ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಾಹಿತಿಗಳ ಪುಸ್ತಕ ಪ್ರಕಟಣೆ ಸ್ಥಗಿತ

ಪರಿಷತ್ತಿನ ಉಗ್ರಾಣದಲ್ಲೇ ರಾಶಿ ಬಿದ್ದ ಪುಸ್ತಕಗಳು l ಸಮ್ಮೇಳನದ ಒಟ್ಟು ವೆಚ್ಚದಲ್ಲಿ ₹ 65 ಲಕ್ಷ ಉಳಿತಾಯಕ್ಕೆ ಕ್ರಮ
Last Updated 27 ಜನವರಿ 2020, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಸಾಹಿತಿಗಳ ಕೃತಿಗಳು ಮಾರಾಟವಾಗುತ್ತಿಲ್ಲ. ಹಲವು ವರ್ಷಗಳಿಂದ ವರ್ಷಕ್ಕೆ ಸರಾಸರಿ ₹50 ಲಕ್ಷ ಮೌಲ್ಯದ ಪುಸ್ತಕಗಳು ಉಗ್ರಾಣದಲ್ಲಿ ದೂಳು ತಿನ್ನುತ್ತಿವೆ. ಪರಿಣಾಮ,ಇನ್ನು ಮುಂದೆ ಸ್ಥಳೀಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನೇ ಕೈಬಿಡಲು ಪರಿಷತ್ತು ನಿರ್ಧರಿಸಿದೆ.

ಫೆ.5ರಿಂದ ಆರಂಭವಾಗಲಿರುವಅಖಿಲ ಭಾರತ 85ನೇ ಸಾಹಿತ್ಯ ಸಮ್ಮೇಳನಕ್ಕೆ ಕಲಬುರ್ಗಿಯಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಸಮ್ಮೇಳನದಲ್ಲಿಕಸಾಪ ಪ್ರಕಟಿಸಿದ 20 ಕೃತಿಗಳು ಮಾತ್ರ ಬಿಡುಗಡೆಯಾಗುತ್ತಿವೆ. ಅಲ್ಲಿನ ಸಾಹಿತಿಗಳು ತಮ್ಮದೇ ಖರ್ಚಿನಲ್ಲಿ ಕೃತಿಗಳನ್ನು ಮುದ್ರಿಸಿದ್ದರೆ ಸಮ್ಮೇಳನದ ಉದ್ಘಾಟನೆಯ ದಿನದಂದೇ ಬಿಡುಗಡೆಗೆ ಅವಕಾಶ ನೀಡಲು ಪರಿಷತ್ತು ನಿರ್ಧರಿಸಿದೆ. ಇದರಿಂದಾಗಿ ಸಮ್ಮೇಳನದ ಒಟ್ಟು ವೆಚ್ಚದಲ್ಲಿ ₹ 65 ಲಕ್ಷ ಉಳಿಕೆಯಾಗಲಿದೆ ಎಂದು ಲೆಕ್ಕ ಹಾಕಲಾಗಿದ್ದು, ಈ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ.

ಈ ಹಿಂದೆ ಸಮ್ಮೇಳನಗಳ ಸಂಖ್ಯೆಗೆ ತಕ್ಕಂತೆ ಪುಸ್ತಕ ಪ್ರಕಟಣೆಗಳ ಸಂಖ್ಯೆಯಲ್ಲಿಯೂ ಏರಿಕೆ ಮಾಡಿ, ಪ್ರಕಟಿಸಲಾಗುತಿತ್ತು. ಪುಸ್ತಕಗಳನ್ನು ಆಯ್ಕೆ ಮಾಡಲು ಪ್ರಕಟಣಾ ಸಮಿತಿಯನ್ನೂ ರಚಿಸಲಾಗುತಿತ್ತು. ಸಮ್ಮೇಳನ ನಡೆಯುವ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳು ಬಾರದ ಹಿನ್ನೆಲೆಯಲ್ಲಿ ಪ್ರಕಟಣೆಗೆ ಬಂದ ಬಹುತೇಕ ಕೃತಿಗಳಿಗೆ ಬಿಡುಗಡೆಯ ಭಾಗ್ಯ ದೊರೆಯುತ್ತಿತ್ತು. ಆದರೆ, ಈಗ ಆ ಕೃತಿಗಳ ಸಾವಿರಾರು ಪ್ರತಿಗಳನ್ನು ಇಡಲು ಸ್ಥಳದ ಸಮಸ್ಯೆ ಎದುರಾಗಿದೆ. ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾದರೂ ಓದುಗರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದಾಗಿ ಪುಸ್ತಕಗಳು ದೂಳು ತಿನ್ನುತ್ತಿವೆ.

ಸ್ಥಳೀಯ ಸಾಹಿತಿಗಳ ಕೃತಿಗಳಿಗೆ ಆದ್ಯತೆ ನೀಡಬೇಕು ಎಂಬ ಒತ್ತಡ ಹಾಗೂ ಒತ್ತಾಯವೂ ಯೋಜನೆ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದ್ದು, ನಿಗದಿತ ಜಿಲ್ಲೆಯಿಂದ ಪ್ರಕಟಣೆಗೆ ಕೃತಿಗಳೂ ಬರುತ್ತಿಲ್ಲ.

ಸೀಮಿತ ವ್ಯಾಪ್ತಿ: ಸಮ್ಮೇಳನಗಳಲ್ಲಿ ಈವರೆಗೆ ಬಿಡುಗಡೆಯಾಗಿರುವ ಬಹುತೇಕ ಕೃತಿಗಳು ಜಿಲ್ಲೆಯ ಭೌಗೋಳಿಕ ವೈಶಿಷ್ಟ್ಯ, ಅಲ್ಲಿನ ಜನರ ಜೀವನ ವಿಧಾನ, ಭಾಷೆ, ಜೀವನ ಚರಿತ್ರೆ, ಪ್ರವಾಸಿ ತಾಣಗಳ ಮಾಹಿತಿಯನ್ನು ಒಳಗೊಂಡಿವೆ. ಹಾಗಾಗಿ ಪರಿಷತ್ತು ಈ ಕೃತಿಗಳನ್ನು ಶಾಲಾ–ಕಾಲೇಜುಗಳ ಗ್ರಂಥಾಲಯಗಳಿಗೆ ನೀಡಲು ಮುಂದಾಗಿದೆ.

‘2006ರಲ್ಲಿ ಬೀದರ್‌ನಲ್ಲಿ ನಡೆದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ 72 ಶೀರ್ಷಿಕೆಗಳ ತಲಾ 1,500 ಪ್ರತಿಗಳ ಪೈಕಿ ಬಹುತೇಕ ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದಿವೆ. ಇದು ರಾಷ್ಟ್ರೀಯ ಪೋಲು. ಈ ಬಗ್ಗೆ ಕಲಬುರ್ಗಿ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿರುವೆ’ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕರು ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರಕಟಣೆಗೆ ಪುಸ್ತಕಗಳನ್ನು ನೀಡುವ ಪರಿಣಾಮ ಸರಿಯಾಗಿ ಮೌಲ್ಯಮಾಪನ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಸಮ್ಮೇಳನ ನಡೆಯುವ ಭಾಗದಿಂದ ಈವರೆಗೂ ಬಿಡುಗಡೆಗೆ ಯಾವುದೇ ಕೃತಿಗಳು ಬಂದಿಲ್ಲ’ ಎಂದರು.

ಗುಣಮಟ್ಟದ 70–80 ಶೀರ್ಷಿಕೆಗಳು ಒಂದೇ ಜಿಲ್ಲೆಯಿಂದ ಸಿಗುವುದು ಕಷ್ಟ.<br/>ಹಾಗಾಗಿಯೇ ಸಮ್ಮೇಳದ ವೇಳೆ ಪುಸ್ತಕ<br/>ಗಳ ಬಿಡುಗಡೆ ಪದ್ಧತಿ ಕೈಬಿಡಲಾಗಿದೆ

-ಮನು ಬಳಿಗಾರ್, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT