ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕೌಲ್‌ಬಜಾರ್‌ ಈಗ ಕಂಟೈನ್ಮೆಂಟ್‌ ಪ್ರದೇಶ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
Last Updated 5 ಮೇ 2020, 8:38 IST
ಅಕ್ಷರ ಗಾತ್ರ

ಬಳ್ಳಾರಿ: ‘ಉತ್ತರಾಖಂಡದ ಪ್ರವಾಸದಿಂದ ವಾಪಸಾಗಿದ್ದ ನಗರದ ಕೌಲ್‌ಬಜಾರ್‌ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ರಾತ್ರಿ ದೃಢಪಟ್ಟಿದ್ದು, ಅಲ್ಲಿನ ಒಂದು ಕಿ.ಮೀ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಲಾಕ್‌ಡೌನ್‌ ಘೋಷಣೆಗೂ ಮುನ್ನ ಉತ್ತರಾಖಂಡಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಒಟ್ಟು 18 ಮಂದಿಯ ಪೈಕಿ 43 ವರ್ಷ ವಯಸ್ಸಿನ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರೊಂದಿಗೆ ಪ್ರಥಮ ಹಂತದ ಸಂಪರ್ಕದಲ್ಲಿದವರು ಹಾಗೂ ಮನೆಯಲ್ಲಿದ್ದವರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ’ ಎಂದರು.

‘ಸೋಂಕಿತರು ಸೇರಿದಂತೆ ಪ್ರವಾಸಕ್ಕೆ ತೆರಳಿದ್ದವರು ಉತ್ತರಾಖಂಡದ ಲುಡ್ಕಿ ಜಿಲ್ಲೆಯಲ್ಲಿ ಇಷ್ಟು ದಿನ ಹೋಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದರು. ನಂತರ ಅಲ್ಲಿನ ಜಿಲ್ಲಾಧಿಕಾರಿಯಿಂದ ಪಾಸ್‌ ಪಡೆದು ಉತ್ತರಾಖಂಡದ ವಾಹನದಲ್ಲೇ ಬಳ್ಳಾರಿಗೇ ಬಂದಿದ್ದರು. ನಗರ ಶಾಸಕಜಿ.ಸೋಮಶೇಖರ ರೆಡ್ಡಿ ಅವರಿಗೆ ಹಣಕಾಸಿನ ನೆರವು ನೀಡಿದ್ದರು’ ಎಂದರು.

‘ಎರಡು ದಿನದ ಹಿಂದೆಯೇ ನಗರಕ್ಕೆ ಬಂದವರೆಲ್ಲರ ಆರೋಗ್ಯ ತಪಾಸಣೆ ನಡೆಸಿ, ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಒಬ್ಬರಿಗೆ ಸೋಂಕು ತಗುಲಿದೆ ಎಂದು ಸೋಮವಾರ ರಾತ್ರಿ ದೊರಕಿದ ವರದಿಯಿಂದ ತಿಳಿದುಬಂತು’ ಎಂದರು.

‘ಕೌಲ್‌ಬಜಾರ್‌ ಪ್ರದೇಶದಲ್ಲಿ ಜನ, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕ್ರಿಮಿನಾಶಕ ಸಿಂಪಡಣೆಯೂ ನಡೆದಿದೆ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಕುರಿತು ಮಾಹಿತಿ ನೀಡಿದ ವ್ಯಕ್ತಿಗಳನ್ನೂ ಕ್ವಾರಂಟೈನ್‌ನಲ್ಲಿಡಲಾಗಿದೆ’ ಎಂದು ಹೇಳಿದರು.

ಆಂಧ್ರದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ!

‘ಅನಾರೋಗ್ಯ ಸೇರಿದಂತೆ ಯಾವುದೇ ಕಾರಣಕ್ಕಾದರೂ ಆಂಧ್ರದ ಅನಂತಪುರ ಮತ್ತು ಕರ್ನೂಲ್‌ ಗಡಿ ದಾಟಿ ಬಳ್ಳಾರಿ ಗಡಿಯೊಳಕ್ಕೆ ಯಾರೇ ಬಂದರು ಅವರನ್ನು ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ನಲ್ಲಿಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್ ತಿಳಿಸಿದರು.

‘ಅನಂತಪುರ ಮತ್ತು ಕರ್ನೂಲ್‌ ಕೆಂಪು ವಲಯಕ್ಕೆ ಸೇರಿರುವುದರಿಂದ, ಅಲ್ಲಿನ ಜನ ಬಳ್ಳಾರಿಗೆ ಬರುವಂತಿಲ್ಲ. ಪೊಲೀಸರ ಕಣ್ಗಾವಲು ದಾಟಿ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಡಲಾಗುವುದು. ಪೆನುಕೊಂಡದಿಂದ ಬಂದ 53 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಈಗ ಅವರೆಲ್ಲರನ್ನೂ ಸರ್ಕಾರಿ ದಂತವೈದ್ಯಕೀಯ ಕಾಲೇಜಿನ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ತಿಳಿಸಿದರು.

ಹೊಸಪೇಟೆ: 28 ದಿನದ ಬಳಿಕ ಡಿನೋಟಫಿಕೇಶನ್

‘ಮಾರ್ಚ್‌ 30ರಂದು ಮೊದಲ ಬಾರಿಗೆ ಮೂವರು ಸೋಂಕಿತರು ಕಂಡು ಬಂದ ಹೊಸಪೇಟೆಯನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿದೆ. ಇನ್ನೂ 28 ದಿನಗಳ ಬಳಿಕ ಡಿನೋಟಿಫಿಕೇಶನ್‌ ಆದೇಶ ಹೊರಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಳ್ಳಿಗಳಲ್ಲಿ ಒಬ್ಬ ಸಿಬ್ಬಂದಿ ವಾಸ!

‘ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳ ಜನ ಬಾರದಂತೆ ತಡೆಯಲು ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿರುವ ಹಳ್ಳಿಗಳಲ್ಲೇ ಒಬ್ಬ ಸಿಬ್ಬಂದಿ ಇನ್ನು ಮುಂದೆ ನೆಲೆಸಲಿದ್ದಾರೆ. ಜನರ ಸಂಚಾರವನ್ನು ತಡೆಯಲು ಅವರು ಸ್ಥಳೀಯರ ನೆರವನ್ನೂ ಪಡೆಯಲಿದ್ದು, ಆ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT