ಬುಧವಾರ, ಮಾರ್ಚ್ 3, 2021
19 °C
ಪ್ರಶಂಸನಾ ಪತ್ರ ನೀಡಿ ಗೌರವಿಸಿದ ಪೊಲೀಸ್‌ ಕಮಿಷನರ್‌

ಮಂಗಳೂರು: ತಡರಾತ್ರಿ ಒಂಟಿ ಮಹಿಳೆಗೆ ನೆರವು ನೀಡಿ ಮಾನವೀಯತೆ ಮೆರೆದ ಎಎಸ್‌ಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ವಯೋವೃದ್ಧ ತಂದೆಗಾಗಿ ಔಷಧಿ ತರಲು ತಡರಾತ್ರಿ ಆಟೊಗಾಗಿ ಕಾಯುತ್ತಾ ನಿಂತಿದ್ದ ಮಹಿಳೆಗೆ ನೆರವಾಗುವ ಮೂಲಕ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಸಂತೋಷ್‌ ಮಾನವೀಯತೆ ಮೆರೆದಿದ್ದಾರೆ.

ನಗರದ ಶಿವಭಾಗ್‌ನಲ್ಲಿ ಭಾನುವಾರ ತಡರಾತ್ರಿ ರಸ್ತೆಯಲ್ಲಿ ನಿಂತು ಆಟೊಗಾಗಿ ದಾರಿ ಕಾಯುತ್ತಿದ್ದ ಮಹಿಳೆಯನ್ನು ಪೊಲೀಸ್‌ ವಾಹನದಲ್ಲೇ ಮೆಡಿಕಲ್‌ಗೆ ಕರೆದೊಯ್ದ ಎಎಸ್‌ಐ, ಔಷಧಿ ಖರೀದಿಸಿದ ಬಳಿಕ ಅದೇ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸಿದ್ದಾರೆ. ಎಎಸ್‌ಐ ನೀಡಿದ ನೆರವಿಗೆ ಕೃತಜ್ಞತೆ ಸಲ್ಲಿಸಿರುವ ಮಹಿಳೆ ಈ ವಿಷಯವನ್ನು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರ ಗಮನಕ್ಕೆ ತಂದಿದ್ದಾರೆ. ಸಂತೋಷ್‌ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆಸಿಕೊಂಡ ಕಮಿಷನರ್‌ ‍ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

‘ಮಂಗಳೂರು ಪೊಲೀಸರಿಗೆ ಹೃದಯಪೂರ್ವಕ ಮೆಚ್ಚುಗೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಭಾನುವಾರ ತಡರಾತ್ರಿ ನನ್ನ ವಯೋವೃದ್ಧ ತಂದೆಯವರಿಗೆ ತುರ್ತಾಗಿ ಕೆಲವು ಔಷಧಿ ಬೇಕಿತ್ತು. ರಸ್ತೆಯಲ್ಲಿ ನೆರವಿಗಾಗಿ ಕಾಯುತ್ತಾ ನಿಂತಿದ್ದೆ. ಅದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಸಂತೋಷ್‌ ನನ್ನನ್ನು ಗುರುತಿಸಿದರು. ಪೊಲೀಸ್‌ ವಾಹನದಲ್ಲಿ ಮೆಡಿಕಲ್‌ಗೆ ಕರೆದೊಯ್ದು, ಔಷಧಿ ಖರೀದಿಸಿದ ಬಳಿಕ ಅದೇ ವಾಹನದಲ್ಲಿ ಸುರಕ್ಷಿತವಾಗಿ ನನ್ನನ್ನು ಮನೆಗೆ ತಲುಪಿಸಿದರು. ಈ ಗೌರವಯುತ ವ್ಯಕ್ತಿಗೆ ನಾನು ಸಲ್ಯೂಟ್‌ ಮಾಡುತ್ತೇನೆ’ ಎಂದು ಸಹಾಯ ಪಡೆದ ಮಹಿಳೆ ಪೊಲೀಸ್‌ ಕಮಿಷನರ್‌ಗೆ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಎಎಸ್‌ಐ ಸಂತೋಷ್‌, ‘ನಾವು ರಾತ್ರಿ ಗಸ್ತಿನಲ್ಲಿದ್ದೆವು. ತಡರಾತ್ರಿ 1.30ರ ಸುಮಾರಿಗೆ ಶಿವಭಾಗ್‌ನಲ್ಲಿ ಒಂಟಿ ಮಹಿಳೆ ರಸ್ತೆ ಬದಿ ನಿಂತು ಕಾಯುತ್ತಾ ಇದ್ದರು. ಅವರ ಬಳಿ ಹೋಗಿ ಅಲ್ಲಿ ಏಕೆ ನಿಂತಿದ್ದಾರೆ ಎಂದು ವಿಚಾರಿಸಿದೆ. ತಂದೆಗಾಗಿ ತುರ್ತಾಗಿ ಔಷಧಿ ತರಬೇಕಿದೆ ಎಂಬುದನ್ನು ತಿಳಿಸಿದರು. ನಮ್ಮ ವಾಹನದಲ್ಲೇ ರಾಧಾ ಮೆಡಿಕಲ್ಸ್‌ಗೆ ಕರೆದೊಯ್ದೆವು. ಔಷಧಿ ಖರೀದಿಸಿದ ಬಳಿಕ ಅವರನ್ನು ವಾಪಸು ಮನೆಗೆ ತಲುಪಿಸಿದೆವು. ತಡರಾತ್ರಿ ನಾವು ಸಣ್ಣ ಸಹಾಯ ಮಾಡಿದ್ದಕ್ಕೆ ಆ ಮಹಿಳೆ ತುಂಬಾ ಸಂತೋಷ ವ್ಯಕ್ತಪಡಿಸಿದ್ದರು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು