ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಹುದ್ದೆ ಕುರಿತು ಚರ್ಚಿಸಿಲ್ಲ: ಸಚಿವ ಶ್ರೀರಾಮುಲು

Last Updated 7 ಜನವರಿ 2020, 13:45 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಹಾಗೂ ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಲು ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದೆ. ಈ ವೇಳೆ ಡಿಸಿಎಂ ಸ್ಥಾನ ನೀಡಿ ಎಂದು ಚರ್ಚಿಸಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಡಿಸಿಎಂ ಆಗಬೇಕು ಎಂಬುದು ಸಮುದಾಯ ಹಾಗೂ ಜನರ ಆಪೇಕ್ಷೆಯಾಗಿದೆ. ಅದರಂತೆ ಪಕ್ಷ ನನ್ನನ್ನು ಗುರುತಿಸಿ ಉನ್ನತ ಸ್ಥಾನ ನೀಡುವ ವಿಶ್ವಾಸವಿದೆ. ಸಂಕ್ರಾಂತಿ ಬಳಿಕ ಅಥವಾ ಜ. 20ರ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ’ ಎಂದು ತಿಳಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಜನತೆಗೆ ಯಾವ ತೊಂದರೆ ಇಲ್ಲ. ಪ್ರಧಾನಿ ಮೋದಿ ಅವರಾಗಲಿ, ಬಿಜೆಪಿಯಾಗಲಿ ದೇಶ ಬಿಟ್ಟು ಹೋಗಿ ಎಂದು ಯಾವೊಬ್ಬ ಭಾರತೀಯರಿಗೂ ಹೇಳಿಲ್ಲ. ಬೇರೆ ದೇಶಗಳಲ್ಲಿ ಇರುವಂಥ ಹಿಂದೂ, ಮುಸ್ಲಿಂ, ಬೌದ್ಧ, ಜೈನ, ಸಿಖ್‌ ಸೇರಿ ಇತರೆ ಧರ್ಮೀಯರು ಭಾರತೀಯ ಪ್ರಜೆಯಾಗಲು ಬಯಸಿದರೆ, ಸೂಕ್ತ ದಾಖಲಾತಿ ಒದಗಿಸಿ ಎಂಬ ಅಂಶ ಕಾಯ್ದೆಯಲ್ಲಿ ತಿದ್ದುಪಡಿಯಾಗಿದೆ’ ಎಂದರು.

‘ಸಿಎಎ ನೆಹರು ಅವರ ಕಾಲದಲ್ಲೇ ಆಗಬೇಕಿತ್ತು. ಆದರೆ, ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಆಗಿದೆ. ಕಾಂಗ್ರೆಸ್‌ ಮುಖಂಡರಿಗೆ ಮಾಡಲು ಕೆಲಸ ಇಲ್ಲದ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ವಿರೋಧಿಸುವವರು ಕಾಯ್ದೆಯನ್ನು ಇನ್ನೊಮ್ಮೆ ಓದಿ ಸರಿಯಾಗಿ ಅರ್ಥೈಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

‘ರಾಜ್ಯದ ನೆರೆ ಹಾವಳಿ ಸಂಬಂಧ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಕ್ಕಾಗಿ ಪ್ರಧಾನಿ ಮೋದಿ ಅವರು ಹೆಚ್ಚಿನ ಅನುದಾನ ಮಂಜೂರು ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT