ಮಂಗಳವಾರ, ಮೇ 18, 2021
24 °C
ಕೃಷಿಯೇತರ ಉದ್ದೇಶಕ್ಕೆ ಭೂಮಿ ಖರೀದಿಸಿದವರಿಗೆ ಸಿಗಲಿದೆ ಮಾರುವ ಅವಕಾಶ

ಭೂಮಿ ಪರಭಾರೆಗೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಗಾರಿಕೆ, ಶಿಕ್ಷಣ ಸೇರಿದಂತೆ ಕೃಷಿಯೇತರ ಉದ್ದೇಶಕ್ಕೆ ರೈತರಿಂದ ನೇರವಾಗಿ ಖರೀದಿಸಿದ್ದ ಭೂಮಿಯನ್ನು ಅದೇ ಉದ್ದೇಶಕ್ಕೆ ಮಾರುವ ಅವಕಾಶ ನೀಡಲು ಕರ್ನಾಟಕ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಮುಂದಿನ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.

‘ಕೈಗಾರಿಕೆಗಳು, ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವ ಸಲುವಾಗಿ ಕೃಷಿ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿಸಲು ಕಂದಾಯ ಕಾಯ್ದೆ 109 ನೇ ಸೆಕ್ಷನ್‌ ಅಡಿ ಅವಕಾಶ ಕಲ್ಪಿಸಲಾಗಿದೆ. ಜಮೀನು ಖರೀದಿಸಿದ 7 ವರ್ಷಗಳ ನಂತರವೂ ಅದೇ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಅಥವಾ ಉದ್ಯಮ ಸ್ಥಾಪಿಸಿಯೂ ಮುನ್ನಡೆಸಲು ಸಾಧ್ಯವಾಗದಿದ್ದರೆ ಅಂತಹ ಭೂಮಿಯನ್ನು ಮಾರಾಟಮಾಡಲು ಈಗ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

‘ನಿಯಮ ಸರಳಗೊಳಿಸುವುದರಿಂದ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡಿದಂತಾಗುವುದಿಲ್ಲವೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ಉದ್ದೇಶಕ್ಕೆ ಖರೀದಿಸಿರುತ್ತಾರೊ ಅದೇ ಉದ್ದೇಶಕ್ಕೆ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಬೇರೆಯವರಿಗೆ ಜಮೀನು ವರ್ಗಾವಣೆಯಾಗುತ್ತದೆಯೇ ಹೊರತು ಉದ್ದೇಶ ಅದೇ ಆಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು 100 ಎಕರೆ ವರೆಗೆ ಕೃಷಿ ಭೂಮಿ ಖರೀದಿಸಲು ಜಿಲ್ಲಾಧಿಕಾರಿ ಅನುಮತಿ ನೀಡುತ್ತಾರೆ. 200 ಎಕರೆ ವರೆಗೂ ಕಂದಾಯ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ಕೊಡಬಹುದು. ಅದಕ್ಕಿಂತ ಹೆಚ್ಚಿಗೆ ಖರೀದಿಸಬೇಕಾದರೆ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಾಗುತ್ತದೆ’ ಎಂದರು. 

‘ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುವಾಗ ನಿರ್ದಿಷ್ಟ ಆಶಯ ಇರುತ್ತದೆ. ಅದು ಈಡೇರಲಿಲ್ಲ ಎಂದಾಗ ಅದು ಕೈಗಾರಿಕೆ ಅಥವಾ ಶಿಕ್ಷಣ ಉದ್ದೇಶಕ್ಕೆ ನೀಡಿದ ಭೂಮಿ ಸರ್ಕಾರಕ್ಕೆ ವಾಪಸ್ ಆಗಬೇಕು. ಹೀಗೆ ಖರೀದಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದ ಭೂಮಿಯನ್ನು ಪರಭಾರೆ ಮಾಡಲು ಅವಕಾಶ ನೀಡುವುದು ಅಪಾಯಕಾರಿ. ಇದು ಭೂ ಸುಧಾರಣೆ ಕಾಯಿದೆಗೆ ವಿರುದ್ಧ’  ಎಂದು ಹೈಕೋರ್ಟ್‌ನ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ಪ್ರತಿಪಾದಿಸಿದರು.

ಟ್ರಸ್ಟಿಗಳಿಗೆ ಮೂಗುದಾರ

ಧಾರ್ಮಿಕ ದತ್ತಿ, ಶಿಕ್ಷಣ ಸಂಸ್ಥೆಗಳು, ಚಾರಿಟಬಲ್‌ ಟ್ರಸ್ಟ್‌ಗಳಲ್ಲಿನ ಟ್ರಸ್ಟಿಗಳು, ತಮ್ಮ ಸಂಸ್ಥೆಯ ಆಸ್ತಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. 

ಈ ಟ್ರಸ್ಟ್‌ಗಳ ಟ್ರಸ್ಟಿಗಳು ಆಸ್ತಿ ಮಾರಾಟ ಮಾಡಿದರೆ, ಟ್ರಸ್ಟ್ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ಉಂಟಾದ ಸಮಯದಲ್ಲಿ ನಿಯಂತ್ರಿಸಲು ಈಗಿನ ನಿಯಮಗಳಲ್ಲಿ ಅವಕಾಶವಿಲ್ಲ. ಟ್ರಸ್ಟ್‌ಗಳ ಆಸ್ತಿ ಸಂರಕ್ಷಿಸುವ ಉದ್ದೇಶದಿಂದ ‘ಸಾರ್ವಜನಿಕ ಟ್ರಸ್ಟ್‌ಗಳ ನಿಯಂತ್ರಣ ಮಸೂದೆ’ಯನ್ನು ಮಂಡಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. 

ಈ ಮಸೂದೆಗೆ ಹತ್ತು ವರ್ಷಗಳ ಹಿಂದೆ ಸದನದ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿಗೆ ಕಳುಹಿಸಲಾಗಿತ್ತು. ಕಾರಣಾಂತರಗಳಿಂದ ವಾಪಸ್ ಪಡೆದುಕೊಳ್ಳಲಾಗಿತ್ತು. ಈಗ ಮತ್ತೆ ಸದನದಲ್ಲಿ ಮಂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭೂಮಿ ಗುತ್ತಿಗೆ: ಸಂಪುಟ ಸಭೆಗೆ

‘ಕೃಷಿ ಚಟುವಟಿಕೆ ಹೆಚ್ಚಿಸುವ ಸಲುವಾಗಿ ರೈತರ ನಡುವೆ ಭೂಮಿ ಗುತ್ತಿಗೆ ನೀಡುವ ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ತಂದು ಚರ್ಚಿಸಲಾಗುವುದು. ಅದಕ್ಕೆ ಶೀಘ್ರ ಒಪ್ಪಿಗೆ ಪಡೆಯುವ ವಿಚಾರ ಇದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ವರ್ಗಾಯಿಸುವ ಸಮಯದಲ್ಲಿ ವಿಧಿಸಿದ್ದ ಷರತ್ತುಗಳೇ ಈಗಲೂ ಮುಂದುವರಿಯುತ್ತವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು