ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿತ್ಯ ರಾವ್‌ನನ್ನು ವಿಮಾನದಲ್ಲಿ ಮಂಗಳೂರಿಗೆ ಕರೆದುಕೊಂಡು ಹೋದ ಪೊಲೀಸರು

Last Updated 22 ಜನವರಿ 2020, 14:16 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ’ ಎಂದು ತಪ್ಪೊಪ್ಪಿಕೊಂಡ ಆರೋಪಿ ಆದಿತ್ಯ ರಾವ್‌ನನ್ನು ಪೊಲೀಸರು ಸಂಜೆ ಮಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋದರು.

ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ಬೆಳಿಗ್ಗೆ 8.30ರ ಸುಮಾರಿಗೆ ಬಂದ ಆದಿತ್ಯ ರಾವ್‌, ‘ನಾನು ಪೊಲೀಸ್ ಮಹಾನಿರ್ದೇಶಕರ ಎದುರು ಶರಣಾಗಬೇಕು’ ಎಂದು ಒಳಹೋಗಲು ಮುಂದಾಗಿದ್ದಾನೆ. ‘ಮಂಗಳೂರಿನಲ್ಲಿ ಬಾಂಬ್ ಇಟ್ಟವನು ನಾನೇ. ಪೊಲೀಸರು ಹುಡುಕುತ್ತಿರುವುದು ನನ್ನನ್ನೆ. ಶರಣಾಗಲು ಬಂದಿದ್ದೇನೆ’ ಎಂದಾಗ ಎಚ್ಚೆತ್ತುಕೊಂಡ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು‌ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆದಿತ್ಯ ರಾವ್‌ನನ್ನು ವಶಕ್ಕೆ ಪಡೆದುಕೊಂಡ ಹಿರಿಯ ಪೊಲೀಸ್‌ ಅಧಿಕಾರಿಗಳು ಅಲ್ಲಿಂದ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ವಿಚಾರಣೆ ನಡೆಸಿದರು. ಆದಿತ್ಯ ರಾವ್‌ ಶರಣಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ, ಆತನನ್ನು ವಶಕ್ಕೆ ಪಡೆಯಲು ಮಂಗಳೂರು ಪೊಲೀಸರು ನಗರಕ್ಕೆ ಬಂದರು.

ಸಂಜೆ 4 ಗಂಟೆಗೆ ಆರೋಪಿಯನ್ನು ಒಂದನೇ ಎಸಿಎಂಎಂ ಕೋರ್ಟ್‌ನಲ್ಲಿ ಹಾಜರುಪಡಿಸಲಾಯಿತು. ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಗುರುವಾರ ಸಂಜೆ 5 ಗಂಟೆಯ ಒಳಗೆ ಹಾಜರುಪಡಿಸುವಂತೆ ಅಲ್ಲಿನ ಪೊಲೀಸರಿಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ಆದೇಶ ನೀಡಿದೆ. ಸಂಜೆ 7.15ರ ವಿಮಾನದಲ್ಲಿ ಆರೋಪಿಯನ್ನು ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇದೇ 20ರಂದು ಬಾಂಬ್ ಪತ್ತೆಯಾಗಿತ್ತು. ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಶಂಕಿತನ ಚಹರೆಯ ಜಾಡು ಹಿಡಿದು ತನಿಖೆ ತೀವ್ರಗೊಳಿಸಿದ್ದ ಪೊಲೀಸರು, ಆದಿತ್ಯನ ನೆಲೆಸಿದ್ದ ಉಡುಪಿಯ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಕೂಡಾ ಮಾಡಿದ್ದರು. ಈ ಮಧ್ಯೆ, ಆತ ಶರಣಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT