ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ಹೇರದೆ ಕೈಕಟ್ಟಿ ಕೂರುವಿರಂತೆ ಹೌದೇ: ಕೇಂದ್ರ ಸಚಿವರ ವಿರುದ್ಧ ಬಹಿರಂಗ ಪತ್ರ

ಕೇಂದ್ರ ಸಚಿವದ್ವಯರಿಗೆ ಬಹಿರಂಗ ಪತ್ರ
Last Updated 19 ಡಿಸೆಂಬರ್ 2019, 11:38 IST
ಅಕ್ಷರ ಗಾತ್ರ

ಬೆಳಗಾವಿ: ಮಹದಾಯಿ ನದಿ ನೀರನ್ನು ಆಶ್ರಯಿಸಿರುವ ಕಳಸಾ–ಬಂಡೂರಿ ನಾಳೆಗಳ ತಿರುವು ಯೋಜನೆಗೆ ಕೊಟ್ಟಿದ್ದ ಅನುಮತಿಗೆ ಕೇಂದ್ರದ ಪರಿಸರ ಇಲಾಖೆ ತಡೆ ನೀಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಲ್ಲಿನ ಹೋರಾಟಗಾರ ಮತ್ತು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಈ ಭಾಗದ ಜನಪ್ರತಿನಿಧಿಗಳಾದ ಕೇಂದ್ರ ಸಚಿವರೂ ಆಗಿರುವ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

‘ತಾವಿಬ್ಬರೂ ಕೇಂದ್ರದಲ್ಲಿ ಮಂತ್ರಿಗಳಾಗಿ 6 ತಿಂಗಳುಗಳೇ ಆಗುತ್ತಿವೆ. ನೀವು ಮಂತ್ರಿ ಆದಾಗ ಮುಂಬೈ ಕರ್ನಾಟಕದ ಜನರು ಹಿಗ್ಗಿ ಹೀರೇಕಾಯಿಯಾದರು. ನಿಮ್ಮಿಬ್ಬರ ಮೇಲೆ ವಿಶ್ವಾಸ ಮತ್ತು ನಂಬಿಕೆ ಇರುವುದರಿಂದಲೇ ಅಭಿನಂದಿಸಿದ್ದೆವು. ಆದರೆ, ಮಹದಾಯಿ ಯೋಜನೆಯಲ್ಲಿ ಕೇಂದ್ರದಿಂದ ಅನ್ಯಾಯ ಆಗುತ್ತಿರುವಾಗ ನೀವು ಸುಮ್ಮನಿರುವುದು ಸರಿಯಲ್ಲ’ ಎಂದಿದ್ದಾರೆ. ಅವರ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲೂ ಹರಿದಾಡುತ್ತಿದೆ.

ಅನುಮತಿಯನ್ನೂ ತಡೆಹಿಡಿದಿದೆ: ‘ಮುಂಬೈ ಕರ್ನಾಟಕದ 4 ಜಿಲ್ಲೆಗಳ 13 ತಾಲ್ಲೂಕುಗಳ ಮತ್ತು ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಜನತೆಗೆ ಕುಡಿಯುವ ನೀರು ಒದಗಿಸುವ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ನೀವು ಸರಿಯಾಗಿ ನಿರ್ವಹಿಸುತ್ತೀರೆಂಬ ನಂಬಿಕೆ ಇತ್ತು. 2018ರ ಆ. 14ರಂದು ಪಾಂಚಾಲ ನ್ಯಾಯಮಂಡಳಿ ನೀಡಿದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರಕ್ಕೆ ಇನ್ನೂ ಸಾಧ್ಯವಾಗಲಿಲ್ಲ. ಅಲ್ಲದೇ ಅಕ್ಟೋಬರ್‌ನಲ್ಲಿ ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನೂ ಡಿ. 18ರಂದು ಕೇಂದ್ರ ಸರ್ಕಾರವು ತಡೆಹಿಡಿದಿದೆ!’.

‘1956ರ ಅಂತರರಾಜ್ಯ ಜಲವಿವಾದಗಳ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯು ಲೋಕಸಭೆಯಲ್ಲಿ ಪಾಸಾಗಿದ್ದು, ರಾಜ್ಯಸಭೆಯಲ್ಲಿ ಅದನ್ನು ಮಂಡಿಸದಂತೆ ಗೋವಾ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ತಂದವು. ಅದಕ್ಕೂ ಮಣಿದ ಕೇಂದ್ರವು ತಿದ್ದುಪಡಿ ಮಸೂದೆಯ ಮಂಡನೆಯನ್ನು ಮುಂದಕ್ಕೆ ಹಾಕಿಬಿಟ್ಟಿತು! ಹೀಗಾಗಿ, ಕೆಲವು ಸಂದೇಹಗಳು ಬರುತ್ತಿವೆ’ ಎಂದು ತಿಳಿಸಿದ್ದಾರೆ. 10 ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರಶ್ನೆಗಳು...:‘ನೀವು ಕೇಂದ್ರದಲ್ಲಿ ಮಂತ್ರಿಗಳಾಗಿದ್ದು ನಿಜವೇ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಕೊಳ್ಳುವಾಗ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆಯೇ, ಕರ್ನಾಟಕದ ಜಲವಿವಾದಗಳ ಪ್ರಶ್ನೆಗಳು ಬಂದಾಗ ಕೇಂದ್ರದ ಮೇಲೆ ನಮ್ಮ ಎದುರು ರಾಜ್ಯಗಳು ಒತ್ತಡ ತರುವ ಸಂದರ್ಭದಲ್ಲಿ ತಾವು ಕೈಕಟ್ಟಿ ಕೂಡುತ್ತೀರಂತೆ ನಿಜವೇ, ತಾವು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಒಮ್ಮೆಯಾದರೂ ನಮ್ಮ ಯೋಜನೆ ಬಗ್ಗೆ ಮಾತನಾಡಿಯೇ ಇಲ್ಲವಂತೆ ಹೌದೇ, ಲೋಕಸಭೆ ಚುನಾವಣೆ ಕಾಲಕ್ಕೆ ತಮ್ಮ ಪಕ್ಷದ ನಾಯಕರು ಮುಂಬೈ ಕರ್ನಾಟಕದ ಜನರಿಗೆ ನೀಡಿದ ಆಶ್ವಾಸನೆ ಬಗ್ಗೆ ಪಕ್ಷದ ಸಭೆಗಳಲ್ಲಿ ಒಮ್ಮೆಯೂ ಚರ್ಚೆಯಾಗಿಯೇ ಇಲ್ಲವಂತೆ ನಿಜವೇ?’.

‘ಕರ್ನಾಟಕದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ನಮ್ಮ ಮಹದಾಯಿ ಮತ್ತು ಕೃಷ್ಣಾ ಯೋಜನೆಗಳ ಬಗ್ಗೆ ಯಾರೂ ಚಕಾರ ಎತ್ತದಿರುವ ಹಿಂದಿನ ಅಸಲಿಯತ್ತು ಏನು? ಹೀಗಾದರೆ ನೀವೆಲ್ಲರೂ ವೇಸ್ಟ್ಬಾಡಿಗಳು ಎಂಬ ಭಾವನೆ ನಿಮಗೆ ಬಂದಿಲ್ಲವೆ, ಮಹದಾಯಿ ಆಗಲೀ, ಕೃಷ್ಣಾ ಯೋಜನೆಯಾಗಲಿ ಚುನಾವಣೆ ವಿಷಯವೇ ಆಗುವುದಿಲ್ಲ. ಯಾರು ಎಷ್ಟೇ ಬಡಿದುಕೊಂಡರೂ ನಮಗೆ ಬರುವ ಮತಗಳು ಬಂದೇ ಬರುತ್ತವೆ ಎಂಬ ಅಹಂ ನಿಮಗಿರುವುದು ಸುಳ್ಳೇ?’

‘ಆಮಿತ್ ಶಾ ಅವರಲ್ಲಿ ಒಮ್ಮೆಯೂ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿಯೇ ಇಲ್ಲವೆಂಬುದರಲ್ಲಿ ಸತ್ಯವೇ? ಮಹದಾಯಿ ವಿಷಯದಲ್ಲಿ ಸತತವಾಗಿ ಗೋವಾದ ಕೈಮೇಲಾಗುತ್ತಿರುವುದು ಸತ್ಯ. ಅಲ್ಲಿಯ ಸರ್ವಪಕ್ಷೀಯ ನಾಯಕರು ಕೇಂದ್ರದ ಮೇಲೆ ಒತ್ತಡ ತರುತ್ತಾರೆ. ಅಂಥ ಪ್ರಯತ್ನ ನಿಮ್ಮಿಂದ ಆಗದಿರುವುದಕ್ಕೆ ನಿಮ್ಮ ದೌರ್ಬಲ್ಯವೇ ಕಾರಣವಲ್ಲದೇ ಮತ್ತೇನು?’ ಎಂದು ಕೇಳಿದ್ದಾರೆ.

‘ಸುರೇಶ ಅಂಗಡಿ ಅವರೇ ‘ಕಂಡಲ್ಲಿ ಗುಂಡಿಕ್ಕಿ’ ಎಂದು ಈಚೆಗೆ ಹೇಳಿದ್ದೀರಿ. ಒಮ್ಮೆ ಇವೇ ಬಂದೂಕು, ಗುಂಡುಗಳನ್ನು ನಮ್ಮಂಥ ಮಹದಾಯಿ ಹೋರಾಟಗಾರರ ಮೇಲೆ ಪ್ರಯೋಗಿಸಿಬಿಡಿ. ಒಮ್ಮೆ ನಮ್ಮ ಧ್ವನಿ ಶಾಶ್ವತವಾಗಿ ನಿಂತು ಹೋಗಲಿ. ನಮ್ಮ ಕಿರಿಕಿರಿಯಾದರೂ ನಿಮಗೆ ತಪ್ಪುತ್ತದೆ ಎಂದು ನಾನು ಹೇಳಿದರೆ ತಪ್ಪೇನು’ ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT