ಬುಧವಾರ, ಜೂನ್ 3, 2020
27 °C
ಬ್ಯಾಂಕಿಂಗ್‌ ಕೋಚಿಂಗ್‌ಗೆ ತೆರಳಿದ ರಾಜ್ಯದ ನೂರಾರು ವಿದ್ಯಾರ್ಥಿಗಳ ಪರಿಪಾಟಲು

ಲಾಕ್‌ಡೌನ್‌: ಆಂಧ್ರದಲ್ಲಿ ಕನ್ನಡಿಗರು ‘ಲಾಕ್‌’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿ, ರಾಜ್ಯಗಳ ಗಡಿಗಳಲ್ಲಿ ಜನರ ಓಡಾಟಕ್ಕೆ ಕಠಿಣ ನಿರ್ಬಂಧ ವಿಧಿಸಿದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲ ತಾಲ್ಲೂಕಿನಲ್ಲಿ ಪರದಾಡುತ್ತಿದ್ದಾರೆ.

ಬ್ಯಾಂಕಿಂಗ್‌ ಪರೀಕ್ಷೆಗೆ ಕೋಚಿಂಗ್‌ ಪಡೆಯುವ ಸಲುವಾಗಿ ಇಲ್ಲಿಗೆ ತೆರಳಿ, ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಮತ್ತು ಕೊಠಡಿಗಳನ್ನು ಬಾಡಿಗೆಗೆ ಪಡೆದುಕೊಂಡು ನೆಲೆಸಿರುವ ಈ ಕನ್ನಡಿಗ ವಿದ್ಯಾರ್ಥಿಗಳು, ರಾಜ್ಯಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಆದರೆ, ಸ್ಥಳದಿಂದ ತೆರಳಲು ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ‘ಕರ್ನಾಟಕದ ಗಡಿಯವರೆಗೆ ಬಿಟ್ಟುಬಿಡಿ’ ಎಂದು ಗೋಗರೆದರೂ ಪೊಲೀಸರು ಅವಕಾಶ ನೀಡಲು ತಯಾರಿಲ್ಲ.

ಈ ಬಗ್ಗೆ ನಂದ್ಯಾಲದಿಂದ ದೂರವಾಣಿ ಮೂಲಕ ಮಾತನಾಡಿದ ಮಂಡ್ಯದ ಹರೀಶ್ ರಾಜ್‌, ‘50ಕ್ಕೂ ಹೆಚ್ಚು ವಿದ್ಯಾರ್ಥಿನಿಯರೂ ಸೇರಿದಂತೆ ಇಲ್ಲಿರುವ ನಾವೆಲ್ಲರೂ ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ತೀವ್ರ ಸಂಕಷ್ಟದಲ್ಲಿದ್ದೇವೆ. ಪಿಜಿಯಲ್ಲಿ ಇರುವವರಿಗೆ ಊಟದ ವ್ಯವಸ್ಥೆ ಇದ್ದರೂ ಕೊಠಡಿಗಳಲ್ಲಿರುವವರಿಗೆ ಸರಿಯಾದ ತಿಂಡಿ ತಿನಿಸು ಸಿಗುತ್ತಿಲ್ಲ. ಊರಿಗೆ ಹಿಂದಿರುಗಲು ಬಯಸಿದ್ದರೂ ಯಾವುದೇ ವ್ಯವಸ್ಥೆ ಇಲ್ಲ‘ ಎಂದು ಅಳಲು ತೋಡಿಕೊಂಡರು.

’ನಮ್ಮ ಜೊತೆ ಇರುವ, ಸಿರಿಗೆರೆ ಮಠದಲ್ಲಿ ಓದಿರುವ  ವಿದ್ಯಾರ್ಥಿಯೊಬ್ಬ ಶನಿವಾರ (ಮಾರ್ಚ್‌ 28) ಅಲ್ಲಿನ ಸ್ವಾಮೀಜಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಮ್ಮ ಕಷ್ಟವನ್ನು ಹೇಳಿಕೊಂಡಿದ್ದಾನೆ. ವಾಟ್ಸ್‌ಆ್ಯಪ್‌ ಮೂಲಕವೂ ಹಲವರಿಗೆ ವಿಷಯ ತಿಳಿಸಿದ್ದೇವೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನಮ್ಮ ಬಗ್ಗೆ ಮಾಹಿತಿ ನೀಡಿ ನೆರವಾಗುವ ಭರವಸೆಯನ್ನು ಸಿರಿಗೆರೆ ಸ್ವಾಮೀಜಿ ನೀಡಿದ್ದಾರೆ. ಆ ನಿರೀಕ್ಷೆಯಲ್ಲಿದ್ದೇವೆ‘ ಎಂದರು.

’ನಾವಷ್ಟೇ ಅಲ್ಲದೆ, ಕೋಚಿಂಗ್‌ ಪಡೆಯಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ವಿದ್ಯಾರ್ಥಿಗಳೂ ಸಂಕಷ್ಟದಲ್ಲಿದ್ದಾರೆ. ತೆಲಂಗಾಣದ 120 ವಿದ್ಯಾರ್ಥಿಗಳಿಗೆ ಅವರವರ ಊರಿಗೆ ತೆರಳಲು ಸ್ಥಳೀಯ ಪೊಲೀಸರು ಅನುಮತಿ ನೀಡಿದ್ದರು. ಆದರೆ, ಜೀಪಿನಲ್ಲಿ ಹೋಗಿದ್ದ ಆ ವಿದ್ಯಾಥಿಗಳನ್ನು ಆಂಧ್ರದ ಗಡಿದಾಟಲು ಬಿಟ್ಟಿಲ್ಲ. ಹೀಗಾಗಿ, ವಾಪಸು ಇಲ್ಲಿಗೇ ಬಂದಿದ್ದಾರೆ‘ ಎಂದೂ ವಿವರಿಸಿದರು.

ಬ್ಯಾಂಕಿಂಗ್‌ ಪರೀಕ್ಷೆಗೆ ತರಬೇತಿ ಪಡೆಯಲು ಬೀದರ್, ವಿಜಯಪುರ, ಧಾರವಾಡ, ಮಂಡ್ಯ, ರಾಮನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಇದೀಗ ಆಂಧ್ರ ಪ್ರದೇಶದ ಹಲವೆಡೆ ಸೋಂಕು ಹಬ್ಬುತ್ತಿದ್ದು, ನಾವಿರುವ ತಾಲ್ಲೂಕಿನಲ್ಲೂ ಆತಂಕ ಎದುರಾಗಿದೆ. ಇಲ್ಲಿ ಪಿ.ಜಿ ಮತ್ತು ಸಣ್ಣ ಸಣ್ಣ ಕೊಠಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೋಚಿಂಗ್‌ ಪಡೆಯಲು ಬೇರೆ ಬೇರೆ ಕಡೆಯಿಂದ ಬಂದವರು ಹೆಚ್ಚು ಇದ್ದಾರೆ. ಒಬ್ಬರಿಗೆ ಸೋಂಕು ತಗಲಿದರೂ ಭಾರಿ ವೇಗವಾಗಿ ಹರಡುವ ಸಾಧ್ಯತೆ ಇದೆ‘ ಎಂದೂ ಹರೀಶ್ ರಾಜ್ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು