ಶುಕ್ರವಾರ, ಏಪ್ರಿಲ್ 3, 2020
19 °C
ಬಾಧಿಸುತ್ತಿದೆ ಶಿಲಿಂಧ್ರ ರೋಗ* ಶೇ 99 ಮರ ರೋಗಗ್ರಸ್ತ* ವಿದೇಶಿ ಗಿಡಗಳು ನೆಲಸಮ

ಬೇರುಗಳೇ ಭದ್ರವಿಲ್ಲದ ಮರಗಳು!

ಗವಿ ಬ್ಯಾಳಿ Updated:

ಅಕ್ಷರ ಗಾತ್ರ : | |

ನಗರದಲ್ಲಿನ ಹೆಚ್ಚಿನ ಮರಗಳು ಮೂಲತಃ ದೇಶಿ ತಳಿಗಳಲ್ಲ. ಹೆಚ್ಚಿನವು ವಿದೇಶಿ ತಳಿಗಳು. ಅವುಗಳ ಬೇರು, ಕಾಂಡ ಗಟ್ಟಿಯಾಗಿರುವುದಿಲ್ಲ. ದೇಶಿ ತಳಿಗಳಾದ ಅಶ್ವತ್ಥ ಅಥವಾ ಅರಳಿ ಮರದ ಬೇರುಗಳು ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ. ಕಳೆದ ಭಾನುವಾರ ಮಳೆಗೆ ಬಿದ್ದ ಮರಗಳ ಬಗ್ಗೆ ಪರಿಸರ ತಜ್ಞರು, ಮರ ವಿಜ್ಞಾನಿಗಳು, ಪರಿಸರ ಹೋರಾಟಗಾರರನ್ನು ‘ಮೆಟ್ರೊ’ ಸಂಪರ್ಕಿಸಿದಾಗ ಬೆಂಗಳೂರಿನ ಹೆಚ್ಚಿನ ಮರಗಳಿಗೆ ಶಿಲಿಂಧ್ರ ರೋಗ ಬಾಧೆ ಮತ್ತು ಅವುಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವ ಸಂಗತಿ ಪತ್ತೆಯಾಯಿತು. ಈ ಬಗ್ಗೆ ಒಂದು ಸಮಗ್ರ ವರದಿ.

ನಗರದಲ್ಲಿ ಮೊನ್ನೆ ಬಿದ್ದ ಭಾರಿ ಮಳೆ ಮತ್ತು ಬೀಸಿದ ಗಾಳಿಗೆ ನೆಲಕ್ಕೊರಗಿದ ಮರಗಳೆಲ್ಲವೂ ಗುಲ್‌ಮೋಹರ್‌, ಮಳೆಮರ, ಕಾಪರ್‌ ಪಾಡ್‌ನಂತಹ ವಿದೇಶಿ ಮೂಲದ ಮೆತ್ತನೆಯ ಮರಗಳು. ಸಂಪಿಗೆ, ಬೇವು, ಹುಣಸೆಯಂತಹ ದೇಶೀಯ ಮರಗಳು ಇಂತಹ ಎಷ್ಟೋ ಗಾಳಿ, ಮಳೆಗಳನ್ನು ನೋಡಿವೆ. 

ಅತ್ಯಂತ ವೇಗವಾಗಿ ಬೆಳೆಯುವ ಕಾರಣ ಬೆಂಗಳೂರಿನ ರಸ್ತೆಗಳ ಪಕ್ಕದಲ್ಲಿ ವಿದೇಶಿ ತಳಿಯ ಗಿಡಗಳನ್ನು ನೆಡಲಾಗಿದೆ. ಇವುಗಳ ಬೇರುಗಳು ಗಟ್ಟಿಯಾಗಿರುವುದಿಲ್ಲ. ಮೊನ್ನೆ ಗಾಳಿಗೆ ಬಿದ್ದ ಮರಗಳಲ್ಲಿ ಹೆಚ್ಚಿನವು ವಿದೇಶಿ ತಳಿಯ ಮರಗಳು.  

ನಗರದಲ್ಲಿಯ ಹೆಚ್ಚಿನ ಮರಗಳು ವಿದೇಶಿ ತಳಿಗಳು. ಅವುಗಳ ಬೇರು, ಕಾಂಡ ಗಟ್ಟಿಯಾಗಿರುವುದಿಲ್ಲ. ದೇಶಿ ತಳಿಗಳಾದ ಅಶ್ವತ್ಥ ಅಥವಾ ಅರಳಿ ಮರದ ಬೇರುಗಳು ಆಳಕ್ಕೆ ಇಳಿಯುತ್ತವೆ. ಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ. 

ಎರಡು ದಿನ ಸುರಿದ  ಮಳೆಗೆ ಬಿದ್ದ ಮರಗಳ ಬಗ್ಗೆ ಪರಿಸರ ತಜ್ಞರು, ಮರ ವಿಜ್ಞಾನಿಗಳು, ಪರಿಸರ ಹೋರಾಟಗಾರರನ್ನು ‘ಮೆಟ್ರೊ’ ಮಾತನಾಡಿಸಿದಾಗ ಬೆಂಗಳೂರಿನ ಹೆಚ್ಚಿನ ಮರಗಳಿಗೆ ಶಿಲಿಂಧ್ರ ರೋಗ ಬಾಧಿಸುತ್ತಿರುವ ಮತ್ತು  ಅವುಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವ ಸಂಗತಿ ಪತ್ತೆಯಾಯಿತು.

ಒಂದು ಹನಿ ಮಳೆ ನೀರೂ ಮರಗಳಿಗೆ ಸಿಗುವುದಿಲ್ಲ. ದೈತ್ಯಾಕಾರದ ಮರಗಳು ಒಳಗಿಂದ ಟೊಳ್ಳಾಗಿವೆ. ಗಂಟೆಗೆ ನೂರರಿಂದ ನೂರೈವತ್ತು ಕಿ. ಮೀ ವೇಗದಲ್ಲಿ ಬೀಸುವ ಗಾಳಿಗೆ ತಾಯಿ ಬೇರು ಗಟ್ಟಿ ಇಲ್ಲದ ಗಿಡಗಳು ಸಣ್ಣ ಗಾಳಿ ಬೀಸಿದರೂ ಬೀಳುತ್ತವೆ. ಅಳಿದುಳಿದ ಗಟ್ಟಿ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿದು ಹಾಕಲಾಗುತ್ತಿದೆ.  

ಗಿಡಗಳ ಎತ್ತರಕ್ಕೆ ಅನುಗುಣವಾಗಿ ನೆಲದ ಅಡಿ ಬೇರುಗಳು ಇಳಿದಿರಬೇಕು. ಒಂದು ಗಿಡದಲ್ಲಿ ಎಷ್ಟು ಎಲೆಗಳಿವೆಯೋ ಅಷ್ಟು ಬೇರುಗಳಿರಬೇಕು. ಮರಗಳಿಗೆ ಎಲೆಗಳಿವೆ, ಬೇರುಗಳಿಲ್ಲ. ರಸ್ತೆ, ಮೋರಿ, ಚರಂಡಿಗಳಿಗಾಗಿ ನೆಲದಡಿ ಹರಡಿರುವ ಬೇರುಗಳನ್ನು ಕಡಿಯುವುದರಿಂದ ಬೇರುಗಳು ಸಡಿಲಾಗುತ್ತವೆ ಎನ್ನುತ್ತಾರೆ ಪರಿಸರ ಹೋರಾಟಗಾರರು.

ಬೆಂಗಳೂರಿನಲ್ಲಿರುವ ಮರಗಳ ಬುಡವೇ ಭದ್ರವಾಗಿಲ್ಲ. ದೈತ್ಯಾಕಾರದ ಮರಗಳ ಕಾಂಡಗಳು ಟೊಳ್ಳು. ಸ್ವಲ್ಪ ಗಾಳಿ ಬೀಸಿದರೂ ನೆಲಕ್ಕೆ ಉರುಳುತ್ತವೆ ಎನ್ನುವುದು ಪರಿಸರ ತಜ್ಞ ಡಾ. ಅ.ನ. ಯಲ್ಲಪ್ಪ ರೆಡ್ಡಿ ವಿಶ್ಲೇಷಣೆ. 

ನಗರದಲ್ಲಿರುವ ಶೇ 99.99ರಷ್ಟು ಮರಗಳು ರೋಗಗ್ರಸ್ತವಾಗಿವೆ. ಪರಿಸರವನ್ನು ಸ್ವಚ್ಛವಾಗಿಡುವ ನಿಸರ್ಗದ ಶ್ವಾಸಕೋಶ ಬೇರುಗಳಿಗೇ ದುಷ್ಕರ್ಮಿಗಳು ಆ್ಯಸಿಡ್‌, ಪಾದರಸ ಹಾಕಿ ಕಮರಿಸುತ್ತಿದ್ದಾರೆ. ಉಸಿರಾ ಡುವ ಗಾಳಿಯಲ್ಲಿ ವಿಷವೇ ತುಂಬಿದೆ. ಬೆಂಗಳೂರಿನ ಜನರು ತಮಗರಿವಿಲ್ಲದಂತೆ ವಿಷಗಾಳಿ ಸೇವಿಸುತ್ತಿದ್ದಾರೆ.

ಮರಗಳಿಗೆ ಗೌರವ ನೀಡುವ ಸಂಸ್ಖೃತಿ ನಮ್ಮಲ್ಲಿ ಇಲ್ಲ. ಮರಗಳ ವೈಜ್ಞಾನಿಕ ನಿರ್ವಹಣೆ ಜ್ಞಾನವೂ ಇಲ್ಲ. ಗಾಳಿ ಬೀಸಿದರೆ, ಮಳೆ ಬಂದರೆ ನೂರಾರು ಮರಗಳು ಬುಡ ಸಮೇತ ಉರುಳುತ್ತವೆ. ಇದು ನಮ್ಮ ಅಜ್ಞಾನದ ಫಲ. ನಾವೇ ಹೊಣೆ ಎನ್ನುವುದು ರೆಡ್ಡಿ ವಾದ. 

ಜಾಹೀರಾತು, ಕೇಬಲ್‌ ನೇತು ಹಾಕಲು ಮೊಳೆ ಹೊಡೆಯುತ್ತಾರೆ. ಮರದ ತೊಗಟೆ ಸುಲಿಯುತ್ತಾರೆ. ರಸ್ತೆ, ಫುಟ್‌ಪಾತ್‌ಗಾಗಿ ಬೇರು ಅಗೆಯುತ್ತಾರೆ. ಬೆಸ್ಕಾಂನವರು ವಿದ್ಯುತ್‌ ತಂತಿಗೆ ತಾಗುತ್ತವೆ ಎಂದು ಅವೈಜ್ಞಾನಿಕವಾಗಿ ರೆಂಬೆ, ಕೊಂಬೆಗಳನ್ನು ಕತ್ತರಿಸುತ್ತಾರೆ. ಮನುಷ್ಯರು ಮರಗಳ ಜತೆ ತುಂಬಾ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ಕಸದಬುಟ್ಟಿ ಸೇರಿದ ವರದಿ 

ನಗರದ ಮರಗಳ ನಿರ್ವಹಣೆ ಕುರಿತು ಬೆಂಗಳೂರು ಮಹಾನಗರ ಪಾಲಿಕೆಗೆ 15 ವರ್ಷದ ಹಿಂದೆ ನೀಡಿದ ವರದಿ ಕಸದ ಬುಟ್ಟಿ ಸೇರಿದೆ. ಪಾಲಿಕೆಯ ಒಬ್ಬ ಸದಸ್ಯ, ಆಯುಕ್ತ, ಮೇಯರ್‌ ಕೂಡ ಈ ವರದಿಯನ್ನು ಓದಲಿಲ್ಲ. 

ಮರಗಳ ಸಮೀಕ್ಷೆ ನಡೆಸಲು ಅನುದಾನದ ಕೊರತೆ ನೆಪ ಒಡ್ಡುತ್ತಾರೆ. ರಸ್ತೆಗಳ ವೈಟ್‌ ಟಾಪಿಂಗ್‌ ಮತ್ತು ಉಕ್ಕಿನ ಸೇತುವೆ ನಿರ್ಮಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ಮತ್ತು ಪಾಲಿಕೆಗಳಿಗೆ ಮರಗಳ ಬುಡಕ್ಕೆ ₹10 ಖರ್ಚು ಮಾಡಿ ಶಿಲಿಂಧ್ರ ನಿರೋಧಕ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. 

ಯಾಂತ್ರಿಕವಾಗಿ ಕೆಲಸ ಮಾಡುವ ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿಗೆ ಟೊಂಗೆಗಳನ್ನು ವೈಜ್ಞಾನಿಕವಾಗಿ ಕತ್ತರಿಸುವ ತರಬೇತಿ ಕೊಡಿಸುವ ಅಗತ್ಯವಿದೆ.

ಒಂದು ಕಾಲಕ್ಕೆ ಬೆಂಗಳೂರು ಸುತ್ತಮುತ್ತ ಕನಿಷ್ಠ 25 ಸಾವಿರ ಅಶ್ವತ್ಥಕಟ್ಟೆ, ಕೆರೆ, ಕುಂಟೆ, ಗುಂಡುತೋಪುಗಳಿದ್ದವು. ಕಾಂಕ್ರೀಟ್‌ ಕಾಡು ಅವುಗಳನ್ನು ನುಂಗಿ ಹಾಕಿದೆ. ಅದರ ಫಲವನ್ನು ನಮ್ಮ ಮುಂದಿನ ಪೀಳಿಗ ಉಣ್ಣಬೇಕಾಗಿದೆ ಎನ್ನುತ್ತಾರೆ ಯಲ್ಲಪ್ಪ ರೆಡ್ಡಿ.

ರೋಗಗ್ರಸ್ತ ಮರಗಳು

‘ಮನುಷ್ಯರಂತೆ ಮರಗಳಿಗೂ ರೋಗಗಳು ಕಾಡುತ್ತವೆ. ಅವುಗಳ ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಜಾಗತಿಕ ಭೂಪಟದಲ್ಲಿ ಉದ್ಯಾನ ನಗರಿ ಮತ್ತು ಹಸಿರು ನಗರ ಎಂದೆಲ್ಲಾ ಗುರುತಿಸಿಕೊಂಡಿರುವ ಬೆಂಗಳೂರಿನ ಹೆಚ್ಚಿನ ಮರಗಳಿಗೆ ಶಿಲಿಂಧ್ರ ರೋಗ ಬಾಧಿಸುತ್ತಿದೆ. ಅವುಗಳಿಗೆ ಕಾಲಕಾಲಕ್ಕೆ ಅಗತ್ಯ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದಾಗಿ ಪ್ರತಿವರ್ಷ ನೂರಾರು ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ’ ಎನ್ನುವುದು ಮರಗಳ ವೈದ್ಯ ವಿಜಯ್‌ ನಿಶಾಂತ್‌ ಅವರ ಕಳವಳ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಡೆಸಿದ ಅಧ್ಯಯನದ ಪ್ರಕಾರ ನಗರದಲ್ಲಿ ಅಂದಾಜು 20 ಲಕ್ಷ ಮರಗಳಿವೆ. ಬೆಳೆಯುತ್ತಿರುವ ಕಾಂಕ್ರೀಟ್ ಕಾಡಿನಿಂದಾಗಿ ಗಿಡಗಳು ಬೆಳೆಯಲು ಜಾಗ ಸಿಗುತ್ತಿಲ್ಲ. ವೈಜ್ಞಾನಿಕವಾಗಿ ಗಿಡ–ಮರಗಳ ನಿರ್ವಹಣೆಯಾಗುತ್ತಿಲ್ಲ. ಅವುಗಳನ್ನು ದೇಶಿ ಮತ್ತು ವಿದೇಶಿ ತಳಿಗಳಾಗಿ ವಿಂಗಡಿಸುವ ಕಾರ್ಯ ನಡೆದಿಲ್ಲ. ಮರಗಳ ಅಧ್ಯಯನ ಮತ್ತು ನಿರ್ವಹಣೆಗೆ ಸರ್ಕಾರವು ವೈಜ್ಞಾನಿಕ ಕೇಂದ್ರ ರಚಿಸುವ ಅಗತ್ಯವಿದೆ. ಈ ಕೇಂದ್ರದ ಮೂಲಕ ಗಿಡ, ಮರಗಳ ಜಾತಿ, ತಳಿ ವಿಂಗಡಣೆ, ಆರೋಗ್ಯ ತಪಾಸಣೆ ನಡೆಸಬೇಕು ಎನ್ನುತ್ತಾರೆ.  

ಬಿಬಿಎಂಪಿ ಬಜೆಟ್‌ನಲ್ಲಿ ಮರಗಳ ಗಣತಿ ಮಾಡುವುದಾಗಿ ಹೇಳಿತ್ತು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿದ್ದಾರೆ. ನಗರದಲ್ಲಿ ಮರಗಳ ವೈಜ್ಞಾನಿಕ ವಿಂಗಡಣೆ ಮತ್ತು ಗಣತಿ ತುರ್ತಾಗಿ ನಡೆಯಬೇಕಿದೆ. ಸಂಘ, ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಪರಿಸರವಾದಿಗಳು ಮತ್ತು ಸ್ವಯಂಸೇವಕರ ಸಹಭಾಗಿತ್ವದಲ್ಲಿ ಗಿಡಗಳನ್ನು ರಕ್ಷಿಸುವ ಕೆಲಸ ನಡೆಯಬೇಕಿದೆ. ನಂತರ ಅವುಗಳ ನಿರ್ವಹಣೆಗೆ ನೀಲಿನಕ್ಷೆ ತಯಾರಾಗಬೇಕು. ಬಿಬಿಎಂಪಿ, ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ ಎನ್ನುತ್ತಾರೆ ವಿಜಯ್‌ ನಿಶಾಂತ್.

ಗಿಡಗಳ ನಡುವೆ ಕಡಿಮೆ ಅಂತರ

ಮರಗಳ ನಡುವೆ ಕಡಿಮೆ ಅಂತರ ಮತ್ತು ಸಡಿಲು ಮಣ್ಣಿನ ಪದರುಗಳಿಂದಾಗಿ ಗಿಡಗಳು ಹೆಚ್ಚು ಭದ್ರವಾಗಿ ಬೇರೂರಲು ಸಾಧ್ಯವಿಲ್ಲ. ಮಣ್ಣು ಮತ್ತು ಮರಗಳ ಆರೋಗ್ಯ ಅತ್ಯಂತ ಮುಖ್ಯ. ಗೆದ್ದಿಲು ಹತ್ತುವ ಮತ್ತು ಶಿಲಿಂಧ್ರ ಸೋಂಕು ತಗಲುವ ಮರಗಳು ಹೊರಗೆ ದೈತ್ಯಾಕಾರವಾಗಿ ಕಂಡರೂ ಒಳಗೆ ಟೊಳ್ಳಾಗಿರುತ್ತವೆ. ಅವುಗಳ ಆರೋಗ್ಯದ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಟಿ.ವಿ., ಎ.ಸಿ., ಫ್ರಿಜ್‌, ಕಾರುಗಳಿಗೆ ನೀಡಿದಷ್ಟು ಮಹತ್ವವನ್ನು ಮರಗಳಿಗೆ ನೀಡುವುದಿಲ್ಲ. ಒಂದು ಮರ ಉರುಳಿದರೆ ಅಥವಾ ಕಡಿದರೆ ಐದು ಸಸಿಗಳನ್ನು ನೆಡಬೇಕು. ಅದೊಂದೆ ಪರಿಹಾರ 

– ಡಾ. ಪಂಕಜ್‌ ಅಗರವಾಲ್‌, ಮರ ವಿಜ್ಞಾನಿ, ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ

***

ಬೇರುಗಳ ಆರೋಗ್ಯ ಮುಖ್ಯ

ಗಿಡಗಳ ವಯಸ್ಸು ಮತ್ತು ಬೇರುಗಳು ಎಷ್ಟು ಆಳದಲ್ಲಿರುತ್ತವೆ ಎನ್ನುವುದು ಮುಖ್ಯವಾಗುತ್ತದೆ. ಬೇರುಗಳ ಆರೋಗ್ಯ ಬಹು ಮುಖ್ಯವಾಗುತ್ತೆ. ಮಣ್ಣಿನಲ್ಲಿರುವ ನಾನಾ ಬಗೆಯ ಶಿಲಿಂಧ್ರ, ಬ್ಯಾಕ್ಟೀರಿಯಾ,ವೈರಸ್‌ನಂತಹ ಸೂಕ್ಷ್ಮಾಣು ಜೀವಿಗಳು ಬೇರುಗಳನ್ನು ಬಾಧಿಸುತ್ತವೆ. ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಮರಗಳು ಹೆಚ್ಚು ಕಾಲ ಬಾಳುವುದಿಲ್ಲ. 

– ಡಾ. ವಿ.ಪಿ. ತಿವಾರಿ,  ವಿಜ್ಞಾನಿ, ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ

 ***

ಉಷ್ಣ ದ್ವೀಪಗಳು ಕಾರಣ

ಗುಲ್‌ ಮೋಹರ್‌ ಮತ್ತು ಕಾಪರ್‌ಪಾಡ್‌ ಮರಗಳ ಕೊಂಬೆಗಳು ದುರ್ಬಲವಾಗಿರುತ್ತವೆ. ಕಾಂಕ್ರೀಟ್‌ ಕಟ್ಟಡ ಮತ್ತು ರಸ್ತೆಗಳ ಕಾರಣ ನಗರಗಳು ಉಷ್ಣದ್ವೀಪಗಳಾಗಿ ಪರಿವರ್ತನೆಗೊಂಡಿವೆ. ಅಧಿಕ ತಾಪಮಾನ ದಿಂದ ಕಡಿಮೆ ಒತ್ತಡ ನಿರ್ಮಾಣವಾಗಿ ವೇಗದ ಗಾಳಿ ಬೀಸುತ್ತವೆ. ಕಾಂಕ್ರೀಟ್‌ನಿಂದಾಗಿ ಮಣ್ಣಿನಲ್ಲಿ ನೀರು ಇಂಗುತ್ತಿಲ್ಲ.ಬಿಬಿಎಂಪಿಯು ಮರ ಕಡಿಯುವ ಬದಲು ರೆಂಬೆ, ಕೊಂಬೆಗಳನ್ನು ವೈಜ್ಞಾನಿಕವಾಗಿ ಕತ್ತರಿಸಬೇಕು. ಮರಗಳನ್ನು ಕತ್ತರಿಸಬಾರದು.

– ಶೇಷಾದ್ರಿ ರಾಮಸ್ವಾಮಿ, ನಾಗರಿಕ ವಿಜ್ಞಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು