ಸೋಮವಾರ, ಜೂಲೈ 6, 2020
23 °C
ರಾಜ್ಯಸಭಾ ಸ್ಥಾನ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ಈಡೇರಿಸಲು ಆಗ್ರಹ

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿಲ್ಲ, ಅಶಿಸ್ತು ಸಹಿಸುವುದಿಲ್ಲ: ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು/ಬೆಳಗಾವಿ: ‘ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ಡಿ.ಕೆ.ಶಿವಕುಮಾರ್ ಅವರ ಹಗಲುಗನಸು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಯಶಸ್ವಿಯಾಗಿ ಅವಧಿಯನ್ನು ಪೂರೈಸಲಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದರು.

‘ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷದೊಳಗೆ ಯಾವುದೇ ಅಶಿಸ್ತನ್ನು ಸಹಿಸಲಾಗದು. ಅಶಿಸ್ತು ಕಂಡು ಬಂದರೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

ಈ ಮಧ್ಯೆ, ರಮೇಶ್‌ ಕತ್ತಿ ಅವರು, ‘ನನಗೆ ಲೋಕಸಭಾ ಟಿಕೆಟ್‌ ತಪ್ಪಿದ ವೇಳೆ ಸಂಧಾನಕ್ಕೆ ಬಂದಿದ್ದಾಗ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಸಭಾ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಡೇರಿಸಿ ಎಂದು ಕೇಳಿದ್ದೇನೆ’ ಎಂದು ರಮೇಶ ಕತ್ತಿ ಹೇಳಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಸಭೆ ಸ್ಥಾನ ತೆರವುಗೊಳ್ಳುತ್ತಿದ್ದು, ಶೀಘ್ರ ಚುನಾವಣೆ ನಡೆಯಲಿದೆ. ಭರವಸೆ ನೀಡಿದ್ದರಿಂದಾಗಿ ಈ ಸ್ಥಾನಕ್ಕೆ ಪರಿಗಣಿಸಲು ಕೇಳಿದ್ದೇವೆ’ ಎಂದರು.

‘ಅಣ್ಣ ಉಮೇಶ ಕತ್ತಿ ವಜ್ರ ಇದ್ದಂತೆ. ಅವರಿಗೆ ಸಾಮರ್ಥ್ಯವಿದೆ. ಇಂದಲ್ಲ ನಾಳೆ ಸಚಿವರಾಗುತ್ತಾರೆ. ಆದರೆ, ನನ್ನ ರಾಜಕೀಯ ಭವಿಷ್ಯವೇನು? ಲೋಕಸಭಾ ಟಿಕೆಟ್‌ ಕೈ ತಪ್ಪಿತು. ಯಾಕೆ ತಪ್ಪಿತು ಎಂದು ಯಾರೂ ಹೇಳುತ್ತಿಲ್ಲ’ ಎಂದರು.

‘ಲಾಕ್‌ಡೌನ್‌ನಿಂದಾಗಿ ಉತ್ತರ ಕರ್ನಾಟಕದ ಶಾಸಕರ ಭೇಟಿ ಬಹಳ ದಿನಗಳಿಂದ ಸಾಧ್ಯವಾಗಿರಲಿಲ್ಲ. ಮೊನ್ನೆ ಔತಣಕೂಟ ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರನ್ನೂ ಕರೆದಿದ್ದೆವು’ ಎಂದು ಸಮಜಾಯಿಷಿ ನೀಡಿದರು. ‘ಹೈಕಮಾಂಡ್‌ ನಿರ್ಣಯವನ್ನು ಸ್ವೀಕರಿಸುತ್ತೇವೆ’ ಎಂದರು.

‘ವರಿಷ್ಠರು ಮಾತಿಗೆ ತಪ್ಪಲ್ಲ’: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ವರಿಷ್ಠರು ಕೊಟ್ಟ ಮಾತಿಗೆ ತಪ್ಪುವುದಿಲ್ಲ’ ಎಂದು ಸಚಿವ ಕೆ.ಗೋಪಾಲಯ್ಯ ಶನಿವಾರ ಮಡಿಕೇರಿಯಲ್ಲಿ ಹೇಳಿದರು.

ಅಡಗೂರು ಎಚ್‌.ವಿಶ್ವನಾಥ್‌, ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಕುರಿತ ಪ್ರಶ್ನೆಗೆ
ಅವರು, ‘ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಕ್ಕಾಗಿಯೇ ನಾವು ಸಚಿವರಾಗಿರುವುದು’ ಎಂದು
ಪ್ರತಿಕ್ರಿಯಿಸಿದರು.

‘ಆಪರೇಷನ್‌ ಕಮಲ’ದ ಅಗತ್ಯವಿಲ್ಲ’
ಮೈಸೂರು: ‘ಈಗ ಬಿಜೆಪಿಗೆ ಬಹುಮತವಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸುಗಮವಾಗಿ ಸಾಗುತ್ತಿದೆ. ಆಪರೇಷನ್‌ ಕಮಲದ ಅಗತ್ಯವಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಶನಿವಾರ ಇಲ್ಲಿ ಹೇಳಿದರು.

ಹೈಕಮಾಂಡ್‌ ಒಪ್ಪಿದರೆ ಕಾಂಗ್ರೆಸ್‌ನ ಐವರು ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂಬ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಅವರು, ‘ಅದು ಜಾರಕಿಹೊಳಿ ಅವರ ವೈಯಕ್ತಿಕ ಅಭಿಪ್ರಾಯ. ಅವರನ್ನೇ ಕೇಳಿ’ ಎಂದರು.

‘ಸಿ.ಎಂ ಪ್ರತಿ ಜಿಲ್ಲೆಯ ಶಾಸಕರ ಜತೆ ಕಳೆದ 3–4 ತಿಂಗಳುಗಳಿಂದ ಸಭೆ ನಡೆಸುತ್ತಿದ್ದು, ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಯಾರೂ ಅನಗತ್ಯ ಹೇಳಿಕೆ ಕೊಡಬಾರದು’ ಎಂದು ಕೋರಿದರು.

ಶಿಸ್ತುಕ್ರಮ ಕ್ರಮಕ್ಕೆ ಆಯನೂರು ಆಗ್ರಹ
ಶಿವಮೊಗ್ಗ: ರಾಜ್ಯ ಕೊರೊನಾ ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರ ವಿರುದ್ಧ ಅಸಮಾಧಾನದ ಮಾತುಗಳನ್ನು ಪಕ್ಷದ ಶಾಸಕರೇ ಹೇಳುವುದನ್ನು ಸಹಿಸಲಾಗದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

‘ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಡಿದ ಮಾತುಗಳು ಹದ್ದು ಮೀರಿವೆ. ಯಡಿಯೂರಪ್ಪ ಅವರಿಂದಲೇ ಶಾಸಕರಾದವರು ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಶನಿವಾರ ಆಗ್ರಹಿಸಿದರು.

‘ಬಿಜೆಪಿಯಲ್ಲಿ ಸಿ.ಎಂ ಬದಲಿಸುವ ಯತ್ನ’
ಬೆಳಗಾವಿ: ‘ಬಿಜೆಪಿಯಲ್ಲಿ ಸಿ.ಎಂ ಬದಲಿಸುವ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಹೋದವರು ಜಗದೀಶ್‌ ಶೆಟ್ಟರ್‌ ಪರವಾಗಿದ್ದರೆ, ಮೂಲ ಬಿಜೆಪಿಯವರು ಪ್ರಲ್ಹಾದ ಜೋಶಿ ಪರವಾಗಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ‘ಬಿಜೆಪಿಯ ಭಿನ್ನಮತೀಯರ ನಿರ್ಧಾರದ ಮೇಲೆ ಮಧ್ಯಂತರ ಚುನಾವಣೆ ಭವಿಷ್ಯ ನಿಂತಿದೆ. ಮುಂದೆ ಏನಾಗುತ್ತೆ ಎನ್ನುವುದನ್ನು ಕಾದು ನೋಡುತ್ತಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

*
ಉತ್ತರ ಕರ್ನಾಟಕ ಭಾಗದ ಶಾಸಕರು ಸಭೆ ನಡೆಸಿದ ವಿಚಾರವನ್ನು ಪಕ್ಷದ ಮುಖಂಡರು ಚರ್ಚಿಸುವರು. ಗೊಂದಲ ಬಗೆಹರಿಸಿಕೊಳ್ಳುತ್ತೇವೆ.
–ಕೆ.ಎಸ್‌.ಈಶ್ವರಪ್ಪ, ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು