ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ಮಾರಾಟ ವಿಚಾರವಾಗಿ ಸಚಿವರಿಂದ ಗಂಟೆಗೊಂದು ಹೇಳಿಕೆ

ಹಕ್ಕಿಜ್ವರದ ಆತಂಕ ಕುರಿತು ಎಚ್ಚರಿಸಿದ್ದರೂ ಸಮರ್ಥಿಸಿದ್ದ ಸಂಸದ ಪ್ರತಾಪ ಸಿಂಹ
Last Updated 31 ಮಾರ್ಚ್ 2020, 11:41 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಮೀನು ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಆದರೆ, ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲೂ ಸಚಿವರು, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ಮೀನು ಹೊರತು ಪಡಿಸಿ ಕೋಳಿ ಹಾಗೂ ಕುರಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದರು. ಬೇರೆ ಜಿಲ್ಲೆಗಳಲ್ಲಿ ಕುರಿ ಮಾಂಸವನ್ನು ಪ್ರತಿ ಕೆ.ಜಿಗೆ ₹ 1,000ಕ್ಕೆ ಮಾರಾಟ ಮಾಡಲಾಗುತ್ತಿದೆ. ಅದು ದುಬಾರಿ. ಕೊಡಗಿನಲ್ಲಿ ಕುರಿ ಮಾಂಸಕ್ಕೆ ಪ್ರತಿ ಕೆ.ಜಿಗೆ ₹ 600 ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

‘ಜಿಲ್ಲೆ ಸದ್ಯಕ್ಕೆ ಶಾಂತವಾಗಿದೆ. ಜಿಲ್ಲಾಡಳಿತದ ಬಿಗಿ ಕ್ರಮದಿಂದ ಜನರಲ್ಲೂ ಗೊಂದಲದ ವಾತಾವರಣ ಇಲ್ಲ. ಮೈಸೂರಿನಲ್ಲಿ ಹಕ್ಕಿಜ್ವರವಿದ್ದು ಕೋಳಿ ಮಾರಾಟಕ್ಕೆ ಅವಕಾಶ ನೀಡಿದರೆ ಸಮಸ್ಯೆ ಆಗುವುದಿಲ್ಲವೇ’ ಎಂದು ಪತ್ರಕರ್ತರು ಪ್ರಶ್ನಿಸಿದ್ದರು. ಅದೇ ಪತ್ರಿಕಾಗೋಷ್ಠಿಯಲ್ಲಿದ್ದ ಸಂಸದ ಪ್ರತಾಪ ಸಿಂಹ ಅವರು, ‘ಮೈಸೂರಿನ ಕೆಲವು ಬಡಾವಣೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಅಂತಹ ಕೋಳಿಗಳನ್ನು ಸಾಮೂಹಿಕವಾಗಿ ನಾಶ ಪಡಿಸಲಾಗಿದೆ. ಮೈಸೂರು ಮಾತ್ರವಲ್ಲ. ಹಾಸನ ಹಾಗೂ ಅರಕಲಗೂಡಿನಲ್ಲೂ ರೈತರು ಕೋಳಿ ಸಾಕಾಣಿಕೆ ಮಾಡುತ್ತಾರೆ. ಬೇಕಿದ್ದರೆ ಅಲ್ಲಿಂದಲೂ ಖರೀದಿಸಬಹುದು’ ಎಂದು ಹೇಳಿದ್ದರು. ಅದಾದ ಮೇಲೆ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಸಚಿವರೂ ಸಮರ್ಥಿಸಿಕೊಂಡಿದ್ದರು.

ಸಚಿವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತ್ತು. ಪತ್ರಿಕಾಗೋಷ್ಠಿ ಮುಗಿದ ಕೆಲವೇ ನಿಮಿಷಗಳಲ್ಲಿ ನಿಲುವು ಬದಲಿಸಿದ ಸಚಿವ ಸೋಮಣ್ಣ ಅವರು, ವಾರ್ತಾ ಇಲಾಖೆಯ ಮೂಲಕ ‘ಜಿಲ್ಲೆಯಲ್ಲಿ ಮೀನು ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟಕ್ಕೆ ಜಿಲ್ಲೆಯಲ್ಲಿ ಅವಕಾಶ ಇಲ್ಲ’ ಎಂದು ಪ್ರಕಟಣೆ ನೀಡಿದರು. ‘ದೇಶದಾದ್ಯಂತ ಲಾಕ್‌ಡೌನ್‌ ಇರುವುದರಿಂದ ಈ ಹಿಂದೆ ನಿರ್ಧಾರದಂತೆ ಯಾವುದೇ ರೀತಿಯ ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ’ ಎಂದೂ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT