ಬುಧವಾರ, ಆಗಸ್ಟ್ 17, 2022
23 °C
ಚುನಾವಣೆಯಲ್ಲಿ ಹಿನ್ನಡೆ: ಅ.2ರಂದು ವರದಿ ಸಲ್ಲಿಸಲು ಸಿದ್ಧತೆ

ಲೋಕಸಭೆ ಚುನಾವಣೆ ಸೋಲಿನ ‘ಸತ್ಯ’ ಹುಡುಕಿದ ‘ಕೈ’ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ಥಳೀಯ ಮಟ್ಟದ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ, ಮೈತ್ರಿ ಸರ್ಕಾರದ ಗೊಂದಲ, ಕೊನೆಗಳಿಗೆಯಲ್ಲಿ ಕ್ಷೇತ್ರ ಹಂಚಿಕೆಯಿಂದ ಉಂಟಾದ ಸಮಸ್ಯೆ, ಪಕ್ಷದ ಶಾಸಕರೇ ಕೈ ಕೊಟ್ಟಿದ್ದರಿಂದಾಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. . .’

ಚುನಾವಣಾ ಸೋಲಿಗೆ ಕಾರಣವಾಗಿರುವ ಅಂಶಗಳ ಪತ್ತೆಗೆ ರಚಿಸಲಾಗಿರುವ ಸತ್ಯಶೋಧನಾ ಸಮಿತಿ ಇಂತಹ ಕಾರಣಗಳನ್ನು ಪಟ್ಟಿ ಮಾಡಿದೆ.

ಚುನಾವಣೆ ನಡೆಯುವ ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರ, ನಡೆಯುವ ಹೊತ್ತಿನಲ್ಲಿ ಜೆಡಿಎಸ್‌ ಸಹಯೋಗದಲ್ಲಿ ಮೈತ್ರಿ ಸರ್ಕಾರ ಇದ್ದರೂ ನಾಯಕರಿಗೆ ಆಘಾತವಾಗುವ ಮಟ್ಟಿಗೆ ಸೋಲು ಎದುರಾಗಿತ್ತು. ಸೋಲಿನ ಕಾರಣಗಳ ಪರಾಮರ್ಶೆಗೆ ಪಕ್ಷದ ಹಿರಿಯ ನಾಯಕ ವಿ.ಆರ್. ಸುದರ್ಶನ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 

ಕಾಂಗ್ರೆಸ್‌ ಗೆದ್ದಿರುವ ಏಕಮಾತ್ರ ಕ್ಷೇತ್ರದ ಬೆಂಗಳೂರು ಗ್ರಾಮಾಂತರ ಬಿಟ್ಟು ಉಳಿದ 27 ಕ್ಷೇತ್ರಗಳಲ್ಲಿ ಸುತ್ತಾಡಿರುವ ಸಮಿತಿ ಸದಸ್ಯರು ವರದಿ ಸಿದ್ಧಪಡಿಸಿದ್ದು, ಅಕ್ಟೋಬರ್ 2ರಂದು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಜಿಲ್ಲಾಧ್ಯಕ್ಷರು, ಶಾಸಕರು, ಹಿರಿಯ ನಾಯಕರು, ಕಾರ್ಯಕರ್ತರು ಹಾಗೂ ಪರಾಜಿತ ಅಭ್ಯರ್ಥಿಗಳು ನೀಡಿದ ವಿವರಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುತ್ತಿದೆ. ಸೋಲಿಗೆ ಒಟ್ಟಾರೆ ಕಾರಣಗಳನ್ನು ಪಟ್ಟಿ ಮಾಡಲಿದ್ದು, ಅದನ್ನು ಸವಿವರವಾಗಿ ವಿಶ್ಲೇಷಣೆ ನಡೆಸಿ ವರದಿ ನೀಡಲಾಗುವುದು’ ಎಂದು ಮೂಲಗಳು ಹೇಳಿವೆ.

ಜೆಡಿಎಸ್‌ ಜತೆಗೆ ಮೈತ್ರಿ ಸರ್ಕಾರ ರಚಿಸಿದ್ದು, ಎರಡು ಪಕ್ಷಗಳ ನಾಯಕರ ಮಧ್ಯೆ ಸಮನ್ವಯ ಸಾಧ್ಯವಾಗದೇ ವರ್ಷದುದ್ದಕ್ಕೂ ಗೊಂದಲ, ಪರಸ್ಪರ ದೂಷಣೆಗಳು ಮುಂದುವರಿದಿದ್ದು ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣ.

ಮೈತ್ರಿ ಕೂಟದ ನಾಯಕರ ಮಧ್ಯದ ತಿಕ್ಕಾಟದ ಜತೆಗೆ, ಕಾಂಗ್ರೆಸ್‌ ನಾಯಕರ ಮಧ್ಯದ ಭಿನ್ನಾಭಿಪ್ರಾಯಗಳು ಪರಿಣಾಮ ಬೀರಿದವು.

ರಾಜ್ಯಮಟ್ಟದಲ್ಲಿ ಮೈತ್ರಿ ನಡೆದರೂ ಹಿಂದಿನಿಂದಲೂ ಪರಸ್ಪರ ಕಚ್ಚಾಡಿಕೊಂಡೇ ರಾಜಕೀಯ ನಡೆಸಿಕೊಂಡು ಬಂದಿದ್ದ ಎರಡೂ ಪಕ್ಷಗಳ ಸ್ಥಳೀಯ ನಾಯಕರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡಲೇ ಇಲ್ಲ. ಇದು ಗೊತ್ತಿದ್ದರೂ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ. ಅನುಕೂಲಕಾರಿ ಕ್ಷೇತ್ರಗಳಲ್ಲಿ ಸ್ನೇಹಯುತ ಸ್ಪರ್ಧೆ ಮಾಡಿದ್ದರೆ ಇನ್ನಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇತ್ತು.

ಯಾವ ಕ್ಷೇತ್ರಗಳನ್ನು ಯಾವ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ಗೊಂದಲ ನಾಮಪತ್ರ ಸಲ್ಲಿಸುವ ಕೊನೆಯ ದಿನ ಇತ್ಯರ್ಥವಾಗಿದ್ದರಿಂದಾಗಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಲು ಆಗಲೇ ಇಲ್ಲ.

ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯತ್ತ ಹೋಗಲು ಈಗ ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು ಸಜ್ಜಾಗಿದ್ದರು. ಅವರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲದೇ, ತಮ್ಮ ಪ್ರಭಾವ ಇರುವ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದು ಮುಳುವಾಯಿತು.

‘ಉಪಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ’

‘ಮುಂಬರುವ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಉಪ ಚುನಾವಣೆ ನಡೆಯಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಪಕ್ಷದ ಪದಾಧಿಕಾರಿಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಜೆಡಿಎಸ್‌ ಜತೆ ಮೈತ್ರಿ ಬಗ್ಗೆ ಹೈಕಮಾಂಡ್‌ ತೀರ್ಮಾನಕ್ಕೆಬದ್ಧರಾಗುತ್ತೇವೆ’ ಎಂದರು.

21 ರಂದು ಹೊಸಕೋಟೆಯಲ್ಲಿ ಸಮಾವೇಶ: ‘ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಇದೇ 21 ರಂದು ಹೊಸಕೋಟೆಯಲ್ಲಿ ಸಮಾವೇಶ ಮಾಡುತ್ತೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ವೈಫಲ್ಯಗಳನ್ನು ಜನರಿಗೆ ತಲುಪಿಸುತ್ತೇವೆ. ಬಳಿಕ ಉಳಿದ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ’ ಎಂದು ದಿನೇಶ್‌ ಹೇಳಿದರು.

‘ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಪೈಪೋಟಿ ನೀಡುವ ಅಭ್ಯರ್ಥಿಗಳು ಯಾರ್‍ಯಾರು ಇದ್ದಾರೆ ಎಂದು ಮೂರು–ನಾಲ್ಕು ಜನರ ಪಟ್ಟಿ ಮಾಡಲಾಗಿದೆ. ಪಕ್ಷಕ್ಕೆ ದ್ರೋಹ ಮಾಡಿರುವ ಪಾಟೀಲರಿಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಲಾಗಿದೆ’ ಎಂದು ಹಿರಿಯ ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

‘ರಾಣೆಬೆನ್ನೂರಿನಲ್ಲಿ ಶಂಕರ್‌ ವಿರುದ್ಧ ಕಣಕ್ಕೆ ಇಳಿಸಲು ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಕೆ.ಬಿ.ಕೋಳಿವಾಡ ಸೇರಿದಂತೆ ಹಲವು ಹೆಸರುಗಳು ಪ್ರಸ್ತಾಪ ಆಗಿವೆ’ ಎಂದು ಹರಿಹರ ಶಾಸಕ ರಾಮಪ್ಪ ಹೇಳಿದರು.

ಕ್ಷೇತ್ರವಾರು ಸೋಲಿನ ಪರಾಮರ್ಶೆ

* ಮೈಸೂರು ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟವೆಂದು ಗೊತ್ತಿದ್ದೂ ಆ ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದರಿಂದಾಗಿ ತುಮಕೂರು ಕಳೆದುಕೊಳ್ಳಬೇಕಾಯಿತು.

* ವಿಧಾನಸಭಾ ಚುನಾವಣೆ ವೇಳೆ ಕೆ.ಎಚ್. ಮುನಿಯಪ್ಪ ಕೈ ಕೊಟ್ಟಿದ್ದರು ಎಂಬ ಸಿಟ್ಟಿನಿಂದ ಈ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಶಾಸಕರು ಒಟ್ಟಾಗಿ ನಿಂತು ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದರಿಂದಾಗಿ ಕಾಂಗ್ರೆಸ್ ನೆಲ ಕಚ್ಚಿ, ಕ್ಷೇತ್ರಕ್ಕೆ ಅಪರಿಚಿತರಾಗಿದ್ದ ಬಿಜೆಪಿ ಅಭ್ಯರ್ಥಿ ಗೆಲ್ಲುವಂತಾಯಿತು.

* ಹಾಸನ ಮತ್ತು ತುಮಕೂರಿನ ಸ್ಥಳೀಯ ಮಟ್ಟದ ಕೆಲವು ಕಾಂಗ್ರೆಸ್‌ ನಾಯಕರು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದರೆ, ಕೆಲವರು ತಟಸ್ಥರಾಗಿ ಉಳಿದರು. ಇದರಿಂದ ಹಾಸನದಲ್ಲಿ ಬಿಜೆಪಿಯ ಎ.ಮಂಜು ನಿರೀಕ್ಷೆಗಿಂತ ಹೆಚ್ಚಿನ ಮತ ಗಳಿಸಿದರು. ದೇವೇಗೌಡರು ಸೋಲು ಕಂಡರು.

* ಬೆಳಗಾವಿಯಲ್ಲಿ ಜಾರಕಿಹೊಳಿ ಸೋದರರ ಮಧ್ಯದ ಸಂಘರ್ಷ, ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಮಧ್ಯದ ಜಗಳವು ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಸೋಲಿಗೆ ಕಾರಣವಾಯಿತು.

* ಬೆಂಗಳೂರು ಉತ್ತರ ಕ್ಷೇತ್ರವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಆದರೆ, ಬಿಜೆಪಿಗೆ ಜತೆಗೆ ಹೋಗಲು ಮುಂದಾಗಿದ್ದ ಈಗ ಅನರ್ಹಗೊಂಡಿರುವ ಶಾಸಕರು ಕೈ ಕೊಟ್ಟಿದ್ದರಿಂದಾಗ ಕೃಷ್ಣ ಬೈರೇಗೌಡ ಸೋಲಬೇಕಾಯಿತು.

* ಜೆಡಿಎಸ್‌ಗೆ ನೆಲೆಯೇ ಇಲ್ಲದ ವಿಜಯಪುರ, ಚಿಕ್ಕಮಗಳೂರು, ಉತ್ತರಕನ್ನಡವನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದು, ಅಕ್ಕಪಕ್ಕದ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪರಿಣಾಮ ಬೀರಿತು. ಇದು ಆ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ, ಪಕ್ಕದ ಕ್ಷೇತ್ರಗಳಲ್ಲಿ ಸೋಲಿಗೆ ಕಾರಣವಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು