೆ ಸಲ್ಲಿಸಿದ ಅರ್ಜಿಗಳನ್ನು ಶಾಸಕರ ನೇತೃತ್ವದ ಬಗರ್‌ಹುಕುಂ ಸಮಿತಿಗಳು ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ಮಾನ್ಯಮಾಡಿ ಸಾಗುವಳಿದಾರರಿಗೆ ಭೂ ಹಕ್ಕು ನೀಡಿದವು. ಸಾಗರ, ಸೊರಬ ಹೊರತುಪಡಿಸಿದರೆ ಉಳಿದ ಭಾಗಗಳಲ್ಲಿ ಅರ್ಜಿಗಳು ಸರಿಯಾಗಿ ವಿಲೇವಾರಿ ಆಗಲಿಲ್ಲ.

ರಾಜ್ಯ ಸರ್ಕಾರ 1998–99ರಲ್ಲಿ ಮತ್ತೆ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ನಿಯಮ 94 (ಬಿ) ಅಡಿ ನಮೂನೆ 53ರಲ್ಲಿ ಬಗರ್‌ಹುಕುಂ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಈ ನಿಯಮದ ಪ್ರಕಾರ ಭೂರಹಿತರಿಗೆ ಗರಿಷ್ಠ 4 ಎಕರೆ 3 ಗುಂಟೆ ಭೂಮಿ ಮಂಜೂರು ಮಾಡಲು ಆದೇಶಿಸಲಾಯಿತು. 10 ವರ್ಷಕ್ಕೆ ಮೊದಲು ಉಳುಮೆ ಮಾಡಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ವಹಿಸಿದ ಮುತುವರ್ಜಿಯಿಂದಾಗಿ ಬಹುತೇಕ ಜನರಿಗೆ ಸಾಗುವಳಿ ಒಡೆತನ ಸಿಕ್ಕಿತಷ್ಟೆ.

ತೆರವು ಕಾರ್ಯಾಚರಣೆಗಳು: ಒತ್ತುವರಿ ತೆರವಿಗೆ ಸರ್ಕಾರ ಹಲವು ಬಾರಿ ಕ್ರಮ ಕೈಗೊಂಡಿದೆ. ಇದು ಯೋಜನಾ ಸಂತ್ರಸ್ತರ ಮೇಲೂ ಪರಿಣಾಮ ಬೀರಿದೆ. ವಿ.ಸುಬ್ರಮಣಿಯನ್ ವರದಿಯನ್ವಯ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ರಿಟ್‌ ಅರ್ಜಿ ದಾಖಲಾಗಿ, ಕೋರ್ಟ್ ನೋಟಿಸ್‌ ನೀಡಿದ ತಕ್ಷಣ ಸರ್ಕಾರ ‘ರಾಜ್ಯದ ಒಟ್ಟು ಅರಣ್ಯ ಭೂಮಿಯಲ್ಲಿ 2,04,442 ಎಕರೆ ಪ್ರದೇಶ ಒತ್ತುವರಿಯಾಗಿದೆ. ಒತ್ತುವರಿ ಮಾಡಿದವರ ವಿರುದ್ಧ 11,0626 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಫಿಡವಿಟ್‌ ಸಲ್ಲಿಸಿತ್ತು.

ಅಫಿಡವಿಟ್‌ ಪ್ರಕಾರ ಜಿಲ್ಲೆಯಲ್ಲಿ ಒತ್ತುವರಿಯಾದ ಅರಣ್ಯ ಭೂಮಿ 84,502 ಎಕರೆ. ದಾಖಲಾದ ಪ್ರಕರಣಗಳು 27,371. ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ಗೆ ಪೂರಕವಾಗಿ ಒತ್ತುವರಿ ತೆರವುಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಪರಿಸರ, ಗೃಹ, ಅರಣ್ಯ, ಕಂದಾಯ ಇಲಾಖೆ ಕಾರ್ಯದರ್ಶಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿತ್ತು.

ಇದನ್ನೂ ಓದಿ: ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!

ಎಡೆಹಳ್ಳಿಯ ತಗಡಿನ ಶೀಟ್‌ ಕೆಳಗೆ...

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಕಷ್ಟ ಉಂಡವರ ಪೈಕಿ ಐದರಿಂದ ಆರು ಸಾವಿರ ಜನರಿಗೆ ಎಡೆಹಳ್ಳಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಪರಿಹಾರ ಪಡೆದವರದ್ದು ಅತಿ ದಾರುಣ ಕಥೆ. ಬೀಳಗಿ ತಾಲ್ಲೂಕಿನ ಈ ಹಳ್ಳಿಯ ಎಷ್ಟೋ ಮಂದಿ ಈಗಲೂ ಹಕ್ಕುಪತ್ರಕ್ಕೆ ಪರದಾಡುತ್ತಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರು ನಮೂದಾಗಿತ್ತೋ ಅಷ್ಟೇ ಜನರನ್ನು ಸಂತ್ರಸ್ತರ ಪಟ್ಟಿಗೆ ಸೇರಿಸಲಾಗಿದೆ. ಇಷ್ಟು ದೀರ್ಘಾವಧಿಯ ನಂತರ ಆಗ ಬಾಲಕರಾಗಿದ್ದವರು ಯುವಕರಾಗಿ, ಸಂಸಾರಗಳನ್ನು ಕಟ್ಟಿಕೊಂಡಿದ್ದಾರೆ.

ವಿಸ್ತೃತಗೊಂಡ ಅವರ ಸಂಸಾರದ ಎಷ್ಟೋ ಸದಸ್ಯರ ಹೆಸರು ಪಟ್ಟಿಯಲ್ಲಿ ಇಲ್ಲ. ಆದರೆ, ಮುಳುಗಡೆಯ ಬಿಸಿ ಅವರಿಗೂ ತಟ್ಟುತ್ತಿದೆ ಎನ್ನುವ ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಹೋರಾಟದ ಸಮಿತಿ ಅಧ್ಯಕ್ಷ ಅದೃಶ್ಯಪ್ಪ, ಜಮಖಂಡಿಯಲ್ಲೂ ಇಂಥ ಉದಾಹರಣೆಗಳು ಸಿಗುತ್ತವೆ ಎಂದು ಬಿಸಿಯುಸಿರು ಹೊರಹಾಕುತ್ತಾರೆ. ಹಿಂದೆ ವಿಶಾಲ ಮನೆಗಳಲ್ಲಿ ಇದ್ದವರು ಈಗ ತಗಡಿನ ಶೀಟುಗಳ ಪುನರ್ವಸತಿ ಮನೆಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ.

ಇಂದಿಗೂ ದೊರಕದ ಭೂ ಹಕ್ಕು

ಸರ್ಕಾರದ ಉದಾಸೀನ, ಅರಣ್ಯ ಇಲಾಖೆಯ ಬಿಗಿ ನಿಲುವುಗಳಿಂದಾಗಿ ಇಂದಿಗೂ ಭೂಮಿಯ ಮೇಲಿನ ತಮ್ಮ ಹಕ್ಕು ಅನುಭವಿಸಲು ಸಾಧ್ಯವಾಗಿಲ್ಲ. ಶರಾವತಿ ಮುಳುಗಡೆ ಸೇರಿದಂತೆ ಎಲ್ಲ ಯೋಜನೆಗಳ ಸಂತ್ರಸ್ತರನ್ನು ಸ್ಥಳಾಂತರಿಸುವಾಗ, ಸರ್ಕಾರ ಅವರು ಕಳೆದುಕೊಂಡ ಭೂಮಿಯ ಎರಡು ಪಟ್ಟನ್ನು ನೀಡುವುದಾಗಿ ಭರವಸೆ ಇತ್ತಿತ್ತು. ಆದರೆ, ಕೊಟ್ಟದ್ದು ಅಲ್ಪ ಪ್ರಮಾಣದ ಭೂಮಿಯನ್ನಷ್ಟೆ. ಸಂತ್ರಸ್ತರು ನೆಲೆನಿಂತ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿಗಣಿಸಿ ಭೂ ಕಂದಾಯ ಕಾಯ್ದೆ 4 (1)ರ ಅಡಿ ಅಧಿಸೂಚನೆಯನ್ನೂ ಹೊರಡಿಸಿತ್ತು. ಆದರೆ, ಅದನ್ನು ಅರಣ್ಯ ಇಲಾಖೆ ದಾಖಲೆಗಳಿಂದ ಬಿಡುಗಡೆ ಮಾಡದ ಪರಿಣಾಮ ಕಂದಾಯ ದಾಖಲೆಗಳಲ್ಲಿ ಆ ಪ್ರದೇಶ ಕಂದಾಯ ಭೂಮಿ ಎಂದು, ಅರಣ್ಯ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದು ಉಳಿದುಕೊಂಡಿದೆ.

ಆಗ ಸರ್ಕಾರ ಮಾಡಿದ ಯಡವಟ್ಟು 30 ವರ್ಷಗಳ ನಂತರ ಮತ್ತೊಂದು ಸಮಸ್ಯೆ ಸೃಷ್ಟಿಸಿತು. ಅರಣ್ಯ ಒತ್ತುವರಿ ಪ್ರಕರಣ ಕೋರ್ಟ್‌ ಮುಂದೆ ಬಂದಾಗ ಈ ಎಲ್ಲ ಪ್ರದೇಶ ಅರಣ್ಯ ವ್ಯಾಪ್ತಿಗೆ ಸೇರಿದೆ ಎಂದು ಅರಣ್ಯ ಇಲಾಖೆ ಕೋರ್ಟ್‌ಗೆ ದಾಖಲೆ ಸಲ್ಲಿಸಿತ್ತು.

1995ರಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಈ 30 ವರ್ಷಗಳ ಅವಧಿಯಲ್ಲಿ ಮಲೆನಾಡಿನ ಭಾಗಗಳಲ್ಲಿ ನಿರ್ಮಾಣವಾದ ಜಲ ವಿದ್ಯುತ್‌ ಯೋಜನೆಗಳು, ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿದ ಪ್ರಕರಣ, ಪುನರ್ವಸತಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲೇ ಇಲ್ಲ. ಹಾಗಾಗಿ, ಸಂತ್ರಸ್ತರ ನೆಲೆಗಳು, ಮನೆ, ಶಾಲೆ, ಗೋಮಾಳ, ಸಾಗುವಳಿ ಜಮೀನು, ಕಿರು ಅರಣ್ಯ ಒಳಗೊಂಡಂತೆ ಎಲ್ಲವನ್ನೂ ಅರಣ್ಯ ಎಂದೇ ಭಾವಿಸಲಾಯಿತು.

ತಲೆಮಾರುಗಳಿಂದ ಅರಣ್ಯವನ್ನೇ ನಂಬಿಕೊಂಡು ಬಂದಿದ್ದ ಮಲೆನಾಡಿಗರಿಗೆ ಬಯಲು ಪ್ರದೇಶ ಸರಿಕಾಣಲಿಲ್ಲ. ಹಾಗಾಗಿಯೇ, ಕಾಡಿನ ಉತ್ಪನ್ನ ಹೇರಳವಾಗಿ ದೊರೆಯುವ, ಜಾನುವಾರಿಗೆ ಮೇವಿನ ಲಭ್ಯತೆ ಇರುವ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಪುರದಾಳು ಮತ್ತಿತರ ಭಾಗಗಳ ಅರಣ್ಯ ಪ್ರದೇಶಗಳಲ್ಲೇ ಬದುಕು ಕಟ್ಟಿಕೊಂಡರು. ಅಲ್ಲೆಲ್ಲ ನೆಲೆ ನಿಂತ ದಶಕಗಳ ನಂತರ ಅರಣ್ಯ ಇಲಾಖೆ ಕೈಗೊಂಡ ಬಿಗಿ ನಿಯಮಗಳು ಅವರಿಗೆ ಉರುಳಾದವು.

ಬೀದಿ ಪಾಲಾದ ಯೋಜನಾ ಸಂತ್ರಸ್ತರು

1960ರಿಂದ 1980ರವರೆಗಿನ ಎರಡು ದಶಕಗಳಲ್ಲಿ ವಿವಿಧ ಯೋಜನೆಗಳಿಗಾಗಿ ನೆಲೆ ಕಳೆದುಕೊಂಡರು. ಅಂಥ ಸಾವಿರಾರು ಸಂತ್ರಸ್ತ ಕುಟುಂಬಗಳನ್ನು ಸರ್ಕಾರ ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಭದ್ರಾವತಿ ತಾಲ್ಲೂಕುಗಳ ವ್ಯಾಪ್ತಿಯ ಖಾಲಿ ಜಾಗಗಳಿಗೆ ಸ್ಥಳಾಂತರಿಸಿತ್ತು. ಲಿಂಗನಮಕ್ಕಿ ಯೋಜನೆಗಾಗಿಯೇ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು.

ತೋಟ, ಗದ್ದೆ, ಜಮೀನು, ಮನೆಗಳ ದಾಖಲೆ ಇದ್ದವರಿಗೆ ಮಾತ್ರ ಪರಿಹಾರ, ಬದಲಿ ಜಮೀನು ಹಕ್ಕುಪತ್ರ ಸಿಕ್ಕಿದ್ದು. ಗೇಣಿ, ಕೂಲಿ ಮಾಡುತ್ತಾ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಜನರು ಬೀದಿಪಾಲಾದರು.

ಭೂ ದಾಖಲೆ ಇರದವರ ಗೋಳು: ಜಲ ವಿದ್ಯುತ್‌ ಯೋಜನೆಗಳಿಂದ ಸಂತ್ರಸ್ತರಾದವರ ಪೈಕಿ ಶೇ 90ರಷ್ಟು ಮಂದಿಗೆ ಭೂಮಿಯ ಹಕ್ಕು ಇರಲಿಲ್ಲ. ಶರಾವತಿ ಕಣಿವೆ ಯೋಜನೆಗಳು ಅನುಷ್ಠಾನಗೊಳ್ಳುವಾಗ ಭೂ ಒಡೆತನದ ಹಕ್ಕು ಬೆರಳೆಣಿಕೆಯಷ್ಟು ಜನರಲ್ಲಿ ಇತ್ತು. ಹಾಗಾಗಿ, ಭೂ ದಾಖಲೆ ಇದ್ದವರಿಗೆ ಮಾತ್ರ ಸಾಕಷ್ಟು ಭೂಮಿ ದೊರೆಯಿತಷ್ಟೆ. ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದ ಗೇಣಿದಾರರಿಗೆ ಸೂಕ್ತ ನ್ಯಾಯ ಸಿಗಲೇ ಇಲ್ಲ.

ಅಂತಹ ಗೇಣಿದಾರರು ಗುಳೆ ಹೊರಟು, ಹೊಸ ಸ್ಥಳದಲ್ಲಿಯೇ ಸಾಗುವಳಿ ಮಾಡಿಕೊಂಡು ಜೀವನ ಆರಂಭಿಸಿದ್ದರು. ಈಗಲೂ ಸರ್ಕಾರದ ಯೋಜನಾ ವರದಿಯಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ಹೇರಳವಾದ ಅನುದಾನ ಮೀಸಲಿದೆ. ಆದರೆ, ಭರವಸೆಗಳು ಈಡೇರದ ಕನಸುಗಳಂತಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು