ಸೋಮವಾರ, ಜೂನ್ 21, 2021
30 °C

ರಾಜ್ಯದಲ್ಲಿ 2 ಕೋಟಿ ಟನ್‌ ಅದಿರು ಕೊರತೆ?

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇದೇ ಮಾರ್ಚ್‌ ಅಂತ್ಯಕ್ಕೆ ಎರಡು ಡಜನ್‌ ಗಣಿಗಳ ಗುತ್ತಿಗೆಯ ಅವಧಿ ಮುಗಿಯಲಿದ್ದು, ಮುಂದಿನ ಎರಡು ವರ್ಷಗಳ ಅವಧಿಗೆ ಉಕ್ಕು ಕಾರ್ಖಾನೆಗಳು ಸುಮಾರು ಎರಡು ಕೋಟಿ ಟನ್‌ ಅದಿರು ಕೊರತೆ ಎದುರಿಸಲಿವೆ.

ಗಣಿಗಳ ಮರು ಹರಾಜು ಪ್ರಕ್ರಿಯೆ ಮುಗಿದರೂ, ಪರಿಸರ ಮತ್ತು ಅರಣ್ಯ ಇಲಾಖೆ ಅನುಮೋದನೆ ಸೇರಿದಂತೆ ಕಾನೂನುಬದ್ಧ ಷರತ್ತುಗಳನ್ನು ಪೂರೈಸಲು ಕನಿಷ್ಠ ಎರಡು ವರ್ಷ ಹಿಡಿಯಲಿದೆ. ಇದರಿಂದಾಗಿ ಗಣಿಗಾರಿಕೆ ಪುನರಾರಂಭ ವಿಳಂಬವಾಗಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.

ಉಕ್ಕು ಕಾರ್ಖಾನೆಗಳಿಗೆ ವರ್ಷಕ್ಕೆ 4 ಕೋಟಿ ಟನ್‌ ಅದಿರು ಅಗತ್ಯವಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ 3.5 ಕೋಟಿ ಟನ್‌ ಅದಿರು ಮಾತ್ರ ಹೊರತೆಗೆದು ಪೂರೈಸಲು ಅನುಮತಿ ನೀಡಿದೆ.

ಮೈಸೂರು ಮಿನರಲ್ಸ್‌ ಸೇರಿ ವಿವಿಧ ಗಣಿ ಕಂಪನಿಗಳ ಬಳಿ ಲಭ್ಯವಿರುವ 56 ಲಕ್ಷ ಟನ್‌ ಅದಿರನ್ನು ಖರೀದಿಸಿದರೂ ಕೊರತೆ ಪ್ರಮಾಣ ಸರಿದೂಗಿಸುವುದು ಕಷ್ಟ. ಅಲ್ಲದೆ, ಈಗಾಗಲೇ ಕಾರ್ಯಾರಂಭ ಮಾಡಿರುವ ಸಿ ವರ್ಗದ ಗಣಿಗಳಿಂದ ಅಲ್ಪ ಪ್ರಮಾಣದ ಅದಿರು ದೊರೆಯುವ ಸಾಧ್ಯತೆಯಿದೆ. 

ಗುತ್ತಿಗೆ ಅವಧಿ ಮುಗಿಯಲಿರುವ ಗಣಿಗಳಲ್ಲಿ ಎಷ್ಟು ‍‍ಪ್ರಮಾಣದ ಅದಿರು ಲಭ್ಯವಿದೆ ಎಂಬ ಕುರಿತು ಸಮೀಕ್ಷೆ ನಡೆಯುತ್ತಿದೆ. ಕುದುರೆಮುಖ ಅದಿರು ಕಂಪನಿ (ಕೆಐಒಸಿಎಲ್‌), ಮಿನರಲ್ ಎಕ್ಸ್‌ಪ್ಲೊರೇಷನ್ ಕಾರ್ಪೊರೇಷನ್‌ (ಎಂಇಸಿಎಲ್‌), ಜಿಯಾಲಜಿಕಲ್‌ ಸರ್ವೆಆಫ್‌ ಇಂಡಿಯಾ (ಜಿಎಸ್‌ಐ) ಸಮೀಕ್ಷೆ ಕೈಗೊಂಡಿವೆ. ಆನಂತರ ಗಣಿಗಳ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಈಗಾಗಲೇ ಮಿನರಲ್‌ ಎಂಟರ್‌ಪ್ರೈಸಸ್‌, ಅಶ್ವಥ್‌ ನಾರಾಯಣ್‌ಸಿಂಗ್‌, ನಾರಾಯಣ ಮೈನ್ಸ್‌ ಮತ್ತು ಝಡ್‌ಟಿಸಿ ಗಣಿಗಳನ್ನು ಹರಾಜು ಮಾಡಲಾಗಿದ್ದು, ಮೂರನ್ನು ಜೆಎಸ್‌ಡಬ್ಲ್ಯು ಖರೀದಿಸಿದೆ. ನಾಲ್ಕು ಗಣಿಗಳಲ್ಲಿ ಒಟ್ಟು 24 ಲಕ್ಷ ಟನ್‌ ಅದಿರಿದ್ದು, ಐಬಿಎಂ ದರದ ಮೇಲೆ ಶೇ 67, ಶೇ 72, ಶೇ 102 ಮತ್ತು ಶೇ 97ರಷ್ಟು ಪ್ರೀಮಿಯಂ ದೊರೆತಿದೆ.

ಮಿತಿಮೀರಿದ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವ ಸಿ ವರ್ಗದ ಒಟ್ಟು 51ಗಣಿಗಳ ಪೈಕಿ ನಾಲ್ಕರಲ್ಲಿ ಗಣಿಗಾರಿಕೆ ಪುನರಾರಂಭವಾಗಿದೆ.  ಮೂರು ಗಣಿಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆಲವು ಗಣಿಗಳು ಇನ್ನೂ ಆರಂಭವಾಗಬೇಕಿದೆ. ಬಹುತೇಕ ಗಣಿಗಳನ್ನು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಹರಾಜು ಮಾಡುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

20,50,100 ಹೆಕ್ಟೇರ್‌ ವ್ಯಾಪ್ತಿ ಹೊಂದಿರುವ ಸಣ್ಣಪುಟ್ಟ ಗಣಿಗಳನ್ನು ಅಕ್ಕ‍ಪಕ್ಕದ ಗಣಿಗಳ ಜೊತೆ ವಿಲೀನ ಮಾಡಲಾಗುತ್ತಿದೆ. ಕನಿಷ್ಠ 300, 400 ಹೆಕ್ಟೇರ್‌ಗೆ ವಿಸ್ತರಿಸಲಾಗುತ್ತಿದೆ. ಇದು ಗುತ್ತಿಗೆ ಅವಧಿ ಮುಗಿಯುವ ಗಣಿಗಳಿಗೆ ಅನ್ವಯವಾಗುವುದಿಲ್ಲ ಎಂದೂ ಮೂಲಗಳು ವಿವರಿಸಿವೆ.

*
ಮಾರ್ಚ್‌ನಲ್ಲಿ ಗುತ್ತಿಗೆ ಅವಧಿ ಮುಗಿಯಲಿರುವ ಗಣಿಗಳ ಸಮೀಕ್ಷೆ ನಡೆಯುತ್ತಿದೆ. ಪ್ರತಿ ವಾರ ಪ್ರಗತಿ ಪರಿಶೀಲಿಸಲಾಗುತ್ತಿದೆ. ಆನಂತರ ಹರಾಜು ನಡೆಯಲಿದೆ.
-ಶಿವಶಂಕರ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು