ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ಲಸಿಕೆ ಹಾಕಿಸಿಕೊಂಡವರಲ್ಲೂ ಸೋಂಕು

ಹೆಚ್ಚುತ್ತಲೇ ಇರುವ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ l ಬಿಸಿಲ ಝಳಕ್ಕೆ ತೀವ್ರವಾಗಿ ಹರಡುತ್ತಿದೆ ರೋಗ
Last Updated 27 ಫೆಬ್ರುವರಿ 2020, 19:47 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಲಸಿಕೆ ಪಡೆದವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.

ಈ ಬಾರಿ ಈವರೆಗೆ 55 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವುಗಳ ಪೈಕಿ ಮಂಗನ ಕಾಯಿಲೆಗೆ ಲಸಿಕೆ ಪಡೆದಿದ್ದ 22 ಜನರಿದ್ದಾರೆ. ಕೆಲವರು ಒಂದು, ಮತ್ತೆ ಕೆಲವರು ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದರು. ಮೂರನೇ ಡೋಸ್‌ ಲಸಿಕೆ ಹಾಕಿಸಿಕೊಂಡವರಲ್ಲೂ ಕಾಯಿಲೆ ಕಾಣಿಸಿಕೊಂಡಿರುವುದು ಕಾಡಂಚಿನ ಜನರಲ್ಲಿ ಭೀತಿ ಮೂಡಿಸಿದೆ.

ಕೋಣಂದೂರು ವ್ಯಾಪ್ತಿಯಲ್ಲಿ ಇಬ್ಬರು ಹಾಗೂ ಬೆಟ್ಟ ಬಸರವಾನಿಯಲ್ಲಿ ಒಬ್ಬರಿಗೆ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಪಟ್ಟಣದ ಜೆ.ಸಿ ಆಸ್ಪತ್ರೆಯಲ್ಲಿ 10 ಮಂದಿ, ಮಣಿಪಾಲದಲ್ಲಿ 3 ಹಾಗೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡಗದ್ದೆ ವ್ಯಾಪ್ತಿಯಲ್ಲಿ 16, ಕನ್ನಂಗಿ ಭಾಗದಲ್ಲಿ 16, ಬೆಟ್ಟಬಸರವಾನಿಯಲ್ಲಿ 9, ಮಾಳೂರಿನಲ್ಲಿ 4, ಕೋಣಂದೂರಿನಲ್ಲಿ 8, ಕಟಗಾರಿನಲ್ಲಿ ಒಬ್ಬರು, ಯೋಗಿಮಳಲಿಯ ಒಬ್ಬರಲ್ಲಿ ಕಾಯಿಲೆಯ ವೈರಾಣು ಇರುವುದು ದೃಢಪಟ್ಟಿದೆ.

ಬಿಸಿಲ ಝಳ ಹೆಚ್ಚುತ್ತಿರುವಂತೆರೋಗವೂ ತೀವ್ರ ಗತಿಯಲ್ಲಿ ಹರಡುತ್ತಿದೆ. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮಹಿಷಿಯಲ್ಲಿ ನಿಗದಿಯಾಗಿದ್ದ ತುಂಗಾ ಕಾಲೇಜಿನ ಎನ್ಎ‌ಸ್‌ಎಸ್ ಶಿಬಿರವನ್ನು ರದ್ದುಪಡಿಸಲಾಗಿದೆ. ತಾಲ್ಲೂಕಿನಲ್ಲಿ 65 ಸಾವಿರಕ್ಕೂ ಹೆಚ್ಚು ಮಂದಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಕಾಡಿಗೆ ತೆರಳುವವರು ಕಡ್ಡಾಯವಾಗಿ ಡಿಎಂಪಿ ತೈಲವನ್ನು ಹಚ್ಚಿಕೊಂಡು ಹೋಗುವಂತೆ ಸೂಚಿಸಲಾಗಿದೆ. ಸೋಂಕು ತಗುಲಿರುವ ಮಾಹಿತಿ ತಿಳಿಯುತ್ತಿದ್ದಂತೆ ರೋಗಿಗಳ ಮೇಲೆ ಹೆಚ್ಚಿನ ನಿಗಾ ಇರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ತನಿಕಲ್ಲು, ಬೆಟ್ಟಬಸರವಾನಿ, ಕುಡುವಳ್ಳಿ, ಕಲ್ಲಹಕ್ಕಲು, ಬಿಸಿಲಮನೆ, ಹೊರಬೈಲು, ನೇರಲಕೊಪ್ಪ, ಬೆಕ್ಕಿನಹಡ್ಲು ಭಾಗದಲ್ಲಿ ರೋಗ ತೀವ್ರವಾಗಿ ವ್ಯಾಪಿಸುತ್ತಿದೆ. ತನಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಮಾತ್ರ ವೈದ್ಯರು ಸೇವೆ ನೀಡುತ್ತಿದ್ದಾರೆ. ಈ ಭಾಗದಲ್ಲಿ ಮಂಗನ ಕಾಯಿಲೆ ಇರುವುದರಿಂದ ವಾರ ಪೂರ್ತಿ ವೈದ್ಯರನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೂಲಿ ಕಾರ್ಮಿಕರೇ ಮಂಗನ ಕಾಯಿಲೆಗೆ ಹೆಚ್ಚಾಗಿ ತುತ್ತಾಗಿದ್ದಾರೆ. ಅನುಕೂಲಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರಿಗೆ ದೂರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸುವುದು ಕಷ್ಟವಾಗುತ್ತಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಒದಗಿಸುವಂತಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಜ್ವರಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಹೆಚ್ಚಿನವರು ಗುಣಮುಖರಾಗುತ್ತಿದ್ದಾರೆ. ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.

****

ಮಂಗನ ಕಾಯಿಲೆಗೆ ತುತ್ತಾದವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಲಸಿಕೆ ಪಡೆದವರು ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ. ಲಸಿಕೆ ಪಡೆಯದವರಲ್ಲಿ ಸಮಸ್ಯೆ ಹೆಚ್ಚಿರುತ್ತದೆ
-ಡಾ. ಅಶೋಕ್
ತಾಲ್ಲೂಕು ವೈದ್ಯಾಧಿಕಾರಿ, ತೀರ್ಥಹಳ್ಳಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ವಾರ್ಡ್‌ಗಳನ್ನು ತೆರೆದು, ಮೊಬೈಲ್ ಚಿಕಿತ್ಸಾ ಸೇವೆ ಒದಗಿಸಬೇಕು. ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಚಿಕಿತ್ಸೆ ಸಿಕ್ಕಂತಾಗುತ್ತದೆ
-ತನಿಕಲ್ ರಾಜಣ್ಣ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT