ಶನಿವಾರ, ಮಾರ್ಚ್ 25, 2023
28 °C

ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರಿ ಹಣಕಾಸು ಅವ್ಯವಹಾರ ಆರೋಪಕ್ಕೆ ಒಳಗಾಗಿರುವ ಬಸವನಗುಡಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗುರುವಾರ ಆದೇಶ ಹೊರಡಿಸಿದ್ದಾರೆ‌.

ವಾಸುದೇವ ಮಯ್ಯ ಆರು ಪುಟಗಳ ಮರಣ ಪತ್ರ ಬರೆದಿಟ್ಟು ಸೋಮವಾರ ಸಂಜೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೆ ಕಾರಣರಾದ ಎಂಟು ಜನರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣದ ಗಂಭೀರತೆ ಮನಗಂಡು ತನಿಖೆಯನ್ನು ಸಿಐಡಿಗೆ ವಹಿಸುವಂತೆ ಪೊಲೀಸ್‌ ಕಮಿಷನರ್‌ ಪಿ. ಭಾಸ್ಕರ್ ರಾವ್ ಅವರು ಡಿಜಿಪಿಗೆ ಶಿಫಾರಸು ಮಾಡಿದ್ದರು.

ಮಯ್ಯ ಅವರ ಮಗಳು ರಶ್ಮಿ ಅವರು ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಹಾಲಿ ಸಿಇಒ ಸಂತೋಷ್‌ ಕುಮಾರ್‌, ರವಿ ಐತಾಳ, ರಾಕೇಶ್, ಶ್ರೀಪಾದ ಹೆಗಡೆ, ಪ್ರಶಾಂತ್, ರಘುನಾಥ್, ಕುಮಾರೇಶ್, ರಜತ್ ಸೇರಿ 11 ಜನರ ವಿರುದ್ದ ಸುಬ್ರಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದು, ‘ತಮ್ಮ ತಂದೆ ಸಾವಿಗೆ ಇವರೇ ಕಾರಣ’ ಎಂದು ಆರೋಪಿಸಿದ್ದಾರೆ.

ಬ್ಯಾಂಕ್ ವಹಿವಾಟಿನ ತಿಳಿವಳಿಕೆ ಇಲ್ಲದ ತಂದೆ ಬ್ಯಾಂಕಿನ‌ ಆಡಳಿತ ಮಂಡಳಿ ಅನುಮೋದನೆಯಂತೆ ಸಾಲ ನೀಡಿದ್ದಾರೆ. ಅಲ್ಲದೆ, ಅವರು ನಂಬಿ ಕೊಟ್ಟಿದ್ದ ಪಾಸ್‌ವರ್ಡ್‌ ಅನ್ನು ಆರೋಪಿಗಳು ದುರುಪಯೋಗ ಮಾಡಿದ್ದಾರೆ. ಬ್ಯಾಂಕಿನ‌ ಪರಿವೀಕ್ಷಣೆ ಸಮಯದಲ್ಲಿ ಆರ್‌ಬಿಐ ಅಧಿಕಾರಿಗಳು ತಮ್ಮ ತಂದೆಯಿಂದ ಕೆಲವು ದಾಖಲೆಗೆ ಬಲವಂತವಾಗಿ ಸಹಿ ಹಾಕಿಸಿದ್ದಾರೆ ಎಂದೂ ದೂರಿದ್ದಾರೆ.

ಶ್ರೀ ಗುರುರಾಘವೇಂದ್ರ ಬ್ಯಾಂಕಿನಲ್ಲಿ 2012– 2018ರ ಮಧ್ಯೆ ₹ 1400 ಕೋಟಿ ಅವ್ಯವಹಾರ ನಡೆದಿದೆ. ಈ ಪ್ರಕರಣ ಸಿಐಡಿ ವಿಚಾರಣೆಯಲ್ಲಿದೆ. 69 ಹೆಸರಿನಲ್ಲಿ 2,876 ಖಾತೆಗಳಿಗೆ ₹ 1,323 ಕೋಟಿ ಸಾಲ ವಿತರಿಸಿದ ಆರೋಪ ಬ್ಯಾಂಕಿನ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು