ಹಾಸನ: ‘ತೆನೆ’ ಮೇಲೆ ಸಿಟ್ಟಿನ ಗಂಟು– ಅಭಿಮಾನವೂ ಉಂಟು

ಬುಧವಾರ, ಏಪ್ರಿಲ್ 24, 2019
31 °C

ಹಾಸನ: ‘ತೆನೆ’ ಮೇಲೆ ಸಿಟ್ಟಿನ ಗಂಟು– ಅಭಿಮಾನವೂ ಉಂಟು

Published:
Updated:

ಹಾಸನ: ರಾಜಕೀಯವನ್ನೇ ಉಂಡು, ಹೊದ್ದು ಮಲಗುವ ಹಾಸನ ಜಿಲ್ಲೆಯಲ್ಲೀಗ ಚುನಾವಣಾ ಕಣ ರಂಗೇರಿದೆ. ಆದರೆ, ಇದುವರೆಗಿನ ಚುನಾವಣೆಗಳಲ್ಲಿ ಬದ್ಧ ವೈರಿಗಳಾಗಿ ಕಾದಾಡಿದ್ದ ಕಾಂಗ್ರೆಸ್‌–ಜೆಡಿಎಸ್‌ ಈ ಬಾರಿ ಮಿತ್ರರಾಗಿ ಕಣಕ್ಕಿಳಿದಿರುವುದನ್ನು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಜಿಲ್ಲೆಯಲ್ಲಿ ಒಂದು ಸುತ್ತು ಹಾಕಿದಾಗ ಭಿನ್ನತೆಯ ಈ ಭಾವ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂಬುದು ಎದ್ದು ಕಾಣುತ್ತದೆ. ‘ನಮ್ಮ ವಿರುದ್ಧ ಕೇಸ್‌ ಹಾಕಿಸಿದವರ ಪರ ಮತ ಯಾಚಿಸುವುದು ಹೇಗೆ’ ಎಂಬ ಪ್ರಶ್ನೆಯನ್ನು ಹಾಕುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.

ಇದನ್ನೂ ಓದಿ: ಹಾಸನ ಕ್ಷೇತ್ರ ನೋಟ– ಜೆಡಿಎಸ್‌ಗೆ ‘ಮೈತ್ರಿ’ ಒಳ ಏಟಿನ ಆತಂಕ

ಹಿಂದೆಯೂ ಈ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತಾದರೂ ಆಗ ಒಟ್ಟಿಗೇ ಚುನಾವಣೆ ಎದುರಿಸುವ ಪ್ರಸಂಗ ಎದುರಾಗಿರಲಿಲ್ಲ (ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು).

ಎರಡೂ ಪಕ್ಷಗಳ ಜಿಲ್ಲಾ ಮುಖಂಡರೇನೋ ಪರಸ್ಪರ ಕೈಜೋಡಿಸಿದ್ದಾರೆ. ಮತಯಾಚನೆ ರ್‍ಯಾಲಿ, ರೋಡ್‌ ಶೋಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ‘ಇದು ಇಷ್ಟಕ್ಕೇ ಸೀಮಿತವಾಗಿದೆ. ನಮ್ಮ ಮೇಲೆ ಕೇಸ್‌ ಹಾಕಿಸಿರುವ ಜೆಡಿಎಸ್‌ಗೆ ವೋಟು ಹಾಕೋದು ಅಥವಾ ಹಾಕಿಸೋದು ಎರಡೂ ನಮ್ಮಿಂದ ಆಗದು’ ಎನ್ನುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಮಾತ್ರ ದೂರವೇ ಉಳಿದಿದ್ದಾರೆ.

ಎಚ್‌.ಡಿ.ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸಿರುವುದು ಜೆಡಿಎಸ್‌ನಲ್ಲೂ ಬೇಸರ ತಂದಿದೆ. ವರಿಷ್ಠರ ಮುಂದೆ ಇದನ್ನು ತೋರಿಸಿಕೊಳ್ಳಲು ಆಗದ ಪಕ್ಷದ ಪ್ರಮುಖರು ಒಳಗೊಳಗೆ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ‘ಇಷ್ಟು ಚಿಕ್ಕ ವಯಸ್ಸಿನ ಹುಡುಗನನ್ನು ಏಕೆ ಕಣಕ್ಕಿಳಿಸಬೇಕಿತ್ತು. ಜಿಲ್ಲಾ ಪಂಚಾಯ್ತಿ, ವಿಧಾನಸಭೆಯಲ್ಲಿ ಒಂದೆರಡು ಅವಧಿಗೆ ಕಾರ್ಯನಿರ್ವಹಿಸಿ, ಅನುಭವ ಪಡೆದುಕೊಂಡ ನಂತರ ಲೋಕಸಭೆ ಚುನಾವಣೆಗೆ ಅವಕಾಶ ಮಾಡಿಕೊಡಬಹುದಿತ್ತು’ ಎನ್ನುತ್ತಾರೆ ಜೆಡಿಎಸ್‌ ಕಾರ್ಯಕರ್ತರು.

ಮತದಾರರಲ್ಲೂ ಇದೇ ಭಾವನೆ ಇದೆ. ‘ಪ್ರಜ್ವಲ್‌ ರೇವಣ್ಣ ರಾಗಿ ಬೀಸಬೇಕಾದ (ಕಷ್ಟ ಪಡಬೇಕು) ಸ್ಥಿತಿಯನ್ನು ದೇವೇಗೌಡರೇ ಸೃಷ್ಟಿಸಿದ್ದಾರೆ. ಬದಲಿಗೆ ಅವರೇ ಸ್ಪರ್ಧಿಸಿದ್ದರೆ ಗೆಲುವು ನಿರಾಯಾಸವಾಗಿತ್ತು’ ಎನ್ನುತ್ತಾರೆ ಬೇಲೂರು ತಾಲ್ಲೂಕಿನ ಗೆಂಡೆಹಳ್ಳಿ ಗ್ರಾಮದ ನಿವಾಸಿಯೊಬ್ಬರು. ಇದು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇಳಿಬರುವ ಮಾತು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸಂದರ್ಶನ– ರಾಜಕೀಯದಲ್ಲೂ ಯುವಕರಿಗೆ ಮೀಸಲಾತಿ ಬೇಕು

‘ಮಕ್ಕಳು ಅಪ್ಪನ ಮಾತು ಕೇಳುವುದೇ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಮುಖಂಡರು ಹೇಳಿದ ಮಾತನ್ನು ಮತದಾರರು ಕೇಳುತ್ತಾರೆಯೇ? ಬಿಜೆಪಿಗೂ ಜಿಲ್ಲೆಯಲ್ಲಿ ಬಲಿಷ್ಠ ಅಭ್ಯರ್ಥಿಯ ಕೊರತೆ ಇತ್ತು. ಕಾಂಗ್ರೆಸ್‌ನ ಎ.ಮಂಜು ಬಿಜೆಪಿ ಸೇರಿದ್ದರಿಂದ ಅವರನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬೆಂಬಲಿಗರು ಮೈತ್ರಿಗೆ ಇನ್ನೂ ಮನಃಪೂರ್ವಕವಾಗಿ ಸ್ಪಂದಿಸದ ಕಾರಣ ಬಿಜೆಪಿ ಸಮಬಲದ ಹೋರಾಟ ನೀಡುವ ಸಾಮರ್ಥ್ಯ ಪಡೆದುಕೊಂಡಿದೆ’ ಎಂದು ವಿಶ್ಲೇಷಿಸುತ್ತಾರೆ ಬೇಲೂರಿನ ಸಂತೆಯಲ್ಲಿ ಮಾತಿಗೆ ಸಿಕ್ಕ ಯಲಹಂಕ ಬ್ಯಾಡರಹಳ್ಳಿ ನಿವಾಸಿ ಬಿ.ಎನ್‌.ಮಹೇಂದ್ರ.

‘ಜಿಲ್ಲೆಯಲ್ಲಿ ದೇವೇಗೌಡರ ಮೇಲೆ ಗೌರವ, ಅಭಿಮಾನ ಎದ್ದು ಕಾಣುತ್ತದೆ. ಪಕ್ಷ ಆಳವಾಗಿ ಬೇರೂರಿದೆ. ಬಲಿಷ್ಠ ಕಾರ್ಯಕರ್ತರ ಪಡೆಯೂ ಇದೆ. ಪಕ್ಷದ ಪರ ಕೂಗು ಕೂಡ ಹೆಚ್ಚಾಗಿದೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು, ನಗರಸಭೆ–ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಪಕ್ಷದ ಹಿಡಿತವಿದೆ. ನಮ್ಮ ಪಕ್ಷದವರು ವಿರೋಧಿಸಿದರೂ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಸೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಹೆಚ್ಚು ಲೀಡ್‌ ಬರುತ್ತದೆ. ಅದನ್ನು ಮೀರಲು ಮಂಜುಗೆ ಸಾಧ್ಯವಾಗದು’ ಎಂದೂ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ನ ಶಕ್ತಿ–ಸಾಮರ್ಥ್ಯವನ್ನು ಎತ್ತಿ ತೋರುತ್ತಾರೆ.

‘ಎಚ್‌.ಡಿ.ರೇವಣ್ಣ ಸಚಿವರಾದಾಗಲೆಲ್ಲ ಜಿಲ್ಲೆಗೆ ಅನುದಾನದ ಹೊಳೆ ಹರಿಸಿ, ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದನ್ನು ಜನ ಸ್ಮರಿಸುತ್ತಾರೆ. ಜಿಲ್ಲೆಯಲ್ಲಿ ಸುಮಾರು ₹ 5,000 ಕೋಟಿ ವೆಚ್ಚದ ನಾನಾ ಕಾಮಗಾರಿಗಳು ನಡೆಯುತ್ತಿವೆ. ಇದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ’ ಎನ್ನುತ್ತಾರೆ ಜೆಡಿಎಸ್‌ ಬೆಂಬಲಿಗ ಎಚ್‌.ಎಸ್.ಸುಬ್ರಹ್ಮಣ್ಯ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಎ.ಮಂಜು ಸಂದರ್ಶನ: ‘ಮೈತ್ರಿ’ ಯಿಂದ ಯಾರಿಗೂ ಉಳಿಗಾಲವಿಲ್ಲ

ಇನ್ನು ನಗರ, ಪಟ್ಟಣ, ಪ್ರಮುಖ ಊರುಗಳಲ್ಲಿ ನೆಲೆಸಿರುವ ವಿದ್ಯಾವಂತರು, ವರ್ತಕರು, ಹೋಟೆಲ್‌ ಉದ್ಯಮಿಗಳು, ವಿಶೇಷವಾಗಿ ಯುವಜನತೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿರುದ್ಯೋಗದ ಪ್ರಮಾಣ ಹೆಚ್ಚಳ, ರೈತರ ಸಂಕಷ್ಟ, ನೋಟು ರದ್ದತಿ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿದರೆ, ‘ಇವೆಲ್ಲಕ್ಕಿಂತ ದೇಶ ಪ್ರೇಮ ದೊಡ್ಡದು. ಮೋದಿಯವರ ಕೈಯಲ್ಲಿ ದೇಶ ಸುರಕ್ಷಿತವಾಗಿರುತ್ತದೆ. ಅದಕ್ಕಾಗಿ ಮತ್ತೆ ಮೋದಿ ಪ್ರಧಾನಿಯಾಗಬೇಕು’ ಎಂಬ ಉತ್ತರ ಅವರಿಂದ ಬರುತ್ತದೆ. 

ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವ–ಶಕ್ತಿ ತೀರಾ ಗೌಣ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದಾದ್ಯಂತ ಬೀಸಿದ ಪ್ರಚಂಡ ಮೋದಿ ಅಲೆಯ ನಡುವೆಯೂ ಇಲ್ಲಿ ಬಿಜೆಪಿಗೆ ಬಂದದ್ದು 1.65 ಲಕ್ಷ ಮತಗಳು ಮಾತ್ರ. ಹಿಂದಿನ ಚುನಾವಣೆಗಳಲ್ಲೂ ಅದರ ಸಾಮರ್ಥ್ಯ ಎರಡು ಲಕ್ಷದ ಆಸುಪಾಸು ಅಷ್ಟೆ. ಅದೂ ದಾಸ ಒಕ್ಕಲಿಗ ಮುಖಂಡ ಕೆ.ಎಚ್‌.ಹನುಮೇಗೌಡರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಪಕ್ಷ ಈ ಸಾಧನೆ ಮಾಡಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದು ಅದರ ಶಕ್ತಿ ವೃದ್ಧಿಗೆ ಅನುಕೂಲವಾಗಲಿದೆ. ಜೆಡಿಎಸ್‌ ಅತೃಪ್ತರ ಒಂದಷ್ಟು ಮತಗಳೂ ವರ್ಗಾವಣೆಯಾಗುವುದರಲ್ಲಿ ಸಂದೇಹವಿಲ್ಲ.

ಹೊಳೆನರಸೀಪುರ, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಬೇಲೂರು, ಕಡೂರು ತಾಲ್ಲೂಕುಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಆದರೆ ಸಕಲೇಶಪುರ ತಾಲ್ಲೂಕಿನಲ್ಲಿ ಒಂದೆರಡು ಬಾರಿ ರೋಡ್‌ ಶೋ ನಡೆದಿರುವುದು ಬಿಟ್ಟರೆ ಇಲ್ಲಿ ಚುನಾವಣೆ ನಡೆಯುತ್ತಿದೆ ಎಂದೇ ಅನಿಸುವುದಿಲ್ಲ. ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ರಾಜಕೀಯದಿಂದ ಬಿಡುವು ಪಡೆದುಕೊಂಡ ವರಂತೆ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ.

ಅರಕಲಗೂಡಿನಲ್ಲೂ ಭರಾಟೆ ಅಷ್ಟಾಗಿ ಕಾಣುವುದಿಲ್ಲ. ಅರಸೀಕೆರೆ ಜೆಡಿಎಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡರು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಸೇರಿ ಸಭೆ ನಡೆಸಿ, ಪ್ರಜ್ವಲ್‌ ರೇವಣ್ಣ ಪರ ಮತ ಯಾಚನೆಯಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ಪ್ರಚಾರ ಸಭೆಗಳಲ್ಲಿ ಅವರು (ಬೆಳಗುಂಬ ಗ್ರಾಮದಲ್ಲಿನ ಸಭೆಗೆ ‘ಪ್ರಜಾವಾಣಿ’ ಸಾಕ್ಷಿಯಾಗಿತ್ತು), ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಸಂವಿಧಾನ ಬದಲಿಸುವುದಕ್ಕಾಗಿಯೇ ಬಂದಿದ್ದೇವೆ ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಗಂಡಾಂತರ ಕಾದಿದೆ’ ಎಂದು ಪರಿಶಿಷ್ಟರನ್ನು ಎಚ್ಚರಿಸಲು ಅಸ್ತ್ರವಾಗಿ ಬಳಸುತ್ತಿದ್ದಾರೆ. 

ಬೂತ್‌ ಮಟ್ಟದಲ್ಲಿ ಬಿಜೆಪಿಗೆ ಕಾರ್ಯಕರ್ತರ ಕೊರತೆ ಕಾಡುತ್ತಿದೆ. ಆದರೆ ಜೆಡಿಎಸ್‌ಗೆ ಕೆಳಹಂತದಲ್ಲಿ ಕಾರ್ಯಕರ್ತರ ಜಾಲ ದೊಡ್ಡದಿದೆ. ಮತದಾನದ ಮುನ್ನ ಎರಡು ದಿನಗಳ ಕಾರ್ಯಾಚರಣೆ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತೆಂಗಿನ ಮರ ಉಳಿಸಿಕೊಳ್ಳೋಕೆ ನೀರು ಕೊಡಿ ಸ್ವಾಮಿ...

ಜಿಲ್ಲೆಯ ಕೆಲವು ಭಾಗದಲ್ಲಿ ಚುನಾವಣೆ ಕಾವಿಗಿಂತ ಹೆಚ್ಚಾಗಿ ಕೆರೆ ತುಂಬಿಸಿ ಎಂಬ ಕೂಗು ಹೆಚ್ಚು ಕಾವು ಪಡೆದುಕೊಂಡಿದೆ. ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳು, ಬೇಲೂರು ತಾಲ್ಲೂಕಿನ ಹಳೇಬೀಡು ಗ್ರಾಮದಲ್ಲಿ ಈ ಕೂಗು ಹೆಚ್ಚಾಗಿದೆ. ಅರಸೀಕೆರೆ ತಾಲ್ಲೂಕಿನ ಜನತೆಗೆ ಎತ್ತಿನಹೊಳೆ ಯೋಜನೆ ಆಶಾಭಾವನೆ ಮೂಡಿಸಿದೆ.

‘ನಮ್ಮ ಹೋಬಳಿಯಲ್ಲಿ ತೆಂಗಿನಮರಗಳು ಒಣಗಿ ಲೈಟ್‌ ಕಂಬಗಳಂತೆ ನಿಂತಿವೆ. ಒಣಗುತ್ತಿರುವ ಮರಗಳನ್ನು ಉಳಿಸಿಕೊಳ್ಳಲು ನೀರು ಕೊಡಿ ಸ್ವಾಮಿ’ ಎಂಬ ಕೂಗು ಬೇಲೂರು ತಾಲ್ಲೂಕಿನ ಹಳೇಬೀಡು ಗ್ರಾಮಸ್ಥರದ್ದು. ಇಲ್ಲಿನ ಕೆರೆಯಲ್ಲಿ ಹನಿ ನೀರಿಲ್ಲ. ‘ಸಮೀಪದಲ್ಲೇ ಯಗಚಿ ಅಣೆಕಟ್ಟೆ ಇದ್ದರೂ ಹಳೇಬೀಡಿಗೆ ನೀರು ಸಿಗುತ್ತಿಲ್ಲ. ಒಣಗಿಹೋಗಿರುವ ಈ ಕೆರೆ ನೋಡಿದರೆ ಸಿಟ್ಟು ಬರುತ್ತದೆ. ಯಗಚಿಯಿಂದ ದೂರದ ಪ್ರದೇಶಕ್ಕೆ ನೀರು ಕೊಡಲು ಸಾಧ್ಯವಾಗುತ್ತದೆ, ನಮ್ಮೂರಿಗೆ ಮಾತ್ರ ಕೊಡಲು ಆಗುವುದಿಲ್ಲವೇ’ ಎಂಬುದು ಗ್ರಾಮಸ್ಥರ ಒಕ್ಕೊರಲಿನ ಪ್ರಶ್ನೆ.

‘ಕೆರೆಗೆ ನೀರು ತುಂಬಿಸುವ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ₹ 100 ಕೋಟಿ ಅನುದಾನ ಒದಗಿಸಿರುವುದು ನಮಗೆ ಸಂತಸ ತಂದಿದೆ. ಯೋಜನೆಗೆ ಶಂಕುಸ್ಥಾಪನೆಯೂ ಆಗಿದೆ. ಇದುವರೆಗೆ ಯಾರೂ ಇತ್ತ ಗಮನಹರಿಸಿರಲಿಲ್ಲ. ಈಗ ಈ ಕೆಲಸ ಮಾಡಿರುವ ಜೆಡಿಎಸ್‌ಗೆ ವೋಟ್‌ ಹಾಕುತ್ತೇವೆ’ ಎನ್ನುತ್ತಾರೆ ಗ್ರಾಮದ ದೇವರಾಜ್‌, ಮೋಹನ್‌ರಾಜ್.

ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಗೆ ನೀರು ಕೊಡುವ ಏತ ನೀರಾವರಿ ಯೋಜನೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಈ ಭಾಗದಲ್ಲಿ ದುರ್ಬಲವಾಗಿರುವ ಬಿಜೆಪಿ, ಮತದಾನದ ಪ್ರಮಾಣವನ್ನು ಕುಗ್ಗಿಸುವ ಉದ್ದೇಶದಿಂದ ಮತದಾನಕ್ಕೆ ಬಹಿಷ್ಕಾರ ಹಾಕಬೇಕು ಎಂದು ಪ್ರಚೋದಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮಸ್ಥರು ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. ಚುನಾವಣೆಯೇ ಬೇರೆ ಹೋರಾಟವೇ ಬೇರೆ. ಚುನಾವಣೆ ನಂತರ ಪ್ರತಿಭಟನೆ ಆರಂಭಿಸೋಣ, ಬಹಿಷ್ಕಾರ ಮಾತ್ರ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿ ಸುಮ್ಮನಾಗಿಸಿದ್ದಾರೆ ಎಂದು ಹಿರೀಸಾವೆಯ ಚಂದ್ರು ಮಾಹಿತಿ ನೀಡುತ್ತಾರೆ.

ಗೊಬ್ಬರಕ್ಕೆ ಸಬ್ಸಿಡಿ ಕೊಡಿ
‘ನೀವು ಸಾಲ ಮನ್ನಾ ಮಾಡೋದೂ ಬೇಡ, ರೈತರ ಖಾತೆಗೆ ಹಣ ಹಾಕೋದೂ ಬೇಡ. ರಸಗೊಬ್ಬರಕ್ಕೆ ಸಬ್ಸಿಡಿ ಕೊಟ್ಟರೆ ಸಾಕು. ಸಾಲ ಮಾಡದ ರೈತರೂ ರಸಗೊಬ್ಬರ ಬಳಸುತ್ತಾರೆ. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಚನ್ನರಾಯಪಟ್ಟಣ ತಾಲ್ಲೂಕಿನ ಡಿ.ಕಾಳೇನಹಳ್ಳಿಯ ನಿವೃತ್ತ ಗ್ರಂಥಪಾಲಕ ನಾರಾಯಣಪ್ಪ.ನಾವು, ನಮ್ಮ ವೋಟು ಜೆಡಿಎಸ್‌ಗೆ ‘ದೇವೇಗೌಡರು ನಮ್ಮೋರು. ಈ ಊರಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ. ನಮ್ಮ ವೋಟು ಅವರಿಗೇ. ಬರ್ಕಳ್ಳಿ ಸ್ವಾಮಿ. ಹೆಸರು ಹಾಕಬೇಡಿ. ನಮ್ಮ ಹೆಸರು ತಕ್ಕೊಂಡು ನೀವೇನು ಮಾಡ್ತೀರಿ’ ಎಂದರು ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ಕೃಷಿಕೊಬ್ಬರು.

ಲೋಕಸಭೆ ಚುನಾವಣೆ, ಹಾಸನ ಕಣದ ಬಗ್ಗೆ ಇನ್ನಷ್ಟು...

ಬಿಜೆಪಿ ಅಭ್ಯರ್ಥಿ ಎ.ಮಂಜು ಸಂದರ್ಶನ:  ‘ಮೈತ್ರಿ’ ಯಿಂದ ಯಾರಿಗೂ ಉಳಿಗಾಲವಿಲ್ಲ

ಪ್ರಜ್ವಲ್ ರೇವಣ್ಣ ಸಂದರ್ಶನ– ರಾಜಕೀಯದಲ್ಲೂ ಯುವಕರಿಗೆ ಮೀಸಲಾತಿ ಬೇಕು

ಹಾಸನ ಕ್ಷೇತ್ರ ನೋಟ– ಜೆಡಿಎಸ್‌ಗೆ ‘ಮೈತ್ರಿ’ ಒಳ ಏಟಿನ ಆತಂಕ

 

ಪ್ರಜಾವಾಣಿ ವಿಶೇಷ ಸಂದರ್ಶನಗಳು...

ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ

ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ

ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ

ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌

ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ

ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !