ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬಾಲ್ಯ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ: ಸಚಿವ ಸುರೇಶ್ ಕುಮಾರ್

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಚಿವರ ಮಾತು
Last Updated 5 ಫೆಬ್ರುವರಿ 2020, 13:59 IST
ಅಕ್ಷರ ಗಾತ್ರ

ಕೋಲಾರ:‘ಶಿಕ್ಷಕರ ಸುಖಕ್ಕೆ ಮಕ್ಕಳ ಹಿತ ಬಲಿ ಕೊಡಬಾರದು. ಮಕ್ಕಳ ಬಾಲ್ಯ ಕಿತ್ತುಕೊಳ್ಳುವ ಹಕ್ಕಿಲ್ಲ. ಮಕ್ಕಳ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಾಲದು. ಪಠ್ಯೇತರ ಚಟುವಟಿಕೆಗಳಿಂದ ಮನಸ್ಸಿನ ವಿಕಸನವಾಗುತ್ತದೆ. ಸಮಾಜಕ್ಕೆ ಅಗತ್ಯವಿರುವ ಎಲ್ಲಾ ರಂಗಗಳಲ್ಲೂ ಮಕ್ಕಳ ಜ್ಞಾನ ವಿಕಸನವಾಗಬೇಕು’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಬುಧವಾರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ‘ಮಗುವಿಗೆ ಒಂದು ತಾಸಿನಲ್ಲೇ ಪಕ್ಕೆಲುಬು ಉಚ್ಛಾರಣೆ ಹೇಳಿ ಕೊಡುವುದಲ್ಲ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆಯಲ್ಲ. ಮಗ್ಗಿ ಕಂಠಪಾಠ ಮಾಡಿದಂತೆಯೂ ಅಲ್ಲ. ಮಗುವನ್ನು ಎಲ್ಲಾ ದೃಷ್ಟಿಕೋನದಿಂದಲೂ ಮಾನವನಾಗಿ ಮಾಡುವುದೇ ಶಿಕ್ಷಣ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

‘ಮಕ್ಕಳಲ್ಲಿ ಬಹುಮುಖ ಪ್ರತಿಭೆಯಿದೆ. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಬೇಕು. ಸ್ಪರ್ಧೆಗೆ ಬಂದಿರುವ 34 ಶೈಕ್ಷಣಿಕ ಜಿಲ್ಲೆಗಳ ಮಕ್ಕಳು ಜನಪದ, ಬುಡಕಟ್ಟು, ಸಂಪ್ರದಾಯ, ಸಂಗೀತ, ನಾಟಕ, ದೃಶ್ಯಕಲೆ, ರಂಗೋಲಿ ಹೀಗೆ ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಪ್ರತಿಭೆ ಹೊಂದಿದ್ದಾರೆ. ಮಕ್ಕಳು ಬರಿ ಎಂಜಿನಿಯರ್‌ ಅಥವಾ ವೈದ್ಯರಾದರೆ ಸಾಕೇ?’ ಎಂದು ಪ್ರಶ್ನಿಸಿದರು.

‘ಮಕ್ಕಳು ದೃಷ್ಟಿ ದೋಷವಿದ್ದರೆ ಹೇಳಿಕೊಳ್ಳುವುದಿಲ್ಲ. ಕಣ್ಣಿನ ಸಮಸ್ಯೆಯಿಂದ ಕೀಳರಿಮೆ ಮೂಡಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಹಿಂದಿನ ವರ್ಷ ಬೆಂಗಳೂರಿನಲ್ಲಿ ವಿಕಸನ ಸಂಸ್ಥೆಯಿಂದ ಮಕ್ಕಳ ಕಣ್ಣಿನ ತಪಾಸಣೆ ಮಾಡಿದಾಗ 90 ಮಂದಿಗೆ ದೃಷ್ಟಿ ದೋಷವಿರುವುದು ಗೊತ್ತಾಯಿತು. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ 8ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಬೇಕು’ ಎಂದು ಸೂಚಿಸಿದರು.

‘ಕೋಲಾರ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿಗೆ ನೀರೊಂದು ಸಿಕ್ಕಿದರೆ ಜಿಲ್ಲೆಗೆ ಸ್ಪರ್ಧೆ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿನ ಜನ ಶ್ರಮ ಜೀವಿಗಳು. ರೇಷ್ಮೆ, ಹಾಲು, ಚಿನ್ನ, ತರಕಾರಿಗೆ ಜಿಲ್ಲೆ ಹೆಸರುವಾಸಿಯಾಗಿದೆ. ಅಲ್ಲದೇ, ಜಿಲ್ಲೆಯು ಆಡಳಿತ ವ್ಯವಸ್ಥೆ ಹಾಗೂ ನ್ಯಾಯಾಂಗಕ್ಕೆ ಅನೇಕ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಧಾನ ಗತಿ ಕಾಮಗಾರಿ: ‘ಎತ್ತಿನಹೊಳೆ ಯೋಜನೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದ್ದು, ಕಾಮಗಾರಿ ತ್ವರಿತಗೊಳಿಸಿ ಜಿಲ್ಲೆಗೆ ಬೇಗನೆ ನೀರು ಹರಿಸುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ತರುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

‘ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. 8ನೇ ತರಗತಿಯಿಂದ ಪದವಿ ಹಂತದವರೆಗೂ ಎಲ್ಲಾ ಶಿಕ್ಷಣ ಪಡೆದವರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ನಿರುದ್ಯೋಗಿಗಳು ಮೇಳದ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

ಜ್ಞಾನಾಧಾರಿತ ಶಿಕ್ಷಣ: ‘ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣ ನೀಡುತ್ತಿರುವುದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಲು ಜ್ಞಾನ ಕೌಶಲಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ. ಮಾನವೀಯ ಮೌಲ್ಯವುಳ್ಳ ಸಮಗ್ರ ಶಿಕ್ಷಣ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಾಲ್ಪನಿಕ ಬಡ್ತಿ, ವರ್ಗಾವಣೆ ನಿಯಂತ್ರಣ ಕಾಯಿದೆ ಅಮೂಲಾಗ್ರ ಬದಲಾವಣೆ, ಆಯುಷ್ಮಾನ್ ಭಾರತ ಮಾದರಿಯಲ್ಲಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಸದಸ್ಯರಾದ ಅರುಣ್‌ಪ್ರಸಾದ್, ಅರವಿಂದ್, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕಿ ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಡಿಡಿಪಿಐ ಕೆ.ರತ್ನಯ್ಯ, ಡಿಡಿಪಿಯು ಶ್ರೀಶೈಲಾ, ನಗರಸಭೆ ಆಯುಕ್ತ ಶ್ರೀಕಾಂತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT