ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೇಕೆ ಮೇಲೆದ್ದು ಬಂತು ಪ್ರತ್ಯೇಕ ಧರ್ಮದ ಪ್ರಶ್ನೆ? ಈವರೆಗಿನ ಸಮಗ್ರ ಅಪ್‌ಡೇಟ್‌

ಸೋನಿಯಾ ಗಾಂಧಿಗೆ ಎಂ.ಬಿ.ಪಾಟೀಲ್ ಪತ್ರ ಬರೆದಿದ್ದು ನಿಜವೇ? ನಕಲಿ ಪತ್ರ ಸೃಷ್ಟಿಸಿದ್ದು ಬಿಜೆಪಿ ಮಾಧ್ಯಮ ವಕ್ತಾರನೇ?
Last Updated 4 ಮೇ 2019, 15:57 IST
ಅಕ್ಷರ ಗಾತ್ರ

ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ‘ಪ್ರತ್ಯೇಕ ಲಿಂಗಾಯತ ಧರ್ಮ’ದ ಕೂಗು ನಂತರ ಏನೆಲ್ಲ ತಿರುವು ಪಡೆಯಿತು? ರಾಜಕೀಯ ಆಯಾಮ ಪಡೆದ ಬಳಿಕದ ಬೆಳವಣಿಗೆಗಳೇನು? ಕಾಂಗ್ರೆಸ್‌–ಬಿಜೆಪಿಗೆ ಇದರಿಂದ ಏನು ಲಾಭ–ನಷ್ಟವಾಯಿತು? ಮತ್ತೀಗ ಚರ್ಚೆ ಮುನ್ನೆಲೆಗೆ ಬಂದದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

***

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ಪರ–ವಿರೋಧ ಚರ್ಚೆ ನಂತರ ಹಲವು ತಿರುವುಗಳನ್ನು ಪಡೆದಿದೆ. ಆರಂಭದಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದ ವಿಚಾರವಾಗಿದ್ದರೂ ನಂತರ ರಾಜಕೀಯ ಆಯಾಮಕ್ಕೆ ಹೊರಳಿ ಚರ್ಚೆ ಕಾವೇರಿತ್ತು. ರಾಜ್ಯ ಸರ್ಕಾರವೇ ಅಖಾಡಕ್ಕಿಳಿದು ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆ, ವಿರೋಧದ ಬಿಸಿಯೇರಿತ್ತು. 2018ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯಂತೂ ಇದು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆಪ್ರಮುಖ ಅಸ್ತ್ರ–ಪ್ರತ್ಯಸ್ತ್ರವಾಗಿತ್ತು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅನುಭವಿಸಿದ ಹಿನ್ನಡೆಗೆ ‘ಲಿಂಗಾಯತ ಪ್ರತ್ಯೇಕ ಧರ್ಮ’ದ ವಿಚಾರದಲ್ಲಿ ಅವರು ತೋರಿದ ಉದ್ಧಟತನವೇ ಕಾರಣ’ ಎಂದೂ ಕೆಲವು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು.

ನಂತರ ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ಅಲ್ಲಿಗೆ ತಣ್ಣಗಾಯಿತು ಎಂದುಕೊಂಡಿದ್ದ ವಿವಾದ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಮತ್ತೆ ಭುಗಿಲೆದ್ದಿದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರೂ ವಿವಾದದಲ್ಲಿ ತಳಕು ಹಾಕಿಕೊಂಡಿರುವುದು ಇತ್ತೀಚಿನಬೆಳವಣಿಗೆ. ಆದರೆ ಇದು ಬಿಜೆಪಿಯವರು ಸೃಷ್ಟಿಸಿದ ಸುಳ್ಳು ಸುದ್ದಿ ಎಂದು ಕಾಂಗ್ರೆಸ್ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ತನಿಖೆ ವೇಳೆ ಕೆಲ ಪತ್ರಕರ್ತರನ್ನು ಬಂಧಿಸಿರುವ ವಿಚಾರವು ವಿವಾದದ ಬೆಂಕಿಗೆ ತುಪ್ಪ ಸುರಿದಿದೆ.

ಆರಂಭವಾದದ್ದು ಯಾವಾಗ, ಹೇಗೆ?

ರಾಜ್ಯಸರ್ಕಾರದ ಕಚೇರಿಗಳಲ್ಲಿ ಬಸವಣ್ಣನವರಭಾವಚಿತ್ರ ಹಾಕಲು ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಡಲು 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 2017ರ ಜೂನ್‌ 14ರಂದು ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಆಗ ವೀರಶೈವ–ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂಬ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಮನವಿ ಪತ್ರಕ್ಕೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹಿರಿಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ ಹಾಗೂ ಅಂದಿನ ಪೌರಾಡಳಿತ ಸಚಿವರೂ ಆಗಿದ್ದ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸಹಿ ಮಾಡಿದ್ದರು.

ಏತನ್ಮಧ್ಯೆ ಮಾತೆ ಮಹಾದೇವಿ ನೇತೃತ್ವದ ‘ಲಿಂಗಾಯತ ಧರ್ಮ ಮಹಾಸಭಾ’ (ಅಖಿಲ ಭಾರತ ಲಿಂಗಾಯತ ಧರ್ಮ ಪ್ರತಿನಿಧಿಗಳ ಸಂಸ್ಥೆ) ಜೂನ್‌ 23ರಂದು ಮುಖ್ಯಮಂತ್ರಿಗೆ ಮತ್ತೊಂದು ಮನವಿ ಸಲ್ಲಿಸಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿತು. ಇದಕ್ಕೆ ಆರಂಭದಲ್ಲೇ ಸಂಶೋಧಕ ಎಂ.ಚಿದಾನಂದಮೂರ್ತಿ ಅವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದಾದ ಬಳಿಕ ಪರ ವಿರೋಧದ ಹೇಳಿಕೆಗಳು ಬೆಳೆದು, ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ 2017ರ ಆಗಸ್ಟ್‌ 10ರಂದು ಲಿಂಗಾಯತ ಸಮಾಜದ ಮಠಾಧೀಶರು, ವಿವಿಧ ಪಕ್ಷಗಳ ಪ್ರಮುಖರು ಸಭೆ ಸೇರಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ನಾಂದಿ ಹಾಡಿದರು. ಆಗಿನ ಸಚಿವರಾದ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ, ಬಸವರಾಜ ರಾಯರಡ್ಡಿ ಹಾಗೂ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ಬೀದರ್‌, ಬೆಳಗಾವಿ, ಲಾತೂರ್‌, ಕಲಬುರ್ಗಿ, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ರ್‍ಯಾಲಿಗಳು ನಡೆದವು. 2018ರ ಜನವರಿ 19ರಂದು ಮಾತೆ ಮಹಾದೇವಿ ಬೆಂಗಳೂರಿನಲ್ಲಿ ರ್‍ಯಾಲಿ ನಡೆಸಿದರು. ನಂತರದಲ್ಲಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸಮಾವೇಶಗಳು ನಡೆದವು.

ಅಧ್ಯಯನಕ್ಕೆ ಸಮಿತಿ ರಚಿಸಿದ ಸರ್ಕಾರ

ಪ್ರತ್ಯೇಕ ಧರ್ಮದ ಕುರಿತು ಅಧ್ಯಯನ ನಡೆಸಲು ಸಿದ್ದರಾಮಯ್ಯ ಸರ್ಕಾರ 2017ರ ಡಿಸೆಂಬರ್‌ 10ರಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿತು. ನಾಗಮೋಹನ ದಾಸ್‌ (ಅಧ್ಯಕ್ಷರು), ಪುರುಷೋತ್ತಮ ಬಿಳಿಮಲೆ, ಸಿ.ಎಸ್.ದ್ವಾರಕಾನಾಥ್‌, ಸರಜೂ ಕಾಟ್ಕರ್‌, ರಾಮಕೃಷ್ಣ ಮರಾಠೆ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಮುಜಾಫರ್‌ ಅಸಾದಿ, ಹನುಮಾಕ್ಷಿ ಗೋಗಿ ಅವರು ಈ ಸಮಿತಿಯಲ್ಲಿದ್ದರು.

ಹೈಕೋರ್ಟ್‌ ಅಂಗಳಕ್ಕೆ ಚೆಂಡು

ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹೈಕೋರ್ಟ್‌ನಲ್ಲಿ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ವಿಚಾರಣೆ ನಡೆಸಿದನ್ಯಾಯಪೀಠ, ವರದಿಯ ಶಿಫಾರಸು ಹಾಗೂ ಸರ್ಕಾರದ ನಿರ್ಣಯ ತಾನು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು ಎಂದು ಸೂಚಿಸಿತ್ತು.

ಪ್ರತ್ಯೇಕ ಧರ್ಮಕ್ಕೆ ಶಿಫಾರಸು

ಸರ್ಕಾರ ನೇಮಕ ಮಾಡಿದ್ದ ಸಮಿತಿಯು 2018ರ ಮಾರ್ಚ್‌ 2ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಇದನ್ನು ಆಧರಿಸಿ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲು ಮಾರ್ಚ್ 21ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದರಂತೆ ಮಾರ್ಚ್‌ 23ರಂದು ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಿ, ಈ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು.

ವಿಧಾನಸಭೆ ಚುನಾವಣೆ ಘೋಷಣೆ, ಕಾವೇರಿದ ಚರ್ಚೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರತ್ಯೇಕ ಧರ್ಮದ ಕುರಿತಾದ ಚರ್ಚೆ ಕಾವೇರಿತು. ಪ್ರತಿಪಕ್ಷ ಬಿಜೆಪಿಯಂತೂ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿತು. ಧರ್ಮ ಒಡೆಯುವ ರಾಜಕಾರಣಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿತು. ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸಹ ಬಿಜೆಪಿಯ ತೀವ್ರ ವಿರೋಧ ಎದುರಿಸಬೇಕಾಯಿತು.

ಈ ಮಧ್ಯೆ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಜ್ಯದ ಶಿಫಾರಸನ್ನು ಮುಂದೂಡುತ್ತಾ ಚಾಣಾಕ್ಷ ನಡೆ ಅನುಸರಿಸಿತು. ವಿಧಾನಸಭೆ ಚುನಾವಣೆಯ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಹೇಳಿತು. ನಂತರ ವಿಷಯ ತುಸು ತಣ್ಣಗಾಗುತ್ತಾ ಬಂತು.

ಶಿಫಾರಸು ತಿರಸ್ಕರಿಸಿದ ಕೇಂದ್ರ

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ಸಂಬಂಧಿಸಿ ಕರ್ನಾಟಕ ಮಾಡಿರುವ ಶಿಫಾರಸನ್ನು ತಿರಸ್ಕರಿಸಲಾಗಿದೆ ಎಂದು 2018ರ ನವೆಂಬರ್‌ 13ರಂದು ಕೇಂದ್ರ ಸರಕಾರ ಘೋಷಿಸಿತು.

ಕ್ಷಮೆ ಯಾಚಿಸಿದ ಡಿ.ಕೆ.ಶಿ; ಗರಂ ಆದ‍ಪಾಟೀಲ್

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಕೈಹಾಕಿದ್ದಕ್ಕೆ 2018ರ ಅಕ್ಟೋಬರ್‌ನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೊತ್ತಮೊದಲ ಬಾರಿಗೆ ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡಿದ್ದರು.

‘ಪ್ರತ್ಯೇಕ ಲಿಂಗಾಯತ ಧರ್ಮದ ‌ವಿಚಾರದಲ್ಲಿ ನಾವು ಕೈ ಹಾಕಬಾರದಿತ್ತು. ನಮಗೆ (ಕಾಂಗ್ರೆಸ್) ಮಾಡಿರುವ ತಪ್ಪಿನ ಅರಿವಾಗಿದೆ. ಇದು ನನ್ನ ಆತ್ಮಸಾಕ್ಷಿಯ ಮಾತು. ಕೆಲವು ಸ್ನೇಹಿತರು ಪ್ರತ್ಯೇಕ ಧರ್ಮದ ಪರವಾಗಿ ಕೆಲಸ ಮಾಡಿದ್ದರು. ಜನರ ತೀರ್ಪು ನೋಡಿದರೆ ನಾವು ಯಾರ ಪರ ನಿಂತಿದ್ದೆವೋ ಅದಕ್ಕೆ ವಿರುದ್ಧವಾಗಿದೆ. ಇದನ್ನು ಯಾರಾದರೂ ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ’ ಎಂದು ಅವರು ಸಾರ್ವಜನಿಕವಾಗಿ ಹೇಳಿದ್ದರು. ಇದಾದ ಬಳಿಕ ಸಾರ್ವಜನಿಕವಾಗಿ ಕ್ಷಮೆಯನ್ನೂ ಕೋರಿದ್ದರು. ಇದು ಎಂ.ಬಿ.ಪಾಟೀಲ್ ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕ್ಷಮೆ ಕೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಎಂ.ಬಿ.ಪಾಟೀಲ್‌ ಇತ್ತೀಚೆಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಲಿಂಗಾಯತ ಧರ್ಮದ ವಿಚಾರದಲ್ಲಿ ಸಚಿವ ಶಿವಕುಮಾರ್ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅದಕ್ಕೆ ನಾನು ತುಪ್ಪ ಸುರಿಯಲ್ಲ. ಈ ವಿಷಯವನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಗಮನಕ್ಕೂ ತರಲಾಗುವುದು ಎಂದು ಪಾಟೀಲ್ ಹೇಳಿದ್ದರು.

ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರೇಎಂ.ಬಿ.ಪಾಟೀಲ್?

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಪತ್ರ ಬರೆದಿದ್ದರು ಎಂಬ ವರದಿಯೊಂದು ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ (ಪ್ರಜಾವಾಣಿ ಅಲ್ಲ) ಪ್ರಕಟವಾಗಿತ್ತು. ಅದರಲ್ಲಿ ಸಚಿವರ ಲೆಟರ್‌ಹೆಡ್‌ನಲ್ಲಿದ್ದ ಪತ್ರದ ಪ್ರತಿಯೂ ಇತ್ತು.ಸಚಿವರ ಲೆಟರ್‌ಹೆಡ್ ಸಹ ಇತ್ತು. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಸಮೀಪಿಸುತ್ತಿರುವಂತೆಯೇ ಪ್ರಕಟವಾದ ಈ ವರದಿ ಕೋಲಾಹಲ ಸೃಷ್ಟಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರು ಪಾಟೀಲ್ ವಿರುದ್ಧ ಟೀಕೆಗಳ ಮಳೆಗರೆದಿದ್ದರು. ಬಿಜೆಪಿಯ ಕರ್ನಾಟಕ ಘಟಕವು ಈ ಪತ್ರವನ್ನು ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ, ತಮ್ಮ ವಿರುದ್ಧ ಪ್ರಕಟವಾಗಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿd ಪಾಟೀಲ್‌, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದ್ದರು.

ಇದೇ ಮೊದಲಲ್ಲ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜಯಿಸುವ ಸಲುವಾಗಿಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕಲ್ಪಿಸಬೇಕು ಮತ್ತು ಹಿಂದೂ ಧರ್ಮವನ್ನು ಒಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಪಾಟೀಲ್ ಸಲಹೆ ನೀಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಈ ಪತ್ರವು ಪಾಟೀಲ್ ಅಧ್ಯಕ್ಷರಾಗಿರುವಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್ ಒಳಗೊಂಡಿದೆ ಎನ್ನಲಾಗಿದೆ.

ಆದರೆ, ಈ ಪತ್ರಕ್ಕೆ ಸಂಬಂಧಿಸಿ ವರದಿಯಾಗಿರುವುದು ಇದೇ ಮೊದಲಲ್ಲ.2018ರ ವಿಧಾನಸಭಾ ಚುನಾವಣೆ ವೇಳೆಯೇ ಈ ಪತ್ರ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.ಪೋಸ್ಟ್‌ಕಾರ್ಡ್‌ಎಂಬ ವೆಬ್‌ಸೈಟ್‌ನಲ್ಲಿ ಈ ಪತ್ರದ ಕುರಿತು ಮೊದಲು ವರದಿ ಪ್ರಕಟವಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ವೆಬ್‌ಸೈಟ್‌ನಿಂದ ಆ ವರದಿಯನ್ನು ಅಳಿಸಿಹಾಕಲಾಗಿತ್ತು. ಪೋಸ್ಟ್‌ಕಾರ್ಡ್‌ನಲ್ಲಿ ಪ್ರಕಟವಾಗಿದ್ದು ಸುಳ್ಳು ಸುದ್ದಿ ಎಂದು 2018ರಲ್ಲೇಬೂಮ್‌ ಲೈವ್ಸುದ್ದಿ ತಾಣ ಫ್ಯಾಕ್ಟ್ ಚೆಕ್ ಪ್ರಕಟಿಸಿತ್ತು.

2017ರಲ್ಲೂ ದಾಖಲಾಗಿತ್ತು ದೂರು

‘ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್ ಬಳಸಿ, ನಕಲಿ ಪತ್ರವೊಂದನ್ನು ಸೃಷ್ಟಿಸಲಾಗಿದೆ. ಅದರಲ್ಲಿ ನನ್ನ ಸಹಿಯನ್ನು ನಕಲು ಮಾಡಿ 2017ರ ಜುಲೈ 10ರಂದು ಜಾಲತಾಣಗಳಲ್ಲಿ ಹರಿಬಿಡಲಾಗಿದೆ’ ಎಂದು ಆಗಲೇವಿಜಯಪುರದ ಆದರ್ಶನಗರ ಠಾಣೆಗೆ ಪಾಟೀಲ್ ದೂರು ನೀಡಿದ್ದರು. ನಂತರಪ್ರಕರಣ ಸಿಐಡಿಗೆ ವರ್ಗವಾಗಿತ್ತು.

ಪತ್ರಕರ್ತರ ಬಂಧನ, ಸುಳ್ಳು ಸುದ್ದಿ ಹರಡಿದ ಬಿಜೆಪಿ

ಪೋಸ್ಟ್ ಕಾರ್ಡ್‌ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಅದರ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗಡೆ ಅವರನ್ನು ಇತ್ತೀಚೆಗೆ ಸಿಐಡಿ ವಿಚಾರಣೆ ನಡೆಸಿದೆ. ಇದೇ ವೇಳೆ, ‘ಸಿಐಡಿ ಪೊಲೀಸರು ಮಹೇಶ್ ಹೆಗಡೆ ಅವರನ್ನು ಬಂಧಿಸಿದ್ದಾರೆ’ ಎಂದು ಬಿಜೆಪಿಯು ಸುದ್ದಿ ಹರಡಿತು! ಬಳಿಕ,‘ತನಿಖೆಗೆ ಅಗತ್ಯವಿದ್ದ ಕೆಲವರನ್ನು ಈಗಾಗಲೇ ವಿಚಾರಣೆ ನಡೆಸಿದ್ದೇವೆ. ಅಂತೆಯೇ ಮಹೇಶ್ ಅವರನ್ನೂ ಕರೆಸಿ ಪ್ರಶ್ನೆ ಮಾಡಿದ್ದೇವೆ. ಈವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದರು.

‘ಆ ಪತ್ರ ಪೋಸ್ಟ್‌ಕಾರ್ಡ್‌ ವೆಬ್‌ಸೈಟ್‌ನಲ್ಲೇ ಮೊದಲು ಪ್ರಕಟವಾಗಿತ್ತು ಎಂಬ ಮಾಹಿತಿ ಇದೆ. ಹೀಗಾಗಿ, ಅದರ ಮೂಲದ ಬಗ್ಗೆ ಮಹೇಶ್ ಅವರಿಂದ ವಿವರಣೆ ಕೇಳಲಾಯಿತು. ಅದಕ್ಕೆ ಸರಿಯಾಗಿ ಉತ್ತರಿಸದ ಅವರು, ಕಾಲಾವಕಾಶ ಕೋರಿದ್ದಾರೆ’ ಎಂದೂ ಸಿಐಡಿ ಮೂಲಗಳು ಮಾಹಿತಿ ನೀಡಿದವು.

ಹೇಮಂತ್ ಕುಮಾರ್
ಹೇಮಂತ್ ಕುಮಾರ್

ಪತ್ರ ಸೃಷ್ಟಿಸಿದ್ದು ಬಿಜೆಪಿ ಮಾಧ್ಯಮ ವಕ್ತಾರ ಹೇಮಂತ್‌ಕುಮಾರ್!

ಎಂ.ಬಿ.ಪಾಟೀಲ್ ಹೆಸರಿನಲ್ಲಿ ಬರೆಯಲಾಗಿದೆ ಎಂಬ ನಕಲಿ ಪತ್ರವನ್ನು ಸೃಷ್ಟಿಸಿದ್ದು ಪತ್ರಕರ್ತ ಎಸ್‌.ಎ. ಹೇಮಂತ್‌ಕುಮಾರ್ (57) ಎಂಬುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.ದೆಹಲಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ‘ಉದಯ್ ಇಂಡಿಯಾ’ ವಾರಪತ್ರಿಕೆಯ ವಿಶೇಷ ಪ್ರತಿನಿಧಿ ಆಗಿರುವಹೇಮಂತ್‌ಕುಮಾರ್ ಬೆಂಗಳೂರಿನಬಸವೇಶ್ವರ ನಗರದ ನಿವಾಸಿ. ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಪುರಾವೆಗಳನ್ನು ಸಂಗ್ರಹಿಸಿ ಆರೋಪಿ ಹೇಮಂತ್‌ಕುಮಾರ್ ಅವರನ್ನು ಬಂಧಿಸಲಾಗಿದೆ.ಹೇಮಂತ್‌ ಅವರೇ ಪತ್ರವನ್ನು ಸೃಷ್ಟಿಸಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ನಂತರ, ಆ ಪತ್ರವನ್ನೇ ಪೋಸ್ಟ್‌ಕಾರ್ಡ್‌ ಜಾಲತಾಣಕ್ಕೆ ನೀಡಿದ್ದರು. ಅದಾದ ನಂತರ, ಪತ್ರಿಕೆಯೊಂದು ಅದೇ ಪತ್ರವನ್ನು ಆಧರಿಸಿ ಸುದ್ದಿ ಪ್ರಕಟಿಸಿತ್ತುಎಂದು ಸಿಐಡಿಯ ಐಜಿಪಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ಮತ್ತೆ ಶುರುವಾಯ್ತು ಬಿಜೆಪಿ–ಕಾಂಗ್ರೆಸ್ ವಾಕ್ಸಮರ

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಬಿಜೆಪಿ ಪರ ಸಹಾನುಭೂತಿ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ. ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಎಸ್‌. ಸಹ ಹೇಮಂತ್‌ಕುಮಾರ್ ಬಂಧನವನ್ನು ಖಂಡಿಸಿದ್ದಾರೆ.

‘ಗೃಹ ಸಚಿವರ ಸೂಚನೆಯಂತೆ ಹೇಮಂತ್‌ಕುಮಾರ್ ಅವರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ ಅವರ ಪತಿ, ಸಿಐಡಿ ಐಜಿ‍ಪಿ ಹೇಮಂತ್‌ ನಿಂಬಾಳ್ಕರ ತನಿಖೆ ನಡೆಸುತ್ತಿರುವುದನ್ನು ಗಮನಿಸಿದರೆ ಇದರ ಹಿಂದಿರುವ ಉದ್ದೇಶ ಸ್ಪಷ್ಟವಾಗುತ್ತದೆ’ ಎಂಬುದು ಶೋಭಾ ಆರೋಪ.

ಇದಕ್ಕೆ ಎಂ.ಬಿ.ಪಾಟೀಲ್ ಸಹ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಕಲಿ ಪತ್ರ ಪ್ರಕರಣದ ತನಿಖೆ ಬಗ್ಗೆ ನಿಮಗೇಕೆ ಆತಂಕ?ನಾನು ವೈಯಕ್ತಿಕ ವಿಷಯಕ್ಕಾಗಿ ಹೋರಾಟ ಮಾಡುವುದಕ್ಕಿಂತಲೂ ಹೆಚ್ಚು ಆಸಕ್ತಿಯಿಂದ ಕಾವೇರಿ, ಮಹದಾಯಿ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡುತ್ತಿದ್ದೆ. ಆಗ ನಿಮ್ಮ ಲೆಟರ್ ಪ್ಯಾಡ್ ಎಲ್ಲಿತ್ತು? ನಿಮ್ಮದು ಬರೇ ಪ್ರಚಾರ ರಾಜಕಾರಣ, ಶೂನ್ಯ ವಿಕಾಸ. ನಿಮಗೆ ಮೇ 23ರ ಬಗ್ಗೆ ಹೆದರಿಕೆಯೇ?’ ಎಂದು ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT