ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ

7
ಇಂದು ಜನಕಲ್ಯಾಣ ಕಾರ್ಯಕ್ರಮಗಳ ಉದ್ಘಾಟನೆ

ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ

Published:
Updated:

ಉಜಿರೆ: ಧರ್ಮಸ್ಥಳದ ಬಾಹುಬಲಿಗೆ 4ನೇ ಮಹಾಮಸ್ತಕಾಭಿಷೇಕ ಶನಿವಾರದಿಂದ ಆರಂಭವಾಗಲಿದ್ದು, ಕ್ಷೇತ್ರ ನವವಧುವಿನಂತೆ ಸಿಂಗಾರಗೊಂಡಿದೆ. ಇದಕ್ಕೆ ಮೊದಲಾಗಿ ಶುಕ್ರವಾರ ಸಂತ ಸಮ್ಮೇಳನ ನಡೆಯಿತು.

ಸಾಮಾನ್ಯವಾಗಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ತೀರ್ಥಂಕರರ ಜೀವನದ ವಿವಿಧ ಹಂತಗಳನ್ನು ಸಾದರಪಡಿಸುವ ಪಂಚಕಲ್ಯಾಣ ನಡೆಯುತ್ತದೆ. ಆದರೆ ಇಲ್ಲಿ ಪಂಚಕಲ್ಯಾಣದ ಬದಲಿಗೆ ಪಂಚ ಮಹಾವೈಭವ ಹಮ್ಮಿಕೊಳ್ಳಲಾಗಿದೆ. ಶನಿವಾರದಿಂದ ಇದೇ 15ರವರೆಗೆ ಸುಮಾರು 300  ಕಲಾವಿದರು ನೃತ್ಯ ರೂಪಕಗಳ ಮೂಲಕ ಬಾಹುಬಲಿಯ ತತ್ವಾದರ್ಶಗಳ ಪಾಲನೆಯ ಮಹತ್ವವನ್ನು ಪಂಚ ಮಹಾವೈಭವದಲ್ಲಿ ಪ್ರಸ್ತುತಪಡಿಸಲಿದ್ದಾರೆ.

ಶನಿವಾರ ಬೆಳಿಗ್ಗೆ 11 ಗಂಟೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಕೆರೆ ಸಂಜೀವಿನಿ ಯೋಜನೆ ಉದ್ಘಾಟಿಸುವರು. ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.

ಶನಿವಾರದಿಂದ ಇದೇ 18ರವರೆಗೆ ನಿತ್ಯ ಬೆಳಿಗ್ಗೆ ಚಂದ್ರನಾಥ ಸ್ವಾಮಿಯ ಬಸದಿಯಲ್ಲಿ ಪೂಜೆಯ ಬಳಿಕ ರತ್ನಗಿರಿಗೆ ಅಗ್ರೋದಕ ಮೆರವಣಿಗೆ ನಡೆಯಲಿದೆ. ರತ್ನಗಿರಿಯಲ್ಲಿ ಧಾರ್ಮಿಕ ಪೂಜಾ ವಿಧಾನಗಳು, 14 ಕಲಶಗಳಿಂದ ಪಾದಾಭಿಷೇಕ ಜರುಗಲಿದೆ. ಇದೇ 16ರಿಂದ 18 ರವರೆಗೆ ಭಗವಾನ್‌ ಬಾಹುಬಲಿ ಮೂರ್ತಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.

ಮಹಾಮಸ್ತಕಾಭಿಷೇಕಕ್ಕೆ ಬರುವ ಭಕ್ತಾದಿಗಳಿಗೆ 19 ಸಾವಿರ ಚದರ ಅಡಿ ವಿಸ್ತೀರ್ಣದ ಪ್ರತ್ಯೇಕ ಅನ್ನಛತ್ರ ನಿರ್ಮಿಸಲಾಗಿದೆ. ಎರಡು ಸಾವಿರ ಸ್ವಯಂ ಸೇವಕರು ಸಜ್ಜಾಗಿದ್ದು, ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !