ಗುರುವಾರ , ಸೆಪ್ಟೆಂಬರ್ 23, 2021
21 °C
ಸಂತೋಷ್‌, ಲಿಂಬಾವಳಿ, ಅಶೋಕ್, ರವಿ ಹೆಸರು ಮುಂಚೂಣಿಯಲ್ಲಿ

ಬಿಜೆಪಿ ರಾಜ್ಯ ಸಾರಥಿ: ಪೈಪೋಟಿ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ಎಸ್‌.ಯಡಿಯೂರಪ್ಪ ಅವರು 2016ರ ಏಪ್ರಿಲ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. 2018ರ ಮೇ ತಿಂಗಳಿಂದ ಅವರು ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಕಮಲ ಪಡೆಯಲ್ಲಿದೆ. ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಿಸಲು 2018ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದರು. ಬಳಿಕ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪ ಅವರನ್ನು ಬದಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ರಾಜ್ಯ ಘಟಕಕ್ಕೆ ಹೊಸ ಸಾರಥಿ ಬರುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ ಹಾಗೂ ಹಿರಿಯ ಶಾಸಕ ಆರ್‌.ಅಶೋಕ್‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

‘ನಾನೇನೂ ಸನ್ಯಾಸಿಯಲ್ಲ. ವರಿಷ್ಠರು ಅವಕಾಶ ನೀಡಿದರೆ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಸಿದ್ಧ’ ಎಂದು ಅಶೋಕ್‌ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ‘ಅಧ್ಯಕ್ಷ ಸ್ಥಾನ ಕೈತಪ್ಪಿದರೂ ವಿರೋಧ ಪಕ್ಷದ ನಾಯಕ ಸ್ಥಾನ ಇದ್ದೇ ಇರುತ್ತದೆ ಅಲ್ಲವೇ’ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.

‘ಲಿಂಬಾವಳಿ ಅವರು ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರ ಜತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನ ತೊರೆಯುವ ವೇಳೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಆಪ್ತರನ್ನು ಸಾರಥಿಯನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಲಿಂಬಾವಳಿ ಕಡೆಗೆ ಅವರ ಒಲವು ಇದೆ’ ಎಂದು ರಾಜ್ಯ ನಾಯಕರೊಬ್ಬರು ಹೇಳಿದರು.

ಸಿ.ಟಿ.ರವಿ ಹಾಗೂ ಆರ್.ಅಶೋಕ್‌ ಒಕ್ಕಲಿಗ ಸಮುದಾಯದವರು. ಅವರಿಗೆ ಲೋಕಸಭಾ ಚುನಾವಣೆಯ ತಮಿಳುನಾಡಿನ ಸಹ ಉಸ್ತುವಾರಿಯನ್ನು ವಹಿಸಲಾಗಿತ್ತು. ಅಶೋಕ್‌ ಅವರನ್ನು ಲೋಕಸಭಾ ಚುನಾವಣೆಯ ಪ್ರಚಾರದ ಸಂಚಾಲಕರನ್ನಾಗಿ ಮಾಡಲಾಗಿತ್ತು.  ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಬೆಂಗಳೂರಿನ ನಾಯಕರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನುಕೂಲವಾಗಲಿದೆ ಎಂಬ ವಾದವನ್ನು ಕೆಲವು ನಾಯಕರು ಮಂಡಿಸಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದ ಸಂತೋಷ್‌ ಅವರು ಈ ಸಲ ಪಕ್ಷದ ತಾರಾ ಪ್ರಚಾರಕರಾಗಿಯೂ ಗುರುತಿಸಿಕೊಂಡವರು. ಅವರು ಸಹ ರಾಜ್ಯ ರಾಜಕಾರಣಕ್ಕೆ ಬರಲು ಉತ್ಸುಕರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲಿದೆ. ಮುಖ್ಯಮಂತ್ರಿಯಾದ ಕೂಡಲೇ ಯಡಿಯೂರಪ್ಪ ಅವರು ಅಧ್ಯಕ್ಷ ಸ್ಥಾನವನ್ನು ತ್ಯಜಿಸಲಿದ್ದಾರೆ. ಅಧ್ಯಕ್ಷರ ಬದಲಾವಣೆ ಸುಸೂತ್ರವಾಗಿ ನೆರವೇರಲಿದೆ’ ಎಂದು ರಾಜ್ಯ ನಾಯಕರೊಬ್ಬರು ವಿಶ್ಲೇಷಿಸಿದರು.

ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ: ಬಿಎಸ್‌ವೈ 
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬಿಜೆಪಿಯ ಹಿರಿಯ ಮುಂದಾಳು ಎಸ್‌.ಎಂ. ಕೃಷ್ಣ ಅವರಿಗೆ 88ನೇ ಹುಟ್ಟುಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ವೇಳೆಯಲ್ಲಿ ಕೃಷ್ಣ ಅವರು ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಪಕ್ಷ 22 ಕ್ಷೇತ್ರಗಳಲ್ಲಿ ಗೆಲುವು ತಂದುಕೊಡುವ ನಿಟ್ಟಿನಲ್ಲಿ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ಕೇಂದ್ರದಲ್ಲಿ ನಮ್ಮ ಪಕ್ಷ 288 ಸ್ಥಾನಗಳನ್ನು ಗೆಲ್ಲಲಿದೆ’ ಎಂದರು.’

ಕೃಷ್ಣ  ಅವರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಶುಭಾಶಯ ಕೋರಿದರು. ಶಿವಕುಮಾರ್‌ ಹಾಗೂ ಕೃಷ್ಣ ಅವರು ಒಂದು ಗಂಟೆ ಮಾತುಕತೆ ನಡೆಸಿದರು. ‘ಕೃಷ್ಣ ನನ್ನ ತಂದೆಯ ಸಮಾನರು. ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿಲ್ಲ. ನನ್ನದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನೇ ಹೇಳುವುದಿದ್ದರೂ ಬಹಿರಂಗವಾಗಿಯೇ ಆಡುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು