ಗುರುವಾರ , ಜುಲೈ 29, 2021
22 °C
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನರ ಮೇಲೆ ಭಾರಿ ಹೊರೆ: ಖರ್ಗೆ

‘ಅಬಕಾರಿ ಸುಂಕ ಕಡಿತಗೊಳಿಸಿ: ಮಲ್ಲಿಕಾರ್ಜುನ ಇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದರಿಂದ ಬಡ, ಮಧ್ಯಮ ವರ್ಗದ ಮೇಲೆ ಭಾರಿ ಹೊಡೆತ ಬಿದ್ದಿದೆ. ತಕ್ಷಣ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು’ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ದಾಖಲೆ ಮಟ್ಟದಲ್ಲಿ ಕುಸಿದಿದೆ. ಅದರ ಲಾಭವನ್ನು ಕೇಂದ್ರ ಸರ್ಕಾರ ಜನರಿಗೆ ವರ್ಗಾಯಿಸಬೇಕು. ಪೆಟ್ರೋಲ್‌ ಮತ್ತು ಡೀಸೆಲ್‌ ಉತ್ಪನ್ನಗಳನ್ನು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ತರಬೇಕು’ ಎಂದೂ ಹೇಳಿಕೆಯಲ್ಲಿ ಆಗ್ರಹ ಪಡಿಸಿದ್ದಾರೆ.

‘ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 2014ರಿಂದ ಈವರೆಗೆ 12 ಬಾರಿ ಹೆಚ್ಚಿಸಲಾಗಿದೆ. ಇಂಧನ ದರ ಹೆಚ್ಚಳಗೊಂಡಿದ್ದರಿಂದ ಸಾರಿಗೆ ವೆಚ್ಚ ಹೆಚ್ಚಳವಾಗಲಿದೆ. ಎಲ್‌ಪಿಜಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಲ್ಲಿಯೂ ಅನುಮಾನ ಇಲ್ಲ. ಡೀಸೆಲ್‌ ದರ ಹೆಚ್ಚಳದಿಂದ ಕೃಷಿ ವೆಚ್ಚ ಹೆಚ್ಚಾಗಲಿದೆ. ರೈತರು ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸುವವರ ಜೇಬಿಗೆ ಕತ್ತರಿ ಬೀಳಲಿದೆ’ ಎಂದು ಖರ್ಗೆ ಅವರು ಹೇಳಿದ್ದಾರೆ.

‘ಡೀಸೆಲ್‌ ದರ ಹೆಚ್ಚಳದಿಂದ ಬಸ್‌, ರೈಲ್ವೆ ಪ್ರಯಾಣ ದರ ಹೆಚ್ಚಳವಾಗಲಿದ್ದು, ಬಡ, ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ. ಪೆಟ್ರೋಲ್‌ ದರ ಹೆಚ್ಚಳ ಸಣ್ಣ ಉದ್ದಿಮೆದಾರರು ಮತ್ತು ನೌಕರರ ಮೇಲೂ ಪರಿಣಾಮ ಬೀರಲಿದೆ. ಲಾಕ್‌ಡೌನ್‌ನಿಂದ ಜನರು ಕೆಲಸ, ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ತೈಲ ಬೆಲೆಯನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಯುಪಿಎ ಆಡಳಿತಾವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 110 ಡಾಲರ್‌ ಗಡಿ ದಾಟಿದ್ದರೂ ಪೆಟ್ರೋಲ್, ಡೀಸೆಲ್‌ ದರ ಹೆಚ್ಚಿಸಿರಲಿಲ್ಲ. ಈಗಕಚ್ಚಾ ತೈಲ ಬೆಲೆ ಶೇ 40ರಷ್ಟು ಕುಸಿದಿದೆ. ಅದರ ಲಾಭವನ್ನು ಜನರಿಗೆ ತಲುಪಿಸದೇ, ಮೋದಿ ಸರ್ಕಾರ ಜನರಿಂದಲೇ ವಸೂಲಿ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು