ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಬಿ. ಪಾಟೀಲಗೆ ಕೆಪಿಸಿಸಿ ಸಾರಥ್ಯ? ವರಿಷ್ಠರ ಜೊತೆಗೆ ಸಿದ್ದರಾಮಯ್ಯ ಚರ್ಚೆ

ಸೋನಿಯಾ, ವೇಣುಗೋಪಾಲ್‌, ಅಹಮದ್‌ ಪಟೇಲ್‌ ಜೊತೆ ಸಿದ್ದರಾಮಯ್ಯ ಚರ್ಚೆ
Last Updated 15 ಜನವರಿ 2020, 2:49 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಪ್ರಾಬಲ್ಯ ಇರುವ ರಾಜ್ಯದ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅನುಕೂಲವಾಗಲಿದ್ದು, ಎಂ.ಬಿ. ಪಾಟೀಲ ಅವರನ್ನೇ ನೇಮಕ ಮಾಡಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ವಿವರಿಸಿದ್ದಾರೆ.

ಕೆಪಿಸಿಸಿ ಪುನಶ್ಚೇತನ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ನೇಮಕದ ನಿಟ್ಟಿನಲ್ಲಿ ಮಂಗಳವಾರ ಸಂಜೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ನಡೆಸಿದ ಸಿದ್ದರಾಮಯ್ಯ ಈ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ರಾಜ್ಯದ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಆ ಸಮುದಾಯದ ಮುಖಂಡರಿಗೇ ಪಕ್ಷದ ಸಾರಥ್ಯ ನೀಡಿದರೆ ಒಳಿತು ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ವರಿಷ್ಠರೆದುರು ವ್ಯಕ್ತಪಡಿಸಿದ್ದಾರೆ’ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಮಧುಸೂದನ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್‌ ಅವರೆದುರು ಕೆಲವು ಮುಖಂಡರು ಡಿ.ಕೆ. ಶಿವಕುಮಾರ್‌, ಎಚ್‌.ಕೆ. ಪಾಟೀಲ, ಕೆ.ಎಚ್‌. ಮುನಿಯಪ್ಪ, ಈಶ್ವರ ಖಂಡ್ರೆ ಅವರ ಪರ ಒಲವು ತೋರಿದ್ದರೂ, ಸಿದ್ದರಾಮಯ್ಯ ಸೂಚಿಸುವವರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌, ಅಹಮದ್‌ ಪಟೇಲ್‌ ಮತ್ತಿತರರು ಡಿ.ಕೆ. ಶಿವಕುಮಾರ್‌ ಅವರ ನೇಮಕಕ್ಕೆ ಆಸಕ್ತಿ ತಾಳಿದ್ದರೂ, ಉತ್ತರ ಕರ್ನಾಟಕ ಭಾಗಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ ಅವರ ನೇಮಕ ಸೂಕ್ತ ಎಂದೇ ಸಿದ್ದರಾಮಯ್ಯ ಪಟ್ಟು ಹಿಡಿದರು.

ಡಿ.ಕೆ.ಶಿವಕುಮಾರ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ಒಕ್ಕಲಿಗ ಸಮುದಾಯ ಸಿಟ್ಟಾಗುವುದು ಸಹಜ. ಹೀಗಾಗಿ, ಕೃಷ್ಣ ಬೈರೇಗೌಡರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬಹುದು. ಇದರಿಂದ ಪ್ರಬಲವಾಗಿರುವ ಲಿಂಗಾಯತ- ಮತ್ತು ಒಕ್ಕಲಿಗ ಸಮುದಾಯಗಳಿಗೆ ಆದ್ಯತೆ ನೀಡಿದಂತಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು ಎನ್ನಲಾಗಿದೆ.

ರಾಜೀನಾಮೆ– ನಡೆಯದ ಚರ್ಚೆ:‘ಇತ್ತೀಚೆಗೆ ನಡೆದ ಉಪ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಾನು ನೀಡಿದ್ದ ರಾಜೀನಾಮೆ ಕುರಿತು ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ವೇಳೆ ಯಾವುದೇ ರೀತಿಯ ಚರ್ಚೆ ನಡೆಯಲಿಲ್ಲ’ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

‘ಪಕ್ಷದ ಪುನಶ್ಚೇತನ, ಸಂಘಟನೆ ಕುರಿತು ಸೋನಿಯಾ ಗಾಂಧಿ ಅವರೂ ಒಳಗೊಂಡಂತೆ ಹಿರಿಯ ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಈ ಸಂಬಂಧ ಸಲಹೆ ನೀಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಅವರು ವಿವರಿಸಿದರು.

ಗುಂಪುಗಾರಿಕೆ: ಸೋನಿಯಾ ಬೇಸರ

ಚರ್ಚೆಯ ವೇಳೆ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಕೆಲವು ಸಲಹೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ಪಕ್ಷದ ಎಲ್ಲರನ್ನೂ ವಿಶ್ವಾಸದಿಂದ ಕಾಣುವಂತೆ ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಎದ್ದು
ಕಾಣುತ್ತಿದೆ. ನಿಮ್ಮ ನಾಯಕತ್ವದ ಮೇಲೆ ಹೈಕಮಾಂಡ್‌ಗೆ ನಂಬಿಕೆ ಇದೆ. ಆದರೆ, ರಾಜ್ಯದ ಮುಖಂಡರಲ್ಲಿ ಅಸಮಾಧಾನ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸೋನಿಯಾ ಗಾಂಧಿ ಅವರು ಸಲಹೆ ನೀಡಿದರು ಎಂದು ಹೈಕಮಾಂಡ್‌ ಮೂಲಗಳು ತಿಳಿಸಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT