ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ | ವಲಸೆ ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ

5 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸ
Last Updated 7 ಜುಲೈ 2020, 3:40 IST
ಅಕ್ಷರ ಗಾತ್ರ

ಹುಣಸಗಿ: ವಲಸೆ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಕೆಲಸ ನೀಡುವಂತಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ನಿತ್ಯ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.

‘ಸಂಕಷ್ಟದ ವೇಳೆ ಸರ್ಕಾರದ ಯೋಜನೆ ನಮ್ಮ ಕೈ ಹಿಡಿದಿದೆ’ ಎಂದು ಶ್ರೀನಿವಾಸಪುರ ಗ್ರಾಮದ ಕಾರ್ಮಿಕರಾದ ಶಂಕರಗೌಡ ಪಾಟೀಲ, ಬಸಮ್ಮ ಬಡಿಗೇರ ಕಾರ್ಮಿಕರು ತಿಳಿಸಿದರು.

ಹುಣಸಗಿ ತಾಲ್ಲೂಕಿಗೆ 19 ಗ್ರಾಮ ಪಂಚಾಯಿತಿಗಳು ಹಾಗೂ 78 ಗ್ರಾಮಗಳು ಮತ್ತು 30ಕ್ಕೂ ಹೆಚ್ಚು ತಾಂಡಾಗಳು ಒಳಪಡುತ್ತವೆ. ಶೇ 40ಕ್ಕೂ ಹೆಚ್ಚು ಗ್ರಾಮಗಳು ಮಳೆಯಾಶ್ರಿತ ಬಿತ್ತನೆಯ ಜಮೀನು ಹೊಂದಿವೆ.

ತಾಲ್ಲೂಕಿನಲ್ಲಿನ 6,112 ಜನ ನೋಂದಾಯಿತ ಕಾರ್ಮಿಕರಿದ್ದಾರೆ. ಅಲ್ಲದೆ ಈ ಬಾರಿ ಹೊಸದಾಗಿ 2,549 ಜನರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ಕೆಲಸ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.

ಜೂನ್ ಮೂರನೇ ವಾರದವರೆಗೂ 1,42,986 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಬಹುತೇಕ ಬದು ನಿರ್ಮಾಣ, ಕೆರೆ ಹೂಳು ಎತ್ತುವುದು, ಬಸಿ ಕಾಲುವೆಗಳ ನಿರ್ಮಾಣ ಸೇರಿದಂತೆ ರೈತರಿಗೆ ಸಾಮೂಹಿಕವಾಗಿ ನೆರವಾಗುವ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ವಿವರಿಸಿದರು.

ತಾಲ್ಲೂಕಿನ ವಜ್ಜಲ, ಜೋಗುಂಡಬಾವಿ, ರಾಜನಕೋಳೂರ, ಅರಕೇರಾ, ಕೋಳಿಹಾಳ ಮತ್ತಿತರ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಡಿದಿವೆ.

ತಾಲ್ಲೂಕಿನ ಜೋಗುಂಡಬಾವಿ ಗ್ರಾಮ ಪಂಚಾಯಿತಿಯಲ್ಲಿ ಜೂನ್ ಅಂತ್ಯದವರೆಗೂ 13,350 ಮಾನವ ದಿನಗಳನ್ನು ಸೃಜಿಸಲಾಗಿದ್ದು, 450 ರಿಂದ 500 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. 250ಕ್ಕೂ ಹೆಚ್ಚು ವಲಸೆ ಕುಟುಂಬಗಳಿಗೆ ಕೆಲಸ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪಗೌಡ ತಿಳಿಸಿದರು.

‘ಈ ಬಾರಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಎಲ್ಲ ಕಾರ್ಮಿಕರೂ ಕೆಲಸ ನಿರ್ವಹಿಸಿದ್ದು, ನನಗೆ ತೃಪ್ತಿ ತಂದಿದೆ’ ಎಂದು ಗ್ರಾಪಂ ಅಧ್ಯಕ್ಷ ಬಾಲನಗೌಡ ಪೊಲೀಸ್ ಪಾಟೀಲ ಹೇಳಿದರು.

‘ನಮ್ಮ ಗ್ರಾಮದಿಂದ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಆದರೆ, ಉದ್ಯೋಗ ಖಾತ್ರಿಯಡಿ ಕೆಲಸ ನೀಡುತ್ತಿದ್ದರಿಂದಾಗಿ ಇಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಕೂಲಿಯೂ ಸಕಾಲದಲ್ಲಿ ಪಾವತಿಯಾಗುತ್ತಿದೆ’ ಎಂದು ರಾಯನಗೋಳ ಗ್ರಾಮದ ಹನುಮಂತ ದೇಸಾಯಿ ಹಾಗೂ ಸಣ್ಣ ಚಾಪಿ ತಾಂಡಾದ ಬಾಲಚಂದ್ರ ತಿಳಿಸಿದರು.

ವಜ್ಜಲ ಗ್ರಾಮ ಪಂಚಾಯಿತಿಯ ಬಸಿಗಾಲುವೆ ಹಾಗೂ ಹೂಳು ತೆಗೆಯುವುದು, ಹಿರೇಹಳ್ಳದ ಸ್ವಚ್ಛತೆ ಮತ್ತು ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಹೇಳಿದರು.

ತಾಲ್ಲೂಕಿನ ಕೋಳಿಹಾಳ ಗ್ರಾಪಂ ವ್ಯಾಪ್ತಿಯ ಕೋಳಿಹಾಳ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 400 ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಬಾಪುಗೌಡ ಚಟ್ಟರಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT