ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಹೂವಾಗದ ಮಾವು; ಬೆಳಗಾರ ಕಂಗಾಲು

ಅಧಿಕ ಮಳೆ, ಮೋಡ, ಮಂಜಿಗೆ ಕರಗಿದ ಹೂವುಗಳು; ಔಷಧ ಸಿಂಪಡಿಸಿದರೂ ಪ್ರಯೋಜನವಿಲ್ಲ
Last Updated 15 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಸಕ್ತ ಸಾಲಿನಲ್ಲಿ ಮಾವು ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಿಡದೇ ಇರುವುದು ಜಿಲ್ಲೆಯ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಹೋದ ವರ್ಷ ಮುಂಗಾರು ಮಳೆ ಅಧಿಕ ಪ್ರಮಾಣದಲ್ಲಿ ಸುರಿದ ಪರಿಣಾಮ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರ ನಿರೀಕ್ಷೆಯನ್ನು ‘ಹಣ್ಣಿನ ರಾಜ’ ಹುಸಿಗೊಳಿಸಿದ್ದಾನೆ. ಮಾವಿನ ತೋಟಗಳು ಚಿಗುರೊಡೆದು ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ, ಹೂವು, ಕಾಯಿಗಳಿಲ್ಲದಿರುವುದರಿಂದ ಬೆಳೆಗಾರರು ತೋಟದತ್ತ ಮುಖ ಮಾಡದಂತಾಗಿದೆ.

‘ಜಿಲ್ಲೆಯಲ್ಲಿ ಅಕ್ಟೋಬರ್‌, ನವೆಂಬರ್‌ ವರೆಗೂ ಮಳೆಯಾದ ಪರಿಣಾಮ ತೇವಾಂಶ ಹೆಚ್ಚಾಗಿ ‌ಮಾವು ಹೂಬಿಡಲು ಅನುಕೂಲಕರ ವಾತಾವರಣ ಸೃಷ್ಟಿಯಾಗಲಿಲ್ಲ. ಮಾವು ಹೂವಾಗುವ ಸಂದರ್ಭದಲ್ಲಿ ಚಿಗುರೊಡೆಯತೊಡಗಿತು. ಇದರಿಂದ ಶೇ 40ರಷ್ಟು ಹೂವಿನ ಪ್ರಮಾಣ ಕಡಿಮೆಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾವಿನ ಗಿಡಗಳಲ್ಲಿ ಸದ್ಯ ಬಂದಿರುವ ಹೂವು ಉದುರದಂತೆ ಬೆಳೆಗಾರರು ಔಷಧ ಸಿಂಪಡಿಸಿ, ಪೋಷಣೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಅಳ್ನಾವರದ ಮಾವು ಬೆಳೆಗಾರ ಸಚಿನ್‌ ಹಟ್ಟಿಹೊಳಿ, ‘ಹೋದ ವರ್ಷವೂ ಜಿಲ್ಲೆಯಲ್ಲಿ ಮಾವಿನ ಇಳುವರಿ ಕಡಿಮೆಯಾಗಿತ್ತು. ಈ ವರ್ಷ ಹೆಚ್ಚಿನ ಇಳುವರಿ ನಿರೀಕ್ಷೆ ಇತ್ತು. ಆದರೆ, ಭಾರೀ ಮಳೆಯಿಂದ ಮಾವಿನ ತೋಟದಲ್ಲಿ ಹೂವು, ಕಾಯಿ ಕಡಿಮೆಯಾಗಿದೆ. ಅಲ್ಪಸ್ವಲ್ಪ ಬಿಟ್ಟಿದ್ದ ಹೂವು ಸಹ ಇತ್ತೀಚೆಗೆ ಬಿದ್ದ ದಟ್ಟ ಮಂಜು ಮತ್ತು ಮೋಡಕ್ಕೆ ಉದುರುತ್ತಿದೆ. ಔಷಧ ಸಿಂಪಡಿಸಿದರೂ ನಿಲ್ಲುತ್ತಿಲ್ಲ. ಬೆಳೆಗಾರರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

12,200 ಹೆಕ್ಟೆರ್‌

ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ಸೇರಿದಂತೆ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಅಧಿಕ ಬೆಳೆಗಾರರು 12,200 ಹೆಕ್ಟೆರ್‌ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಬೆಳೆಯುವ ರುಚಿಕರವಾದ ಆಪೂಸ್‌(ಅಲ್ಪೋನ್ಸಾ), ಕಲ್ಮಿ, ಬನೇಶಾನ್‌, ಕೇಸರ್‌ ತಳಿಯ ಮಾವಿನ ಹಣ್ಣಿಗೆ ದೇಶ, ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT